ದೂರದರ್ಶನಕ್ಕಾಗಿ ಸಂದರ್ಶನ : ಯು ಆರ್ ಅನಂತಮೂರ್ತಿ

(ಅಡಿಗರನ್ನು ದೂರದರ್ಶನಕ್ಕಾಗಿ ಸಂದರ್ಶಿಸಿದ್ದೆ. ಅಡಿಗರು ದಿವಂಗತರಾದಮೇಲೆ (೧೯೯೨) ಸಂದರ್ಶನವನ್ನು ದೂರದರ್ಶನ ಮರುಪ್ರಸಾರ ಮಾಡಿತು. ನನ್ನ ಅನೇಕ ಮಿತ್ರರು ಸಂದರ್ಶನವನ್ನುಅಡಿಗರ ಅಧ್ಯಯನಕ್ಕೆ ಉಪಯುಕ್ತವೆಂದು ತಿಳಿದದ್ದರಿಂದ ಈಗ ಪ್ರಕಟಿಸುತ್ತಿದ್ದೇನೆ. ಇದನ್ನುಬರೆದುಕೊಟ್ಟವರು ಚಿಕಾಗೊದಲ್ಲಿ ವಾಸವಾಗಿರುವ ಅಡಿಗರ ಪುತ್ರಿ ಶ್ರೀಮತಿ ವಿದ್ಯಾ ಕೃಷ್ಣರಾಜ್‌)ನಾನು ಅಡಿಗರನ್ನು ಸುಮಾರು ೩೦ ವರ್ಷಗಳಿಂದ ಓದುತ್ತ ಬಂದಿದ್ದೀನಿ. ನಮ್ಮ ಜೀವನದ ಹಲವು ಸ್ಥಿತ್ಯಂತರಗಳಿಗೆ ಅವರ ಕಾವ್ಯ ಕನ್ನಡಿ ಆಗಿದೆ. ಅವರು ಕನ್ನಡದ ಒಬ್ಬ ಮುಖ್ಯ ಕವಿ ಮಾತ್ರ ಅಲ್ಲ, ಇವತ್ತು, ಭಾರತೀಯ ಭಾಷೆಗಳಲ್ಲಿ ಬರೀತಾ ಇರುವ ಕವಿಗಳ ನಡುವೆ ಬಹು ಮುಖ್ಯ ಕವಿಗಳಲ್ಲಿ ಒಬ್ಬರು. ನಿಸೀಮ್‌ ಎಜಿಕೇಲ್‌ ಒಂದು ಸಾರಿ ಅವರ ಬಗ್ಗೆ ಬರೀತಾ “ಭಾಷಾಂತರದಲ್ಲಿ ಓದಿದಾಗಲೂ ಕೂಡ ಪ್ರಪಂಚದ ಒಳ್ಳೆಯ ಕವಿಗಳಲ್ಲಿ ಒಬ್ಬರು ಇವರು” ಅಂದಿದ್ದರು.

? ಅಡಿಗರೇ, ನಾನು ನಿಮ್ಮನ್ನು ಮೊದಲು ಭೇಟಿ ಆಗಿದ್ದು ಸುಮಾರು ಮೂವತ್ತು ವರ್ಷಗಳ ಹಿಂದೆ ಅಂತನನಗೆ ನೆನಪು. ಆಗ ನೀವು ಶಾರದಾ ವಿಲಾಸ್ಕಾಲೇಜಿನಲ್ಲಿ ಇಂಗ್ಲಿಷ್ಅಧ್ಯಾಪಕರಾಗಿದ್ದಿರಿ. ಬಿಳಿಗಿರಿ ನನ್ನನ್ನುನಿಮ್ಮ ಹತ್ತಿರ ಕರೆದುಕೊಂಡು ಬಂದಿದ್ದ. ಬಿಳಿಗಿರಿ ನನಗೆ ನಿಮ್ಮ ಪದ್ಯಗಳನ್ನು ಓದಿಹೇಳಲಿಕ್ಕೆ ಶುರುಮಾಡಿದ್ದ.ಶಿವಮೊಗ್ಗದಲ್ಲಿ ನಾನು, ಮತ್ತು ಬಿಳಿಗಿರಿ ಆಗ ಇದ್ದೆವು. ಬಿಳಿಗಿರಿ ನಿಮ್ಮ ಮೋಹನ ಮುರಳಿಯನ್ನು ಓದಿದ್ದ. , “ಕಟ್ಟುವೆವು ನಾವುಓದಿದ್ದ, “ನಾವೆಲ್ಲರೂ ಒಂದೇ ಜಾತಿ ಒಂದೇ ಮತ. . . ” ಓದಿದ್ದ. ಆಗ ನಾವು ಬಹಳಕ್ರಾಂತಿಕಾರಕವಾಗಿ ಯೋಚನೆ ಮಾಡುತ್ತಾ ಇದ್ದ ಕಾಲ. ನಿಮ್ಮ ಕಾವ್ಯ ಬಹಳ ಪ್ರಿಯವಾಗಿತ್ತುನಮಗೆ.ನಿಮ್ಮ ಮನೆಗೆ ಬಂದಾಗ, ನಿಮ್ಮ ಹತ್ತಿರ ನಾನು ಒಂದು ಪದ್ಯವನ್ನು ಹಾಡಿಸಿದೆ ಅಂತಾನೂ ನೆನಪು. ಮೋಹನಮುರಳಿ ಅನ್ನುವ ಪದ್ಯ.

 • ನನಗೆಲ್ಲಾ ಮರೆತುಹೋಗಿದೆ ಈಗ. ನೀವು ಬಿಳಿಗಿರಿ ಜೊತೆ ಬಂದಿದ್ದು ನೆನಪಿದೆ. ಆದರೆ ನಾನು ಏನು ಮಾಡಿದೆ ಅವತ್ತು ಅನ್ನೋದು ಮರೆತು ಹೋಗಿದೆ.

? ಕಾಫೀನೂ ಕುಡಿಸಿದಿರಿ ಸಾರ್ ಕರೆದುಕೊಂಡು ಹೋಗಿ ಹೋಟೆಲಿಗೆ. ಆಮೇಲಿಂದ ಪ್ರತೀ ಘಟ್ಟದಲ್ಲೂನಮ್ಮ ಮನಸ್ಸು ಬದಲಾವಣೆ ಆದ ಹಾಗೆ ನಿಮ್ಮ ಕಾವ್ಯ ಬದಲಾದ್ದು. ಮತ್ತೆ ನಮ್ಮ ಕಾವ್ಯದಿಂದ ನಮ್ಮಮನಸ್ಸು ಬದಲಾದ್ದು; ಇವೆರಡೂ ನಡೀತಾನೇ ಬಂದಿದೆ. ನಂತರ ನಾನು ನೀವು ಪ್ರತಿನಿತ್ಯ ಕಾಫಿಹೌಸ್ನಲ್ಲಿಭೇಟಿಮಾಡುತ್ತಿದ್ದಿ. ಆಗ ನೀವು ಕನ್ನಡದಲ್ಲಿ ಒಂದು ದೊಡ್ಡ ಬದಲಾವಣೆಯನ್ನು ಮಾಡಿದ್ದಿರಿ. ನಡೆದುಬಂದದಾರಿಯಲ್ಲೇ ಬದಲಾವಣೆ ಶುರುವಾಗಿತ್ತು. ಚಂಡೆ ಮದ್ದಳೆಆಮೇಲೆ ಬಂತು. ಅದು ಕನ್ನಡದಲ್ಲಿ ಬಹಳಗಾಢವಾದ ಪರಿಣಾಮ ಮಾಡಿತು.

ನೀವು ಬದಲಾಗಿದ್ದಕ್ಕೆ ಕಾರಣ ಏನು? ಕಟ್ಟುವೆವು ನಾವುಸಂಕಲನದ ಪದ್ಯಗಳಿಂದ ಬದಲಾಗಿದ್ದಕ್ಕೆಮುಖ್ಯ ಕಾರಣ ಏನು?

 • ಬಹುಶಃ ಬದಲಾಗಿದ್ದಕ್ಕೆ ಮುಖ್ಯ ಕಾರಣ: ನನ್ನ ಬುದ್ಧಿಯಲ್ಲಿ ಒಂದು ದೊಡ್ಡ ಕ್ರಾಂತಿಯಾಗಿದ್ದೇ ಎಂದು ಕಾಣುತ್ತದೆ. ಮೊದಮೊದಲು ನಾನು ಪೂರಾ ಭಾವನಾತ್ಮಕ ಜೀವಿ ಆಗಿದ್ದೆ. ಭಾವನೆಗಳೇ ನನ್ನ ದಾರಿಯನ್ನು ನಿಶ್ಚಯಿಸುತ್ತಿತ್ತು. ಸುಮಾರು ನನಗೆ ೩೦ – ೩೨ ವರ್ಷ ಆಗುವ ಕಾಲದಲ್ಲಿ ಮನಸ್ಸಿನಲ್ಲಿ ಒಂದು ಭಾರಿ ಪರಿಣಾಮವಾಯಿತು. ಬುದ್ಧಿಯನ್ನೂ ಕೂಡ ಸರಿಯಾಗಿ ಉಪಯೋಗಿಸೋದು ಅಗತ್ಯ ಮಾತ್ರವಲ್ಲ, ಅದನ್ನು ಉಪಯೋಗಿಸುತ್ತಾ ಭಾವನೆಯನ್ನೂ ಶುದ್ಧೀಕರಿಸಬೇಕಕು ಅನ್ನೋದು. ಅದು ನನ್ನ ಜೀವನದ ಒಂದು ಭಾರೀ ದೊಡ್ಡ ಸಂಧಿಕಾಲ ಎಂದು ನನ್ನ ಮನಸ್ಸಿಗೆ ಮನವರಿಕೆ ಆಯಿತು. ಅದರಿಂದ ಬಹುಶಃ ಈ ಬದಲಾಣೆ ಆಗಿರಬೇಕಲು, ಅಂತ ನನಗೆ ಅನ್ನಿಸುತ್ತದೆ.

ನೀವು ಆಗ ಹೇಳಿದ ಹಾಗೆ ನನಗೆ ಯಾವಾಗಲೂ ನನಗಿಂತ ಚಿಕ್ಕ ವಯಸ್ಸಿನವರಲ್ಲೇ ಸ್ನೇಹ. ನನಗಿಂತ ದೊಡ್ಡವಯಸ್ಸಿನವರನ್ನು ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಂಡಿಲ್ಲ. ಈಗಲೂ ಇಲ್ಲ ನನಗೆ. ಈಗಲೂ ಅಷ್ಟೆ ಸಣ್ಣವಯಸ್ಸಿನವರು, ನಿಮಗಿಂತ ಸಣ್ಣ ವಯಸ್ಸಿನವರು, ನಿಮ್ಮ ವಯಸ್ಸಿನವರು ಇಂಥವರತೇ ನನ್ನ ಹತ್ತಿರ ಬರುತ್ತಾರೆ. ಅಲ್ಲದೇನೇ ನನಗಿಂತ ವಯಸ್ಸಾದವರೂ, ನನ್ನ ಸಮಾನ ವಯಸ್ಸಿನವರೂ ಕೂಡ ನನ್ನ ಹತ್ತಿರ ವ್ಯವಹಾರ ಮಾಡೋಲ್ಲ. ಇದು ಯಾಕೋ ಗೊತ್ತಿಲ್ಲ.

? ನೀವು ಚಿಕ್ಕವರಾಗಿದ್ದಾಗ ಬೇಂದ್ರೆ ನಿಮ್ಮ ಮೇಲೆ ಪರಿಣಾಮ ಮಾಡಿದ್ದರು ಅಂತ ನಮಗೆಲ್ಲಾ ಅನ್ನಿಸುತ್ತದೆ,ಸಾರ್ ಓದಿದಾಗ. ಒಂದು ತರಹದಲ್ಲಿ ಬೇಂದ್ರೆಯ ಮಾರ್ಗದಲ್ಲಿ ಬಂದು ಬದಲಾದ ಕವಿ ನೀವು ಅಂತಪ್ರಾರಂಭದ ಕವನಗಳಲ್ಲಿ ಅನ್ನಿಸುತ್ತದೆ.

 • ಮೊದಲು ನನ್ನ ಮೇಲೆ ಭಾರಿ ಪ್ರಭಾವ ಬೀರಿದವರು ಕಡೆಂಗೋಡ್ಲು ಶಂಕರ ಭಟ್ಟರು. ಬಹುಶಃ ನಾನು ಮಿಡ್ಲ್ ಸ್ಕೂಲ್‌ ಏಳನೇ ಕ್ಲಾಸ್‌ನಲ್ಲೋ, ಎಂಟನೇ ಕ್ಲಾಸ್‌ನಲ್ಲೋ ಇರೋವಾಗಲೇನೇ, ಕಾವ್ಯರಚನೆ ಅಂತ ಹೇಳೋಕ್ಕಾಗಲ್ಲ, ಪದ್ಯ ರಚನೆಯನ್ನು ಶುರುಮಾಡಿದ್ದೆ. ಆ ಕಾಲಕ್ಕೆ ಕಡೆಂಗೋಡ್ಲು ಶಂಕರ ಭಟ್ಟರ ‘ಮಾದ್ರಿಯ ಚಿತ’, ‘ಹೊನ್ನಿಯ ಮದುವೆ’ ಎನ್ನುವ ಸಂಕಲಗಳು ಬಂದವು. ಅವುಗಳು ನನ್ನ ಮೇಲೆ, ಮುಖ್ಯವಾಗಿ ‘ಮಾದ್ರಿಯ ಚಿತೆ’ ಬಹಳ ಪರಿಣಾಮ ಬೀರಿತ್ತು.

ಆಮೇಲೆ ನಾನು ಮೈಸೂರಿಗೆ ಬಂದೆನಲ್ಲ, ಆಗ ಬೇಂದ್ರೆಯವರ ಕಾವ್ಯದ ಪರಿಚಯವಾಯಿತು. ಅದು ೧೯೩೬ರ ಮೇಲೆ. ಅವರಿಂದ ಭಾರೀ ಪ್ರಭಾವ ನನ್ನ ಮೇಲೆ ಆಗಿದೆ. ಅನೇಕ ಕವನಗಳು ಅವರ ಪ್ರಭಾವದಲ್ಲಿ ಬರೆದವು. ಆ ಮೇಲೆ ಏನಾಯಿತು ಅಂದರೆ ಆ ಪ್ರಭಾವ ಅತಿ ಆಯಿತು ಅಂತ ಒಂದೆರಡು ವರ್ಷ ಕಾವ್ಯ ಬರೆಯುವುದನ್ನೇ ಬಿಟ್ಟಿದ್ದೆ.

? ಅವರು ಮುನ್ನುಡಿ ಬರೆದರಲ್ಲವೇ, ಸಾರ್, ನಿಮಗೆ?

 • ಹೌದು. ಭಾವತರಂಗಕ್ಕೆ ಭಾವತರಂಗಪ್ರಕಟವಾದದ್ದು ೧೯೪೫ ರಲ್ಲೋ ೧೯೪೬ರಲ್ಲೋ ಇರಬೇಕು. ಅದಕ್ಕೆ ಅವರು ಮುನ್ನುಡಿ ಬರೆದರು. ನಾನು ಅವರಿಗ ಬಹಳ ಹತ್ತಿರವೂ ಆಗಿದ್ದೆ ಆ ಕಾಲದಲ್ಲಿ. ಪತ್ರ ವ್ಯವಹಾರ ನಡೆಯುತ್ತಿತ್ತು. ಆದರೆ ಸ್ವಲ್ಪ ವರ್ಷಗಳಲ್ಲಿ ಅವರ ಪ್ರಭಾವ ಅತ್ಯಧಿಕ ವಾಯಿತು, ನನ್ನ ವ್ಯಕ್ತಿತ್ವವನ್ನು ವಿಕಾಸಗೊಳಿಸಿಕೊಳ್ಳಲು ಸ್ಥಾಪಿಸಿಕೊಳ್ಳಲೂ ಸಾಧ್ಯವಿಲ್ಲ ಇದರಿಂದ ಬಿಡಿಸಿಕೊಳ್ಳದೆ ಹೋದರೆ, ಅಂತ ಗೊತ್ತಾದ್ದರಿಂದ ಒಂದೆರಡು ವರ್ಷ ಕಾವ್ಯ ರಚಿಸುವುದನ್ನೇ ಕೈ ಬಿಟ್ಟು ತಕ್ಕಮಟ್ಟಿಗೆ ಅವರ ಪ್ರಭಾವದಿಂದ ನಾನು ತಪ್ಪಿಸಿಕೊಂಡೆ. ಆದರೂ ಕೂಡ ಒಬ್ಬ ದೊಡ್ಡ ಕವಿಯ ಪ್ರಭಾವ ಬಂದಮೇಲೆ ಅದರ ಪ್ರಭಾವ ನಮ್ಮಲ್ಲಿ ಕೊನೇತನಕ ಉಳಿಯುತ್ತದೆ ಅನ್ನೋದರಲ್ಲೂ ಕೂಡ ಸಂದೇಹವಿಲ್ಲ. ಈಗಲೂ ಇದೆ.

? ನಿಮ್ಮ ಬಗ್ಗೆಯೂ ನಿಮಗಿಂತ ಕಿರಿಯರಿಗೆ ಹಾಗೇ ಅನ್ನಿಸಿರಬಹುದು. ನನಗೂ ಹಾಗೆ ಅನ್ನಿಸಿದೆ. ಪ್ರಭಾವಉಳಿದಿರುತ್ತದೆ. ಆದರೆ ಅದರಿಂದ ಬಿಡುಗಡೆ ಆಗಬೇಕಾಗುತ್ತೆ. ಏಕೆಂದರೆ ಕನ್ನಡ ಭಾಷೆಯನ್ನು ಮೇದುಬಿಟ್ಟವರು ಅಂದರೆ ಬೇಂದ್ರೆ ಮತ್ತು ನೀವು. ಆಮೇಲೆ ಉಳಿದವರಿಗೆ ಏನೂ ಮೇಯಲಿಕ್ಕೆ ಉಳಿಯದೇಇರೋದಿಲ್ಲ. ಅದರಿಂದ ಸಂಪೂರ್ಣ ಬೇರೆ ಆಗಬೇಕು. ಇದು ಬೇಂದ್ರೆಯವರ ಬಗ್ಗೆಯೂ ನಮಗೆ ಅನ್ನಿಸಿದೆ;ನಿಮ್ಮ ಕಾವ್ಯದ ಬಗ್ಗೆಯೂ ನಮಗೆ ಅನ್ನಿಸಿದೆ. ಆದರೆ ಬದಲಾವಣೆ ಅಂತ ಅಂದೆನೆಲ್ಲಾ. . . . . . ನಿಮ್ಮಭಾವತರಂಗ, ಕಟ್ಟುವೆವು ನಾವು ನಂತರ ಒಂದು ಬದಲಾವಣೆ ಆಯತಲ್ಲ. . . . . ಆದರೆ ಬದಲಾವಣೆಜೊತೆಗೇನೇ ಆಗಮೋಹನ ಮುರಳಿಪದ್ಯದಲ್ಲಿ ನೀವು ಏನು ಹೇಳುತ್ತಾ ಇದ್ದಿರೋ, ಈಗ ಭೂಮಿಗೀತಪದ್ಯದಲ್ಲೂ ಇನ್ನೊಂದು ರೀತಿಯಲ್ಲಿ ಅದೇ ಆಸಕ್ತಿಗಳೆಲ್ಲಾ ಉಳಿದಿವೆ. ಆದರೆ ಬೇರೆ ಸ್ತರದಲ್ಲಿ ಮೂವ್ಮಾಡುತ್ತೀರಿ. ಇವತ್ತು ನೀವು ಬರೆಯುತ್ತಿರುವ ಪದ್ಯಗಳಲ್ಲೂ ಅದೇ ಹಳೆಯ ಕೆಲವು ದನಿಗಳು ಇತ್ಯಾದಿಗಳುಕೇಳಿಸುತ್ತಿರುತ್ತವೆ. ಹಾಗೆ ನೀವು ಸಂಪೂರ್ಣ ಬದಲಾವಣೆ ಆದೆ ಅಂತ ಅನ್ನಿಸುತ್ತದಾ ನಿಮಗೆ?

 • ಸಂಪೂರ್ಣ ಬದಲಾವಣೆ ಯಾರೂ ಆಗುವುದಿಲ್ಲ. ಮಾತ್ರವಲ್ಲ ನಿಜ ವಾದ radical ಅನ್ನುವಂಥ ಬದಲಾವಣೆ ಯಾರ ಸ್ವಭಾವದಲ್ಲೂ ಆಗೋದಿಲ್ಲ. ಸ್ವಲ್ಪ ಹೆಚ್ಚು ಕಡಿಮೆ ಆಗುತ್ತದೆ ಅಷ್ಟೆ. ಆದ್ದರಿಂದ ಆ ರೀತಿಯಲ್ಲಿ ನಾನು ಆಮೂಲಾಗ್ರವಾದ ಬದಲಾವಣೆಯನ್ನು ಅನುಭವಿಸಿದೆ ಅಂತ ನನಗೆ ಅನ್ನಿಸುವುದಿಲ್ಲ.

? ಈಗಲೂ ನೀವು ಭಾವುಕರಾಗೇ ಉಳಿದಿದ್ದೀರಿ.

 • ಮುಖ್ಯವಾಗಿ ನಾನು ಭಾವುಕನೇ. ಆದರೆ ಆ ಭಾವನೆಯೂ ಕೂಡ ಪಕ್ವವಾಗಬೇಕಾದರೆ, ಅದು ಮೈತುಂಬಿಕೊಳ್ಳಬೇಕಾದರೆ,  ಅದು ಜೀವನೋಪಯೋಗಿ ಆಗಬೇಕಾದರೆ ಬುದ್ಧಿಯಿಂದ ಅದು ಸಂಸ್ಕಾರ ಪಡೆಯದೇ ಸಾಧ್ಯವಿಲ್ಲ ಅನ್ನೋದು ಕೂಡ ನನಗೆ ಗೊತ್ತಿದೆ. ಆದ್ದರಿಂದ ತಕ್ಕಮಟ್ಟಿಗೆ, ಎಷ್ಟರಮಟ್ಟಿಗೆ ಸಾಧ್ಯವೋ ಅಷ್ಟರಮಟ್ಟಿಗೆ ಬುದ್ಧಿಯನ್ನ ಬೆಳೆಸಿಕೊಳ್ಳುವುದಕ್ಕೂ ಕೂಡ ಪ್ರಯತ್ನ ಮಾಡಿದ್ದೇನೆ. ಚಿಂತನದ ಮೂಲಕ ಭಾವನೆಯನ್ನ ವಿಸ್ತಾರಗೊಳಿಸೋದಕ್ಕೆ, ಅದಕ್ಕೆ ಹೆಚ್ಚು ಆಳಗಳನ್ನು ಸೇರಿಸೋದಕ್ಕೆ ಪ್ರಯತ್ನ ಮಾಡುತ್ತಾ ಬಂದಿದ್ದೇನೆ.

? ಇನ್ನೊಂದು ನಮಗೆ, ನಿಮ್ಮನ್ನು ಓದುತ್ತಾ ಬಂದೋರಿಗೆ ಅನ್ನಿಸೋದು. . . ಬಹಳ ಹಿಂದಿನ ಒಂದು ನೆನಪು. . . ನಾವು ನೀವು ಕಾಫಿ ಹೌಸ್ನಲ್ಲಿ ಕಾಫಿ ಕುಡೀತಾ ಇದ್ದೆವು. ನಂತರ ನೀವು ಹೋಗಿ ಮಾರ್ಕೆಟ್ನಲ್ಲಿತರಕಾರಿ ಕೊಳ್ಳುತ್ತಿದ್ದಿರಿ, ಆಗ ನಿಮ್ಮ ಕೈಯಲ್ಲಿ ಯಾವಾಗಲೂ ಒಂದು ಚೀಲ ಇರೋದು. ಆಗ ನೀವು ಪಂಚೆಉಡುತ್ತಿದ್ದಿರಿ; ಆದರೆ ಕೋಟು ಹಾಕುತ್ತಿದ್ದಿರಿ. ಚೀಲದ ತುಂಬ ತರಕಾರಿ ತೆಗೆದುಕೊಂಡು ಬಸ್ಸಿಗೆ ಅಂತಕಾಯುತ್ತಾ ಇದ್ದಾಗ ನನ್ನ ಕಡೆ ತಿರುಗಿ ಹೇಳಿದಿರಿ: “ಅನಂತಮೂರ್ತಿ, ನಾನು ಮುಂದೆ ಪದ್ಯ ಬರೆಯೋದಿಲ್ಲಅಂತ ಕಾಣುತ್ತದೆ; ಇನ್ನು ಬರೀಲಾರೆ ನಾನು. ” ಅದಾಗಿ ಒಂದು ವಾರದಲ್ಲಿ ನಿಮ್ಮ ಕಾವ್ಯದಲ್ಲೆಲ್ಲಾ ಬಹಳಅದ್ಭುತಾದ ಒಂದು ಪದ್ಯ ಬರೆದಿರಿಅದೇಕೂಪಮಂಡೂಕ’. ಬರೆಯೋದಕ್ಕೆ ಸಾಧ್ಯವಿಲ್ಲ ದೆ ಇರೋದರಬಗ್ಗೆನೇ ಅದು ಪದ್ಯ. ಅದನ್ನೇ ನೀವು ಪದ್ಯದಲ್ಲಿ ಗೆದ್ದು ಇನ್ನೊಂದು ಅದ್ಭುತವಾದ ಪದ್ಯವನ್ನು ಬರೆದಿರಿ.ಅಂದರೆ ನಿಮ್ಮ ಮನಸ್ಸು ಕೆಲಸಮಾಡುವ ಬಗೆ ಇದೆಯಲ್ಲಒಂದು ಕಾವ್ಯವನ್ನು ಬರೆಯುವಾಗಆಗನೀವು ಎಷ್ಟು ತನ್ಮಯರಾಗುತ್ತೀರಿ?; ಎಷ್ಟು ಬುದ್ಧಿಪೂರ್ವಕವಾಗಿ ಆಲೋಚನೆ ಮಾಡುತ್ತೀರಿ?’ ಒಂದು ಪದ್ಯಹೇಗೆ ಹುಟ್ಟುತ್ತೆ?; ಅದರ ಉಗಮ ಬರೀ ನಾದದಲ್ಲೋ? ಶಬ್ದದಲ್ಲೋ? ಅಥವಾ ಒಂದು ವೈಚಾರಿಕವಿಷಯವಾಗಿಯೊ ಬಗ್ಗೆ ಹೇಳುತ್ತೀರಾ?

 • ನಾನು, ಜೀವನದಲ್ಲಿ ಹೇಗೋ ಕಾವ್ಯದಲ್ಲೂ ಕೂಡ ಒಬ್ಬ ಮನುಷ್ಯ. ಬದುಕಿರುವಾಗಲೇ ಮತ್ತೆ ಮತ್ತೆ ಸಾಯದೇ ಹೋದ ಪಕ್ಷದಲ್ಲಿ ಹೊಸ ಸೃಷ್ಟಿ ಸಾಧ್ಯ ಆಗೋದಿಲ್ಲ. ಕೀಟ್ಸ್‌ ಹೇಳಿದಂಥ ಮಾತು, ನಿಮಗೆ ಜ್ಞಾಪಕ ಇರಬಹುದು “Dying into a new lifer”. ಇದನ್ನು ಮತ್ತೆ ಮತ್ತೆ ಮಾಡಬೇಕಾಗುತ್ತದೆ. ಬಹುಶಃ ನಿಮಗೆ ಆ ದಿವಸ ನಾನು ಇನ್ನು ಬರೆಯೋದಿಲ್ಲ ಅಂತ ಹೇಳಿದಾಗ, ಈಗ ಸಾವು ಸನ್ನಿಹಿತವಾಗಿದೆ ಅಂತ ಹೇಳಿದ ಅಂತ ಆಯಿತು. ಆಮೇಲೆ ಬಹುಶಃ ಇನ್ನೊಂದು ಸಲ ಜನಿಸಿ ಆ ಇನ್ನೊಂದು ಕೂಪಮಂಡೂಕವನ್ನು ರಚಿಸಿರಬಹುದು. ಹೀಗೆ ಒಬ್ಬ ಮನುಷ್ಯ ಎಷ್ಟಷ್ಟು ಸಲ ಸಾಯುತ್ತಾನೋ ಅಷ್ಟಷ್ಟು ಸಲ ಅವನು ಒಂದು ತರಹ ಪುನರ್ ನವ ಆಗಿ ತನ್ನ ಬದುಕಿನಲ್ಲಿ ವೈವಿಧ್ಯವನ್ನು ಹೇಗೋ ಹಾಗೆಯೇ ಕಾವ್ಯದಲ್ಲೂ ಕೂಡ ವೈವಿಧ್ಯವನ್ನು ತರಲು ಸಮರ್ಥನಾಗುತ್ತಾನೆ. ನಾನು ಬರೆಯುವ ರೀತಿಯಲ್ಲಿ ಒಂದು ಬಗೆಯ ತನ್ಮಯತೆ, ತಲ್ಲೀನತೆ ಇದ್ದರೂ ಕೂಡ ಒಂದೇ ಓಟಕ್ಕೆ ನಾನು ಎಲ್ಲಾ ಇಡೀ ಕವನವನ್ನು ಮುಗಿಸಿದ್ದು ಬಹಳ ಕಡಿಮೆ. ಒಂದು ಸಲ ಕೂತಾಗ ಬಹುಶಃ ನಾನು ಮುಗಿಸಿದಂಥ ಕವನಗಳಲು ಎರಡೋ,  ಮೂರೋ ಇರಬಹುದು. ಅವುಗಳಲ್ಲಿ ಒಂದು ‘ಮೋಹನ ಮುರಳಿ’; ಇನ್ನೊಂದು ‘ನಡೆದುಬಂದ ದಾರಿ’. ಇನ್ನು ಹೆಚ್ಚು ನನಗೆ ಜ್ಞಾಪಕ ಬರೋದಿಲ್ಲ. ಒಂದು ಸಲ ಬರೆದದ್ದು ಹ್ಯಾಗೆ ಹುಟ್ಟುತ್ತದೆ ಮನಸ್ಸಿನ ಒಳಗೆ? ಮನುಷ್ಯ ಏನೇನೋ ಯೋಚನೆ ಮಾಡುತ್ತಿರುತ್ತಾನೆ, ಯಾವಾಗಲೂ ಯೋಚನೆ ಮಾಡುತ್ತಿರುತ್ತಾನೆ. ಯಾವಾಗಲೋ ಯೋಚನೆ ಮಾಡುತ್ತಾ ಇದ್ದದ್ದು ಒಳಗಡೆ ಇರುತ್ತದಲ್ಲ – ಇದು ಅಕಸ್ಮಾತ್‌ ಆಗಿ,  ಸಾಮಾನ್ಯವಾಗಿ ಒಂದು ಕಾವ್ಯದ ಒಂದು ಸಾಲಾಗಿ ನನ್ನ ಮನಸ್ಸಿನಲ್ಲಿ ಮೂಡುತ್ತದೆ. ಅದರ ಗತಿ, ಅದರ ಲಯ – ಇದರಿಂದ ನಾನು ಪ್ರೇರಿತನಾಗಿ ಬರೆಯಲು ಕೂತುಕೊಳ್ಳುತ್ತೀನಿ. ಬರೆಯಲು ಕೂತುಕೊಂಡಾಗ ಒಂದು ಐದಾರು ಸಾಲು, ಹತ್ತು ಸಾಲು, ಕೆಲವು ಸಲ ಇಪ್ಪತ್ತು, ಮೂವತ್ತು ಬಂದರೂ ಬರಬಹುದು. ಆದರೆ ಅದನ್ನು ಬಿಟ್ಟುಬಿಡುತ್ತೇನೆ. ಒಂದೆರಡು ಸಿಗರೇಟು ಸೇದಿದರೂ ಉಪಯೋಗ ಆಗಲ್ಲ. ಅದನ್ನು ಎಲ್ಲೋ ಒಂದು ಕಡೆ ಇಟ್ಟಿರಬಹುದು, ನಾನು. ಆಮೇಲೆ ೮ – ೧೦, ೧೫ ದಿನ ಆದಮೇಲೆ ಆ ಕವನ ಜ್ಞಾಪಕಬಂದು ಅದನ್ನು ಮತ್ತೆ ಕೈಗೆ ತೆಗೆದುಕೊಳ್ಳುತ್ತೇನೆ. ಹೀಗೆ ಎರಡು ಮೂರು ಸಲ ಮಾಡಿ ಅದನ್ನು ಮುಗಿಸುತ್ತೇನೆ. ಮುಗಿಸಿ ಅಲ್ಲಿಗೂ ಬಿಡೋದಿಲ್ಲ  ನಾನು. ನನಗೆ ತೃಪ್ತಿ ಆಗೋದಿಲ್ಲ. ಯಾಕೆಂದರೆ, ನನ್ನ ದೃಷ್ಟಿಯಲ್ಲಿ ಒಬ್ಬ ಕವಿ, ನಿಜವಾದ ಕವಿ ಆಗಿದ್ದರೆ, ಅವನು ನಿಜವಾದ ವಿಮರ್ಶಕನೂ ಆಗಿರತಕ್ಕದ್ದು. ಇಲ್ಲದೆ ಹೋದರೆ ಅವನಿಗೆ ಬೆಳೆಯೋಕಾಗೋದಿಲ್ಲ. ಅನ್ನೋದಕ್ಕೆ ನಮ್ಮ ಕಾವ್ಯ ಇತಿಹಾಸದಲ್ಲೇ ಅನೇಕ ದೃಷ್ಟಾಂತಗಳಿವೆ. ನಾನಂತೂ ಮತ್ತೆ ಮತ್ತೆ ಅದನ್ನು ಅನುಭವಿಸಿದ್ದೇನೆ. ಯಾಕೆಂದರೆ ಕವಿ, ವಿಮರ್ಶಕ ಪರಸ್ಪರ ವಿರೋಧಿಗಳಲ್ಲ. ಅವರ ಇಬ್ಬರ ಹಿಂದೆ ಇರತಕ್ಕಂಥ ತತ್ವವೂ ಕೂಡ ಒಂದೇ ಎಂದು ನಾನು ತಿಳಿದವನು. ನಾನು ವಿಮರ್ಶೆ ಬರೀಬಹುದು, ಬರೀದೇ ಇರಬಹುದು. ಒಳ್ಳೆ ಕವಿ ಆಗಿದ್ದರೆ ಅವನು ಒಳ್ಳೆಯ ವಿಮರ್ಶಕನೂ ಆಗಿರುತ್ತಾನೆ. ಕೊನೆಯ ಪಕ್ಷ ಅವನು ತನ್ನ ಕಾವ್ಯವನ್ನಾದರೂ ಕೂಡ ನಿರಂತರವಾಗಿ ವಿಮರ್ಶೆ ಮಾಡಿಕೊಂಡು ಹೋಗಬೇಕಾಗುತ್ತದೆ.

? ಸರಿ ಸಾರ್. ಆದರೆ ನಿಮ್ಮ ಕಾವ್ಯದಲ್ಲಿ ಒಂದು ಅಜ್ಞಾತವಾದದ್ದೂ ಬಂದು ಸೇರಿಕೊಳ್ಳುತ್ತದೆ. ಇದರಿಂದನಮಗೆ ಆಶ್ಚರ್ಯವಾಗುತ್ತದೆ.

 • ನನಗೇ ಆಶ್ಚರ್ಯವಾಗುತ್ತಪ್ಪಾ ಅದು! ಎಷ್ಟೋ ಸಲ ಇದ್ದಕ್ಕಿದ್ದ ಹಾಗೆ ಒಂದೆರಡು ಸಾಲುಗಳು ಬಂದಾಗ ಎಲ್ಲಿಂದ ಬಂದವು ಇವು ಅಂತ ಗೊತ್ತಾಗೋದಿಲ್ಲ. ಈ ಅಜ್ಞಾತ ಅನ್ನೋದು ಇದೆಯಲ್ಲ ಅದು ಎಲ್ಲಿ ಬರೋದಿಲ್ಲವೋ ಅಲ್ಲಿ ಕವನ ಅಷ್ಟು ಸಫಲವೂ ಆಗೋದಿಲ್ಲ.

? ಅದು ಸರಿ ಸಾರ್. ನಾನು ಇದನ್ನು ಯಾಕೆ ಕೇಳಿದೆ ಅಂದರೆ, ಬಹಳ ಜನ ನಿಮ್ಮ ಕಾವ್ಯ ಓದಿದವರು,ಇವರು ಎಲಿಯಟ್ನಿಂದ ಪ್ರೇರಿತರಾದವರು ಇತ್ಯಾದಿ ಅನ್ನುತ್ತಾರೆ. ಆದರೆ ನನಗೆ ನಿಮ್ಮ ಕಾವ್ಯ ಓದುತ್ತಿದ್ದಾಗಅದು ಯುರೋಪ್ನಿಂದ ಎಷ್ಟು; ಪಡೆದಿದೆಯೋ ಅದಕ್ಕಿಂತ ಹೆಚ್ಚನ್ನು ಅದು ಭಾರತೀಯ ಸಂಸ್ಕೃತಿಯಿಂದಪಡೆದಿದೆ, ವೇದಗಳಿಂದ ಪಡೆದಿದೆ, ಉಪನಿಷತ್ನಿಂದ ಪಡೆದಿದೆ, ಪುರಾಣದಿಂದ ಪಡೆದಿದೆಆಮೇಲೆಕುಮಾರವ್ಯಾಸನಿಂದ, ಪಂಪನಿಂದ ಪಡೆದಿದೆ, ಎಂದು ಅನ್ನಿಸುತ್ತದೆ.

ಕೆಲವು ಪದ್ಯಗಳಲ್ಲಿ ನಿಮ್ಮ ಹುಟ್ಟಿದ ತಾಣ (ಮೊಗೇರಿ) ಬಹಳ ಸುಂದರವಾಗಿ ಬರುತ್ತದೆ. ಒಂದು ಪದ್ಯದಲ್ಲಿನೆನಪಿದೆ.

 • ಈಗಲೂ ನೆನಪುಂಟು: ಪಡುಗಡಲ ಮೊರೆ ಬಾರು ಗೋಲ ಬೀಸಿಗೆ ಸಿಕ್ಕ ನಮ್ಮ ಮನೆಗೆ
  ಇತ್ತಿದಿರು ತೇರು ಹನೆಮರ ಹಳಬ. . . ”

ಅಂತ ಶುರುವಾಗುತ್ತೆ ಆ ಪದ್ಯ. ಆ ಹಳ್ಳಿಯಲ್ಲಿ ನೀವು ಇದ್ದಾಗ, ಆ ಸಮುದ್ರದ ಹತ್ತಿರದಲ್ಲಿ ನಿಮಗೆ ಕನ್ನಡ ಕಾವ್ಯದ ಬಗ್ಗೆ ಆಸಕ್ತಿಯನ್ನು ಹುಟ್ಟಿಸಿದ ಸಂಗತಿಗಳು ಯಾವುವು?

ನಾನು ಕವಿ ಹೇಗೆ ಅದೆ? ಅಂತ ಯೋಚನೆಮಾಡಿದಾಗ ಈಗ, ಅದಕ್ಕೆ ಕಾರಣ ಗೊತ್ತಾಗೋದಿಲ್ಲ. ಎಲ್ಲದರಲ್ಲೂ ಒಂದು ಹೃದಯಾಂತರಾಳದಲ್ಲಿ ಒಂದು ನಿಗೂಢತೆ ಇರುವ ಹಾಗೆ ಬಹುಶಃ ಇದರಲ್ಲೂ ಇರುತ್ತದೆ ಅಂತ ಕಾಣುತ್ತೆ. ನಮ್ಮ ಸುತ್ತಮುತ್ತಲಿನ ವಾತಾವರಣ, ಹಳ್ಳಿಯ ವಾತಾವರಣ, ನಮ್ಮ ಮನೆಯೊಳಗೆ ಇದ್ದಂತಹ ಪದ್ಯ ರಚನೆಯ ವಾತಾವರಣ ಇವುಗಳ ಪರಿಣಾಮ ಬೀರಿರಬಹುದು. ನಮ್ಮ ಮನೆಯಲ್ಲೂ ಕೂಡ ನಮ್ಮ ತಂದೆ, ನಮ್ಮ ಚಿಕ್ಕಪ್ಪ, ನಮ್ಮ ಸೋದರತ್ತೆ, ನಮ್ಮಜ್ಜಿ ಇವರೆಲ್ಲರೂ ಕೂಡಾ ಪದ್ಯರಚನೆ ಮಾಡುತ್ತಾ ಇದ್ದರು. ಅದು ಕಾವ್ಯ ಅಲ್ಲ. ಅಂದರೆ ಪದ್ಯರಚನೆ ಮಾಡುವ ಕಡೆಗೆ ನನ್ನ ಮನಸ್ಸು ಒಗ್ಗಿರಬೇಕು ಅಂತ ಕಾಣುತ್ತದೆ. ಬಹಳ ಮೊದಲಿನಿಂದಲೇ ಶುರುಮಾಡಿಬಿಟ್ಟ ಇದ್ದೆ. ಇದಕ್ಕೆ ಸಹಾಯಕವಾಗಿ ಬಹುಶಃ ನಮ್ಮ ಯಕ್ಷಗಾನ ಬಹಳ ನನ್ನ ಮೇಲೆ ಪ್ರಭಾವ ಬೀರಿರಬೇಕು. ಪ್ರತಿನಿತ್ಯ, ಬೇಸಿಗೆ ಕಾಲದಲ್ಲಿ ಕತ್ತಲೆ ಆದ ಕೂಡಲೇನೇ ಅವರ ಚಂಡೆ ಕೇಳುತ್ತಾ ಇತ್ತು, ದೂರದಿಂದ. ಅದು ಎಲ್ಲೇ ಆಟ ಇರಲಿ, ಬಯಲಾಟ, ನಾವು ಹೋಗಿ ನೋಡಿಕೊಂಡು ಬರುತ್ತಾ ಇದ್ದೆವು. ಆ ಸೊಗಸಾದ ಮಾತುಗಾರಿಕೆಯೂ ಕೂಡ ನನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿರಬಹುದು. ವರ್ಷ ಕಳೆದ ಹಾಗೆ, ನಿಮಗೆ ಗೊತ್ತಿರುವ ಹಾಗೆ, ಮಳೆಗಾಲದಲ್ಲಿ ತಾಳಮದ್ದಲೆ ಅಂತ ಆಗುತ್ತದೆ. ಒಂದು ವಿಶೇಷವಾದ ಪ್ರಸಂಗವನ್ನು – ಕೂತುಕೊಂಡು ಅರ್ಥ ಹೇಳೋದು. ಅದರಲ್ಲಿ ನಾನೂ ಕೂಡ ಆಗಾಗ ಭಾಗವಹಿಸುತ್ತಾ ಇದ್ದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಬಹುಶಃ ನಾನು ಮೊದಲಿನಿಂದಲೂ ಕೂಡ, ಮುಖ್ಯವಾಗಿ, ಅಂತರ್ಮುಖಿ. ನನ್ನಲ್ಲೇ ನಾನು ಲೀನನಾಗುವ ಸ್ವಭಾವ. ಯಾವಾಗಲೂ ನಾನು ಏಕಾಂಗಿ ಅನ್ನುವ ಭಾವನೆ ಮೊದಲಿಂದ ಇಲ್ಲಿಯ ತನಕವೂ ನನಗೆ ಇದೆ. ಯಾವುದೋ ರೀತಿಯಿಂದ ಜಗತ್ತಿನಿಂದ, ಉಳಿದ ಮನುಷ್ಯ ಸಂಬಂಧಗಳಿಂದ ಪ್ರತ್ಯೇಕನಾದವನು ಎನ್ನುವ ಭಾವನೆ, ಎಲ್ಲವನ್ನೂ ಕೊಂಚ ದೂರ ನಿಂತು ನೋಡಬೇಕು ಅನ್ನುವ ಭಾವನೆ. ಬಹುಶಃ ಭಾರ ಈ ಮಾತಾಡುವವನಾಗಿದ್ದರೆ, ನಿಮ್ಮ  ಹಾಗೆ, ನಾನು ಕಾವ್ಯ ಬರೆಯೋದಕ್ಕೆ ಹೋಗುತ್ತಿರಲಿಲ್ಲ ಅಂತ ಕಾಣುತ್ತೆ.

ನಾನು, ಸಾಮಾನ್ಯವಾಗಿ ಮಾತಾಡುವುದು ಬಹಳ ಕಡಿಮೆ, ಮೊದಲಿನಿಂದಲೂ ಅಷ್ಟೆ. ಮಾತು ಕಡಿಮೆಯಾದದ್ದರಿಂದ ಬಹುಶಃ ಒಳಗಡೆ,  ನಾನು ಅನುಭವಿಸಿದ್ದು, ನಾನು ಭಾವಿಸಿದ್ದು, ಚಿಂತಿಸಿದ್ದು ಇವೆಲ್ಲಾ ಸೇರಿಕೊಂಡು ಅಭಿವ್ಯಕ್ತಿಯನ್ನು ಬಯಸುತ್ತಾ ಇರುತ್ತವೆ. ಈ ಇದು ಅನೇಕರಿಗೆ ಅನ್ವಯಿಸುವಂತಹ ಮಾತಾಗುತ್ತದೆ, ನನಗೇ ಯಾಕೆ ಅನ್ವಯಿಸಬೇಕು? ಅಂತ ನಾನು ನನಗೇ ಪ್ರಶ್ನೆ ಕೇಳಿಕೊಳ್ಳುತ್ತೇನೆ. ಬಹುಶಃ ಈ ಶಕ್ತಿ, ಇನ್ನೂ ವಿಶೇಷ ಶಕ್ತಿಗಳಿರುವ ಹಾಗೆ, ಒಂದು ವಿಶಿಷ್ಟವಾದ ಶಕ್ತಿ ಯಾವುದೋ ಕಾರಣದಿಂದ, ಯಾವುದೋ ವ್ಯಕ್ತಿಯನ್ನು ಆಯ್ಕೊಳ್ಳುತ್ತದೋ ಏನೋ. ಯಾರಿಗೆ ಗೊತ್ತು?

? ಅದು ನಿಮ್ಮನ್ನು ತುಂಬಾ ಹಿಂಸೆ ಮಾಡುತ್ತದೆ ಅಂತಾನೂ ಹೇಳಿದ್ದೀರಿ, ಕೆಲವು ಸಾರಿ.

 • ಹಿಂಸೆ ಈ ರೀತಿಯ ಅಭಿವ್ಯಕ್ತಿ ಸಮಯದಲ್ಲಿ ಆಗುವ ಹಿಂಸೆ. ಅಭಿವ್ಯಕ್ತಿಬೇಕು ಅಂತ ಮನಸ್ಸು ಒತ್ತಾಯಪಡಿಸುವ ಒಂದು ಹಿಂಸೆ. ಆಮೇಲೆ ಬರೆಯುವಾಗಿನ ಹಿಂಸೆ. ಯಾಕೆಂದರೆ ಯಾರೇ ಆಗಲಿ, ತಾನು ಎಂಥ ದೊಡ್ಡ ಕವಿ ಅಂತ ತಿಳಿದುಕೊಂಡಿರಲಿ, ಅವನಿಗೆ ಪ್ರತಿಯೊಂದು ಸಾಲನ್ನು ಬರೆಯುವಾಗಲೂ ನಿಜವಾಗಿ ಕಷ್ಟ ಆಗಲೇಬೇಕು. ಎಲ್ಲಿ  ಈ ಕಷ್ಟ ಆಗೋದಿಲ್ಲವೋ ಅಲ್ಲಿ  ಆ ಕವಿತೆ ಪ್ರಭಾವಶಾಲಿ ಆಗೋದಿಲ್ಲ, ಅಂತ ನನ್ನ ಅನುಭವ.

? ಅಂದರೆ ಅದೊಂದು ರೀತಿಯ ಪುನರ್ ಜನ್ಮ ಅಂತ ನೀವು ಹೇಳಿದಿರಲ್ಲ ಹಾಗೆ. ಅದನ್ನೇ ಮುಂದುವರಿಸಿಇನ್ನೊಂದು ಪ್ರಶ್ನೆ ಕೇಳುತ್ತೀನಿ. ಒಂದು ನಾಗರೀಕತೆಗೂ ಹಾಗೆ ಒಂದು ಪುನರ್ ಜನ್ಮ ಆಗಬೇಕು ಅಂತನಿಮಕಗೆ ಅನ್ನಿಸುತ್ತದಾ?

 • ಅದನ್ನೇ ನಾನು ಬಹಳ ಸಲ ಹೇಳುತ್ತಾ ಬಂದಿದ್ದೇನೆ. ನಮ್ಮ ಹಿಂದೆ ದೊಡ್ಡ ಸಂಸ್ಕೃತಿ ಇತ್ತು ಇತ್ಯಾದಿ, ಇತ್ಯಾದಿ ಹೇಳಿಕೊಂಡು ಹೋಗುತ್ತೇವೆ. ಅದರಿಂದ ನಮ್ಮ ಬೆನ್ನು ತಟ್ಟಿಕೊಳ್ಳುತ್ತೇವೆ. ಹಿಂದೆ ಭಾರೀ ಮಹಾ ಪುರುಷರಿದ್ದರು ಅಂತ ಹೇಳಿಕೊಳ್ಳುತ್ತೇವೆ. ಅಲ್ಲವಾ? ಅದರಿಂದ ನನಗೇನು ಉಪಯೋಗ ಅಂತ ಕೇಳುತ್ತೀನಿ. ಈಗಲೂ ಕೂಡ ಎಷ್ಟೋ ಕಡೆ ಹೋಗಿ ಕೇಳುತ್ತೀನಿ. ಮಹಾತ್ಮಗಾಂಧೀ ಇದ್ದರು. ಸರಿಯಪ್ಪಾ. ನಿನಗೇನಾಯಿತು ಅದರಿಂದ?. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೇ ವಿಕಾಸಗೊಂಡು ತನ್ನ ಮಟ್ಟವನ್ನು ಮುಟ್ಟಬೇಕಲ್ಲದೇನೇ ಇನ್ನೊಬ್ಬರು ದೊಡ್ಡವರನ್ನ ಆಶ್ರಯಿಸಿಕೊಂಡು, ಅವರ ಹೆಸರು ಹೇಳಿಕೊಂಡು ಬದುಕುವುದಿದೆಯಲ್ಲ ಈ ಗುಲಾಮಗಿರಿಗೆ  ನಾನು ಯಾವಾಗಲೂ ವಿರುದ್ಧ. ಆದಕಾರಣವೇ ನಾನು ಯಾರು ನನ್ನ ಜೊತೆಗೆ ಇರುತ್ತಾರೋ ಅವರನ್ನ ಸಮಾನರಂತೆ ಯಾವಾಗಲೂ ನಡೆಸಿಕೊಳ್ಳಬಲ್ಲೆ. ನನಗಿಂತ ಮೇಲುಪಟ್ಟವರು ಅಂತ ದೈನ್ಯ ತೋರಿಸೋದಕ್ಕೆ ನನಗೆ ಎಂದೂ ಸಾಧ್ಯ ಆಗಿಲ್ಲ. ಹಿಂದೆ ಚಿಕ್ಕವನಿದ್ದಾಗ ಕಷ್ಟವಾಗುತ್ತಿತ್ತು. ಆವಾಗ ಈ ತರಹ ನನ್ನನ್ನ ನಡೆಸಿಕೊಳ್ಳುತಿದ್ದಾರಲ್ಲ ಅಂತ ಸಿಟ್ಟುಬರುತ್ತಿತ್ತು. ಮಾತಾಡೋಕ್ಕೆ ಆಗುತ್ತಿರಲಿಲ್ಲ. ಅಳು ಬಂದುಬಿಡುತ್ತಾ ಇತ್ತು ೮ – ೯ – ೧೦ ವರ್ಷ ಕಾಲದಲ್ಲಿ. ಈಗ ಹಾಗಲ್ಲ, ಅವನು ದೊಡ್ಡವನೇ ಅಂತ ತಾನು ತಿಳಿದುಕೊಂಡಿದ್ದರೆ ನಾನೇನು ಕಡಿಮೆ ಅಂತ ಅನ್ನಿಸುತ್ತೆ ನನಗೆ ಇದು ದೇವರಿಗೂ ಅನ್ವಯಿಸುವಂತಹ ಮಾತು. ದೇವರನ್ನಾದರೂ ನಾನು ಗೆಳೆಯ, ಸಖ, ಸಹಚರ, ಸಮಾನ ಅಮತ ನೋಡಿಕೊಳ್ಳುವವನಲ್ಲದೇನೇ ನನಗಿಂತ ದೊಡ್ಡವನು, ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕು ಅಂತ ಎಂದೂ ನನಗೆ ಅನಿಸಿದ್ದಿಲ್ಲ;, ನನ್ನ ಸ್ವಭಾವ, ಇದು.

? ಭಕ್ತಿ ಅನ್ನುವ ಒಂದು ಭಾವನೆ ನಿಮ್ಮ ಕಾವ್ಯದಲ್ಲಿ ಕಾರಣಕ್ಕಾಗಿ ಕಾಣಿಸಿಕೊಳ್ಳುವುದಿಲ್ಲ ಅಂತಅನ್ನಿಸುತ್ತದೆ.

 • ಇಲ್ಲ. ಭಕ್ತಿಯಿಂದಲೇನೇ ನಮ್ಮ ದೇಶಕ್ಕೆ ಬಹಳ ಅನಿಷ್ಟವಾಗಿದೆ ಅಂತ ನಾನು ತಿಳಿದುಕೊಂಡಿರುವವನು. ಆದ್ದರಿಂದ ನಾನು ಭಕ್ತಿಗೆ ವಿರೋಧಿ. ನಾನು ಬಯಸೋದು ನನ್ನ ಸಮಾನವಾದ ಶಕ್ತಿಯ ಜೊತೆಗೆ ಸಂವಾದವನ್ನಲ್ಲದೇ ನನಗೆ ಮೇಲ್ಪಟ್ಟ ಶಕ್ತಿಯ ಮುಂದೆ ಸಾಷ್ಟಾಂಗ ಪ್ರಣಾಮವನ್ನ ಅಲ್ಲ. ಬಹುಶಃ  ಈ ಜಗತ್ತು ನಡೆಯೋದು ಹಾಗೆ ಅಂತ ಕಾಣುತ್ತದೆ.

? ಆದರೆ, ನಿಮ್ಮ ಕಾವ್ಯದಲ್ಲಿ  ವಿನಯ ಮತ್ತು ಮಿತಿಯನ್ನು ಒಪ್ಪಿಕೊಳ್ಳೋದು. . . ಉದಾಹರಣೆಗೆಕೂಪಮಂಡೂಕದಲ್ಲಿ, ತನ್ನ ಮಿತಿಯನ್ನು ತಾನು ಕಂಡುಕೊಳ್ಳೋದು, ತಾನು ಇಷ್ಟು ಎತ್ತರ ಬಿಟ್ಟು ಇನ್ನುಹೆಚ್ಚು ಏರಲಾರೆ ಅಂತ ಅರಿತುಕೊಳ್ಳೋದು, ಆಮೇಲೆ ವ್ರತಶೀಲನಾಗಿ ಯಾವುದಕ್ಕಾದರೂ ಕಾದುಕೂತುಕೊಳ್ಳೋದು. . .

ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಅಂಥ ರೂಪರೇಖೆ?

ಇದೂ ನಿಮ್ಮ ಕಾವ್ಯದಲ್ಲಿ ಮುಖ್ಯವಾಗುತ್ತೆ. ಈಗ ನೀವು ಹೇಳಿದ್ದಕ್ಕೆ ಸ್ವಲ್ಪ ವಿರೋಧವಾಗಿ ಅದು ಕಾಣಬಹುದು.ಆದರೆ ಮಿತಿಯನ್ನು ಒಪ್ಪಿಕೊಳ್ಳೋದು ಅಂತ ಅಂದರೆ ಎಲ್ಲಾದರೂ ಒಂದು ಕಡೆ ಶರಣಾಗೋದು. ಅಲ್ವಾ?

 • ಯಾವುದಕ್ಕೆ ಶರಣಾಗೋದು ಅನ್ನೋದಿದೆಯಲ್ಲಾ ಅದು ಮುಖ್ಯವಾಗುತ್ತೆ. ಇನ್ನೊಂದು ಅಮೂರ್ತ ಶಕ್ತಿಗೆ ಇರಬಹುದು ಅಥವಾ ನಿಜವಾದ ಅಹಂಕಾರದ ಒಂದು ಅಭಿವ್ಯಕ್ತಿಯಲ್ಲಿ ವಿನಯವೂ ಸೇರಿರುತ್ತದೆ. ಆದ್ದರಿಂದ ನನ್ನ ಕಾವ್ಯದಲ್ಲಿ ಎಲ್ಲದರಲ್ಲೂ, ದ್ವಂದ್ವವನ್ನು ನಾನು ಯಾವಾಗಲೂ ಬಳಸುತ್ತೇನೆ. ನನ್ನಲ್ಲಿ ಅಹಂಕಾರವಿದೆ; ನಾನು ಇನ್ನೊಬ್ಬರಿಗೆ ತಲೆ ಬಗ್ಗಿಸುವವನಲ್ಲ – ನಿಜ. ಆದರೂ ಕೂಡ ನನಗಿಂತ ಮೇಲ್ಪಟ್ಟದ್ದು, ದೊಡ್ಡದಾದದ್ದು ಇದೆ ಅನ್ನುವ ಪ್ರತ್ಯಯದಿಂದ ಬರುವ ವಿನಯವೂ ಅಗತ್ಯ. ವಿನಯ ಮತ್ತು ಅಹಂಕಾರ ಬೆರೆತಂಥ ಅಭಿಮಾನವನ್ನು ರೂಢಿಸಿಕೊಳ್ಳಲು ನಾನು ಪ್ರಯತ್ನಪಟ್ಟಿದ್ದೇನೆ. ಬಹುಶಃ ಕಾವ್ಯದಲ್ಲೂ ಅದನ್ನು ಹೇಳಿರಬೇಕು.

? ಈಚಿನ ನಿಮ್ಮ ಒಂದು ಪದ್ಯದಲ್ಲಿ ಎರಡು ಬಹಳ ಮುಖ್ಯವಾದ ಸಾಲುಗಳಿವೆ ಅಂತ ಅನ್ನಿಸಿತು, ನನಗೆ. ಸಾಲುಗಳು ಯಾಕೆ ಮುಖ್ಯ ಅಂದರೆ: ನಿಮ್ಮ ಭೂಮಿಗೀತ ನಂತರ, ವರ್ಧಮಾನ ನಂತರ ನೀವುಆಲೋಚನೆ ಮಾಡುತ್ತಾ ಬಂದಿರುವ ಕ್ರಮದಿಂದಾಗಿ ಒಟ್ಟು ಇಡೀ ಸಂಸ್ಕೃತಿಯ ಬಗ್ಗೆ ಮತ್ತು ವ್ಯಕ್ತಿ ಜೀವನದವಿಕಾಸದ ಬಗ್ಗೆ, ಬಹಳ ಮುಖ್ಯವಾದ ಮಾತನ್ನ ಪದ್ಯದಲ್ಲಿ ಹೇಳಿದ್ದೀರಿ. ಸಾಲುಗಳು ಹೀಗಿವೆಒಳ್ಳೆತನಸಹಜವೇನಲ್ಲ. . . ” “ಒಳ್ಳೆತನ ಅಸಹಜವೂ ಅಲ್ಲ. . . ” ಅಂತ ಸಾಲುಗಳು ಇವೆ. ಹಾಗೇನೇ ನಂತರನಿಮ್ಮ ಪ್ರೀತಿ ಅನ್ನುವ ಪದ್ಯವನ್ನು ಓದಿದೆ. ನಿಶ್ಕಲ್ಮಷವಾದ ಪ್ರೀತಿ ಮನುಷ್ಯನಿಗೆ ಸಾಧ್ಯವೇ ಇಲ್ಲವೋ ಏನೋಅನ್ನುವ ಅನುಮಾನ ಅಲ್ಲಿ ಕಾಣುತ್ತದೆ. ಇದನ್ನು ಯಾಕೆ ಹೇಳಿದೆ ಅಂತ ಅಂದರೆ: ಕನ್ನಡದಲ್ಲಿ ಬೇಂದ್ರೆಯನ್ನುತೆಗೆದುಕೊಳ್ಳೋಣ; ಅಥವಾ ಇಂಗ್ಲಿಷ್ನಲ್ಲಿ ಯೇಟ್ಸ್ನಂತಹ ಕವಿಯನ್ನು ತೆಗೆದುಕೊಳ್ಳೋಣ. ಅವರಿಗೆಮನುಷ್ಯನ ಭಾವನೆಗಳಲ್ಲಿ ಮುಖ್ಯವಾದ ಪ್ರೀತಿ ಇತ್ಯಾದಿಗಳ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ನೀವುಇವನ್ನೆಲ್ಲಾ ಬಿಟ್ಟವರ ಹಾಗೆ, ಒಂದು ಸ್ವಲ್ಪ ಒಣಗಿದ ಮನಸ್ಸಿನಿಂದ ಇವನ್ನ ನೋಡಿದ ಹಾಗೆ ಒಂದೊಂದು ಸಲಅನ್ನಿಸತ್ತೆ. ಇದಕ್ಕೇನು ಕಾರಣ? ಇದು ನಿಮ್ಮ ಧ್ಯಾನದ, ಚಿಂತನೆಯ ಫಲವಾಗಿ ಬಂದದ್ದೊ? ಅಥವಾಏನಾದರೂ ಒಂದು ಕೊರತೆಯಿಂದ ನಿಮಗೆ ಹೀಗೆ ಅನ್ನಿಸುತ್ತದೊ?

 • ಇದು ಒಂದು ಬಹಳ ಒಳ್ಳೆಯ ಪ್ರಶ್ನೆ. ಉತ್ತರ ಹೇಳಲು ಪ್ರಯತ್ನಿಸುತ್ತೇನೆ. ಮೊದಲನೆಯದಾಗಿ, ನಾನು ನಿಮಗೆ ಆಗಲೇ ತಿಳಿಸಿದ ಹಾಗೆ. ಭಾವ ತಲ್ಲೀನತೆ ನನಗೆ ಸಹಜವಾಗಿ ನನ್ನ ಯೌವನದಲ್ಲಿ ಇದ್ದದ್ದು. ಅನಂತರ ಬುದ್ಧಿಯನ್ನೂ ಉಪಯೋಗಿಸಬೇಕು ಅಂತ ಅನ್ನಿಸಿತು ಅಂತ ಹೇಳಿದೆ. ಆಮೇಲೆ ನನ್ನ ಅಂತರಂಗವನ್ನೂ, ನನ್ನ ಸುತ್ತಮುತ್ತಲಿರುವವರ ಅಂತರಂಗವನ್ನೂ, ಅಂತಃಕರಣವನ್ನೂ, ಮನಸ್ಸನ್ನೂ, ಅವರ ಮಾತನ್ನೂ, ಕೃತಿಯನ್ನೂ ಗಮನಿಸಿ ನೋಡಿದಾಗ ಯಾವ ಮನುಷ್ಯನೇ ಆಗಲಿ, ಎಷ್ಟು ದೊಡ್ಡವನೇ ಆಗಲಿ ಅವನಲ್ಲಿ ಅತ್ಯಂತ ತುಚ್ಛ, ಕ್ಷುಲ್ಲಕ, ಕ್ಷುದ್ರ ಗುಣಗಳೂ ಕೂಡ ಒಂದಲ್ಲ ಒಂದು ಕಡೆ ಗುಪ್ತವಾಗಿಯಾದರೂ ಇದ್ದೇ ಇರುತ್ತವೆ ಅಂತ ಅನ್ನಿಸಿತು. ಅಂದರೆ ಅತ್ಯಂತ ನೀಚ, ಅತ್ಯಂತ ದೊಡ್ಡವನು, ಸೌಜನ್ಯಪೂರಿತನಾದವನು, ಇವರಿಬ್ಬರಲ್ಲೂ ಕೂಡ ಮನುಷ್ಯ ಸಹಜವಾದ ಎಲ್ಲಾ ಗುಣಗಳೂ ಒಂದಲ್ಲ ಒಂದು ಪ್ರಮಾಣದಲ್ಲಿ ಇದ್ದೇ ಇರುತ್ತೆ. ಯಾವುದನ್ನೇ ಆಗಲಿ ಸಂಪೂರ್ಣ ತೊಡೆದುಹಾಕಲು ಆಗುವುದಿಲ್ಲ. ನಾನು ಸಾಮಾನ್ಯವಾಗಿ ಹೊಟ್ಟೆಕಿಚ್ಚು ಪಡುವುದಿಲ್ಲ. ಪಡುವುದಿಲ್ಲ ಅಂದರೆ ಹೊಟ್ಟೆಕಿಚ್ಚಿನ ಒಂದು ಅಂಶ ಇಲ್ಲವೇ ಇಲ್ಲ ಅಂತ ನಾನು ಹೇಳಿದರೆ ಸುಳ್ಳು ಹೇಳಿದ ಹಾಗೆ ಆಗುತ್ತದೆ. ನಾನು ಅದನ್ನು ಹೇಳುವುದಿಲ್ಲ. ಆದರೆ ವಿವೇಚನೆಯ ಸಹಾಯದಿಂದ ಆ ಹೊಟ್ಟೆಕಿಚ್ಚಿನ ಭಾವನೆಯನ್ನ ಕೆಳಕ್ಕೆ ತಳ್ಳಿ ತೂಕದ, ವಿಮರ್ಶೆಯ, ವಿವೇಕದ ಮಾತುಗಳನ್ನು ಆಡಲು ಪ್ರಯತ್ನ ಮಾಡುತ್ತೀನಿ. ಅಂದರೆ ನಮ್ಮಲ್ಲಿರುವಂಥ ಈ ದ್ವಂದ್ವಗಳನ್ನು ಸರಿಯಾದ ಒಂದು ಹಂತ, ಹಂತವಾಗಿ ವರ್ಗೀಕರಿಸಿಕೊಂಡು ಯಾವುದಕ್ಕೆ ಎಷ್ಟು ಮಹತ್ವ ಕೊಡಬೇಕು ಅನ್ನುವುದನ್ನು ನಿರ್ಧರಿಸಿಕೊಳ್ಳೋದು ನಮಗೆ ಸಾಧ್ಯವಿಲ್ಲದೇನೇ ಯಾವುದೇ ಒಂದು ಭಾವನೆಯನ್ನಾಗಲೀ, ಗುಣವನ್ನಾಗಲೀ ತೊಡೆದು ಹಾಕೋದು ಸಾಧ್ಯ ಆಗೋದಿಲ್ಲ. ಪ್ರೀತಿ, ಪ್ರ ಈಥಿ ಯ ಜೊತೆಗೆ ದ್ವೇಷವೂ ಇರುತ್ತದೆ. ದ್ವೇಷವನ್ನ ಪ್ರೀತಿಗಿಂತ ಕೆಳಕ್ಕೆ ಇಡಬೇಕಲು. ಆದರೆ ಎಷ್ಟು ಕೆಳಕ್ಕಿಟ್ಟರೂ ಕೂಡ ಪ್ರೀತಿಸುವಾಗ ಈ ದ್ವೇಷ ಅನ್ನೋದು ನಾನಾ ವಿಧದಲ್ಲಿ ಪ್ರೀತಿಯ ಸೋಗಿನಲ್ಲೇ ಬಂದು ಕಾಣಿಸಿಕೊಳ್ಳುತ್ತದೆ. ಇದನ್ನೆಲ್ಲಾ ಗಮನಿಸಿ, ಚಿಂತಿಸಿದಾಗ ನನಗೆ ಹೀಗೆ ಅನ್ನಿಸುತ್ತದೆ. ನಾವು ಕಲಿಯಬೇಕಾದದ್ದು ಮನಸ್ ಸಂಸ್ಕಾರವನ್ನು. ಅಲ್ಲಿರುವಂಥ ಅನೇಕ ಗುಣಗಳಿವೆಯಲ್ಲಾ ಇವುಗಳಲ್ಲಿ  ಯಾವುದಕ್ಕೆ ಯಾವ ಸ್ಥಾನ ಕೊಡಬೇಕು. ಇದು ನಮ್ಮ ಹಿಂದಿನವರು ಹೇಳಿದಂಥ ಪುರಷಾರ್ಥ ಚಿಂತನಕ್ಕೂ ಕೂಡ ಹೊಂದುವಂಥ ಮಾತು. ಧರ್ಮ, ಅರ್ಥ, ಕಾಮ, ಮೋಕ್ಷ ಇವು ಎಲ್ಲಾವೂ ಪರುಷಾರ್ಥಗಳು, ಅಥವಾ ಮೌಲ್ಯಗಳು ಅಂತ ಹೇಳಿದರು. ಎಲ್ಲವೂ ಕೂಡ ಧರ್ಮ: ಅಂದರೆ ಸಮಾಜಕ್ಕೆ, ಜಗತ್ತಿಗೆ, ಉಳಿದ ಮನುಷ್ಯರಿಗೆ, ಪ್ರಾಣಿಗಳಿಗೆ, ಆಮೇಲೆ ಗಿಡಮರಗಳಿಗೆ ಯಾವುದಕ್ಕೂ ತೊಂದರೆಯಾಗದ ರೀತಿಯಲ್ಲಿ ಹಣವನ್ನು ಸಂಪಾದನೆಮಾಡಿ ಇಷ್ಟಾರ್ಥಗಳನ್ನು ಪೂರೈಸಿಕೊಂಡೂ ಕೂಡ ಕೊನೆಗೆ ಕೃತಾರ್ಥನಾಗುವುದು. ಈ hierarchy of values ಇದೆಯಲ್ಲಾ, ಇದನ್ನ ನಾವೂ ಕೂಡ, ನಾವು ಪ್ರತಿಯೊಬ್ಬರೂ ನಮ್ಮ ಮನಸ್ಸಿನಲ್ಲಿ ಸ್ಥಾಪಿಸಿಕೊಳ್ಳದೇ ಹೋದರೆ ಆಗ ಬದುಕು ಸಾರ್ಥಕ ಆಗೋದಿಲ್ಲ, ಪರಿಪಕ್ವ ಅನ್ನಿಸುವುದಿಲ್ಲ ನನಗೆ.

? ಸಾರ್, ಅದರ ಜೊತೆಗೇನೇ, (ಇದನ್ನೂ ಕೂಡ ನಿಮ್ಮ ಕಾವ್ಯದಲ್ಲೇ ನಾವು ಕಂಡಿರೋದು) ಒಂದುಸಹಜತೆ ಹೋದಕೂಡಲೂನೂ ಇವ್ಯಾವುದನ್ನೂ ಮಾಡೋದಕ್ಕೆ ಆಗೋದಿಲ್ಲ ಅಲ್ವಾ?

 • ಹೌದು.

? ಯಾಕೆಂದರೆ, ಇವೆಲ್ಲವನ್ನೂ ಬುದ್ಧಿಪೂರ್ವಕವಾಗಿ, ಧಾರ್ಮಿಕವಾಗಿ, ಶಿಕ್ಷೆಯಿಂದ, ವ್ರತನಿಷ್ಠನಾಗಿ ಎಲ್ಲವನ್ನೂಮಾಡಿ, ಕೊನೆಯಲ್ಲಿ ಒಂದು ಸಹಜವಾದ ಅಂತಃಕರಣ ಇಲ್ಲದಿದ್ದರೆ ಏನೂ ಆಗುವುದಿಲ್ಲ. ಅಲ್ಲವಾ?

 • ಆಗಲ್ಲ ಹೌದು. ಅದನ್ನು ಒಪ್ಪಿಕೊಳ್ಳುತ್ತೇನೆ. ಅದನ್ನ ನೀವು ಹೇಳಿದ್ದರಿಂದ ನಾನು ಸ್ವಲ್ಪ ಯೋಚನೆ ಮಾಡಕ್ಕೆ ಆರಂಭಮಾಡಿದೆ ಆ ಬಗ್ಗೆ.

? ದ್ವಂದ್ವದಲ್ಲಿ ನೀವು ಹೇಳುವಾಗ. . . .

 • ಏಕೆಂದರೆ ಇದು ಕೇವಲ ಅಮೂರ್ತವಾಗುತ್ತದೆ ಆಗ. ಅಮೂರ್ತ ಮತ್ತು ಮೂರ್ತಗಳ ಸಂಲಗ್ನದಿಂದಲೇ ಬದುಕು ಅಲ್ವೇ? ಹಾಗೆಯೇ ನಾವು ಮಾಡುವಂಥ ಪ್ರತಿಯೊಂದು ಕೆಲಸವೂ, ಕೃತಿಯೂ ಕೃತಾರ್ಥ ಆಗಬೇಕಾದರೆ ಈ ಎರಡರ ಸಂಲಗ್ನ ಆಗಬೇಕಾಗುತ್ತದೆ. ಅಮೂರ್ತವಾದ ಚಿಂತನ ಮೂರ್ತವಾದ ಭಾವನೆಗಳು.

? ನಾನು ಇದನ್ನು ಯಾಕೆ ಹೇಳಿದೆ ಅಂದರೆ ಸಾರ್, ನಾನು ಮೊದಲಿನಿಂದ ನಿಮ್ಮ ಪದ್ಯಗಳನ್ನು ಬಹಳಪ್ರೀತಿಮಾಡುತ್ತಾ ಬಂದವನು. ಬಹಳ ಇಷ್ಟಪಡುತ್ತಾ ಬಂದವನು. ನನಗೆ ಇವತ್ತಿಗೂ ನಿಮ್ಮಲ್ಲಿ ಬಹಳಇಷ್ಟವಾದ ಪದ್ಯಗಳು ಅಂದರೆ ಎಲ್ಲಿ ನೀವು ಅಂತರ್ಮುಖವಾಗಿ ಅನುಮಾನಗಳನ್ನೆಲ್ಲವನ್ನೂ ಇಟ್ಟುಕೊಂಡುನೋಡುತ್ತೀರೋ ಅಂಥ ಪದ್ಯಗಳು. ಭೂಮಿಗೀತ ಅಂಥ ಪದ್ಯ. ಹಾಗೆಯೇ ರಾಮನವಮಿಯ ದಿವಸ.ಅದಕ್ಕಿಂತ ಹೆಚ್ಚಾಗಿ ಪ್ರಿಯವಾದ್ದುಕೂಪಮಂಡೂಕ”. ಇದೊಂದು ರೀತಿಯಲ್ಲಿ ನೀವು ಬರೆಯುತ್ತೀರಿ. ಅಲ್ಲಿನೀವೇ ನಿಮಗೆ ಪ್ರಶ್ನೆಗಳನ್ನು ಹಾಕಿಕೊಂಡು ಬರೀತೀರಿ. ಇನ್ನೊಂದು ರೀತಿಯಲ್ಲಿ, ಸ್ವಲ್ಪ ಪ್ರವಾದಿಯಧಾಟಿಯಲ್ಲಿನ ಪದ್ಯಗಳನ್ನೂ, ಅದೂ ಇತ್ತೀಚೆಗೆ, ಹೆಚ್ಚು ಬರೀತಾ ಇದ್ದೀರಿ. ನಾನು ಅಂಥ ಪದ್ಯಗಳನ್ನುಓದುವಾಗ ಸ್ವಲ್ಪ ಕಸಿವಿಸಿಗೊಳ್ಳುತ್ತೀನಿ. ಯಾಕೆ ಅಂದರೆ ನಿಮ್ಮಲ್ಲಿ ಅತ್ಯಂತ ಮೃದುವಾದ್ದನ್ನಅಂತಃಕರಣಪೂರಿತವಾದದ್ದನ್ನ ಸ್ವಲ್ಪ ಅದುಮಿಟ್ಟು ಬರೆದ ಹಾಗೆ ಅನ್ನಿಸುತ್ತೆ. ಅಂದರೆ ನಿಮ್ಮ ಚಿಂತನಶೀಲತೆಇತ್ತೀಚಿನ ಪದ್ಯಗಳಲ್ಲಿ ಸ್ವಲ್ಪ ಹೆಚ್ಚಾಗಿದೆ ಅಂತ ನಾನು ಅಂದರೆ, ಅದಕ್ಕೇನೂ ನೀವು ಉತ್ತರ ಕೊಡಬೇಕುಅಂತ ಅಲ್ಲ.

 • ಕೊಡೋದೂ ಇಲ್ಲ.

? ಆದರೆ ಇಂಥದ್ದನ್ನೆಲ್ಲಾ ಹೇಳಲಿಕ್ಕೆ ನಮಗೆ ಅವಕಾಶವನ್ನು ನೀವು ಮೊದಲಿನಿಂದ ಕೊಟ್ಟುಕೊಂಡೇ ಬಂದುಬರೆದವರು.

ಏಕೆಂದರೆ ಎಲ್ಲಾ ಕವಿಗಳಲ್ಲೂ ನೋಡಿದ್ದೀನಿ. ಬಹಳ ದೊಡ್ಡ ಕವಿಗಳಲ್ಲಿ ಭಾವುಕವಾದದ್ದು ಮತ್ತುಚಿಂತನಶೀಲವಾದದ್ದು, ಏಲಿಯಟ್ ಕೊನೆ ಪದ್ಯಗಳಲ್ಲಿ ಕಾಣುವಂತೆ ಮಿಳಿತವಾಗಿರುತ್ತವೆ. ಅದರಜೊತೆಗೇನೇ ಚಿಂತನೆಯಲ್ಲಿ ತೀರಾ ಗಟ್ಟಿಮುಟ್ಟಾಗಿರಬೇಕೆಂದು ಪ್ರಯತ್ನಿಸುತ್ತ, ಎಲ್ಲೋ ಆಯ ತಪ್ಪಿದಂತಾಗಿ. . ಏನೇನೋ ಬಂದು ಸೇರಿಕೊಂಡು. . . ಏಟ್ಸ್ನಲ್ಲಿ ಹೀಗೆ ಆಗುತ್ತೆ. ಕೊನೆಗೆ ಅವನು ಬಹಳಗಲಿಬಿಲಿಗೊಳ್ಳುತ್ತಾನೆ. ನೀವು ಗಲಿಬಿಲಿಗೊಳ್ಳುವುದಕ್ಕೆ ಸಾಧ್ಯವೇ ಇಲ್ಲದೆ ಇರುವಷ್ಟು ಬಹಳ ಗಟ್ಟಿಮುಟ್ಟಾದಮಾತುಗಳನ್ನ ಆಡುತ್ತಾ ಇದ್ದೀರಿ ಅಂತ ಅನ್ನಿಸಿದಾಗ ನನಗೆ ಅಂಥ ಪದ್ಯಗಳು. .

 • ಮಾತುಗಳಲು ಯಾವಾಗಲೂ ಗಟ್ಟಿಮುಟ್ಟಾಗಿರಬೇಕಪ್ಪಾ. ಕಾವ್ಯ ಹಾಗಿರಬಾರದು ಅಲ್ವಾ?

? ಅದೇ. ನನಗೆ ಸುಮಾರು ೨೪೨೫ ದೋ ವರ್ಷ ಸಾರ್ ಆವಾಗ. ನಾನು, ಇವತ್ತಿಗೂ ಬಹಳಕೃತಜ್ಞತೆಯಿಂದ ನೆನೆಯೋದು ದಿನಗಳನ್ನು. ನೀವು ಭೂಮಿಗೀತಸಂಕಲನವನ್ನು ಪ್ರಕಟಿಸುವ ಹೊತ್ತಿಗೆನನ್ನ ಹತ್ತಿರ ಮುನ್ನುಡಿ ಬರೆಯಲಿಕ್ಕೆ ಕೇಳಿದಿರಿ. ನನಗದು ಬಹಳ ದೊಡ್ಡ ಗೌರವ ಕಾಲದಲ್ಲಿ. ಬಹಳಹೆದರಿಕೊಂಡು ಬರೆದೆ. ನಮ್ಮೆಲ್ಲರ ಪ್ರಕಾರ ಸಂಕಲನ ಕನ್ನಡ ಕಾವ್ಯದ ಒಂದು ಹೊರಳುವಿಕೆಯನ್ನುಗುರುತಿಸಿತು. ಆಶ್ಚರ್ಯ ಅಂದರೆ ಅದಕ್ಕೆ ನಿಮಗೆ ಸಾಹಿತ್ಯ ಅಕಾಡೆಮಿಯ prize ಬರಲಿಲ್ಲ,ವರ್ಧಮಾನಕ್ಕೆ ಬಂತು. ವರ್ಧಮಾನದಲ್ಲೂ ಬಹಳ ಮುಖ್ಯ ಕವನಗಳಿದಾವೆ. ಆದರೆ ಭೂಮಿಗೀತಅಲ್ಲೋಲಕಲ್ಲೋಲವನ್ನು ಮಾಡಿದ ಕವನ. ಆಗ ಏನಾಗಿತ್ತು ಅಂದರೆ, ಅನೇಕ ಜನ ವಿಮರ್ಶಕರು ನಿಮ್ಮಚಂಡೆ ಮದ್ದಳೆಓದಿಕೊಂಡು ಅದನ್ನೊಂದನ್ನೇ ನೀವು ಬರೆದಿದ್ದೀರಿ ಅನ್ನುವ ತರಹ ಇವತ್ತಿನವರೆಗೂಮಾತನಾಡುತ್ತಾ ಬಂದಿದ್ದಾರೆ. ದೃಷ್ಟಿಯಿಂದ ಇವತ್ತಿನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ತುಂಬಾವಿಮರ್ಶೆಗೊಳಗಾದ ಕವಿ ನೀವು. ನಿಮಗೇನನ್ನಿಸುತ್ತದೆ? ನಿಮಗೆ ನ್ಯಾಯವಾಗಿದೆ ಅಂತ ಅನ್ನಿಸತ್ತೋ?ನಿಮ್ಮ ಕಾವ್ಯಕ್ಕೆ? ಬರೀ prize ದೃಷ್ಟಿಯಿಂದಲ್ಲ ನಾನು ಕೇಳುತ್ತಿರುವುದು. ಒಟ್ಟು ಅರಿವಿನ ದೃಷ್ಟಿಯಿಂದ.ಜನ ಅರಿತುಕೊಂಡಿರುವ ದೃಷ್ಟಿಯಿಂದ. ಇನ್ನೂ ಕ್ಲಿಷ್ಟ ಇವರ ಕಾವ್ಯ, ಇವರಿನ್ನೂ ಸಂಪೂರ್ಣ ಪಾಶ್ಚಿಮಾತ್ಯರಕಡೆಗೇ ವಾಲಿದಂಥವರು, ಇವರು ಭಾರತೀಯತೆಯನ್ನ ತಿರಸ್ಕರಿಸಿದವರು ರೀತಿ ಅನೇಕಅಪಾರ್ಥಗಳು ಬರುವಂತಹ ಮಾತುಗಳು ನಿಮ್ಮ ಬಗ್ಗೆ ಇವತ್ತಿಗೂ ಇವೆ. ನಾನು ಆಗಲೇನೇ ಬರೆದಿದ್ದೆ: ಇವರಕಾವ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ ಇದರಲ್ಲಿ ಇರೋದು ಮುಖ್ಯವಾಗಿ ಆರ್ಷದೃಷ್ಟಿ ಅನ್ನುವುದನ್ನುಅರಿಯಬೇಕು ಎಂದು. ‘ಆರ್ಷದೃಷ್ಟಿಅನ್ನುವ ಶಬ್ದವನ್ನು ನಾನು ಆಗ ಬಳಸಿದ್ದೆದ. ನನಗೇ ಆಶ್ಚರ್ಯವಾಗುತ್ತೆನಾನು ಸಂದರ್ಭದಲ್ಲಿ ನಿಮ್ಮನ್ನು ಅಷ್ಟು ಗ್ರಹಿಸಿದ್ದೆ ಅಂತ.

ನಾನು ಕೇಳುತ್ತಾ ಇರೋದು ಏನು ಅಂದರೆನಿಮಗೆ ನ್ಯಾಯ ದೊರಕಿದೆಯೋ ಸಮಕಾಲೀನ ಸಾಹಿತ್ಯಸಂದರ್ಭದಲ್ಲಿ?

 • ನಾನು ಭೂಮಿಗೀತ ವನ್ನು ಪ್ರಕಟಿಸುವಂಥ ಕಾಲದಲ್ಲಿ ಅದರಲ್ಲಿ ಇರುವಂಥ ಕವನಗಳನ್ನು ಬರೆದಾಗ ಅದನ್ನು ಓದುವವರ ಸಂಖ್ಯೆ ತೀರಾ ಪರಿಮಿತಿಯಾಗಿತ್ತು. ಬಹುಶಃ ಅನಂತಮೂರ್ತಿ, ಮತ್ತಿನ್ನೊಂದು ಮೂರು ಜನ ಅಲ್ಲದೆ, ಇನ್ನು ಯಾರೂ ಅವುಗಳನ್ನು. . .

? ಎಂ. ಜಿ. ಕೃಷ್ಣಮೂರ್ತಿ

 • ಎಂ. ಜಿ. ಕೃಷ್ಣಮೂರ್ತಿ, ಏ. ಕೆ. ರಾಮಾನುಜಂ, ಹೀಗೆ ಒಂದು ಹತ್ತು, ಇಪ್ಪತ್ತು ಜನ ಕರ್ನಾಟಕದಲ್ಲಿ ಇದ್ದಿರಬಹುದು. ಆದಕಾರಣ ಆ ಕಾಲದಲ್ಲಿ ನಾನು ಆ ರೀತಿಯಲ್ಲಿ ಬರೆಯುವಾಗ ನಿಮ್ಮನ್ನು ಅದಕ್ಕೆ ಒಂದು ಮುನ್ನುಡಿಯೋ, ಹಿನ್ನುಡಿಯೋ ಬರಿಯಬೇಕು ಅಂತ ಕೇಳಿದ್ದು. ಕೇಳಿದ್ದು ಒಳ್ಳೆಯದಾಯಿತು. ಏಕೆಂದರೆ ನನ್ನನ್ನು ನೀವು ಗುರುತಿಸಿದ ಹಗೇನೇ ನಾನೂ ನಿಮ್ಮನ್ನು ಆಗಲೇ ಗುರುತಿಸಿದ್ದೆ. ಕಾವ್ಯವನ್ನು ನಿಮ್ಮಷ್ಟು ತಕ್ಷಣ ಅದರೊಳಕ್ಕಿಳಿದು ಅರ್ಥಮಾಡಿಕೊಳ್ಳುವಂಥವರು ನಮ್ಮಲ್ಲಿ ಹೆಚ್ಚು ಜನ ಇಲ್ಲ. ನಮ್ಮಲ್ಲಿ ಏನಾಗಿ ಬಿಟ್ಟಿದೆ ಅಂತ ಅಂದರೆ ಕಾವ್ಯವನ್ನ ಸರಿಯಾಗಿ ಓದಿ, ಅಭ್ಯಾಸಮಾಡಿ, ಅದರೊಡನೆ ತಲ್ಲೀನರಾಗುವಂಥ ಶಕ್ತಿ ಉಳ್ಳವರ ಸಂಖ್ಯೆ ಬಹಳ ಕಡಿಮೆ. ಬೇಂದ್ರೆ ಕಾವ್ಯ ಇರಬಹುದು, ಕುವೆಂಪುದ್ದಿರಬಹುದು ಇನ್ಯಾರದ್ದೇ ಇರಬಹುದು. ವಯಸ್ಸಾಗುತ್ತಾ ಬಂದಹಾಗೆ ನಮಗೆ ಒಂದು ತರಹ ಯಶಸ್ಸು ಸಿಗುತ್ತೆ ಇಲ್ಲಿ. ನಮ್ಮ ಕನ್ನಡ ಜನ ಒಳ್ಳೆಯವರು; ನಮ್ಮ ಕವನಗಳನ್ನು  ಓದದೇನೇ ನಮಗೆ ವಯಸ್ಸಾದ ಮೇಲೆ ಹೊಗಳೋದಕ್ಕೆ ಶುರುಮಾಡುತ್ತಾರೆ. ಆ ರೀತಿಯ ಪ್ರಶಂಸೆ, ಹೊಗಳಿಕೆ ಇವೆಲ್ಲಾ ಬಂದಿವೆ. ಆದರೂ ಕೂಡ ನನ್ನ ಕಾವ್ಯವನ್ನ ಸರಿಯಾಗಿ ಅಭ್ಯಾಸಮಾಡಿ  ಅವುಗಳ ಬಗ್ಗೆ, ಅವುಗಳ ನೈಜ ಸ್ವರೂಪವನ್ನ ತೋರಿಸುವಂಥ ವಿಮರ್ಶ ಲೇಖನಗಳು, ವಿಮರ್ಶೆ ಕ್ರಿಯೆ ತಕ್ಕಷ್ಟು ನಡೆದಿಲ್ಲ ಅಂತ ನನಗೆ ಅನ್ನಿಸುತ್ತದೆ. ಇದು ನನ್ನದೊಬ್ಬನದೇ ಕೊರೆದೇ ಅಲ್ಲ. ಆದ್ದರಿಂದ ಅದನ್ನು ದೊಡ್ಡ ಒಂದು ದೂರು ಅಂತ ನಾನು ಹೇಳುತ್ತಾ ಇಲ್ಲ. ಎಲ್ಲ ಆ ದೊಡ್ಡ ಲೇಖರಿಗೂ ಆಗಿರುವಂಥ ಒಂದು ಅನ್ಯಾಯ ಅನ್ನೋಣವೇ? ಅಥವಾ ನಮ್ಮ ಜನ ತೋರಿಸುತ್ತಿರುವ – ಸಾಹಿತ್ಯದ ಬಗ್ಗೆ, ಕಾವ್ಯದ ಬಗ್ಗೆ, ನಿಜವಾದ ಸಂಸ್ಕೃತಿಯ ಮೌಲ್ಯಗಳ ಬಗ್ಗೆ – ಇಂದಿಗೂ ತೋರಿಸುತ್ತಿರುವ ನಿರ್ಲಕ್ಷ್ಯವೇ ಇರಬಹುದೋ ಅಂತ ಎಷ್ಟೋ ಸಲ ನನಗೆ ಅನ್ನಿಸುತ್ತದೆ. ಬಹುಮಾನಗಳೂ, ಅವಾರ್ಡ್‌ಗಳೂ ಬರುತ್ತದೆ. ವಯಸ್ಸಿನ ಮೇಲೆ ಬರುತ್ತವೆ, ಮುಖ್ಯವಾಗಿ. ಭೂಮಿಗೀತಬಂದಾಗ, ನೀವು ಹೇಳಿದಹಾಗೆ, (ಅವಾರ್ಡ್) ಬಂದಿದ್ದರೆ ನಿಜವಾಗಿ ನನಗೂ ಸಂತೋಷ ಆಗುತ್ತಿತ್ತು ಆ ಕಾಲದಲ್ಲಿ. ಆದರೆ ನಾವು ಸ್ವಲ್ಪ ವಯಸ್ಸಾಗಬೇಕು, ಶಕ್ತಿಕುಗ್ಗಬೇಕು, ಕೋಲು ಹಿಡೀಬೇಕಲು, ಮಾತು ಗದಗದ ಆಗಬೇಕು – ಆಗ ಪಾಪ ಹೋಗುತ್ತಾನಲ್ಲ ಪ್ರಾಣಿ ಅಂತ, ಇದಕ್ಕೊಂದು ಅವಾರ್ಡ್ ಕೊಟ್ಟುಬಿಡೋಣ ಅಂತ ನಮ್ಮಲ್ಲಿ ನಡೀತಾ ಬಂದಿದೆ. ಅದು ನಿಮಗೆ ಗೊತ್ತಿದೆ. ಆದ್ದರಿಂದ ಅವುಗಳು ಬಂದಾಗ ನನಗೇನೂ ಸಂತೋಷವೂ ಆಗಲಿಲ್ಲ, ದುಃಖವೂ ಆಗಲಿಲ್ಲ. ಬಂತು, ತೊಗೊಂಡೆ ಅಷ್ಟೆ. ತಗೊಂಡಿದ್ದೂ ಮುಖ್ಯವಾಗಿ ಅದರ ಜೊತೆ ಬರತಕ್ಕಂತಹ ಒಂದು ಅಲ್ಪಸ್ವಲ್ಪ ಹಣ ಇದೆಯಲ್ಲಾ. . . ಕವಿಗಳಿಗೆ ಯಾವಾಗಲೂ ಹಣದ ತೊಂದರೆ ಇದ್ದೇ ಇರುತ್ತೆ. ಹಣ ಬರತ್ತೆ ಖರ್ಚು ಮಾಡುತ್ತೀವಿ. ಮತ್ತೆ ಬೇಕಾಗತ್ತೆ. ಆದರೆ ಅದನ್ನು ಪ್ರೀತಿಸೋದಕ್ಕೆ ಆಗೋದಿಲ್ಲ. ನಿಮಗೆ ಗೊತ್ತಿರಬಹುದು. ನನಗಂತು ಎಂದೂ ಆಗೇ ಇಲ್ಲ. ಹಣವನ್ನು ಪ್ರೀತಿಸೋಕ್ಕಾಗೋದಿಲ್ಲ. ಬೇಕು. ಬಂದಿದ್ದು ಹೋಗುತ್ತದೆ. ಆದ್ದರಿಂದ ಎಲ್ಲಾದರೂ ಬಂದರೆ ಅದನ್ನು ಬಿಡುವ ಇಷ್ಟ ನಮಗೆ ಇರೋದಿಲ್ಲ. ಯಾಕೆಂದರೆ ಖರ್ಚು ಮಾಡಬಹುದು ಆದ್ದರಿಂದ. ಕೂಡಿಡೋದಕ್ಕಲ್ಲ, ಖರ್ಚುಮಾಡೋಕೋಸ್ಕರವಾಗಿ. ಈ ರೀತಿಯಿಂದ ಈ ಬಹುಮಾನಗಳೂ, ಅವಾರ್ಡ್‌ಗಳೂ, ಹೊಗಳಿಕೆಗಳೂ ಇವೆಲ್ಲಾ ಬಂದಿವೆ. ಇಷ್ಟಾಗಿಯೂ ಕೂಡ ಇಡೀ ನಮ್ಮ ಕಾವ್ಯದ ಇತಿಹಾಸದ ದೃಷ್ಟಿಯಿಂದ ಹೇಳುವುದಾದರೆ ಕಾವ್ಯದ ಬಗ್ಗೆ ಸರಿಯಾದ ಅಭ್ಯಾಸ ನಮ್ಮಲ್ಲಿ ನಡೀತಾ ಇಲ್ಲ. ಇದು ಶುರುವಾಗಬೇಕಾದದ್ದು ಹೈಸ್ಕೂಲ್‌ನಿಂದ ವಿಶ್ವವಿದ್ಯಾನಿಲಯದ ಮಟ್ಟದವರೆಗೆ ನಡೀಬೇಕು. ಇಂದಿಗೂ ಕೂಡ, ನನಗೆ ಗೊತ್ತಿದೆ: ಕನ್ನಡ ಅಧ್ಯಾಪಕರಲ್ಲಿ ಶೇಕಡ ತೊಂಬತ್ತು ಜನರಲ್ಲಿ ನನ್ನ ಪದ್ಯವನ್ನೇನು, ಕುಮಾರವ್ಯಾಸನ ಪದ್ಯವನ್ನಾಗಲೀ, ಪಂಪನ ಪದ್ಯವನ್ನಾಗಲೀ ಅದರ ನಿಜವಾದ ಕಾವ್ಯ ಗತಿಯನ್ನ, ಛಂದಸ್ಸನ್ನ ಹಿಡಿದು ಓದಬಲ್ಲವರು ಇಲ್ಲ. ಇದು ಭಾರಿ ದೊಡ್ಡ ಕೊರತೆ. ಇದು ಎಲ್ಲಾ ಕವಿಗಳಿಗೆ ಅನ್ವಯಿಸುವಂಥಾದ್ದರಿಂದ ಅದನ್ನು ಹೇಳುತ್ತಾ ಇದ್ದೀನಿ. ನನ್ನೊಬ್ಬನದಾದರೆ ಅಷ್ಟು ಮುಖ್ಯ ಆಗುತ್ತಾ ಇರಲಿಲ್ಲ. ನನ್ನ ಮುಂದೆ ಬರುವಂಥ ಕವಿಗಳಿಗೂ ಆಗುವಂಥ ಅಪಾಯ ಇದು. ಅವರನ್ನು ಸರಿಯಾಗಿ ಓದೋಕ್ಕೆ ಬಾರದೆ ಇರೋದು. ಪ್ರತಿಯೊಂದನ್ನು ಹಾಡಲೇ ಬೇಕೋ ಏನೋ ಅನ್ನುವ ಭ್ರಮೆ ಇನ್ನೂ ಉಳಿದಿದೆ. ಹಾಡೋಕ್ಕೆ ಬಾರದೆ ಇದ್ದವನು ಕವಿತೆಯನ್ನು ಓದತಕ್ಕದ್ದಲ್ಲ; ಇನ್ನಾರಾದರೂ ಓದಿದ್ದನ್ನು ಕೇಳೋದು ಎನ್ನುವ ಭಾವನೆ ರೂಢಮೂಲವಾಗಿದೆ. ಇದನ್ನು ಶಿಕ್ಷಣದ ಮೂಲಕ ಕಿತ್ತು ಹಾಕಬಹುದು. ಆ ಬಗ್ಗೆ ಯಾವ ಕೆಲಸವೂ ನಡೆಯಲಿಲ್ಲ, ನನಗೆ ಅದರ ವಿಷಯದಲ್ಲಿ ಸ್ವಲ್ಪ ಅಸಮಾಧಾನ ಇದೆ.

? ನೀವುಸಾಕ್ಷಿ ಸಂಪಾದಕರಾಗಿ ಬಹಳ ದಿನ ಕೆಲಸವನ್ನು ಮಾಡಿದ್ದೀರಿ. ಕಲಿಸುತ್ತಾ ಬಂದಿದ್ದೀರಿ.ನಿಮ್ಮ ಪದ್ಯಗಳ ಮುಖಾಂತರ ಮತ್ತು ನಿಮ್ಮ ಅನೇಕ ವಿಮರ್ಶಾತ್ಮಕ ಬರವಣಿಗೆಗಳ ಮುಖಾಂತರವೂ ಕೂಡಅದನ್ನು ಕಲಿಸುತ್ತಾ ಬಂದಿದ್ದೀರಿ. ಯಾವ ದೇಶದಲ್ಲೇ ಆಗಲಿ ಇದನ್ನು ಕಲಿಯೋದು ನಿಧಾನ ಅಂತ ಕಾಣುತ್ತೆ.ಇಂಗ್ಲೆಂಡಿನಲ್ಲೂ ಲೀವೀಸ್ಪ್ರಯತ್ನಪಟ್ಟ ಅದನ್ನು ಕಲಿಸೋದಕ್ಕೆ. ಆದ್ದರಿಂದ ಕನ್ನಡದಲ್ಲಿ ಇದು ಕೊರತೆ ನಿಜ.ಆದರೆ ಇದು ಎಲ್ಲಾ ದೇಶದಲ್ಲೂ ಇರುವಂಥದ್ದೇ ಅಂತ ಕಾಣುತ್ತೆ. ಈಗ ಕೊನೆಯದಾಗಿ, ಸಾರ್ನೀವುಮೊದಲಿನಿಂದ ಪ್ರಜಾತಂತ್ರಕ್ಕೆ ಬದ್ಧರಾಗಿದ್ದವರು, ದೇಶದಲ್ಲಿ ನೈತಿಕತೆಗೆ ಬದ್ಧರಾಗಿದ್ದವರು. ಮತ್ತು ನಮ್ಮನಾಡಿನ, ಸಮಾಜದಲ್ಲಿ ಮತ್ತು ಸಂಸ್ಕೃತಿಯಲ್ಲಿ ಒಂದು ಮೂಲಭೂತವಾದ ಬದಲಾವಣೆ ಆಗಬೇಕು, ಪುನರ್ಜನ್ಮ ಆಗಬೇಕು, ನವೀಕರಣ ಆಗಬೇಕು ಅನ್ನುವುದಕ್ಕೆ ಬದ್ಧರಾಗಿದ್ದವರು. ಬಹಳ ಹಿಂದೆ ೩೦ ವರ್ಷದಹಿಂದೆಯೋ ಏನೋ, ಸ್ವಾತಂತ್ಯ್ರ ಬಂದ ಹೊಸದರಲ್ಲಿ ನೀವು ಬರೆದ ಒಂದು ಪದ್ಯ ಇವತ್ತಿಗೂ ನಮಗೆ ಬಹಳಅಗತ್ಯ ಅಂತ ಅನ್ನಿಸುತ್ತದೆ. ಅದನ್ನು ಓದುತ್ತೀರಾ, ಸಾರ್? “ಇಂದು ನಮ್ಮೀ ನಾಡುಅಂತ.

(ಗೋಪಾಲಕೃಷ್ಣ ಅಡಿಗರು “ಬೇರು ಸತ್ತೀಮರವನೆತ್ತಿ ನಿಲ್ಲಿಸು ಮಗೂ” ಎಂದು ಶುರುವಾಗುವ ಪದ್ಯವನ್ನು ಓದಿ ಮುಗಿಸುವುದರಿಂದ ಸಂದರ್ಶನ ಕೊನೆಯಾಗುತ್ತದೆ. )

*

ಪುಸ್ತಕ: ಸಂಸ್ಕೃತಿ ಮತ್ತು ಅಡಿಗ
ಲೇಖಕರು: ಡಾ. ಯು.ಆರ್. ಅನಂತಮೂರ್ತಿ
ಪ್ರಕಾಶಕರು: ರಾಷ್ಟ್ರಕವಿ ಗೋವಿಂದ ಸೈ ಸಂಶೋಧನ ಕೇಂದ್ರ ಉಡುಪಿ

2 Comments

 1. kuntadynithesh

  Dooradarshan is chargin per min 1000 for that . I dont have funds to get that . Apologies . If someone come forward to sponsor that amount , I can work on that

Leave a Reply