ನವ್ಯಕವಿಗಳ ಅಗ್ರೇಸರ

ಕೆ. ನರಸಿಂಹಮೂರ್ತಿ

ಚಂಡೆಮದ್ದಳೆ ಕವನ ಸಂಕಲನಕ್ಕೆ ಬರೆದ ಮುನ್ನುಡಿ | 1954

  ಶ್ರೀಮಾನ್ ಗೋಪಾಲಕೃಷ್ಣ ಅಡಿಗರ ಮೊದಲ ಕವನ ಸಂಗ್ರಹ ೧೯೪೬ರಲ್ಲಿ ಪ್ರಕಟವಾಯಿತು. ಅದಕ್ಕೆ ಮುನ್ನುಡಿಯನ್ನು ಬರೆಯುತ್ತ ಶ್ರೀಮಾನ್ ಬೇಂದ್ರೆಯವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ‘ನಾವು ಕವಿತೆಗಳನ್ನು ಬರೆಯಲು ಆರಂಭಿಸಿದಾಗ ಇದ್ದ ಶೈಲಿಯ ಪ್ರಯೋಗಿಕತೆ ಇಂದಿನ ಕನ್ನಡದಲ್ಲಿ ಅಷ್ಟು ಮಟ್ಟಿಗೆ ಇಲ್ಲ. ಒಂದು ಬಗೆಯ ಸಿದ್ದಶೈಲಿಯಿಂದ ನವಕವಿಗಳು ಹೊರಡುತ್ತಾರೆ….ಆದರೆ ಆ ಕಾಲಕ್ಕೆ ಇದ್ದ ನಾವೀನ್ಯದ ಅನುಕೂಲ ಈಗಿನವರಿಗಿಲ್ಲ.’ ಈ ಸಂಗ್ರಹದಲ್ಲಿಯೂ ಇದರ ಮುಂದಿನದರಲ್ಲಿಯೂ ಶಂಕರಭಟ್ಟರು,ಬೇಂದ್ರೆಯವರು,ನರಸಿಂಹಾಚಾರ್ಯರು ಮುಂತಾದ ಕವಿಗಳ ಮಾರ್ಗವನ್ನು ಅಡಿಗರು ಬಹುಮಟ್ಟಿಗೆ ಅನುಸರಿಸಿದರು. ‘ಮೋಹನ ಮುರಳಿ’ ‘ ಅತಿಥಿಗಳು’ ಮುಂತಾದ ಕೆಲವು ಉತ್ತಮ ಕೃತಿಗಳನ್ನು ರಚಿಸಿದರು. ಕಳೆದ ವರ್ಷ ಪ್ರಕಟವಾದ ಅವರ ಮೂರನೇ ಕವನ ಸಂಗ್ರಹದಲ್ಲಿ ಅವರು ತಮ್ಮ ವೈಶಿಷ್ಯಕ್ಕನುಗುಣವಾದ ನವ್ಯಮಾರ್ಗವನ್ನು ಹುಡುಕಲು ಪ್ರಯೋಗಗಳನ್ನು ನಡಿಸಿದರು.’ನನ್ನ ಅವತಾರ’ ಎಂಬ ಕವನ ಯಶಸ್ವಿಯಾಯಿತು. ಈಗ ಹೊರಬೀಳುತ್ತಿರುವ ಇವರ ನಾಲ್ಕನೇ ಕವನ ಸಂಗ್ರಹದಲ್ಲಿ ಎಲ್ಲವೂ ನವ್ಯಮಾರ್ಗದಲ್ಲಿ ಬರೆದವುಗಳು. ’ನಂದನ’, ’ದೀಪಾವಳಿ’, ’ಯುಗಾದಿ’ ಮುಂತಾದ ಸಣ್ಣ, ಸುಂದರ ಕವನಗಳೂ ‘ಹಿಮಗಿರಿಯ ಕಂದರ’ ಎಂಬ ಸಂಪೂರ್ಣ ದೀರ್ಘ ಕವನವೂ ‘ಗೊಂದಲಪುರ’ ಎಂಬ ಅಸಂಪೂರ್ಣ ದೀರ್ಘ ಕವನವೂ ಇರುವ ಈ ಸಂಗ್ರಹಕ್ಕೆ ಮುನ್ನುಡಿ ಬರೆಯುವುದು ಹೆಮ್ಮೆಯ ವಿಷಯವೇ ಸರಿ.
  ‘ನಾವೀನ್ಯದ ಅನುಕೂಲ’ವನ್ನು ಕುರಿತು ವಿಚಾರಮಾಡುವಾಗ ಸಾಹಿತ್ಯದ ಹೃದಯವನ್ನೇ ನಾವು ಅರಸುತ್ತೇವೆ. ‘ಸಿದ್ದಶೈಲಿ’ ಯಲ್ಲಿ ಬಹುಕಾಲ ಉತ್ತಮ ಕವಿತೆಗಳನ್ನು ಬರೆಯಲಾಗುವುದಿಲ್ಲ. ಮತ್ತೆ ಮತ್ತೆ ಪ್ರಯೋಗಿಸಿದ ಪದ ಬಣ್ಣಗೆಡುತ್ತದೆ,ಮೊಂಡಾಗುತ್ತದೆ. ಅತಿಯಾಗಿ ಬಳಸಿದ ಛಂದೋರೂಪ ಮನಸ್ಸಿನ ಎಚ್ಚರವನ್ನು ಕಡಿಮೆ ಮಾಡುತ್ತದೆ.ಬೇಂದ್ರೆಯವರ ಮೊದಲ ಷಟ್ಟದಿಗಳನ್ನು ಓದಿದರೆ ಅವರ ಪ್ರತಿಭೆಗೆ ಬೇಡಿಗಳನ್ನು ಹಾಕಿದಂತೆ ಭಾಸವಾಗುತ್ತದೆ. ಅಲ್ಲದೆ ಒಂದು ಕಾಲಮಾನದ ಪ್ರಪಂಚ ಪರಿಸ್ಥಿತಿಗೆ ಹೊಂದುವಂತೆ ಒಂದು ಛಂದೋರೂಪ ನಿರ್ಮಿತವಾಗಿರುತ್ತದೆ. ಇನ್ನೊಂದು ಕಾಲಮಾನದ ಭಿನ್ನ ಪರಿಸ್ಥಿತಿಯನ್ನು ಚಿತ್ರಿಸಲು ಬೇರೆಯೇ ಮಾರ್ಗ ಕಲ್ಪಿತವಾಗಬೇಕು. ಆದ್ದರಿಂದಲೇ ಹೊಸ ವಿಷಯಕ್ಕೆ ಹಳೆಯ ಶೈಲಿ ಅಸಹಜವಾಗುವುದು. ಇಪ್ಪತ್ತನೇ ಶತಮಾನದಲ್ಲಿ ಕಾಲ-ಮೊದಲು ಓಡುತ್ತಿದ್ದುದು ಈಗ ಹಾರತೊಡಗಿದೆ. ಇಪ್ಪತ್ತು ವರ್ಷಗಳಿಗೇ ಪರಿಸ್ಥಿತಿ ಪೂರ್ಣವಾಗಿ ಬದಲಾಗುತ್ತಿದೆ. ಹಿಂದೆ ಒಂದು ಶತಮಾನವಾದರೂ ಉಪಯೋಗಿಸಬಹುದಾದ ಒಂದು ಶೈಲಿ ಈಗ ಇಪ್ಪತ್ತು ವರ್ಷಗಳಿಗೇ ಮಾಸುತ್ತದೆ. ಇನ್ನೊಂದು ಮಾತ್ತೆಂದರೆ ಕವಿಯ ವ್ಯಕ್ತಿತ್ವ ,ಅವನ ವಯಸಿನೊಡನೆ ಬೆಳೆಯುತ್ತಾ ಹೋಗುವುದರಿಂದ ಅವನ ಶೈಲಿಯೂ ಕ್ರಮೇಣ ವ್ಯತ್ಯಾಸವಾಗುತ್ತದೆ. ಹೀಗಾಗದೆ ತರುಣದಲ್ಲಿ ಬಳಸಿದ ವಿಷಯಗಳನ್ನೇ, ಶೈಲಿಯನ್ನೇ ಪರಿಣಿತ ವಯಸಿನಲ್ಲು ಬಳಸುತ್ತಿದ್ದರೆ ಜನರು ತರುಣದ ಕವನಗಳನ್ನು ಮಾತ್ರ ಇಟ್ಟುಕೊಂಡು ಮಿಕ್ಕವನ್ನು ತೊರೆದುಬಿಡುತ್ತಾರೆ. ಹೊಸ ಪರಿಸ್ಥಿತಿಯ ಹೊಸ ‘ಅಬೋಧಭಾವ ಅoಭೋದಗಳ ವಿದ್ಯುದಾಸೆಯ ಮುಗ್ದ ನಾಲಗೆಗೆ’ ಹೊಸ ಪದಗಳ ಹೊಸ ಛಂದೋಮಾರ್ಗದ ಕಾವ್ಯವನ್ನು ಕಲಿಸಬಲ್ಲ ಕವಿಗೆ ಪ್ರಪಂಚ ಕಿವಿಗೊಟ್ಟು ಕೃತಜ್ಞತೆಯಿಂದ ಕೇಳುತ್ತದೆ. ನಿಜವಾದ ಕವಿಗೆ ಅವನದೇ ಹಾಡಿನ ಧಾಟಿಯಿರುತ್ತದೆ. ಇದನ್ನು ಅನುಕರಣ ಮಾಡುವ ಕವಿನಾಮರು ಸುಮ್ಮನಿರುವುದು ಮೇಲು. ಏಕೆಂದರೆ ಅವರು ಏನೇ ಬರೆದರೂ ಮೂಲಕವಿಯ ನೆರಳು ಅದರ ಮೇಲೆ ಬೀಳದಿರದು, ಬೇಂದ್ರೆಯವರ ಜಾನಪದ ಗೀತೆಗಳ ಧಾಟಿಯಲ್ಲಿ ಕೆಲವರು ಬರೆಯುತ್ತಿರುವುದು ಈ ದೃಷ್ಟಿಯಿಂದ ಶೋಚನೀಯ. ಒಮ್ಮೊಮ್ಮೆ ಸಣ್ಣ ನೈಜ ಕವಿಯ ವಿಶಿಷ್ಟವಾದ ಮಾರ್ಗವನ್ನು ಒಬ್ಬ ಹಿರಿಯ ಕವಿ ಉಪಯೋಗಿಸಿಕೊಂಡು ತನ್ನದನ್ನಾಗಿ ಮಾಡಿಕೊಳ್ಳಬಲ್ಲ. ಪುಟ್ಟಪ್ಪನವರ ಸರಳ ರಗಳೆಯನ್ನು ಇಲ್ಲಿ ಉದಾಹರಿಸಬಹುದು. ಈ ವಿಷಯದಲ್ಲಿ ಎಲಿಯಟ್ ರ ಈ ಮಾತು ಪೂರ್ಣವಾಗಿ ಸತ್ಯವಾದುದು: “Each venture is a new beginning, a raid on the inarticulate.”

  1920 ರ ಸುಮಾರಿನಲ್ಲಿ ಆರಂಭವಾದ ಕಾವ್ಯ ಈಗ ಮಾಗುತ್ತಿದೆ. ನವ ಕವಿಗಳಿಗೆ ಆ ಶೈಲಿ ಅಸಹಜವಾಗುತ್ತಿದೆ. ಈ ಹತ್ತು ವರ್ಷಗಳಲ್ಲಿ ಕಾಲ ಗುರುತು ಸಿಗದಷ್ಟು ಬದಲಾಯಿಸಿ ಬಿಟ್ಟಿದೆ. ಅಂದು ಪ್ರಾಚ್ಯ ಸಂಸ್ಕೃತಿಯ ಪರಿಶೋಧನೆ, ದೇಶಸ್ವಾತಂತ್ರಕ್ಕಾಗಿ ಸಂಗ್ರಾಮ, ಗಾಂಧೀಜಿಯ ಮಹಾವ್ಯಕ್ತಿತ್ವ, ಇಂದು ಸ್ವಾತಂತ್ರ್ಯ ಲಭಿಸಿ ಆರ್ಥಿಕ ಪುರೋಭಿವೃದ್ದಿಗಾಗಿ ನವಯೋಜನೆಗಳ ನಿರ್ಮಾಣ. ಗ್ರಾಮ ಜೀವನಕ್ಕೂ ನಾಗರಿಕ ಜೀವನಕ್ಕೂ ನಡುವಣ ಅಂತರ ಅಂದಿಗಿಂತ ಇಂದು ಹೆಚ್ಚಾಗಿದೆ. ಒಂದು ಕಡೆ ಮನಶಾಸ್ತ್ರ ಚಿತ್ತದ ಆಳವನ್ನು ಬೆದಕುತ್ತಿದೆ. ಇನ್ನೊಂದು ಕಡೆ ಭೌತಶಾಸ್ತ್ರ ಅಣುವನ್ನೊಡೆದಿದೆ. ಮಹಾಯುದ್ದಗಳ ಫಲಿತಾಂಶವಾಗಿ ನೈತಿಕ ನೆಲೆಗಟ್ಟೇ ಸಡಿಲವಾಗುತ್ತಿದೆ. ಅಭೂತಪೂರ್ವವಾದ ಜೀವಹಾನಿ, ಎಂದಿಲ್ಲದ ಚಿತ್ತಗ್ಲಾನಿ, ಜಗತ್ತಿನ ಚರಿತ್ರೆ ಪ್ರಗತಿಪರವೆಂದು ಇಟ್ಟುಕೊಂಡಿದ್ದ ನಂಬಿಕೆಯ ದೃಢತೆ ಬಹುಮಟ್ಟಿಗೆ ಸಡಿಲಿಸಿದೆ. ಅಂದಿನ ಕಾಲಕ್ಕನುಗುಣವಾಗಿ ನಮ್ಮ ಹಿರಿಯ ಕವಿಗಳು ಇಂಗ್ಲೆಂಡಿನ ಹತ್ತೊoಭತ್ತನೆ ಶತಮಾನದಾದಿಯ ರೋಮ್ಯಾಂಟಿಕ್ ಕವಿಗಳ ಮಾರ್ಗವನ್ನು ಅನುಸರಿಸಿ, ಪ್ರಕೃತಿ, ಬ್ರಹ್ಮಶಕ್ತಿ, ಪ್ರೇಮ, ಸ್ವಾತಂತ್ರ್ಯ ಈ ಮಹಾವಿಷಯಗಳನ್ನು ಕುರಿತು ಬರೆದರು. ಆ ಕವಿಗಳಂತೆ ತಾವೂ ಜನಪದ ಸಾಹಿತ್ಯದಿಂದಲೂ ಷೇಕ್ಸ್ ಪಿಯರಿನ ನಾಟಕಗಳಿಂದಲೂ, ಮಿಲ್ಟನ್ ನ ಮಹಾಕಾವ್ಯದಿಂದಲೂ ಸ್ಪೂರ್ತಿ ಪಡೆದರು.

  ಇಪ್ಪತ್ತನೆ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಈ ರೋಮ್ಯಾಂಟಿಕ್ ಕವಿ ಸಂಪ್ರದಾಯ ಕಳೆದು ನವ ಕಾವ್ಯದ ಮಾರ್ಗ ರೂಢಿಗೆ ಬಂದಿದೆ. ಎಟ್ಸ್ ,ಎಲಿಯಟ್ ,ಆಡೆನ್ ಮತ್ತು ಡಿಲನ್ ಥಾಮಸ್ ಈ ಕಾಲದ ಮುಖ್ಯ ಕವಿಗಳು. ಈ ಮಾರ್ಗ ಬಹುಮಟ್ಟಿಗೆ ಹತ್ತೊoಭತ್ತನೆ ಶತಮಾನದ ಕಡೆಯ ದಶಕಗಳಲ್ಲಿ ಫ್ರಾನ್ಸ್ ನಲ್ಲಿ ಆರಂಭವಾಗಿ ಯೂರೋಪಿನ ಎಲ್ಲ ದೇಶಗಳಿಗೂ ಹರಡಿದ ಸಿಂಬಲಿಸ್ಟ್ ಕವಿ ಸಂಪ್ರದಾಯದ ಒಂದು ಶಾಖೆ. ಎಲಿಯಟ್ ನ ಕಾವ್ಯದ ವಿಶಿಷ್ಟ ಗುಣಗಳು ತಿಳಿದುಕೊಂಡರೆ ಈ ಸಂಪ್ರದಾಯವನ್ನು ಅನುಸರಿಸುವ ನಮ್ಮ ನವ್ಯ ಕವಿಗಳ ಅಗ್ರೇಸರರಾದ ಅಡಿಗರ ಶೈಲಿಯನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುವುದು.

  ರೋಮ್ಯಾಂಟಿಕ್ ಕವಿಗಳು ಅದ್ವೈತಿಗಳು. ಮನುಷ್ಯನು ತನ್ನ ದಿವ್ಯ ಅನುಭೂತಿಯಿಂದ ಮನುಷ್ಯತ್ವವನ್ನು ನೀಗಿ ಬ್ರಹ್ಮನೊಂದಿಗೆ ಐಕ್ಯವಾಗುವನು ಎಂಬುದು ಅವರ ನಂಬಿಕೆ. ಆದರೆ ಎಲಿಯಟ್ ನ ದೃಷ್ಟಿಯಲ್ಲಿ ಮಾನವನು ಜನ್ಮತಃ ಪಾಪಿ. ಬರಿಯ ಸೌಂದರ್ಯ ಗ್ರಹಣದ ರಸನಿಮಿಷಗಳ ದಿವ್ಯಾನುಭೂತಿ ಸಾಲದು, ತಪ್ಪಸ್ಸೂ ಪರಿಶುದ್ದವಾದ ಜೀವನವೂ ಅಗತ್ಯ. ದೇವರ ದಯೆಯಿಂದ ಅವನಿಗೆ ಮುಕ್ತಿ ಸಿಗಬೇಕಾದರೆ,ರೋಮ್ಯಾಂಟಿಕ್ ಕವಿಗಳು ಹೆಚ್ಚಾಗಿ ಸುಂದರ ದಿವ್ಯದೃಶ್ಯಗಳನ್ನು ವರ್ಣಿಸಿದರೆ ,ಎಲಿಯಟ್ ಸೌಂದರ್ಯ ಅಸೌಂದರ್ಯಗಳ ಕೆಳಗಿರುವ ಅತೃಪ್ತಿ, ನಿರಾಶೆ, ಭಯ, ಪಶ್ಚಾತಾಪ, ದೈವಿಕತೆಯ ಕನಸು- ಇವುಗಳನ್ನು ವರ್ಣಿಸುತ್ತಾನೆ. ರೋಮ್ಯಾಂಟಿಕ್ ಕವಿಗಳು ಕಾರ್ಖಾನೆ ಹೊಗೆಯಿಂದ ಮಲಿನವಾದ ಧನ ದಾಹದ ನಗರಗಳನ್ನು ತ್ಯಜಿಸಿ ಪ್ರಕೃತಿಯ ಮಡಿಲಿಗೆ ಆಶ್ರಯಕ್ಕಾಗಿ ಹೋದರು. ಎಲಿಯಟ್ ಕಾವ್ಯವನ್ನು ಮತ್ತೆ ನಗರ ವರ್ಣನೆಗೆ ಹಿಂದಕ್ಕೆ ತಂದಿದ್ದಾನೆ. ಸೌಂದರ್ಯದ ಮೂಲಕ ದಿವ್ಯ ಸತ್ಯದ ಅನುಭವಗಳನ್ನು ಕೊಡುವ ಕಲ್ಪನಾಶಕ್ತಿ ರೋಮ್ಯಾಂಟಿಕ್ ಕವಿಗಳದಾದರೆ, ಭಾವಾತಿರೇಕವಾಗದಂತೆ ಬುದ್ದಿಭಾವಗಳ ಸಮ್ಮಿಲನದ ಮನಶ್ಯಕ್ತಿ ನವ್ಯಕವಿಗಳದು. ಬುದ್ದಿ ಚಮತ್ಕಾರದಿಂದ ಹಾಸ್ಯಕರವಾಗಿ ಬರೆದ ವಿಡಂಬನೆ, ಭಾವೋದ್ವೇಗದಿಂದ ಬರುವ ಗೀತ ಹೀಗೆ ವಿಂಗಡವಾಗದೆ ಒಂದಕ್ಕೊಂದು ಫೋಷಕವಾಗಿ ಎರಡೂ ಬರೆಯಬೇಕು. ಅಲ್ಲದೆ ಕಾವ್ಯದಲ್ಲಿ ಗದ್ಯಾಂಶ ಮತ್ತು ತಾರ್ಕಿಕ ನ್ಯಾಯಬದ್ದವಾದ ಮಾರ್ಗ ಕಡಿಮೆಯಾದರೆ ಕಾವ್ಯ ತನ್ನ ಶುದ್ದತೆಯನ್ನು ಮತ್ತೆ ಪಡೆದುಕೊಳ್ಲಬಲ್ಲುದು. ರೋಮ್ಯಾಂಟಿಕ್ ಕವಿಗಳು ಕಥೆ ಹೇಳುವ, ಟೀಕಿಸುವ ವಿವರಿಸುವ ವರ್ಣಿಸುವ ಕಾರ್ಯಗಳಲ್ಲಿಯೂ ಆಸಕ್ತರಾಗುತ್ತಾರೆ.ನವ್ಯಕವಿ ಆದಷ್ಟು ಮಟ್ಟಿಗೆ ಈ ಅಂಶಗಳನ್ನು ಬಿಟ್ಟು ತನ್ನ ಕಟ್ಟಡವನ್ನು ಬಿಗಿಯಾಗಿಯೂ ಓರಣವಾಗಿಯೂ ನಾಟಕಿಯವಾಗಿಯೂ ಶುದ್ದವಾಗಿಯೂ ಮಾಡಿಕೊಳ್ಳುತ್ತಾನೆ. ಹಿಂದಿನ ಕವಿಗಳು ಪ್ರಕೃತಿಯಿಂದ ರೂಪಕಗಳನ್ನು ತೆಗೆದುಕೊಂಡಂತೆ ಇಂದಿನ ಕವಿ ನಾಗರಿಕ ಜೀವನದಿಂದ ರೂಪಕಗಳನ್ನು ತೆಗೆದುಕೊಳ್ಳುವುದಷ್ಟೇ ಅಲ್ಲದೆ ರೂಪಕಗಳನ್ನೇ ಬಿಟ್ಟು, ಪ್ರತಿಮೆ ಅಥವಾ ಸಂಕೇತಗಳನ್ನು ಉಪಯೋಗಿಸುತ್ತಾನೆ: ಒಂದನ್ನಿನ್ನೊಂದಕ್ಕೆ ಹೋಲಿಸದೆ ಒಂದನ್ನು ಇನ್ನೊಂದು ಎಂದೇ ಇಟ್ಟುಕೊಂಡು ಚಿತ್ರಿಸುತ್ತಾನೆ. ಈ ಪ್ರತಿಮೆಗಳನ್ನು ನೇಯುವಾಗ ಗದ್ಯ ತರ್ಕದ ಕಡೆಗೆ ಗಮನ ಕೊಡದೆ ನಮ್ಮ ಮನಸ್ಸಿನಲ್ಲಿ ಅವು ಹೇಗೆ ಕೂಡುವುವೋ ಹಾಗೆಯೇ ಜೋಡಿಸುತ್ತಾನೆ. ಈ ಸಂಕೇತಗಳು ನಾಗರಿಕ ಜೀವನದಿಂದ, ವಯುಕ್ತಿಕ ಅನುಭವದಿಂದ, ಸ್ವಪ್ನಗಳಿಂದ, ಸಾಹಿತ್ಯ ಕೃತಿಗಳಿಂದ ಬರಬಹುದು. ಎಲಿಯಟ್ ನ ಮೊದಲ ಕವಿತೆಗಳಲ್ಲಿ ಪೂರ್ವಸಾಹಿತ್ಯದಿಂದ ಉದ್ದೃತ ವಾಕ್ಯಗಳು ಬಹುವಾಗಿ ಬರುತ್ತಿದ್ದವು. ಕ್ರಿಶ್ಚಿಯಾನಿಟಿಯ ತತ್ವದ ಪ್ರತಿಪಾದನೆ ಬಂದ ಮೇಲೆ ಈ ಸಾಧನ ಕಡಿಮೆಯಾಗಿದೆ. ಈ ನಾಟಕೀಯ ಪ್ರತಿಮಾ ಚಿತ್ರಗಳನ್ನು ಕೊಡುವಾಗ ಹಳೆಯ ಛಂದೋರೂಪಗಳನ್ನು ಬಹುಮಟ್ಟಿಗೆ ಬಿಟ್ಟು ಇವನು ಸ್ವತಂತ್ರ ಛಂದಸ್ಸನ್ನು ಪ್ರಯೋಗಿಸುತ್ತಾನೆ. ಇವನು ನಾಟಕಗಳನ್ನು ಬರೆಯುವಾಗ ಸರಳರಗಳೆಯನ್ನೂ, ಷೇಕ್ಸ್ ಪಿಯರನ ನಾಟಕಗಳ ರೂಪವನ್ನೂ ಅನುಸರಿಸಿದರೆ ಷೇಕ್ಸ್ ಪಿಯರನ ಛಾಯೆ ಎಲ್ಲಿ ಬರವಣಿಗೆಯನ್ನು ಮುಸುಕಿ ಮಸುಕುಮಾಡುವುದೋ ಎಂದು ಅವುಗಳನ್ನು ಬಿಟ್ಟಿದಾನೆ. ಇವನ ಛಂದೋಗತಿ ಇಂದಿನ ಮಾತುಗಳಿಗೆ ತೀರ ಸಮೀಪವಾಗಿ ಹಲವು ಸಲ ಬರುತ್ತದೆ. ಇಂದಿನ ಹಲವು ಹೊಸ ಪದಗಳನ್ನು ಇವನು ಕಾವ್ಯದಲ್ಲಿ ಮೊಟ್ಟಮೊದಲು ಬಳಸಿದ್ದಾನೆ. ಕಾವ್ಯದ ವಿಶಿಷ್ಟವಾದ ಛಂದಸ್ಸಂಗೀತ ಇವನ ಪರಮಗುರಿ.

  ಅಡಿಗರ ದೃಷ್ಟಿಗೂ ನಮ್ಮ ಹಿರಿಯ ಕವಿಗಳ ದೃಷ್ಟಿಗೂ ಅಂತರವೇನೆಂದು ನೋಡಲು ಅಡಿಗರ ಕಾವ್ಯದ ವಸ್ತುವಿನ ಕಡೆ ಗಮನಹರಿಸೋಣ. ಅವರು ‘ಹಿಮಗಿರಿಯ ಕಂದರ’ ದ ‘ತಪೂನಂದನ’ ದ ಅನಂತಶಾಂತಿಯನ್ನು ರಸನಿಮಿಷದ ಭಾವಸಮಾಧಿಯಲ್ಲಿ ಅನುಭವಿಸಿ, ಈ ಗೊಂದಲ ಲೋಕದ ‘ದೈನಂದಿನ ದೈನ್ಯ’ ವನ್ನು ಅವರು ಮರೆತು ತೃಪ್ತಿ ಪಡೆಯುವಂತೆ ಅಡಿಗರು ಪಡೆಯಲಾರರು. ಜೀವನವೇ ಪೂರ್ಣವಾಗಿ ಪರಿವರ್ತಿತರಾಗಬೇಕು. ರಸನಿಮಿಷ ತಾರಾಕ್ಷೀರಪಥವಾಗಬೇಕು. ಭೂಮಿಯ ಮೇಲೆ ನಮ್ಮ ಪಾಲಿಗೆ ಬರುವ ಪಂಚಾಮೃತವಿಷ್ಟೇ ಎಂದು ಕೆಲವು ದಿವ್ಯ ಘಳಿಗೆಗಳಿಂದ ತೃಪ್ತಿಯಿಲ್ಲ. ಬುದ್ದನು ಹೇಳುವಂತೆ ಈ ಬಾಳು ಪೂರ್ಣಶುದ್ದಿಯನ್ನು ಪಡೆಯಬೇಕು. ಅನೂಹ್ಯಲೋಕದ ಅನಂತ ಯಾತ್ರಿಕರು ನಮ್ಮ ಮನೋಮಂದಿರದಲ್ಲಿ ಹೀಗೆ ಮಿಂಚಿ ಹಾಗೆ ಮಾಯವಾಗುವ ಅತಿಥಿಗಳು. ಪ್ರಕೃತಿಯ ದೃಶ್ಯದೀಪಕಗಳ ಪುಣ್ಯಪ್ರಭೆಯಲ್ಲಿ ಒಮ್ಮೊಮ್ಮೆ ಅವರು ಗೋಚರವಾಗುವರು, ಆದರೆ ಮರುಘಳಿಗೆಯಲ್ಲೇ ಮೈಗರೆದು ಮನಸ್ಸು ಬಿಕೋ ಎನ್ನುವಂತೆ ಮಾಡುವರು. ಪೇರಳೆ ಗಿಡದಡಿಯಲ್ಲಿ ಮಗುತನವು ಕಟ್ಟುವ ಮರಳ ಮನೆಬಾಗಿಲಿಗೆ ಬೃoಹಿತ ಸಂಹಿತೆಯೊಡನೆ ಬೆಳಕಿನ ‘ಆನೆ ಬಂತೊಂದಾನೆ’. ಆದರೆ ಪ್ರೌಢವಯಸ್ಕನೋ ’ಎಲಾ ಇವನ, ಕಿಟಕಿಯೆಲ್ಲ ಮುಚ್ಚಿದ, ಕದವಿಕ್ಕಿದ : ಕತ್ತಲಲ್ಲಿ ಕುಕ್ಕರಿಸಿದ.’ ಪೂರ್ಣತೆಯ ದುರ್ದಮ್ಯ ವಾಂಛೆ ಬಾಲಕನನ್ನು ಸ್ನೇಹಭಿಕ್ಷೆಗಾಗಿ ಬಾಳಬೀದಿಗಳಲ್ಲಿ ಓಡಿಸುವುದು. ಆದರೆ ಹೀಗೆ ಸಿಗುವುದು ಹೊಟ್ಟೆಗೆ ಸಾಲದು. ತರುಣನ ಪ್ರೇಮದ ಅರಗಿಳಿಯನ್ನು ಬೆಕ್ಕಿನಂತೆ ಕಾಲ ಕದ್ದೊಯ್ದು ಉಳಿಯುವುದು ಕಾಮ, ’ರಕ್ತಮಾಂಸದ ಬಿಸಿದು ಸೋಂಕಿನ ಪಂಜರ.’ ‘ಬಯಕೆ ತೋಟದ ಬೇಲಿಯೊಳಗೆ’ ಮೇಯುವ ಮಾಯಪಶುವಿಗೆ ದೂರ ಬೃಂದಾವನದ ಮೋಹನ ಮುರಳಿಯ ಮಿಂಚಿನ ಕರೆ ಬಂದು ಅದರ ಜೀವ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ’ ತುಡಿಯುವುದು. ’ರತಿತಮಾಲಚ್ಚಾಯೆ’ ಯಲ್ಲಿ ಹೀಗೆ ಬೋಧಿವೃಕ್ಷದಗ್ನಿ ಛತ್ರಿ ಬಿಚ್ಚಿದಾಗ ಹಿಮಗಿರಿಯ ಕಂದರಕ್ಕೆ ಹೊರಡಲನುವಾಗಿ ಕರ್ಮದ ಗಂಟನ್ನು ಹೊತ್ತು ಜೀವಿ ಓಡುವನು.ಆದರೆ ಅವನು ಕಾಯುವ ನಿಲ್ದಾಣಕ್ಕೂ ಹಿಮಗಿರಿಯ ರೈಲಿಗೂ ನಡುವೆ, ಇಂದ್ರಿಯ ಜೀವನಕ್ಕೂ ಆದ್ಯಾತ್ಮಿಕ ಜೀವನಕ್ಕೂ ನಡುವೆ ಸದಾ ಬಾಯ್ದೆರೆದ ಕಮರಿಯ ಮೇಲೆ ಋಷಿ ನಿರ್ಮಿತವಾದ ಸೇತುವೆ ಮುರಿದು ಬಿದ್ದಿದೆ. ಅಂಧ, ನಿರನುಭವಿ ,ಸಾವಧಾನಪರಾಮರ್ಶ ವಿರೋಧಿ, ನಿಷ್ಕರುಣಿ, ಕಪಟಿ, ಭೂತರಾಕ್ಷಸೋಪಮ, ಪಾರ್ಟಿಲೈನ್ ಕಣ್ಣುಪಟ್ಟಿಯ ಕುದುರೆಯ ಭಕ್ತರು ವೈಕುಂಠದಿಂದ ಗೊಂದಲಪುರದವರೆಗೆ ಫಿಶ್ ಪ್ಲೇಟ್ ತೆಗೆದು ಕಂಬಿ ಕಿತ್ತು ಸ್ಟೇಷನ್ ಸುಟ್ಟಿದ್ದಾರೆ. ಹಿಮಗಿರಿಯ ರೈಲು ಹಿಂದೆ ಹಿಂದೆ ಹೋದಂತೆ ಅದರ ಗಾಲಿಗಳ ಸದ್ದು ಅಸ್ಪುಟವಾಗುವಂತೆ ಜೀವಿ ತನ್ನ ವಿಫಲಾಕಂಕ್ಷೆಯನ್ನು ನುಡಿಯುತ್ತಾನೆ :

  ಹಿಮಗಿರಿಯ ಕಂದರ

  ………ಗಿರಿಯ ಕಂದರ

  ……………….. ಕಂದರ

  ……………………….ದರ

  ………………………….ರ

  ಜಗತ್ತಿನ ಜೀವನ ದಿನದಿನಕ್ಕೆ ಹೆಚ್ಚು ಸುಖಮಯವಾಗುತ್ತಿಲ್ಲ. ಅನೀತಿಯಿಂದ ಸರ್ವೋದಯ ಪ್ರಯತ್ನಗಳು ಮತ್ತೆ ಮತ್ತೆ ಮಣ್ಣುಗೂಡುತ್ತಿವೆ. ಹೊಸ ವರುಷ ಬಂದರೆ ಮನುಷ್ಯ ಅದನ್ನು ಕೇಳುತ್ತಾನೆ .’ತಂದೆಯೇನು ಹೊಸ ಹಡಗನೊಂದ ನೀ ಬಂದ ರೇವಿನಿಂದ?’ ಆದರೆ ಅದೂ ‘ಹೂವು ಬಾಡಿ ತರಗೆಲೆಗಳುದುರಿ ಭೋಳಾಗಿ ಬಳ್ಳಿ ಬಳ್ಳಿ’ ಕಂತುವುದು, ಎತ್ತಿದ ಕಾಲನ್ನು ಮತ್ತೆ ಕೆಳಗೆಳೆದುಕೊಳ್ಳುವ ಪಂಕಲೋಕದ ಈ ಕುತ್ತಿನ ಮೇಲೆ ಅಡಿಗರ ಕವಿತೆಗಳಲ್ಲಿ ಯಾವಾಗಲೂ ಒತ್ತು ಬೀಳುತ್ತದೆ. ಆಧ್ಯಾತ್ಮಿಕ ಅನುಭೂತಿಯ ನಿರ್ಗಮನದಿಂದ ನಿರ್ವೇದದಲ್ಲಿ ಅವರ ಹೃದಯ ಮಂದರ ಮಿಡಿಯುತ್ತದೆ. ಕಾಮಕ್ರೋಧಾದಿ ತಮೋಗುಣಗಳಡೆಗೆ ಜಗ್ಗುವ ಗೊಂದಲಾಸುರನ ಮೇಲೆ ಅವರ ಕಣ್ಣು ಕಿಡಿಕಾರುತ್ತದೆ.

  ಸಪ್ತಸಾಗರದಾಚೆ ಇರುವುದೆಂದು ತೋರುವ ಸುಪ್ತಸಾಗರ ನಮ್ಮ ಅಂತರಂಗದ ಆಳದಲ್ಲಿದೆ ಅದರಿಂದೇಳುವ ಬುದ್ಬುದಾದ್ಭುತಗಳೂ ಮೂಕ ಮರ್ಮರಗಳೂ ನಾಟಕೀಯವಾಗಿ ವ್ಯಕ್ತಿಭಾವಗಳನ್ನು ವ್ಯಕ್ತಗೊಳಿಸುತ್ತವೆ. ಈ ಸ್ವಾಪ್ನಿಕ ಧರ್ಮವುಳ್ಳ ಸಂಕೇತ ಚಿತ್ರಗಳಿಗೆ ‘ಹಿಮಗಿರ ಕಂದರ’ ಮತ್ತು ‘ಗೊಂದಲಪುರ’ದಿಂದ ನಿದರ್ಶನವನ್ನು ಕೊಡಬಹುದು. ಬುದ್ದನು ಕಾಮದಿಂದ ಲೋಕ ಸುಡುತ್ತಿದೆಯೆಂದೂ ಇಂದ್ರಿಯ ನಿಗ್ರಹದಿಂದ ನಾವು ಅಗ್ನಿದಾಹದಿಂದ ತಪ್ಪಿಸಿಕೊಳ್ಳಬೇಕೆಂದೂ ಉಪದೇಶ ಮಾಡಿದನು. ಎಲಿಯಟ್ ಇದನ್ನು ‘The Waste Land’ ಎಂಬ ಕವನದ ಮೂರನೇ ಭಾಗದಲ್ಲಿ ಉಪಯೋಗಿಸಿಕೊಂಡಿದ್ದಾನೆ. ಅಡಿಗರ ‘ಹಿಮಗಿರ ಕಂದರ’ ದಹ್ಯಮಾನ ಲೋಕದ ದೃಶ್ಯದೊಂದಿಗೆ ಆರಂಭವಾಗುತ್ತದೆ. ’ಮೀಗ ಹಕ್ಕಿ ಹಣ್ಣು ಹೂ ತಳಿರ ತೇಗಿದ’. ಖಾಂಡವಾಗ್ನಿಯಿಂದ ಆಫೀಸೇ ಅಗ್ನಿಕುಂಡವಾಗಿ ‘ಮನ ಮಲಗಿತ್ತು ಚಿತೆಯ ಮೇಲೆ’. ಕಾಳಿದಾಸನ ವಾಕ್ಯ ಇದೆಂಥ ಅಗ್ನಿಯೆಂದು ಸೂಚಿಸುತ್ತದೆ: ’ಹರ ಕೋಪಾನಲಭಸ್ಮ ಕೇವಲಂ’. ಇದು ಕಾಮದಹನ, ಈ ಕವಿತೆಯ ಕಡೆಯಲ್ಲಿ ಬರುವ ಭಗ್ನಸೇತುವೆ, ಹಿಂದೆ ಹೋಗುವ ರೈಲುಗಳ ಚಿತ್ರ ಇನ್ನೊಂದು ನಿದರ್ಶನ. ’ಗೊಂದಲಪುರದಲ್ಲಿ’ ಅಂಧನಾಯಕರು ಅಂಧ ಜನತೆಯನ್ನು ತಪ್ಪು ತಪ್ಪಾಗಿ ನಡೆಸುವ ಚಿತ್ರ ಇದಕ್ಕೆ ಸಮೀಪವಾಗಿದೆ. ಈ ರಾಜಕೀಯ ಅಂಧಶ್ರದ್ದೆಯ ಮಹತ್ವಾಕಾಂಕ್ಷೆಯ ಸ್ವಾರ್ಥಿ ನಿಷ್ಕರುಣಿಗಳು ಪಂಜುರ್ಲಿ, ಹಾಯ್ಗೂಳಿ, ಬೊಬ್ಬರ್ಯ, ಜಟ್ಟಿಗ ಮುಂತಾದ ಭೂತಗಳಂತೆಯೂ ಅವರ ಮುಂದಾಳು ಭಡವ ಗೊಂದಲಾಸುರನಂತೆಯೂ ಕವಿದರ್ಶನಕ್ಕೆ ಗೋಚರವಾಗುತ್ತಾರೆ. ಇವರ ಹಾವಳಿಯಿಂದ ಲೋಕವೇ ಕತ್ತಲಿಸಲಿದೆ. ಈ ಅಸೂರ್ಯ ಲೋಕದ ವರ್ಣನೆಯಿಂದ ಕವಿತೆ ಆರಂಭಿಸುತ್ತದೆ. ಪುರ್ವದಲ್ಲುದಿಸಿದ್ದ ಸೂರ್ಯ ಅಪರ ಸಂಸ್ಕೃತಿಯ ಮದ್ಯಕ್ಕೆ ಮಾರುಹೋಗಿದ್ದಾನೆ. ಶಿವನಿಗೆ ನಿದ್ದೆ ಬರಿಸಿ ಭೂತಗಣ ಕೆಲೆಯುತ್ತಿದೆ. ಖಾಲಿ ಬುರುಡೆಯ ಮೇಲೆ ಎದೆಯ ವಿಪರೀತ ರತಿ.ಭಾಗವತರ ನಾಟಕಗಳಲ್ಲಿ ಗೊಂದಲಸುರನ ಪಾತ್ರ ಬಂದು ತನ್ನ ಪ್ರಭುತ್ವವನ್ನು ವರ್ಣಿಸುತ್ತದೆ. ಕಡೆಗೆ ಕವಿಯ ನೆತ್ತಿಯ ಮೇಲೇ ಅಸುರನು ಗರಗಸ ಎಳೆದು ಕವಿ ‘ಹರಿ ಹರಿ’ ಎಂದು ಕೂಗಿಕೊಳ್ಳುತ್ತಾನೆ.ಈ ಕವಿತೆಯಲ್ಲಿ ಅಡಿಗರು ರತ್ನನ ‘ಯೆಂಡದ್ತೊoದ್ರೆ’ ಎಂಬ ಪದ್ಯದಿಂದ ಎರಡು ಪಂಕ್ತಿಗಳನ್ನು ಉದ್ದರಿಸಿ ಅನೈತಿಕ ರಾಜಕೀಯದ ಉನ್ಮತ್ತ ನಿಷ್ಕರುಣೆಯನ್ನು ಒತ್ತಿದ್ದಾರೆ :

  ಮನೆಯೊಳಗೆ, ಗುಡಿಯೊಳಗೆ,ಶಾಲೆಯೋಳಗೇ ನೋಡಿ
  ಹಾಯುತಿದೆ ನಮ್ಮ ರಸ್ತೆ:
  (‘ಎಲೆಲೆಲೆ ರಸ್ತೆ, ಏನು ಅವ್ಯವಸ್ಥೆ!’)

  ಕಡೆಯದಾಗಿ ಮೇಲೆ ಹೇಳಿದ ಸಂಕೇತ ಚಿತ್ರಗಳಿಗೆ ಈ ಪುಟ್ಟ ಉದಾಹರಣೆಯನ್ನು ಕೊಡಬಹುದು:

  ಟಿಕ್, ಟಿಕ್,ಟಿಕ್, ಟಿಕ್ ………….

  ಎಲ್ಲಿ ಇತ್ತೀ ವಾಚು?

  ಕೀಕೊಟ್ಟುದಿದಕ್ಕೆಷ್ಟು ಜನ್ಮದಾಚೆ?

  ಈಗ ಗಕ್ಕನೆ ರೆಕ್ಕೆ ಬಡಿದು ಬಂದಿತು ಇಗೋ

  ಕುಕ್ಕುತಿದೆ ಕರುಳನ್ನು – ತಡೆಯಲಾರೆ.

  ಹೀಗೆ ನಾಟಕೀಯ ಚಿತ್ರಗಳನ್ನು ಕೊಡುವಾಗ ‘ಬುದ್ದಿಭಾವಗಳ ವಿದ್ಯುದಾಲಿಂಗನದ’ ಸ್ಫೂರ್ತಿ ಕಾಣುತ್ತದೆ. ಕೆನರಾ ಜಿಲ್ಲೆಯ ಮೊಂಡು ನೆಲವನ್ನು ವರ್ಣಿಸುತ್ತ ಅಡಿಗರು ‘ಕೈಯೂ ಕೆಸರು ಬಾಯಿಯೂ ಕೆಸರು’ ಎನ್ನುತ್ತಾರೆ. ನವವತ್ಸರಶಿಶು ನಂದನಕ್ಕೆ ‘ಚರಂಡಿ ತೀರದಿ ಕೂಳ ಹೆಕ್ಕುವೆಡೆಗೈ ಸಲಾಮು’. ಹಿಮಗಿರಿಯ ಆಧ್ಯಾತ್ಮಿಕ ಜೀವನದಲ್ಲಿ ‘ಸಿಪ್ಪೆ ತಿರುಳಿರದ ಬರಿ ಬೀಜ ಕುಪ್ಪಳಿಸಿರುವ ತಿನದ ತೇಗಿನ ಮೂಕ ಸರಿಗಮ’, ಆದರೆ ಈ ಜೀವನವನ್ನು ನಡೆಸುವ ಮನೋದಾರ್ಢ್ಯ ಮತ್ತು ತ್ಯಾಗಬುದ್ದಿಯಿಲ್ಲದೆ ಗೊಂದಲಪುರದ ಇಂದ್ರಿಯ ಸುಖದ ಅನರ್ಥ ಕ್ರೋಧ ಶಬ್ಧತುಮುಲದ ಮೋಹಕ್ಕೆ ಅರ್ಧ ಸೆರೆಯಾದ ಜೀವಿ ಬರಬರುತ್ತಾ ಅಧ್ಯಾತ್ಮಿಕ ಜೀವನವನ್ನೇ ಇಂದ್ರಿಯ ಸುಖಸ್ವರ್ಗವನ್ನಾಗಿ ಕಲ್ಪಿಸಿಕೊಳ್ಳುತ್ತಾನೆ. ‘ಕಾಲನಿಟಲ್ಲಲ್ಲಿ ಕೀಲುಗುದುರೆ ಸವಾರಿ….ಎಲ್ಲಿ ತಿರುಗಿದರಲ್ಲಿ ಅಮೃತ ಸೂಸುವ ನಲ್ಲಿ’. ಹಿಮಗಿರಿಯ ಕಂದರಕ್ಕೆ ಬದಲು ಒಂದು ಮಂಜಿನ ಉಪಹಾರ ಗೃಹವನ್ನು ಆಶಿಸುತ್ತಾನೆ. ’ಗೊಂದಲಪುರ’ದಲ್ಲಿ ವಿಡಂಬನೆ ಹೆಚ್ಚಾಗಿ ಉಪಯೋಗಿಸಲ್ಪಟ್ಟಿದೆ. ಒಂದೇ ಕಡೆ ಕುಳಿತು ಆಲೋಚನಾ ಮಗ್ನನಾದ ಶಾಂತನನ್ನು ಗೊಂದಲಾಸುರ ಎಚ್ಚರಿಸುತ್ತಾನೆ: ‘ಏಳು ಇಲ್ಲವೋ ಮತ್ತೆ ಏಳಲಾರೆ !’ ಪಾರ್ಟಿಯ ಪುಡಾರಿಗಳಲ್ಲೇ ಮಹತ್ವಕಾಂಕ್ಷೆಯ ನಿರ್ದಯ ಸ್ಪರ್ಧೆ ಹೀಗೆ ವ್ಯಂಗ್ಯವಾಗಿ ಚಿತ್ರಿತವಾಗಿದೆ:

  ಜಾರಬಾರದೆ ಪಾಪಿ ಕೊಂಚ………

  ಯಾವಾಗಲೂ ನನ್ನ ಮೇಲೇ ಇವನ ಕಣ್ಣು, ನಡೆವಾಗಲೂ,

  ಪೂಜೆ ನಡೆವಾಗಲೂ ,

  ಅವನು ಸಾಯದೆ ನಾನು ಬದುಕಲೆಂತು?

  ಸುಲಿಗೆ ನಿಲುವುದೆಂತು? ಸ್ವರ್ಗ

  ಮೊಳೆವುದೆಂತು ? ಲೋಕ

  ಉಳಿವುದೆಂತು?

  ಸುಲಿಗೆಯನ್ನು ನಿಲ್ಲಿಸುವ ಧ್ಯೇಯದಿಂದ ಹೊರಟು ತಾವೇ ಸುಲಿಗೆಗಾರರದ ಪಾರ್ಟಿಜನರ ಚಿತ್ರ ವಿಕಟ ವಿಡಂಬನೆಗೆ ಒಳ್ಳೆ ಉದಾಹರಣೆ.

  ವಿವರಣೆ ವರ್ಣನೆ ಚರ್ಚೆ ಇವುಗಳು ಆದಷ್ಟು ಕಡಿಮೆಯಾಗದಂತೆ ಪ್ರತಿಮಾ ಚಿತ್ರಗಳನ್ನು ಅರ್ಥದ್ಯೋತಕವಾಗಿ ಸ್ವತಂತ್ರ ಛಂದಸ್ಸಿನಲ್ಲಿ ಸಂಯಮದಿಂದ ನೆಯ್ದಿರುವುದಕ್ಕೆ ‘ದೀಪಾವಳಿ’ ಎಂಬ ಕವನವನ್ನು ಉದಾಹರಿಸಬಹುದು. ಮಕ್ಕಳ ಮುದಮದಗಜನಿನಾನದ ಹೊರಗಿದ್ದರೂ ಕೊನೆಯ ಕಿಟಕಿ ಕದಗಳನ್ನು ಮುಚ್ಚಿ ಕಗ್ಗತ್ತಲಲ್ಲಿ ಕುಕ್ಕರಿಸಿದ್ದಾನೆ, ಬೆಳೆದ ಮನುಷ್ಯ .ಅವನಿಗೆ ಕವಿ ಬುದ್ಧಿವಾದ ಹೇಳುತ್ತಾನೆ:

  ಮೌನಮಸಣಬೂದಿ ಬಿಟ್ಟು ಕೆಂಗೆಂಡದ ನುಡಿಕಿಡಿ ಬಾ,

  ತಟ್ಟು ಕದ,ತಟ್ಟು ಹದ:

  ಗೂಟದ ಕಾರು ಬಾ:ಕೆಚ್ಚಲ ಕುಟ್ಟು ಗುಮ್ಮು;

  ಒಸರಿತು ಸೊನೆ:ಹಸರು ನೆಲ:

  ಕೋಟೆಯ ಹೆಬ್ಬಾಗಿಲ ಬಳಿ

  ‘ಆನೆ ಬಂತೊಂದಾನೆ’

  ಬಾಗಿಲು ತೆಗೆದು ಆನೆಯನ್ನು ಒಳಗೆ ಬಿಡಲು ಅಥವಾ ಇವನೇ ಆನೆಯೊಡನೆ ಆಟವಾಡಲು ಬೇಕೇ

  ಬೀಗದ ಕೈ ?…………….

  ಪೇರಳೆಗಿಡದಡಿ ಹೂವಿನ ಹುಡಿರಾಡಿಯ ಕೆಡಕು,ಬೆದಕು.

  ಹುಡುಕಿ ತರುವ ಭಟ,ಅಧಟ?

  ಮರೆತೆಯ ಆ ಅದ್ಭುತ ದೀಪದ ತುಕ್ಕಿನ ಕಕ್ಕುಲಾತಿ?

  ‘ಎನಪ್ಪಣೆ ಎನಪ್ಪಣೆ’

  ಆದರೆ ಶೈಶವದ ಆನಂದವನ್ನು ಮತ್ತೆ ಅನುಭವಿಸಲು ಪ್ರೌಢವಯಸ್ಕ ಅಶಕ್ತ,ಉದಾಸೀನ,ಕವಿ ಮತ್ತೆ ಬುದ್ಧಿ ಹೇಳುತ್ತಾನೆ:

  ಹೊರಗೆ ವಿದ್ದುದ್ದೀಪ ಲಹರಿ ಲಹರಿ……

  ಅಂತಃಪುರದಿ ಮಾತ್ರ ಅಂಧಕಾರಾಲಾಪ.

  ಬೇಡ ಕಣೊ,ಸುಖದ ಕ್ಷಣ ಹಿಡಿದು ಹಾಕಿಸು ಕಟ್ಟು:

  ಕಣ್ಣು ಮುಂದೇಅದನು ತೂಗು ಹಾಕು,

  ಇಂದು ದೀಪಾವಳಿಗೆ ತೆರೆ ಅಗಲ ಬಾಗಿಲ,

  ಸೊಂಡಿಲಾಡಿಸಿ ಬರಲಿ ಆನೆ,ಮುದ್ದು ಮುದ್ದಾನೆ.

  ಬೆಳಕು ಬೃಂಹಿತದ ಸಂಹಿತೆ ಕೇಳಿ ತೊಳೆಯಲಿ

  ಒಳಮನೆಯ ಕಸವು ಕೊಳೆ………

  ಪೇರಳೆಗಿಡದ ಕೆಳಗೆ ಮತ್ತೆ ಕ್ಷಣ ಮರಳಮನೆ.

  ಎಲ್ಲು ಹೋಗದು ಕಣೋ ನಿನ್ನ ಆ ಕಾಳಕೋಣೆ.

  ಶೈಶವದ ಸುಖವನ್ನು ‘ಆನೆ ಬಂತೊಂದಾನೆ’,ದೀಪಾವಳಿಯ ಸಮಯದ ‘ಬೆಳೆಗುವೆಳೆ ಮುಖಸುಖದ ಬಿಂದು’.ಪೇರಳೆ ಗಿಡದ ಕೆಳಗಿನ ಮನೆಯಾಟ,’ಅದ್ಭುತ ದೀಪ’ದ ಕಥೆಯೋದು,ಎಂಬ ಸಂಕೇತಗಳಿಂದ ಚಿತ್ರಿಸಿದೆ.ಇವುಗಳಲ್ಲಿ ಮುಖ್ಯವಾದೆರಡು ಕಡೆಯಲ್ಲಿ ಎಷ್ಟು ಸುಂದರವಾಗಿ ಒಟ್ಟುಗೂಡಿದೆ ‘ಬೆಳಕು ಬೃಂಹಿತೆ’ ಎಂಬ ಮಾತಿನಲ್ಲಿ ಬಿಗಿಯಾದ ಚಂದಶಿಲ್ಪಕ್ಕೆ ಈ ಕವನ ಒಳ್ಳೆಯ ಉದಾಹರಣೆ. ಸ್ವತಂತ್ರ ಛಂದಸ್ಸಾದರೂ ಸ್ವಲ್ಪವೂ ಗತಿಯ ಮತ್ತು ಒಟ್ಟುರೂಪದ ಚೆಲುವು ಎಲ್ಲಿಯೂ ಕೆಡುವುದಿಲ್ಲ. ಅಡಿಗರು ತಮ್ಮ ಹೊಸಮಾರ್ಗದಲ್ಲಿ ಛಂದಸ್ಸನ್ನು ಅರ್ಥವತ್ತಾಗಿ ಜನರ ಮಾತಿಗೆ ಸಮೀಪವಾಗಿ ಮಧುರವಾಗಿ ಓರಣವಾಗಿ ಉಪಯೋಗಿಸುವ ಅದ್ಭುತ ಶಕ್ತಿಯನ್ನು ಆಗಲೇ ಪಡೆದುಕೊಂಡಿದಾರೆ.

  ‘ಹಿಮಗಿರಿಯ ಕಂದರ’ದ ಕಡೆಯಲ್ಲಿ ಜೀವಿಯ ಎದೆಯಾಳದಾಸೆ ದೂರವಾಗುತ್ತಿರುವ ರೈಲಿನ ಸದ್ದಿಗನುಗುಣವಾಗಿ ಮಂಜಿನಗಡ್ಡೆ ಬಿಸಿಲಿನಲ್ಲಿ ಮೆಲುಮೆಲನೆ ಕರಗುವಂತೆ ಕರಗುವುದರ ಶಬ್ದಚಿತ್ರವಿದೆ:

  ಹಿಮಗಿರಿಯ ಕಂದರ

  ………ಗಿರಿಯ ಕಂದರ

  ……………….. ಕಂದರ

  ……………………….ದರ

  ………………………….ರ

  ಭಾಗವತ ನಾಟಕದ ಸಂಭಾಷಣೆಯ ಈ ಅನುಕರಣವನ್ನು ನೋಡಿ:

  ಬನ್ನಿರಯ್ಯಾ,ಇರುವಂಥಾ ಸ್ಥಳ?………

  ‘ಚಂಡೆಮದ್ದಲೆ ಭೇರಿದುದುಂಭಿ ತಮಟೆ ಶತಗಾರ್ದಭ

  ಕಂಠತ್ರಾಣ………………………..

  ಸದ್ದೆಂತೆಂಬರ ಗಂಡ:

  ಮೌನಿ ಮುನಿ ಋಷಿ ಧಣಿ ವಿಜ್ಞಾನಿ ಎಂತೆಂಬ ಚಿಂತಕ

  ಹಂತಕ ಜನಮಿಂಡ………

  ಭೋ ಪರಾಕ್, ಭೋ ಪರಾಕ್ !

  ಅಥವಾ ಈ ಮಾತಿನ ಧಾಟಿಯ ನಾಟಕೀಯ ಪ್ರಥಮ ಪಂಕ್ತಿಯನ್ನು:

  ನೀನೂ ಬಂದೆಯ, ಬಾ, ನಗು ನಂದನ

  ಅಥವ ಒಳ್ಳೆಯ ಮಾತಿನ ಧಾಟಿಯನ್ನೂ ಉನ್ನತಶೈಲಿಯ ಧಾಟಿಯನ್ನೂ ಹದವಾಗಿ ಬೆರೆಸಿರುವ ಈ ಭಾಗಗಳನ್ನು ನೋಡಿ:

  ರತಿತಮಾಲಚ್ಛಾಯೆಯಲ್ಲಿ ಬಿಚ್ಚಿತು ಬೋಧಿ

  ವೃಕ್ಷದಗ್ನಿಯ ಛತ್ರಿ-ಕೊನೆಯ ರಾತ್ರಿ!

  ನಿದ್ದಿಸಿದ ಮುದ್ದು ಮಗುವನು ತಬ್ಬಿ ಕಣ್ಣಿಂದ

  ಕದ್ದು ಅವಳೆಡೆ ಸುತ್ತ ಮುತ್ತ ತೂರಿ,

  ಎದ್ದುನಿಂತೆನು ಕೋಟು ತೊಟ್ಟು ಚಪ್ಪಲಿಮೆಟ್ಟಿ…..

  ಇಲ್ಲಿ ಸಿದ್ಧಾರ್ಥನ ಅಂತಿಮ ರಾತ್ರಿಯಂತೆ ಜೀವಿಯ ಆಧ್ಯಾತ್ಮಿಕ ಲೋಕ ಪಯಣದ ಹಿಂದಿನ ರಾತ್ರಿ ಸ್ವಲ್ಪಮಟ್ಟಿಗೆ ಕಾಣುತ್ತದೆ. ಆದರೆ ಈ ನಾಯಕ ಸಿದ್ಧಾರ್ಥನಲ್ಲ, ಬುದ್ಧನಾಗುವುದಿಲ್ಲ, ಈ ವ್ಯತ್ಯಾಸವು ಇಲ್ಲಿ ಕಾಣುತ್ತದೆ.

  ಅಡಿಗರು ಹಲವು ಹೊಸ ಶಬ್ಧಗಳನ್ನೂ ಬಳಕೆಯ ನುಡಿಕಟ್ಟುಗಳನ್ನೂ ಕಾವ್ಯದಲ್ಲಿ ಪ್ರಯೋಗಿಸಿದ್ದಾರೆ.’ಎಲಾ ಇವನ’, ’ಬೇಡ ಕಣೋ’, ’ಮಾಡುವೆ ಚಟ್ನಿ’,’ ಒಟಗುಟ್ಟುತ್ತಿದ್ದೆ’,’ ಕಲ್ಲು ದೇವರನೆಲ್ಲಿ ಕೂರಿಸಿದರೇನು ಮಹ?’,’ಲಕ್ವ ಹೊಡೆದು’, ’ಅನಾಮುತ್ತು’, ’ಸೇಕಡಾ’, ’ಥೇಟು’, ’ಬೆರಕೆ’, ಇತ್ಯಾದಿ. ಹಾಗೆ ನಮ್ಮಲ್ಲಿ ಹೆಚ್ಚು ಬಳಕೆಯಲ್ಲಿರುವ ಇಂಗ್ಲಿಷ್ ಪದಗಳನ್ನು ಇವರು ಉಪಯೋಗಿಸಿಕೊಳ್ಳುವುದು ಅಷ್ಟು ಮೆಚ್ಚುವಂತಹುದಲ್ಲವಾದರೂ ಒಮ್ಮೊಮ್ಮೆ ಅತ್ಯವಶ್ಯಕವಾಗುವುದೆಂದು ಒಪ್ಪಬೇಕಾಗುತ್ತದೆ .ಉದಾಹರಣೆಗೆ: ‘ಅಲಾರಂ’ ,’ರೈಲ್’, ’ಬಸ್’, ’ಪೋಲೀಸ್’, ’ರಿಪೇರಿ’, ಇವುಗಳಿಗೆ ಕನ್ನಡದಲ್ಲಿ ಪರ್ಯಾಯ ಪದಗಳು ಸಹಜವಾದುವಿಲ್ಲ. ಆದರೆ ‘ವಾಚು’ ಎನ್ನುವ ಕಡೆ ‘ಕೈ ಗಡಿಯಾರ’ ಎನ್ನಬಹುದಾಗಿತ್ತು. ಹಾಗೆ ‘ಕ್ಲಾರ್ಕ್’, ’ಲಂಕೋಟು’, ’ಬಿಚ್’, ’ಬೂರ್ಜ್ವಾ’ ಮುಂತಾದುವುಗಳಿಗೆ ಕನ್ನಡದಲ್ಲಿ ಬೇರೆ ಪದಗಳನ್ನು ಉಪಯೋಗಿಸುವುದು ಮೇಲು. ‘ಪೋಸ್ಟ್ ಮ್ಯಾನ್’ ಎನ್ನುವುದಕ್ಕೆ ಬದಲು ‘ಟಪ್ಪಾಲು ಪೇದೆ’ ಎಂದೂ ‘ಪ್ಯಾರಾ ಚೂಟ್’ ಎನ್ನುವುದಕ್ಕೆ ‘ಕೊಡೆ ವಿಮಾನ’ ಎಂದೂ ಅಡಿಗರೇ ಈ ಕವನಗಳಲ್ಲಿ ಉಪಯೋಗಿಸಿದ್ದಾರೆ.ಇದು ಸರಿಯಾದ ದಾರಿಯೆಂದು ನನ್ನ ಅಭಿಪ್ರಾಯ. ಎಲಿಯಟ್ ಕವಿಯ ಗುರಿಯನ್ನು ಮಲಾರ್ಮ ಎಂಬ ಕವಿಯು ಈ ಪಂಕ್ತಿಯಲ್ಲಿ ವಿವರಿಸುತ್ತಾನೆ : ‘To Purify the dialect of the tribe’: ತನ್ನ ಭಾಷೆಯ ಶುದ್ಧತೆಯನ್ನೂ ,ಸೂಚ್ಯಶಕ್ತಿಯನ್ನೂ ಎರಡನ್ನೂ ಕೂಡಿಯೇ ಕಾಪಾಡುವ ಮತ್ತು ಬೆಳೆಸುವ ಜವಾಬ್ಧಾರಿಯನ್ನು ಕವಿ ಮರೆಯಲಾಗದು.

  ನವ್ಯಕಾವ್ಯದ ವಿಷಯವಾಗಿ ಇರುವ ಕೆಲವು ತಪ್ಪು ಅಭಿಪ್ರಾಯಗಳನ್ನು ಜನ ಇನ್ನು ಸ್ವಲ್ಪಕಾಲದಲ್ಲಿಯೇ ತಿದ್ದಿಕೊಂಡಾರು. ಕಮ್ಯುನಿಸ್ಟ್ ವಿಮರ್ಶಕರು ನವ್ಯಕವ್ಯದಲ್ಲಿ ನಿರಾಶೆಯು ವ್ಯಕ್ತವಾಗುವುದೆಂದೂ ಅದರಲ್ಲಿನ ಆಧ್ಯಾತ್ಮಿಕದ ಒಲವು ನಿಜವಾಗಿ ಪ್ರಗತಿಯಲ್ಲವೆಂದು ಟೀಕಿಸುತ್ತಾರೆ. ಆದರೆ ಕಾವ್ಯವಾಗಿದೆಯೇ ಇಲ್ಲವೆ ಎನ್ನುವುದನ್ನು ನೋಡಬೇಕೇ ಹೊರತು ಅದರ ವಸ್ತು ನಮ್ಮ ದೃಷ್ಟಿಗೆ ಒಪ್ಪಿಗೆಯಾಗುತ್ತದೆಯೇ ಇಲ್ಲವೆ ಎಂದು ನೋಡಬಾರದು. ’ಸಿದ್ಧಶೈಲಿ’ ಯ ಬೆಂಬಲಿಗರು ನವ್ಯಕವ್ಯದಲ್ಲಿ ಕ್ಷಿಷ್ಪತೆ ಇದೆಯೆನ್ನುತ್ತಾರೆ. ಬಿಗಿಯಾಗಿ ನಾಟಕೀಯವಾಗಿ ಬರೆಯುವಾಗ ಜನಸಮಾನ್ಯಕ್ಕೂ ಅರ್ಥವಾಗುವಂತೆ, ಸಲೀಸಾಗಿ ಅಯತ್ನವಾಗಿ ಅರ್ಥವಾಗುವಂತೆ. ಹೇಗೆ ಬರೆಯಲಾದೀತು? ಇನ್ನೊಂದು ಆಪಾದನೆಯೆಂದರೆ, ’ನವ್ಯಕವಿಗಳು ಓದುಗನನ್ನು ಒಮ್ಮೆ ಹಾಲಿನಲ್ಲದ್ದುತ್ತಾರೆ, ಒಮ್ಮೆ ಗಂಜಲದಲ್ಲಿ ಅದ್ದುತ್ತಾರೆ’ ಎಂಬುದು. ಇದು ವಿಧಿಯ ತಪ್ಪು, ಏಕೆ ಅದು ನಮಗೆ ಶಕ್ತಿ-ದೌರ್ಬಲ್ಯ , ಆಸೆ-ನಿರಾಸೆ, ಸೌಂದರ್ಯ-ಅಸಹ್ಯತೆ, ಸೋಲು-ಗೆಲವುಗಳನ್ನು, ಪಾಪ-ಪುಣ್ಯ, ನರಕ-ಸ್ವರ್ಗಗಳನ್ನೂ ಕೊಡಬೇಕು? ಇವುಗಳಲ್ಲಿ ಹಂಸಕ್ಷೀರ ನ್ಯಾಯದಂತೆ ಸುಂದರವಾದುದನ್ನು ಮಾತ್ರ ತೆಗೆದುಕೊಂಡು ಬರೆಯಬೇಕೆಂಬುದನ್ನು ಯಾವ ನೈಜ ಕವಿಯೂ ಒಪ್ಪಲಾರನು. ಹೂವಿನ ಸೊಗಕ್ಕೆ ಬಾಳನ್ನು ಕೊಟ್ಟು ಬೇರಿನ ಗೋಳನ್ನಾಗಲೀ ಹೃದಯದಾಸೆಯ ಗಾಳಿಗೋಪುರ ಮತ್ತೆ ಮತ್ತೆ ಮಣ್ಣು ಮುಕ್ಕುವುದನ್ನಾಗಲೀ ಅವನು ಮರೆಯಲಾರ. ಪ್ರಕೃತಿ-ಸ್ವರ್ಗವನ್ನು ಮಾತ್ರ ಚಿತ್ರಿಸಿ ನಗರ-ನರಕವನ್ನು ಕೈಬಿಡುವುದೇಕೆ? ಗದ್ಯಕ್ಕೆ ವಸ್ತುವಾಗುವುದು ಪದ್ಯಕ್ಕೂ ವಸ್ತುವಾಗಬಲ್ಲದು: ಅವುಗಳ ರಚನಾಕ್ರಮ ಬೇರೆ ಬೇರೆ ಅಷ್ಟೆ. ಮತ್ತೊಂದು ಆಪಾದನೆ ಸ್ವತಂತ್ರ ಛಂದಸ್ಸಿನಲ್ಲಿ ಶಿಲ್ಪರೂಪ ಬರುವುದಿಲ್ಲವೆಂಬುದು. ಆದರೆ ಕಟ್ಟುನಿಟ್ಟಾದ ಛಂದೋರೂಪದಲ್ಲಿ ಹಿರಿಯ ಕವಿಗಳು ಹೊಸ ಗತಿಗಳನ್ನು ಬರಿಸಿ ಏಕತ್ವದಲ್ಲಿ ಬಹುತ್ವವನ್ನು ತರಬಹುದಾದಷ್ಟು ದಿನ ತರುವಂತೆ, ನವ್ಯಕವಿ ಬಹುತ್ವದಲ್ಲಿ, ಭಿನ್ನತೆಯಲ್ಲಿ, ಏಕತ್ವ ಸಿದ್ದಿಸುವಂತೆ ರಚಿಸಬಲ್ಲ. ಒಟ್ಟಿನಲ್ಲಿ ವರ್ಡ್ಸ್ ವರ್ತ್ ಹೇಳಿದಂತೆ Each poet has to create the taste by which he is to be judged. ಹಿಂದೆ ಆರಂಭವಾದ ನವ್ಯಶೈಲಿ ಹೇಗೆ ಇಂದು ಎಲ್ಲರಿಗೂ ಒಪ್ಪಿಗೆಯಾದ ಸಿದ್ದಶೈಲಿಯಾಗಿದೆಯೂ ಹಾಗೆ ಇನ್ನಿಪ್ಪತ್ತು ವರ್ಷದಲ್ಲಿ ಇಂದಿನ ನವ್ಯಶೈಲಿಯೂ ಸಿದ್ದಶೈಲಿಯಾಗಿ ಮುಂದಿನ ಕವಿಗಳಿಗೆ ಕಾಲ್ತೊಡಕಾದೀತು. ನವ್ಯಕವಿಗಳನ್ನು ಇಂದಿನ ‘ಸಿದ್ದಶೈಲಿ’ಯ ಬೆಂಬಲಿಗರು ತೆಗಳಬಾರದು. ಅಪಹಾಸ್ಯ ಮಾಡಬಾರದು. ನವ್ಯಕವಿಗಳೂ ಬೆಂಬಲಿಗರೂ ಅಂತೆಯೇ ಸಿಟ್ಟಿನಿಂದ ,ಮತಿಗೆಟ್ಟು ಹಿರಿಯ ಕವಿಗಳ ಅದ್ಭುತ ಕೃತಿಗಳ ಅವಹೇಳನ ಮಾಡಬಾರದು. ನವ್ಯಕವಿಗಳ ನಡುವೆಯೆ ಅತ್ಯುತ್ತಮ ವಿವರಣೆಯನ್ನು ಹಾಪ್ ಕಿನ್ಸ್ ನ ಈ ಮಾತಿನಲ್ಲಿ ಕೊಡಬಹುದು.Admire and do Otherwise.

  Leave a Reply