ಶಬ್ದದೊಳಗಣ ನಿಶ್ಶಬ್ದ

ಪು . ತಿ . ನರಸಿಂಹಾಚಾರ್

ಕಟ್ಟುವೆವು ನಾವು ಕವನ ಸಂಕಲನಕ್ಕೆ ಬರೆದ ಮುನ್ನುಡಿ | 1948

  ಈ ಕವನಗಳನ್ನು ಮೊದಲು ನಾನೆತ್ತಿಕೊಂಡು ಓದುಗರ ಕೈಗೆ ಕೊಡಬೇಕೆಂದು ಶ್ರೀಮಾನ್ ಗೋಪಾಲಕೃಷ್ಣ ಅಡಿಗರು ಅಪೇಕ್ಷಿಸಿದ್ದಾರೆ. ಹೀಗೆ ಓದಿಸಿ ಕೊಡುವುದಕ್ಕೆ ನಾನು ಸಂಕೋಚಪಡುವ ಕೆಲಸ ಕಾಣೆ. ಈ ಉಡುಗೊರೆಯ ಬೆಲೆ ಹಿರಿಯದು. ಇದನ್ನು ಸಾಹಿತ್ಯಲೋಕ ಅತ್ಯಾದರದಿಂದ ಸ್ವೀಕರಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಗೆಳೆಯ ಅಡಿಗರು ನನ್ನನ್ನು ಈ ಕೆಲಸಕ್ಕೆ ಏಕೆ ನಿಯೋಜಿಸಿದರೋ ಇದರ ಮರ್ಮ ನನಗೆ ಇನ್ನೂ ಪೂರ್ಣವಾಗಿ ಅರಿವಾಗದೆ ಉಳಿದಿದೆ. ಇದಕ್ಕೆ ಅವರು ನನ್ನಲ್ಲಿ ಇಟ್ಟಿರುವ ವಿಶ್ವಾಸ ಬಹುಮಟ್ಟಿಗೆ ಕಾರಣವಾಗಿರಬಹುದು. ಅಥವಾ ಅವರ ಕವನಗಳ ವಿಷಯದಲ್ಲಿ ನನಗಿರುವ ಆದರ ಅಭಿಮಾನಗಳು ಅವರ ಮನಸ್ಸಿಗೆ ಬಂದು, ನನ್ನ ಈ ಸದ್‍ಭಾವ ಈ ಕೃತಿಯನ್ನೋದುವ ಎಲ್ಲ ಸಹೃದಯರಲ್ಲೂ ಮೂಡಲಿ ಎಂಬ ಆಶಯ ಅವರಿಗಿರಬಹುದು. ನಾನಂತೂ ಈ ಕೆಲಸವನ್ನು ಬಹು ಪ್ರೀತಿಯಿಂದ ಮಾಡುತ್ತೇನೆ.
  ಶ್ರೀಮಾನ್ ಅಡಿಗರನ್ನು ನಾನು ಕವಿ ಎಂದು ಅರಿತುಕೊಂಡುದು ಅವರ ’ಮೋಹನ ಮುರಲಿ’ ಎಂಬ ಕವನವನ್ನು ’ವಾಣಿ’ ಮಾಸಪತ್ರಿಕೆಯಲ್ಲಿ ಮೊದಲು ಓದಿದಾಗ. ಅದನ್ನು ಓದಿ ನನಗೆ ರೋಮಾಂಚನವುಂಟಾಯಿತು ಎನ್ನಬೇಕು. ಈ ಸಂತೋಷದಲ್ಲಿ ಆ ಪತ್ರಿಕೆಯನ್ನು ಎತ್ತಿಕೊಂಡು ನನ್ನ ಸ್ನೇಹಿತರು ಶ್ರೀಮಾನ್ ನಂ. ಶಿವರಾಮಶಾಸ್ತ್ರಿಗಳವರ ಕೊಠಡಿಗೆ ಹೋಗಿ ಅವರಿಗೆ ಓದಿ ಹೇಳಿದೆ. ಇಬ್ಬರೂ ಸಾಲು ಸಾಲನ್ನೂ ಚಪ್ಪರಿಸಿ ಸವಿದೆವು. ನಮ್ಮ ಹರ್ಷೋದ್ಗಾರವನ್ನು ಅಡಿಗರು ಕೇಳಿದ್ದರೆ ಎಷ್ಟು ಸಂತೋಷಪಟ್ಟುಕೊಳ್ಳುತ್ತಿದ್ದರೋ,

  ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
  ಯಾವ ಸುಮಧುರ ಯಾತನೆ ಯಾವ ದಿವ್ಯದ ಯಾಚನೆ?

  ಅನುರಕ್ತನಾದ ಸಂತನು ಇದ್ದಕ್ಕಿದ್ದ ಹಾಗೆಯೇ ವಿರಕ್ತನಾಗುವ ಬಗೆಯನ್ನು ಕಂಡು ದಿಗಿಲು ಬಿದ್ದ ಪ್ರೇಯಸಿಯ ಕರುಣಾಕ್ರಂದನ ಈ ಗೀತೆಯಲ್ಲಿ ಹೊಳಹು ಹಾಕಿದೆ. ಈ ದಿವ್ಯ ಗೀತವನ್ನು ಬರೆದ ಕವಿ ಕವಿಯಲ್ಲದಿದ್ದರೆ ಮತ್ತಾರು? ಇದಕ್ಕೆ ಮುಂಚೆ ಶ್ರೀ ಅಡಿಗರ ಅನೇಕ ಕವನಗಳು ನನ್ನ ಕಣ್ಣಿಗೆ ಬಿದ್ದಿದ್ದವು. ಆದರೆ ಎದೆಯನ್ನು ತೆರೆದು ಅವರ ವಿಷಯದಲ್ಲಿ ನನಗೆ ಗೌರವವುಂಟಾಗುವ ಹಾಗೆ ಮಾಡಿದ ಕವಿತೆ ಇದು. ಈ ಗೌರವವನ್ನು ’ಭಾವತರಂಗ’ದ ’ಕಲ್ಲಾಗು’, ’ನನ್ನ ಕಣ್ಣ ಮುಂದೆ ನಿಲ್ಲು’, ’ಸಖಿ ಬಾ’, ’ಇದು ಬಾಳು’, ’ಏನಿರಬಹುದು’ – ಇತ್ಯಾದಿ ಕವನಗಳು ಮತ್ತು ’ಒಳತೋಟಿ’ಯ

  ಅಲ್ಲಿ ತಾವರೆ ಬೆಳಗು ಹನಿಮಂಜುಗಳ ಕುಡಿದು
  ನೇಸರನ ಕೈಗೆ ತುಟಿ ಹಚ್ಚುತಿಹವು

  ಆ ಬೆಟ್ಟಗಳ ಮುಡಿಗೆ ದಿನಕ್ಕೊಮ್ಮೆ ಪ್ರ-
  ಭಾವಲಯಮಾಲೆ ಬಂದಪುದು ರವಿಯ

  ಇಂಥ ಪ್ರಕೃತಿ ಚಿತ್ರಗಳು ಬೆಳೆಸಿದವು. ಆಗ ತರುಣರಲ್ಲಿ ಈ ಏರುವೆಯ ಕವಿಗಳು ಇದ್ದಾರೆಯೆ ಎಂದು ನಾನು ಬೆರಗಾದೆ.

  ಈ ಸಂದರ್ಭದಲ್ಲಿ ಈ ಪ್ರಶ್ನೆ ಸಹಜವಾಗಿ ಏಳುತ್ತದೆ. “ಯಾವ ಗುಣದಿಂದ ಒಂದು ಛಂದೋಬಂಧ ಕವಿತೆ ಎನಿಸಿಕೊಳ್ಳುತ್ತದೆ, ಯಾವ ಸಂಕೇತದಿಂದ, ಯಾವ ನ್ಯೂನತೆಯಿಂದ ಅಲ್ಲ – ಕಾವ್ಯದ ಆತ್ಮ ಯಾವುದು, ಯಾವ ಸಂಕೇತದಿಂದ, ಯಾವ ಸೂಚನೆಯನ್ನು ಕಂಡು ಅದರ ಇರವನ್ನು ನಿರ್ದೇಶಿಸುತ್ತೇವೆ?” ಈ ಚರ್ಚೆ ವಿಪುಲವಾಗಿ ನಡೆದಿದೆ, ನಡೆಯುತ್ತಿದೆ. ತರ್ಕದಿಂದ ಈ ಪ್ರಜ್ಞೆ ಬರುವ ಹಾಗಿಲ್ಲ. ಈಗ ಅಲ್ಲಮ ಪ್ರಭುವಿನ ಈ ವಚನವನ್ನು ನೆನೆಯಬಹುದು.

  ’ಶಿಲೆಯೊಳಗಣ ಪಾವಕನಂತೆ, ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶಬ್ದದಂತೆ, ಗುಹೇಶ್ವರಾ, ನಿಮ್ಮ ಶರಣ ಸಂಬಂಧ.’

  ವೀರಶೈವ ದರ್ಶನದ ಪರವಾಗಿ ಇದರ ಅರ್ಥ ಏನೇ ಇರಲಿ, ರಸಶಾಸ್ತ್ರದ ಪರವಾಗಿ ನಾವು ಇದಕ್ಕೆ ಬಹು ಮನೋಹರವಾಗಿ ವ್ಯಾಖ್ಯಾನ ಮಾಡಬಹುದು. ’ಶಬ್ದದೊಳಗಣ ನಿಶಬ್ದದಂತೆ’ – ಎಂಥ ಚಿತ್ತಾಕರ್ಷವಾದ ಮಾತು. ಕಾವ್ಯದ ಆತ್ಮ ಕವನದಲ್ಲಿ ಹಾಗೆ ಹುದುಗಿದೆ. ಅದು ಅತೀಂದ್ರಿಯ ಆದರೂ ಅನುಭಾವ್ಯ. ಎಂಥ ಸಾಲಂಕೃತ ಛಂದೋಬದ್ಧ ಶಬ್ದಪುಂಜವೇ ಆಗಲಿ ಅದು ಅದರೊಳಗಣ ಈ ನಿಶಬ್ದವನ್ನು ಅಂದರೆ ಅನಿರ್ವಾಚ್ಯವನ್ನು ಕೇಳಿಸುವುದಕ್ಕೆ ಸಮರ್ಥವಾದರೆ ಮಾತ್ರ ಕವನವೆನ್ನಿಸಿಕೊಂಡೀತು, ಸಹೃದಯಗ್ರಾಹ್ಯವಾಗಿ ಆನಂದವನ್ನೂ ಹರಡೀತು. ಮಿಕ್ಕವೆಲ್ಲ ಅಸಮರ್ಥ, ಆದುದರಿಂದ ವ್ಯರ್ಥ. ಆದರೆ ಈ ನಿಶಬ್ದ ಶಬ್ದದೊಳಗಣ ನಿಶಬ್ದ. ಶಬ್ದದಿಂದಲ್ಲದೆ ಇದರ ಅರಿವಾಗದು. ಅರ್ಥಸಹಿತವಾದ ಪದಸಮೂಹದಿಂದ ಈ ನಿಶಬ್ದವನ್ನು ವ್ಯಂಜಿಸುವ ಕೌಶಲವನ್ನು ಸಾಧಿಸಬಲ್ಲ ಮಾಂತ್ರಿಕನನ್ನು ಮಾತ್ರ ನಾವು ಕವಿ ಎನ್ನುತ್ತೇವೆ. ಶ್ರೀಮಾನ್ ಅಡಿಗರ ಅನೇಕ ಕವಿತಗಳಲ್ಲಿ ಈ ಸಾಮರ್ಥ್ಯವಿದೆ.

  ಅನುಭವಗಳ ನೈಜತೆ ಮತ್ತು ತೀವ್ರತೆ, ಭಾವಗಳ ನಾವೀನ್ಯ , ಶಬ್ದಗಳ ಸೌಂದರ್ಯ, ಪದಗಳ ಸಾಮರ್ಥ್ಯ, ಶೈಲಿಯ ಬಂಧುರತೆ ಮತ್ತು ಛಂದಸ್ಸಿನ ಅರ್ಥೋಚಿತ ಸ್ವಾಚ್ಛಂದ್ಯ – ಈ ಎಲ್ಲ ಗುಣಗಳನ್ನು ಹೊಂದಿ ಜೀವಕಳೆಯಿಂದ ಕಳಕಳಿಸುವ ಅನೇಕ ಪದ್ಯಗಳನ್ನು ಓದುಗರು ಶ್ರೀಮಾನ್ ಅಡಿಗರ ಈ ಪುಸ್ತಕದಲ್ಲೂ ಮತ್ತು ’ಭಾವಾಂತರಂಗ’ದಲ್ಲೂ ಆರಿಸಿಕೊಂಡು ಆನಂದಿಸಬಹುದಾಗಿದೆ. ’ಅತಿಥಿಗಳು’, ’ಧೂಮಲೀಲೆ’, ’ಸಮಾಜ ಭೈರವ’, ’ಯಾರಾದರೂ ನೀನಾಗಿರು’ – ಎಂಥ ಮನೋಹರವಾದ ಕೃತಿಗಳಿವು! ಇಂಥವುಗಳನ್ನು ಬರೆದ ಕವಿಯನ್ನು ನಾಡು ಮನ್ನಣೆಗೈಯದೆ ಎಂತು ಇದ್ದೀತು? ಈ ಕೃತಿಗಳನ್ನೂ, ’ಮೋಹನ ಮುರಲಿ’ಯನ್ನೂ ಈಗ ತಾನೆ ಓದಿದೆ; ಅಂದು ಅಡಿಗರ ಜೊತೆಯಲ್ಲಿ ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬರುವಾಗ ಆ ಜನ ಜಂಗುಳಿಯ ಮಧ್ಯೆ ಹಸ್ತಪ್ರತಿಯಲ್ಲಿ ಓದಿ ಮರುಳಾದ ಅನುಭವ ಮರುಕಳಿಸಿತು. ಪರಿಚಯದಿಂದ ಇವುಗಳ ತೇಜಸ್ಸು ಕಡಿಮೆಯಾಗಿಲ್ಲ. ದೂರದರ್ಶಕ ಯಂತ್ರದಿಂದ ನೋಡಿದವರು ಹೇಳುತ್ತಾರೆ – ಹಗಲಿನಲ್ಲೂ ರಾತ್ರಿ ಕಂಡಷ್ಟೇ ಹೊಳಪಿನಿಂದ ತಾರೆಗಳು ಹೊಳೆಯುತ್ತವೆ ಎಂದು. ಸತ್ ಕೃತಿಗಳ ವಿಷಯದಲ್ಲೂ ಈ ಮಾತನ್ನು ಹೇಳಬಹುದು. ಹೊಗಳಿಕೆಯಿಂದಲೂ ಇವರ ಕವನಗಳು ಮಲಿನವಾಗುವಂಥವಲ್ಲ ಎಂದು ನನ್ನ ನಂಬಿಕೆ. ’ಭಾವತರಂಗ’ದಲ್ಲಿ ಈ ಕವಿ ಹೀಗೆ ನುಡಿದಿದ್ದಾರೆ-

  “………ಬಗೆಯೊಳಗನೇ ತೆರೆದು
  ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ
  ಪನ್ನತಿಕೆ ಬರುವನಕ ನನ್ನ ಬಾಳಿದು ನರಕ ” – ಎಂದು.

  ’ಕಟ್ಟುವೆವು ನಾವು’ ಎಂಬ ಈ ಸಂಕಲನವನ್ನು ಓದುವವರಿಗೆ ಅವರ ಈ ಹಂಬಲು ತುಂಬುತ್ತಿರುವಂತೆ ತೋರುತ್ತದೆ. ತನ್ನ ಬಗೆಯನ್ನು ತಾನರಿತು ಬಣ್ಣಬಣ್ಣವಾಗಿ ಅದರ ವಿಲಾಸ, ವೈಭವಗಳನ್ನು ಹೀಗೆ ತನ್ನ ಸ್ವರದಿಂದ ತಾನು ಹಾಡಹೊರಟಿರುವ ಇವರು ಈ ಕವನಗಳಲ್ಲಿ ವಿಷಾದಮುಕ್ತರಾಗುತ್ತಿರುವುದೂ ಅಭಿನಂದನೀಯವಾದ ಸಂಗತಿ. ಬಣ್ಣಿಸುವ ಪನ್ನತಿಕೆಯನ್ನು ನಾವು ಇಲ್ಲಿ ಬಹುವಾಗಿ ಕಾಣುತ್ತೇವೆ.

  ಶ್ರೀ ಬೇಂದ್ರೆ ಮತ್ತು ಶ್ರೀ ಪುಟ್ಟಪ್ಪ ಇವರ ಪ್ರಭಾವದಿಂದ ಶಕ್ತರು ಮಾತ್ರ ತಪ್ಪಿಸಿಕೊಳ್ಳಬಲ್ಲರು. ಈ ಕವಿಪ್ರವರರ ಶೈಲಿಯ ರಮಣೀಯತೆ ಅಷ್ಟು ಅನುಕರಣ ಪ್ರಚೋದಕವಾದುದು. ಹಾಗೆ ತಪ್ಪಿಸಿಕೊಂಡವರು ಮಾತ್ರ ನಮ್ಮ ನಾಡಿನ ಕಾವ್ಯ ಸಂಪತ್ತಿಯನ್ನು ಬೆಳೆಸಬಲ್ಲರು. ಈಗ ತಮ್ಮ ಆತ್ಮ ಸ್ವಾತಂತ್ರ್ಯವನ್ನು ಸಂಪಾದಿಸಿಕೊಂಡು ಮುಕ್ತಕಂಠರಾಗಿ ಹಾಡಹೊರಟಿರುವ ಶ್ರೀಮಾನ್ ಅಡಿಗರಿಂದ ನಮ್ಮ ಸರಸ್ವತಿಯ ಭಂಢಾರ ಬೆಳೆಯುತ್ತದೆ ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ. ಆದರೆ ಇದು ಲೋಕರಾಮತೆಯ ಕಾಲ; ಅಂತರ್ಮುಖರು ಆತ್ಮಾರಾಮರೂ ಆದ ಕೋಮಲ ಮನಸ್ಕರಿಗೆ ಈಗ ಪುರಸ್ಕಾರ ಕಡಿಮೆ. ಆದರೆ ಇದು ಮಾತ್ರ ಅನಿವಾರ್ಯ; ಒಂದು ಸಮಾಜದ ಸಂಸ್ಕೃತಿ ಸಂಪನ್ನ ಹಾಗೂ ಸಭ್ಯ ಎನ್ನಿಸಿಕೊಳ್ಳಬೇಕಾದರೆ, ಎಷ್ಟೇ ಅಲ್ಪ ಪ್ರಮಾಣದಲ್ಲಾಗಲಿ – ನಮ್ಮ ಶರೀರಾರೋಗ್ಯಕ್ಕೆ ಅತ್ಯಲ್ಪ ಪ್ರಮಾಣದ ಧಾತುಗಳು ಹೇಗೋ ಹಾಗೆ – ಇಂಥ ಕವಿಗಳು ಅವಶ್ಯಕ. ಅವರನ್ನು ಗೌರವಿಸಿ, ಅವರ ಸ್ವಾತಂತ್ರ್ಯ ಸ್ವಾಚ್ಛಂದ್ಯಗಳನ್ನು ಹರಣಮಾಡದೆ ಪೋಷಿಸಿವುದು, ಆತ್ಮರಕ್ಷಣೆಯಷ್ಟೇ ಮುಖ್ಯ ಎನ್ನಿಸುತ್ತದೆ. ಇಂಥ ಭಾವುಕರ ಸುಮಧುರ ಯಾತನೆ ಮತ್ತು ದಿವ್ಯದ ಯಾಚನೆ ಇಲ್ಲದ ಆ ನಾಡು ಎಂತು ಬದುಕೀತು? ಈ ಕವಿಗೆ ನಮ್ಮ ನಾಡಿನ ಪ್ರೇಮ ಗೌರವಗಳು ಇತೋಪ್ಯತಿಶಯವಾಗಿ ದೊರೆತು, ಅವರು ಪ್ರಸನ್ನಚಿತ್ತರೂ, ಸುಕೃತಿಗಳೂ, ಬಹುಕೃತಿಗಳೂ ಆಗಲೆಂದು ನಾನು ಹೃತ್ಪೂರ್ವಕವಾಗಿ ಆಶಿಸುತ್ತೇನೆ.

  Leave a Reply