1979ರ ಧರ್ಮಸ್ಥಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ

ಕನ್ನಡ ಸಾಹಿತಿಗಳೇ, ಸಾಹಿತ್ಯಪ್ರಿಯರೇ, ಸನ್ಮಾನ್ಯ ಮಹನೀಯರೇ, ಮಹಿಳೆಯರೇ,
ಕನ್ನಡ ಸಾಹಿತ್ಯ ಪರಿಷತ್ತಿನ ಐವತ್ತೊಂದನೆಯ ಈ ಸಮ್ಮೇಳನ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರನ ಸಾನಿಧ್ಯದಲ್ಲಿ ನಡೆಯುತ್ತಿದೆ.ಈ ಸಮ್ಮೇಳನಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಆರಿಸಿದ್ದು ಒಂದು ಅನಿರೀಕ್ಷಿತ ಪ್ರಸಂಗ. ಅದನ್ನು ಒಂದು ಗೌರವವೆಂದು, ಕನ್ನಡ ಜನತೆ ತೋರಿದ ಮನ್ನಣೆಯೆಂದು ಭಾವಿಸಿ ವಿನಯದಿಂದ ಸ್ವೀಕರಿಸಿದ್ದೇನೆ. ನಮ್ಮ ದೇಶದಲ್ಲಿ ಯಾವುದೂ ಈಗ ಯೋಗ್ಯತೆಯ ತೂಕದ ಮೇಲೆ ನಡೆಯುತ್ತಿಲ್ಲವಾಗಿ, ಸಾಹಿತ್ಯ ಕ್ಷೇತ್ರವೂ ಕೂಡ ಈ ಸಾಮಾನ್ಯ ಸೂತ್ರಕ್ಕೆ ಹೊರತಾಗಿಲ್ಲವಾದ್ದರಿಂದ ಇದು ನಿಜವಾದ ಯೋಗ್ಯತೆಗೆ ಸಂದ ಗೌರವವೋ ಎಂಬ ಸಂದೇಹಕ್ಕೆ ಆಸ್ಪದವಿದೆ. ಆದರೆ ಹಾಗಲ್ಲದಿದ್ದರೂ ಕನ್ನಡದ ಅಭಿಮಾನಿಗಳಾದ, ಸಾಹಿತ್ಯದ ಬಗ್ಗೆ ಗೌರವವಿಟ್ಟುಕೊಂಡಿರುವ ನಿಮ್ಮೆಲ್ಲರ ಮುಂದೆ ನಿಂತು ಮಾತಾಡುವುದೇ ಒಂದು ಗೌರವವೆಂದು ಒಂದು ಅಪೂರ್ವ ಯೋಗವೆಂದೂ ಭಾವಿಸುತ್ತೇನೆ. ಜನಶಕ್ತಿಯ ಮುಂದೆ ಈ ಜಗತ್ತಿನಲ್ಲಿ ಯಾವ ಶಕ್ತಿಯೂ ಇಲ್ಲ. ಅದೃಶ್ಯ ಶಕ್ತಿಗಳೂ ಕೆಲಸ ಮಾಡುವುದು ಈ ಜನಶಕ್ತಿಯ ಮೂಲಕವೇ. ಆದರೆ ಜನಶಕ್ತಿ ಕಾರ್ಯಪ್ರವೃತ್ತವಾಗುವುದು ನಮ್ಮೆಲ್ಲರಲ್ಲೂ ಒಂದೇ ಭಾವನೆ ಕುದಿಯುತ್ತಿರುವಾಗ. ಆಗ ರಾವಣನ ಹತ್ತು ತಲೆಯೂ ಕತ್ತರಿಸಿ ಬೀಳುತ್ತದೆ; ಸಿಂಹಾಸನಗಳು ಉರುಳುತ್ತವೆ. ಸರ್ವಾಧಿಕಾರಿಗಳು ಮಣ್ಣುಮುಕ್ಕುತ್ತಾರೆ. ಈ ಸತ್ಯಕ್ಕೆ ದೃಷ್ಟಾಂತ ನಮಗೆ ಪ್ರತಿ ಯುಗದಲ್ಲೂ ದೊರೆಯುತ್ತದೆ. ಆದರೆ ನಮ್ಮ ದೇಶದಲ್ಲಿ ಜನಶಕ್ತಿ ಅಗ್ನಿ ಬಿಂದುವಾಗಿ ಕೇಂದ್ರೀಕೃತವಾಗುವವರೆಗೆ ನಾವು ಅದೃಶ್ಯ ಶಕ್ತಿಗಳನ್ನೇ ಮೊರೆ ಹೋಗಬೇಕಾಗುತ್ತದೆ. ಅಂಥ ಅದೃಶ್ಯ ಶಕ್ತಿಯ ಸಾಕಾರವಾಗಿ ಇಲ್ಲಿ ನೆರೆದಿರುವ ತಮ್ಮ ಮುಂದೆ ಬಾಗಿ ವಿನಯದಿಂದ ನಾಲ್ಕು ಮಾತು ಹೇಳುತ್ತೇನೆ.

ಈಗ ನಮ್ಮ ದೇಶದ ಮನಸ್ಸು ಶತಚ್ಛಿದ್ರವಾಗಿದೆ. ನಾನಾ ರೀತಿಯ ವಾದ ವಿವಾದಗಳು, ಕುತರ್ಕಗಳು, ಮೊಂಡುವಾದಗಳು, ದುರ್ವಾದಗಳು, ಆಕ್ರೋಶಗಳು; ಚೀತ್ಕಾರಗಳು,ಶಿಶುಸಹಜವಾದ ಅಳುನಗು ಕೇಕೆಗಳು,ಸ್ಪದ್ರರ್ಶನಗಳು – ಇವು ನಮ್ಮ ಜೀವನವನ್ನು ಗಾಯಗೊಳಿಸಿ ಕೀವು ತುಂಬಿಸಿ ಆಗಬೇಕಾದ ಬದಲಾವಣೆ ಕ್ರಮಬದ್ಧವಾಗಿ ನ್ಯಾಯ ಸಮ್ಮತವಾಗಿ ಆಗದೆ ಇರುವುದೇ ಇದಕ್ಕೆ ಕಾರಣವಿರಬಹುದು. ಕಾರಣವೇನೇ ಇರಲಿ, ಈ ಬಗೆಯ ರೋಗದ ಕಾರಣವನ್ನು ಕರಾರುವಕ್ಕಾಗಿ ಕಂಡು ಹಿಡಿದು ಅದನ್ನು ನಿವಾರಿಸಿಕೊಳ್ಳುವುದು ಪ್ರಜ್ಞೆಯುಳ್ಳ ಎಲ್ಲರ ಕರ್ತವ್ಯ. ಆಗುತ್ತಿರುವ ಸಾಮಾಜಿಕ ಬದಲಾವಣೆಯ ಗತಿಯನ್ನು ತಿಳಿಯದೆ ಅದರ ಜೊತೆಗೆ ಹೊಂದಿಕೊಳ್ಳಲಾರದೆ ಇರುವವರ ಮನಃಚೇಷ್ಟೆಗಳು ಇವು ಎಂದು ತಿಳಿದು ಕೊಂಚ ಸಮಾಧಾನಪಡಬೇಕು. ಬದಲಾವಣೆ ಆಗುತ್ತಿರುವುದು ಎಂಥದು, ಅದರ ಮೂಲ ಎಲ್ಲಿ, ಅದು ಯಾವ ಗುರಿಯ ಕಡೆ ತುಯ್ಯುತ್ತಿದೆ ಎನ್ನುವುದರ ಕುರಿತು ಬುದ್ಧಿಪೂರ್ವಕವಾಗಿ ಗ್ರಹಿಸಿ, ಗ್ರಹಿಸಿದ್ದನ್ನು ಕುರಿತು ಆಳವಾಗಿ ಚಿಂತಿಸಿ ಚಿಂತಿಸಿದ್ದನ್ನು ವಿವೇಕದ ಒರೆಗಲ್ಲಿಗಿಟ್ಟು ನೋಡಿ ಕಾರ್ಯಪ್ರವೃತ್ತರಾಗಬೇಕಾದ ಕಾಲ ಇದು. ಅಂಥ ವಿವೇಕದಿಂದ ಹುಟ್ಟಿದ ಅರಿವನ್ನು ಜನಮನದಲ್ಲಿ ಬಿತ್ತುವುದೇ ಚಿಂತಕರಾದ ಸಾಹಿತಿಗಳ ಕೆಲಸ – ಎಂದರೆ ಮೆರವಣಿಗೆ ಕೂಗಾಟ ಮುಂತಾದ ರೀತಿಯಿಂದಲ್ಲ, ಸಾಹಿತ್ಯ ರಚನೆಯಲ್ಲಿ ನಾವು ತೋರುವ ಶ್ರಮ, ಸಹಿಷ್ಣುತೆ, ವಿಚಾರಪರತೆ, ಕಲಾನಿಷ್ಠೆ ಇವುಗಳ ಉದಾಹರಣೆಗಳ ಮೂಲಕ. ದುರ್ದೈವದಿಂದ ಈ ಕೆಲಸ ನಡೆಯುತ್ತಿಲ್ಲ. ಬದಲಾಗಿ ಸಾಮಾಜಿಕ ಅಸ್ಥಿರತೆಯಿಂದುಂಟಾಗಿರುವ ಕೋಲಾಹಲದ ರಾಜಕೀಯ ಲಾಭವನ್ನು ಪಡೆಯಲು ಸಾಹಿತಿಗಳಲ್ಲೂ ಅನೇಕರು ಯತ್ನಿಸುತ್ತಾ ಬಂದಿರುವುದು ದುಃಖದ ಸಂಗತಿ. ಇದರ ಪರಿಣಾಮವಾಗಿ ಅನೇಕ ಸಾಹಿತ್ಯಕ್ಕೆ ಸಲ್ಲದ ಉಪದ್ವ್ಯಾಪಗಳೂ ಅವಿವೇಕಗಳೂ ಅವ್ಯಾಹತವಾಗಿ ನಡೆದು ಬಂದು ಸಾಹಿತ್ಯದ ವಾತಾವರಣ ಸಂಪೂರ್ಣ ವಿಷಭರಿತವಾಗಿ ಅಭಿವ್ಯಕ್ತಿ ಕಾರ್ಯವೇ ಕುಂಠಿತವಾಗುತ್ತಾ ಬರುತ್ತಿದೆ. ತನಗೆ, ತನ್ನ ಕಾಲಕ್ಕೆ, ತನ್ನ ದೇಶಕ್ಕೆ, ಒಟ್ಟು ಮಾನವ ಸಮಾಜಕ್ಕೆ ಯಾವ ಜವಾಬುದಾರಿಯೂ ಇಲ್ಲದೆ ತನ್ನ ಆಶೆಗಳನ್ನೂ ನಷ್ಟಗಳನ್ನೂ ಸಾರ್ವತ್ರಿಕವಾಗಿ ಪ್ರದರ್ಶಿಸಿ ತೃಪ್ತಿಪಡುವುದರಲ್ಲೇ ತಲ್ಲೀನರಾದ ನಮ್ಮ ಕೆಲವುಮಂದಿ ಸಾಹಿತಿಗಳ ಈ ಕೆಲಸ ನಮ್ಮ ಸಮಾಜದ ಒಳಗಡೆಯಿರುವ ಯಾವುದೋ ಇನ್ನೂ ವಿಧಾನ ತಿಳಿಯದಿರುವ ರೋಗದ ಬಾಹ್ಯ ಲಕ್ಷಣಗಳೆಂದು ತಿಳಿದ ಅದರ ನಿವಾರಣೆಗೆ ತಕ್ಕ ಕ್ರಮಗಳನ್ನು ಸಾಂಸ್ಕೃತಿಕವಾಗಿ, ಶಿಕ್ಷಣ ಮತ್ತು ಸಾಹಿತ್ಯಗಳ ಮೂಲಕ ಮಾಡಲೇಬೇಕಾದ ಜರೂರು ಈಗ ಬಂದಿದೆ.

ಪ್ರತಿಯೊಂದು ಕಾಲಕ್ಕೂ ಅದರದರ ಮುಖ್ಯ ಧರ್ಮವೊಂದು ಇರುತ್ತದೆ. ‘ಧರ್ಮ ‘ ಎಂಬ ಶಬ್ದವನ್ನು ಇಲ್ಲಿ spirit ಎಂಬ ಅರ್ಥದಲ್ಲಿ ಉಪಯೋಗಿಸುತ್ತಿದ್ದೇನೆ. ಕೆಲವು ಕಾಲಗಳಲ್ಲಿ ಇದು ಸಂಪ್ರದಾಯಬದ್ಧವಾಗಿ ಅಸ್ಪಷ್ಟವಾಗಿ ಬಹುಮಟ್ಟಿಗೆ ಜಡವೇ ಆಗಿದ್ದರೆ ಇನ್ನು ಕೆಲವು ವಿಶೇಷ ಯುಗಗಳಲ್ಲಿ ಇದು, ಮುಖ್ಯವಾಗಿ ನಮ್ಮ ಈ ಆಧುನಿಕ ಕಾಲದಲ್ಲಿ ತುಂಬ ಸ್ಪಷ್ಟವಾಗಿರುವುದಕ್ಕೆ ಕಾರಣ ಬಹು ಮುಖ್ಯವಾಗಿದ್ದರೂ ಅವುಗಳಲ್ಲಿ ಬಹು ಮುಖ್ಯವಾದ ಕಾರಣ ವೈಜ್ಞಾನಿಕ ನಾಗರಿಕತೆಯ ಯಂತ್ರೋದ್ಯಮದ ರಾಶುತ್ಪನ್ಯ ಅರ್ಥವ್ಯವಸ್ಥೆ , ಒಬ್ಬ ಮನುಷ್ಯ ತನ್ನ ಪರಿಶ್ರಮದಿಂದ ಅನೇಕರಿಗೆ ಹೊಟ್ಟೆಗೆ ಹಾಕುವಷ್ಟು ಉತ್ಪತ್ತಿ ಮಾಡುವುದು ಸಾಧ್ಯವಾದ ವೈಜ್ಞಾನಿಕ – ಆರ್ಥಿಕ ಕಾರಣ.ಮನುಷ್ಯರಲ್ಲಿ ಕೆಲವರು ಮಾತ್ರವಲ್ಲ ಎಲ್ಲರೂ ತಮ್ಮ ಮನಸ್ಸಿನ, ತಮ್ಮ ಅಂತರಂಗದ ಬೆಳವಣಿಗೆಯ ಕಡೆ ಲಕ್ಷ್ಯ ಕೊಡಲು ಸಾಧ್ಯವಾಗುವಷ್ಟು, ವಿರಾಮವನ್ನು ಹೊಂದಿ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವಂಥ ಒಂದು ಹೊಸ ಅಪೂರ್ವ ಸಂದರ್ಭ ಇದು. ನಮ್ಮಲ್ಲಿ ಹಿಂದಿನಿಂದಲೂ ಹೇಳಿಕೊಂಡು ಬಂದಿರುವ, ಎಲ್ಲ ಮತಧರ್ಮಗಳೂ ಸಾರುತ್ತಾ ಬಂದಿರುವ ಸಮತೆಯ, ಮಾನದ ಭ್ರಾತೃತ್ವದ, ಮಾನವೀಯತೆಯ ಸೂತ್ರಗಳನ್ನು ಕಾರ್ಯತಃ ಮಾಡಿ ತೋರಿಸಬಹುದಾದ ಕಾಲ ಇದು. ಈ ಸಂದರ್ಭದ ಅರ್ಥವನ್ನು ಅರಿತು ಅದು ಕೊಟ್ಟಿರುವ ಸವಾಲನ್ನು ಸ್ವೀಕರಿಸಿ ನಮ್ಮ ಸಮಾಜವನ್ನು ಈ ರೀತಿ ಪುನರ್ಘಟನೆ ಮಾಡಬೇಕಾದದ್ದು ನಮ್ಮ ಕರ್ತವ್ಯ. ವಾಸ್ತವಿಕವಾಗಿ ಜೀವನದಲ್ಲಿ, ಮಾನಸಿಕವಾಗಿ ಸಾಹಿತ್ಯ ಕಲೆಗಳೇ ಮೊದಲಾದ ಸೃಷ್ಟಿಕಾರ್ಯದಲ್ಲಿ, ಈ ಹೊಸ. ಯುಗಧರ್ಮವನ್ನು ಪ್ರಜಾಪ್ರಭುತ್ವವೆಂದು ಕರೆಯಲಾಗುತ್ತದೆ. ಈ ಹೊಸ ಸಮಾಜ ಸೂತ್ರಗಳೂ ನಮ್ಮ ಎಲ್ಲ ಮತಸ್ಥಾಪಕರೂ ಹೇಳುತ್ತ ಬಂದಿರುವ ಸೂತ್ರಗಳೇ ಎನ್ನುವುದನ್ನೂ ನಾವು ಮರೆಯಬಾರದು, ಹಿಂದೆ ಆಚರಣೆಗೆ ಬಂದಿಲ್ಲದುವು, ಈಗ ಆಚರಣೆಗೆ ಬರಬೇಕಾದಂಥವು. ಈ ಜಗತ್ತಿನ ಎಲ್ಲ ದೇಶಗಳಲ್ಲೂ ಕೋಟ್ಯಂತರ ಜನ ವಿದ್ಯೆಗೂ ಸಂಸ್ಕಾರಕ್ಕೂ ಜೀವನದ ಎಲ್ಲ ಮೇಲ್ಮಟ್ಟದ ಸಂತೋಷಗಳಿಗೂ ಬಾಹಿರವಾಗಿ ಕೇವಲ ಪಶುಗಳ ಹಾಗೆ ಹುಟ್ಟಿ ಬದುಕಿ ಅಳಿದು ಹೋಗುತ್ತಾ ಬಂದಿರುವ ಈ ದುರಂತ ಕಥೆಯ ಅರ್ಥ ನಮಗೆ ಈಗ ಆಗುತ್ತಿದೆ. ನಮ್ಮ ಎಲ್ಲಾ ತಾತ್ವಿಕರೂ ಮತಸ್ಥಾಪಕರೂ ಜಗತ್ತಿನ ಆದ್ಯಂತವೂ ಈ ದುರಂತವನ್ನು ಕಂಡರೂ ಅದಕ್ಕೆ ಈ ಲೋಕದಲ್ಲೇ ಯಾವ ಪರಿಹಾರವನ್ನೂ ಕಾಣಲಾರದೆ ಇದ್ದ ವ್ಯವಸ್ಥೆಯಲ್ಲೇ ಕೊಂಚ ಬದಲಾವಣೆ ಮಾಡಿ ಪರಲೋಕದ ಕಡೆಯೇ ಹೆಚ್ಚಾಗಿ ನೋಡಬೇಕಾಯಿತು. ಆದರೆ ಈಗ ಸಾಮಾನ್ಯರಾದ ನಾವು ಕೂಡ ಇದಕ್ಕೆ ಪರಿಹಾರ ಸೂತ್ರಗಳನ್ನು ಕಾಣಲು ಸಾಧ್ಯವಾಗಿದೆ. ಇದಕ್ಕೆ ಇರುವ ಸೂತ್ರ ಎಂದರೆ ನಮ್ಮೆಲ್ಲ ಶಕ್ತಿಯನ್ನು ಉಪಯೋಗಿಸಿ ಸಂಪತ್ತಿನ ಅಭಿವೃದ್ಧಿಯನ್ನು ಸಾಧಿಸಿ ಅದು ಎಲ್ಲ ಜನಕ್ಕೂ ದೊರೆಯುವ ಹಾಗೆ ಮಾಡಿ ಪ್ರತಿಯೊಬ್ಬರಿಗೂ ತಮ್ಮ ವ್ಯಕ್ತಿತ್ವವನ್ನು ವಿಕಾಸಗೊಳಿಸಿಕೊಳ್ಳಲು ತಕ್ಕ ವಿರಾಮವೂ ಅನುಕೂಲವೂ ಸಿಕ್ಕುವ ಹಾಗೆ ಮಾಡುವುದು. ಇದಕ್ಕೆ ಬೇಕಾದ್ದು ಈ ಹೊಸ ನ್ಯಾಯ ದೃಷ್ಟಿಗೆ ತಕ್ಕ ಮನೋಧರ್ಮ ಮಾತ್ರವೇ ಅಲ್ಲ.ಅದಕ್ಕಿಂತ ಹೆಚ್ಚಾಗಿ ಕಷ್ಟಪಟ್ಟು ನಿಷ್ಠೆಯಿಂದ ದುಡಿದು ಕೃತಾರ್ಥನಾಗುವ ‘ ಕರ್ಮಯೋಗ’ ಅಥವಾ ಆತ್ಮ ಸಾಫಲ್ಯವನ್ನು ತಂದುಕೊಡಬಲ್ಲ ಕಾಯಕ. ನಮ್ಮ ಬದುಕು,ನಮ್ಮ ಯೋಚನೆ ನಮ್ಮ ಎಲ್ಲ ಭಾವನೆಗಳೂ ಕೃತಕೃತ್ಯವಾಗಿ ಧನ್ಯತೆ ಪಡೆಯುವುದು ನಾವು ಮಾಡುವ ಕೆಲಸವನ್ನು ಪ್ರೀತಿಯಿಂದಲೂ ನಿಷ್ಠೆಯಿಂದಲೂ ನಮ್ಮ ಕೈಲಾದಷ್ಟು ಉತ್ಕೃಷ್ಟವಾಗಿಯೂ ಮಾಡುವುದು. ಸಾಹಿತಿಯಾದವನು ತನ್ನ ಕೆಲಸವಾದ ಸಾಹಿತ್ಯದಲ್ಲೂ ಇದೇ ರೀತಿ ಕಾರ್ಯನಿಷ್ಠೆಯನ್ನು ತೋರಿಸಿ ಅದು ಶ್ರೇಷ್ಠತೆಯ ಮಟ್ಟವನ್ನು ಮುಟ್ಟುವವರೆಗೂ ಹೋರಾಡುತ್ತಲೇ ಇರುವುದು. ಸಾಮಾಜಿಕ ಬದಲಾವಣೆ ಆಗಬೇಕಾದ್ದು ನಾವು ಬೇಡವೆಂದರೂ ನಡೆದುಹೋಗುತ್ತದೆ. ಈ ಶತಮಾನದಲ್ಲಿ ನಮ್ಮಂಥ ಬಡದೇಶದಲ್ಲೂ ಆಗಿರುವ ಬದಲಾವಣೆ ಕೂಡ ಬೆರಗು ಹುಟ್ಟಿಸುವಂಥದೇ. ಈ ಮಾತನ್ನು ನಾವು ಅರಿತು ನಮ್ಮ ಬದುಕನ್ನು ಅದಕ್ಕೆ ಸಂಗತಗೊಳಿಸಿಕೊಂಡರೆ ಆಗುತ್ತಿರುವ ಬದಲಾವಣೆ ಕ್ರಮಬದ್ಧವಾಗಿ, ಬದಲಾವಣೆಯ ಪ್ರಕ್ರಿಯೆಯಲ್ಲಿ ಇರುವ ಹಿಂಸೆಗಳೂ ಪೀಡೆಗಳೂ ದಾರುಣತೆಯೂ ಕಡಿಮೆಯಾಗಿ ವಿವೇಕವಿಹಿತವಾಗಿ ಅದು ನಡೆಯಬಲ್ಲವು.

ನಮ್ಮ ದೇಶದ ಕುರಿತು ಆಡುವ ಮಾತು ಎಲ್ಲ ದೇಶಗಳಿಗೂ ಅನ್ವಯಿಸುತ್ತದೆ ಎನ್ನುವುದನ್ನೂ ಯಾವ ಬದಲಾವಣೆ ಬಂದರೂ ಮನುಷ್ಯನ ಮೂಲಭೂತ ಗುಣಗಳೂ ಭಾವನೆಗಳೂ ಆದರ್ಶಗಳೂ ದೋಷಗಳೂ ಪರಿಮಿತಿಗಳೂ ಹಾಗೆಯೇ ಉಳಿಯುವಂಥವು ಎನ್ನುವುದನ್ನೂ ನಾವು ನೆನಪಿನಲ್ಲಿಡಬೇಕು. ಸ್ವಾತಂತ್ರ್ಯ ಮತ್ತು ಸಮಾನತೆಯ ಈ ಆಧುನಿಕ ಮೌಲ್ಯಗಳು ಮಾನವ ಜಗತ್ತೇ ಆಚರಿಸಬೇಕಾದ, ಅನೇಕ ದೇಶಗಳಲ್ಲಿ ಆಚರಣೆಗೆ ತರಲು ಯತ್ನಿಸುತ್ತಿರುವಂಥವು. ಈ ಮೌಲ್ಯಗಳೇ ಪರಮ ಮೌಲ್ಯಗಳೇನು ಅಲ್ಲದಿರಬಹುದು. ಆದರೆ ಈಗ ಸಲ್ಲುವಂಥವು ಎನ್ನುವುದು ಮಾತ್ರ ಖಂಡಿತ. ಒಬ್ಬ ಅತ್ಯಂತ ಹೀನ ದೀನ,ಅತಿ ಸಾಮಾನ್ಯ ಎನ್ನುವಂಥ ಮನುಷ್ಯನೂ ಕೂಡ ಅವನು ದಲಿತ, ಹರಿಜನ, ಬಡ ಹಾರುವ. ಯಾರೇ ಇರಲಿ, ಅವನು ತನ್ನಲ್ಲಿರುವ ದಿವ್ಯ ಎನ್ನಬಹುದಾದ ಮಾನವ ಚೇತನದ ಮೂಲಕವಾಗಿ ಉಳಿದೆಲ್ಲರಿಗೂ ಸಮಾನ, ಉಳಿದೆಲ್ಲರ ಗೌರವಕ್ಕೂ ಪಾತ್ರ; ಅವನ ವ್ಯಕ್ತಿತ್ವ ಪೂಜಾರ್ಹ ಎನ್ನುವುದೇ ಈ ಸೂತ್ರದ ತಿರುಳು. ಅವನು ಕೇವಲ ಒಬ್ಬ ಮನುಷ್ಯ ಮಾತ್ರವಲ್ಲ, ಒಂದು ವಿಶೇಷವುಳ್ಳವನು, ಇನ್ನು ಯಾರೂ ತನ್ನ ಹಾಗೆ ಇಲ್ಲದ ಅದ್ವಿತೀಯ. ಅವನ ಮನಸ್ಸಿನ ಭಾವನೆಗಳು, ಯೋಚನೆಗಳು, ಕನಸುಗಳು ಈ ಎಲ್ಲವನ್ನೂ ನಾವು ಸರಿಯಾಗಿ ಅರಿತು ನಮ್ಮ ಮನಸ್ಸಿನ ಕ್ರಿಯೆಗಳಿಗೆ ಕೊಡುವಷ್ಟು ಮಹತ್ವವನ್ನೇ ಅವುಗಳಿಗೂ ಕೊಡಬೇಕು ಎನ್ನುವುದೇ ಎಲ್ಲ ಆಧುನಿಕ ಜೀವನದ, ಸಾಹಿತ್ಯದ, ಕಲೆಯ ಹಿಂದೆ ಇರುವ ಇರಬೇಕಾದ ಮೂಲಸ್ಪೂರ್ತಿ. ಹುಟ್ಟಿನಿಂದಲೇ ಯಾರೂ ಉಚ್ಚ ಅಥವಾ ನೀಚ ಆಗುವುದಿಲ್ಲ. ಪ್ರತಿಯೊಬ್ಬನನ್ನೂ ಅವನವನ ಗುಣ, ಸಾಧನೆ, ಅವನ ಕೆಲಸ ಇವುಗಳಿಂದ ತೂಗಬೇಕಲ್ಲದೆ, ಮನುಷ್ಯನ ಯೋಗ್ಯತೆಯನ್ನು ತೂಗುವ ಉಳಿದೆಲ್ಲ ಪಡಿಗಳೂ ಕೃತಕ, ತಾತ್ಕಾಲಿಕ. ಈ ಹೊಸ ದೃಷ್ಟಿಯಿಂದಾಗಿ ಹಿಂದೆ ಮಹಾರಾಜರು, ಮಹಾಪುರುಷರು ದೇವತೆಗಳು ಮುಂತಾದವರ ಬಗ್ಗೆ ಸಾಹಿತ್ಯ ರಚಿತವಾಗುತ್ತಿದ್ದರೆ ಈಗ ಅಂಥ ಅಸಾಧಾರಣರಲ್ಲಿ ಕಂಡು ಬರುವ ಚಾರಿತ್ರ್ಯ ವೈವಿಧ್ಯ ಅನುಭವ ವಿಶೇಷ ಸಾಮಾನ್ಯನಲ್ಲೂ ಕಾಣುತ್ತದೆ ಎಂಬ ತಿಳುವಳಿಕೆ ಹುಟ್ಟಿ ಒಬ್ಬ ಕವಿ ತನ್ನದೇ ಆದ ಭಾವನೆಗಳನ್ನೂ ಅನುಭವಗಳನ್ನೂ ಕಾವ್ಯದ ವಸ್ತುವನ್ನಾಗಿ ಮಾಡಿಕೊಳ್ಳುವುದು ಸಾಧ್ಯವಾಯಿತು. ಆಧುನಿಕ ಸಾಹಿತ್ಯಕ್ಕೂ ಹಿಂದಿನ ಸಾಹಿತ್ಯಕ್ಕೂ ವ್ಯತ್ಯಾಸ ಇರುವುದು ಇಲ್ಲಿ. ಮನುಷ್ಯರೆಲ್ಲರಿಗೆ ಸಾಮಾನ್ಯವಾದುದು ಯಾವುದು ಎಂದು ನಮ್ಮ ಹಿಂದಿನ ಕವಿಗಳು ಹುಡುಕುತ್ತಿದ್ದರಾದರೆ ಈಗ ನಾವು ಒಬ್ಬ ವ್ಯಕ್ತಿಯ ವಿಶೇಷವೇನು, ಅವನನ್ನು ಇತರರಿಂದ ಬೇರ್ಪಡಿಸಿವ ಗುಣ ಯಾವುದು ಎಂದು ಹುಡುಕುತ್ತೇವೆ. ಆದರೆ ಎಲ್ಲ ಗುಣಗಳು ಎಲ್ಲರಿಗೂ ಸಾಮಾನ್ಯವಾಗಿದ್ದರೂ ಕೆಲವು ಎದ್ದು ಕಾಣುತ್ತವೆ, ಉಳಿದವು ಕುಗ್ಗಿರುತ್ತವೆ. ಆದ ಕಾರಣವೇ ಒಬ್ಬ ಕವಿಯ ವಿಶಿಷ್ಟವಾದ ಅನುಭವವನ್ನು ಎಲ್ಲರೂ ತಿಳಿಯುವುದು ಸಾಧ್ಯವಾಗುತ್ತದೆ. ನಾವು ಈ ಜಗತ್ತಿನ ವಿವಿಧ ಸಮಾಜಗಳಲ್ಲಿ ಮನುಷ್ಯನು ಯಾವುದೇ ರೀತಿಯಲ್ಲಿ ವರ್ಗೀಕರಿಸಿಕೊಂಡಿರಲಿ ನಿಜವಾದ ಮಾತೆಂದರೆ ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನೂ ಏಕಕಾಲಕ್ಕೇ ಬ್ರಾಹ್ಮಣನೂ, ಶೂದ್ರನೂ, ಮಾನವ ಲೋಕಗಳಲ್ಲಿ ಕಂಡುಬರುವ ಎಲ್ಲ ದೌರ್ಜನ್ಯಗಳೂ ದೋಷಗಳೂ ಗುಣಗಳೂ ಸೌಜನ್ಯಗಳೂ ಅವನಲ್ಲಿ ಬೀಜರೂಪದಲ್ಲಿ ಇದ್ದೇ ಇರುತ್ತವೆ. ಕೆಲವು ಬೆಳೆಯುತ್ತವೆ, ಕೆಲವು ಬೆಳೆಯುವುದಿಲ್ಲ. ಆದ್ದರಿಂದಲೇ ಅತ್ಯಂತ ಪ್ರತಿಭಾವಂತನಾದ ಸಾಹಿತಿ ಎಲ್ಲ ಬಗೆಯ ಪಾತ್ರಗಳನ್ನೂ ಭಾವನೆಗಳನ್ನೂ ತನ್ನದಾಗಿ ಮಾಡಿಕೊಂಡು ಅನುಭವಿಸಬಲ್ಲ, ಅಭಿವ್ಯಕ್ತಗೊಳಿಸಬಲ್ಲ.

ನಮ್ಮ ದೇಶದ ಈಗಿನ ಎಲ್ಲ ಸಂಕಷ್ಟಗಳಿಗೂ ಮೂಲ ಕಾರಣ ಈಗ್ಗೆ ಸುಮಾರು ಒಂದು ಸಾವಿರ ವರುಷಗಳಷ್ಟು ಹಿಂದೆ ನಮ್ಮ ಸಮಾಜ ಜೀವನ ಜಡವಾಗಿ ಹೋಯಿತು ಎಂಬುದು. ಆಗ ಬೇರೆ ಬೇರೆ ಉದ್ಯೋಗಗಳನ್ನು ಅವಲಂಬಿಸಿದ್ದ ಜನ ಅಲ್ಲಲ್ಲೇ ಗಡ್ಡೆಕಟ್ಟಿ ಬೇರೆ ಬೇರೆ ಜಾತಿಯಾಗಿ ಸ್ಥಾಪಿತರಾಗಿ ಒಂದು ಜಾತಿ ಇನ್ನೊಂದಕ್ಕೆ ಸಮಾಂತರದಲ್ಲಿ ತಿರುಗುವುದು ಆರಂಭವಾಯಿತು. ಕ್ರಮೇಣ ಉಚ್ಚತೆ ನೀಚತೆ ಇವು ಜನ್ಮಸಿದ್ಧವೆಂಬ ತಪ್ಪು ಭಾವನೆ ವಿಷದ ಹಾಗೆ ನಮ್ಮ ಸಮಾಜದ ಮೂಲಸೂತ್ರಕ್ಕೆ ಸೇರಿಕೊಂಡಿತು. ಆ ಕಾಲಕ್ಕೆ ನಮ್ಮಲ್ಲಿ ನಿಜವಾದ ಸೃಜನಕ್ರಿಯೆ ನಿಂತುಹೋಯಿತು. ಅಲ್ಲಿಂದ ಈ ಆಧುನಿಕ ಕಾಲದವರೆಗೂ ನಿಜವಾಗಿ ಕ್ರಾಂತಿಕಾರಕ ಎನ್ನಿಸುವಂಥ ದೇಶವ್ಯಾಪಿಯಾದ ಯಾವುದೇ ಪರಿವರ್ತನೆಯೂ ಆಗದೆ ಹೋಯಿತು. ಇಂಗ್ಲಿಷ್ ವಿದ್ಯಾಭ್ಯಾಸದಿಂದ ನಾವು ಹೊಸ ಹೊಸ ವಿಚಾರಗಳನ್ನು ಕಲಿತೆವಾದರೂ ಆಘಾತದಲ್ಲಿ ಬದಲಾವಣೆ ತುಂಬ ನಿಧಾನವಾಯಿತು ಮಾತ್ರವಲ್ಲ ಈ ಹೊಸ ವಿಚಾರಗಳು ಸಮಾಜದ ಕೆಳಸ್ತರಗಳನ್ನು ಮುಟ್ಟಲೂ ಇಲ್ಲ. ಗಾಂಧೀಜಿಯ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಬದಲಾವಣೆಗೆ ಆರಂಭವಾಯಿತು. ಸಂಪ್ರದಾಯಬದ್ಧವಾದ ಸಮಾಜ ಜೀವನದಲ್ಲಿ ಚೈತನ್ಯದ ಸ್ಪಂದನದ ಆಗತೊಡಗಿತು. ಆ ಸ್ಪಂದನವನ್ನೇ ನಾವು ನಮ್ಮ ಹಿರಿಯ ಕವಿಗಳಾದ ಬೇಂದ್ರೆ, ಕುವೆಂಪು, ಮಾಸ್ತಿ ಮುಂತಾದವರ ಕಾವ್ಯಗಳಲ್ಲೂ ಕಾರಂತರ ಕಾದಂಬರಿಗಳಲ್ಲೂ ಕಾಣಬಹುದು. ಆದರೆ ಅನಕ್ಷರಸ್ಥರೂ ದರಿದ್ರರೂ ಆದ ಜನಕೋಟಿಗೆ ಇನ್ನೂ ಆ ಹೊಸ ಅರಿವು ಮುಟ್ಟಿಲ್ಲ. ಪ್ರಜಾಪಭುತ್ವವು ಇನ್ನೂ ಚೌಕಟ್ಟಾಗಿಯೇ ಉಳಿದಿರುವುದಕ್ಕೆ ಇದೇ ಕಾರಣ. ಇದಕ್ಕೆ ಕಾರಣ ಹುಡುಕುವಾಗ ನಮ್ಮ ಸಂಸ್ಕೃತಿಯ ಮೂಲಭೂತವಾದ ಕೆಲವು ದೋಷಗಳನ್ನು ಗುರುತಿಸದೇ ಇರುವುದು ಸಾಧ್ಯವಿಲ್ಲ. ದೋಷಗಳನ್ನು ಗುರುತಿಸುವಾಗಲೂ ಈಗ ಯಾವುದು ಅನಿಷ್ಟವೆಂದು ನಮಗೆ ಕಾಣುತ್ತಿದೆಯೋ ಅದೂ ಅಂದಿನ ರಾಜಕೀಯ ಆರ್ಥಿಕ ಗುಣವಾಗಿ ಅಂದಿನವರಿಗೆ ಕಂಡಿರಬಹುದು ಅಥವಾ ಅನಿವಾರ್ಯವಾದ ಒಂದು ಪೀಡೆ ಅಂತಲೂ ಅನ್ನಿಸಿರಬಹುದು. ಇಂದು ಸಂಪ್ರದಾಯವನ್ನು ಕುರಿತು ಮಾತನಾಡುವಾಗ ಈ ಮಾತನ್ನು ನೆನಪಿಟ್ಟುಕೊಳ್ಳುವುದು ಅಗತ್ಯ.

ಪ್ರಕೃತಿಯ ವಿನಾಶಕಾರಕ ಶಕ್ತಿಗಳಿಗೆ ಮೊದಲು ಬಗ್ಗಿ ನಮಸ್ಕರಿಸಲು ಕಲಿತ ಮನುಷ್ಯ ನಂತರ ಪಶುಬಲಕ್ಕೂ ನಂತರ ಪಶುಬಲವನ್ನು ಹಿಡಿತದಲ್ಲಿಟ್ಟುಕೊಳ್ಳುವ ಹಣಕ್ಕೂ ಹಣವಂತರನ್ನು ಅಡಿಯಾಳಾಗಿ ಮಾಡಿಕೊಳ್ಳ ಬಲ್ಲ ರಾಜಮಹಾರಾಜರುಗಳಿಗೂ ಮಣಿದು ತಗ್ಗಿ ಬಗ್ಗಿ ನಡೆಯುವುದನ್ನು ಕಲಿತ. ಹೀಗೆ ಕಲಿತ ಹಾಠ ಈ ಜಗತ್ತಿನ ಎಲ್ಲಾ ಕಡೆಗಳಲ್ಲೂ ಈ ಆಧುನಿಕ ಕಾಲದವರೆಗೂ ಚೆನ್ನಾಗಿ ಬೇರೂರಿಕೊಂಡು ಬಂದಿದೆ. ಸಮಾಜದಲ್ಲಿ ಅವ್ಯವಸ್ಥೆ, ಅರಾಜಕತೆ, ಅತ್ಯಂತ ಅಸಹನೀಯವಾಗದ್ದ ಕಾಲದಲ್ಲಿ ರಾಜನ ಆಧಿಪತ್ಯಕ್ಕೆ ಬಗ್ಗುವುದೂ ಅನಿವಾರ್ಯ ಎನಿಸಿದ್ದಿರಬಹು. ಸಾವಿರಾರು ಕಳ್ಳರಿಗೆ ಸಲಾಮು ಹೊಡೆದು ಬದುಕುವುದಕ್ಕಿಂತ ಒಬ್ಬ ಮಹಾರಾಜನಿಗೆ ಶರಣಾಗುವುದೇ ಮೇಲೆಂದೂ ಅನ್ನಿಸಿರಬಹುದು. ಹೀಗೆ ಅಧಿಕಾರಸ್ಥಾನಕ್ಕೆ, ಅದು ಪಶುಬಲದ್ದೇ ಆಗಲಿ, ಸರ್ಕಾರದ್ದೇ ಆಗಲಿ ಅಥವಾ ಧಾರ್ಮಿಕವೇ ಆಗಿರಲಿ ಅದಕ್ಕೆ ತಲೆ ಬಾಗಿ ಬದುಕುವುದು ಸಾಮಾನ್ಯ ಪ್ರಜಾಧರ್ಮವೇ ಆಯಿತು. ಆದರೆ ಈ ಅಧಿಕಾರಕ್ಕೆ ತಲೆಬಾಗುವುದರಲ್ಲೂ ನಮ್ಮ ದೇಶದ್ದೇ ಒಂದು ವಿಶೇಷವಿದೆ. ನಾವು ಯಾವುದನ್ನೇ ಆಗಲಿ ಬೇಗ ಕಲಿಯುವುದಿಲ್ಲ; ಒಂದು ಸಲ ಕಲಿತ ಮೇಲೆ ಮತ್ತೆ ಅದನ್ನು ಬಿಡುವವರೂ ಅಲ್ಲ. ಆದಕಾರಣ ನಮ್ಮ ಸಮಾಜ ವ್ಯವಸ್ಥೆಯ ಮೂಲದಲ್ಲೇ ಇಂದೂ ಕೂಡ ಸಲ್ಲುತ್ತಿರುವ ಈ ಮೂಲ ದೋಷವನ್ನು ತೊಡೆದು ಹಾಕದೆ ಇಲ್ಲಿ ಯಾವ ರೀತಿಯ ಬದಲಾವಣೆಯೂ ಆಗುವುದಿಲ್ಲ. ಇದು ಪ್ರತಿಯೊಬ್ಬನೂ ಸ್ವಾಭಿಮಾನಿಯಾಗಿ ಆತ್ಮಗೌರವವುಳ್ಳವನಾಗುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಸಿದ್ಧವಾಗದಿದ್ದರೆ ಇನ್ನೊಬ್ಬರನ್ನು ಹೀಗಿ ಬದುಕುವ ಒಂದು ಗುಂಪು ನಾಶವಾದರೆ ಅಂಥದೇ ಇನ್ನೊಂದು ಗುಂಪು ಆ ಸ್ಥಾನಕ್ಕೆ ಬರುತ್ತದಲ್ಲದೆ ಎಲ್ಲರಿಗೂ ನ್ಯಾಯ ದೊರೆಯುವ, ಬದುಕನ್ನು ಹಸನಾಗಿಸಿಕೊಂಡು ತನ್ನ ವ್ಯಕ್ತಿತ್ವವನ್ನು ವಿಕಾಸಗೊಳಿಸಿ ಬಾಳಿನ ಸಾಧ್ಯತೆಗಳನ್ನು ಸಂಶೋಧಿಸುವ ಅನಕ್ಷರಸ್ಥರೂ ಎಲ್ಲರಿಗೂ ಸಿಕ್ಕುವ ರೀತಿಯಲ್ಲಿ ಬದಲಾವಣೆ ಆಗುವುದಿಲ್ಲ. ಎಂದರೆ ಯಾವುದಕ್ಕಾದರೂ ಮನುಷ್ಯ ಬಗ್ಗಬೇಕಾಗುತ್ತದೆ ಎನ್ನುವುದನ್ನೂ ಮರೆಯುವ ಹಾಗಿಲ್ಲ. ಆದರೆ ಮನುಷ್ಯನಾದವನು ಬಗ್ಗಬೇಕಾದ್ದು ಪಶುಬಲಕ್ಕಲ್ಲ, ಅಧಿಕಾರಕ್ಕಲ್ಲ, ಧನಕ್ಕಲ್ಲ; ನ್ಯಾಯಕ್ಕೆ, ನೀತಿಗೆ, ವಿವೇಕಕ್ಕೆ, ಸರ್ವಸಮ್ಮತವಾದ ನಿಯಮಗಳಿಗೆ ಕಾನೂನುಗಳಿಗೆ , ಸಾರ್ವಕಾಲಿಕ ಮೌಲ್ಯಗಳಾದ ಸತ್ಯಕ್ಕೆ, ದಯೆಗೆ, ಪರೋಪಕಾರ ಬುದ್ಧಿಗೆ, ಸಹಿಷ್ಣುತೆಗೆ. ಈ ಹೊಸ ಪಾಠವನ್ನು ಕಲಿಯದಿದ್ದರೆ ಇಲ್ಲಿ ಯಾವ ಕ್ರಾಂತಿಯೂ ಯಾವ ನಿಜವಾದ ಆಧುನಿಕ ಕಾಲ ಬಯಸುವ ಬದಲಾವಣೆಯನ್ನೂ ತರಲಾರದು. ಆಗಬೇಕಾದ ನಿಜವಾದ ಕ್ರಾಂತಿ ಪ್ರತಿಯೊಬ್ಬ ಪ್ರಜೆಯೂ ಒಬ್ಬ ಪ್ರಜ್ನಾವಂತ ವ್ಯಕ್ತಿಯಾಗುವ ಕಡೆಗೆ.

ಎರಡೆಯನೆದಾಗಿ ಇರುವ ಇನ್ನೊಂದು ಮುಖ್ಯ ದೋಷ ನಮ್ಮ ಶಿಕ್ಷಣ ಪದ್ಧತಿಯ ಜೊತೆಗೇ ಅನೇಕ ಶತಮಾನಗಳಿಂದ ಬೆಳೆದು ಬೇರುಬಿಟ್ಟುಕೊಂಡಿರುವ ಗಿಳಿ ಪಾಠದ, ಉರುಹೊಡೆಯುವ, ಇನ್ನೊಬ್ಬರು ಹೇಳಿದ್ದನ್ನು ಬರೆದುಕೊಂಡು ಬಾಯಿಪಾಠಮಾಡಿ ಪಂಡಿತನೆನಿಸಿಕೊಳ್ಳುವ ಪದ್ಧತಿ. ಇದರಿಂದ ನಮ್ಮ ಹಿರಿಯರು ನಮ್ಮ ಅಮೂಲ್ಯ ಪುರಾತನ ಗ್ರಂಥಗಳನ್ನು ಮುದ್ರಣವಿಲ್ಲದೇ ಇದ್ದ ಕಾಲದಲ್ಲಿ ಚಾಚೂ ತಪ್ಪದೆ ನೆನಪಿಟ್ಟಿಕೊಂಡು ಬಂದು ಅವುಗಳನ್ನು ಉಳಿಸಿಕೊಟ್ಟಿದ್ದಕ್ಕೆ ನಾವು ಕೃತಜ್ಞರಾಗಿರಬೇಕು ನಿಜ. ಅವರಿಗೆ ಹೀಗೆ ಮಾಡದೆ ಬೇರೆ ದಾರಿಯೂ ಇರಲಿಲ್ಲ. ಆದರೆ ಇಂತಹ ಪದ್ಧತಿಯಲ್ಲೂ ಕೆಲವರು ಹುಟ್ಟಿ ಬಂದದ್ದೂ ಉತ್ತಮ ಕೃತಿಗಳನ್ನು ರಚಿಸಿದ್ದೂ ಮರೆಯುವ ಮಾತಲ್ಲ. ಆದರೆ ಒಟ್ಟಿನಲ್ಲಿ ಯಾವುದು ವಿದ್ಯಾವಂತ ವರ್ಗ ಎನ್ನಿಸಿಕೊಂಡಿತ್ತೋ ಅದು ಸ್ಮೃತಿಶೂರರ ವರ್ಗವಾಯಿತಲ್ಲದೆ ಸ್ವತಂತ್ರ ವಿಚಾರವುಳ್ಳವರ ವರ್ಗವಾಗಲಿಲ್ಲ. ಆ ಪದ್ಧತಿಯಲ್ಲಿ ತಯಾರಾದ ಪಂಡಿತರು ರಂಜಕವಾದ ಮಾತುಗಳಲ್ಲಿ ಪುರಾತನ ಗ್ರಂಥಗಳನ್ನು ವಿವರಿಸಿ ಹೇಳುವುದೇ ಮುಖ್ಯ ಲಕ್ಷಣವಾದ ಭಾಷ್ಯ ಭಾಷಣಗಳ ಶುಷ್ಕ ಪಾಂಡಿತ್ಯವುಳ್ಳವರಾದರು. ಆಧುನಿಕ ಕಾಲ ಬಂದು ಪ್ರತಿಯೊಬ್ಬ ಮನುಷ್ಯನೂ ಸ್ವಂತ ಯೋಚನೆ ಮಾಡಬಲ್ಲ ಈ ಕಾಲದಲ್ಲೂ ಇದೇ ರೀತಿಯ ಶಿಕ್ಷಣ ಪದ್ಧತಿ ಮುಂದುವರೆಯುತ್ತಾ ಬಂದಿರುವುದು ನಮ್ಮ ಸಮಾಜದ ಮುನ್ನಡೆಗೆ ಭಾರಿ ತೊಂದರೆಯನ್ನು ತಂದೊಡ್ಡಿದೆ. ಸ್ವತಂತ್ರವಾಗಿ ಜವಾಬುದಾರಿಯಿಂದ ಕೆಲಸ ಮಾಡಬಲ್ಲ, ನಮಗೆ ಈಗ ದೊರೆತಿರುವ ಪ್ರಜಾಧಿಕಾರಕ್ಕೆ ತಕ್ಕ ಹಾಗೆ ಗಂಭೀರರೂ ವಿವೇಕಿಗಳೂ ಆದ ಪ್ರಜೆಗಳ ಬದಲು ಈಗ ತಯ್ಯಾರಾಗುತಿರುವ ನಮ್ಮ ವಿದ್ಯಾವಂತ ಜನಾಂಗ ಮೂರ್ಖವಾದ ಪ್ರವೀಣರೂ, ಭಾಷಣ ಭೀಷಣರೂ ಎಲ್ಲಾ ಬಗೆಯ ವಯ್ಯಕ್ತಿಕ ಸಾಮಾಜಿಕ ನೀತಿಗಳಿಂದ ಮುಕ್ತರಾಗಿ ಜೀವನದಲ್ಲಾಗಲೀ, ಸಾಹಿತ್ಯದಲ್ಲಾಗಲೀ ಶ್ರೇಷ್ಠವಾದುದನ್ನು ಬಯಸದ ಮಾತಿನಲ್ಲಿ ಮಹಾಕ್ರಾಂತಿಗಳನ್ನು ನಿತ್ಯವೂ ನಡೆಸುವ ದೀನದಲಿತರ ಪರಮಾಪ್ತರೆಂದು ನಟಿಸುತ್ತ ಜಾತಿಭಾವನೆಯನ್ನು ಉದ್ರೇಕಗೊಳಿಸುತ್ತ, ಇಲ್ಲದ ಯೋಗ್ಯತೆ ಆ ಮೂಲಕ ದೊರೆಯುತ್ತದೆಂದು ಭ್ರಮಿಸುತ್ತಾ, ಇಂದ್ರಿಯ ಚಾಪಲ್ಯಗಳಿಗೆ ದಾಸರಾಗಿ ನೀತಿ ಪ್ರಜ್ಞೆಯಿಂದ ಮುಕ್ತವಾಗಿರುವ ದೊಣ್ಣೆ ಕಂಡರೆ ಜಾರುವ, ಸಜ್ಜನರನ್ನು ಹೀಯಾಳಿಸುವ, ಹಿಂಸಿಸುವ, ದುರ್ಜನರಿಗೆ ಗೌರವ ತೋರಿಸುವ ಗಿಳಿಗಳಾಗಿ ತಯ್ಯಾರಾಗುತ್ತಿದ್ದಾರೆ. ನಮ್ಮ ಹಿಂದಿನವರು ಕೊನೆಯ ಪಕ್ಷ ಒಳ್ಳೆಯ ಗ್ರಂಥಗಳನ್ನಾದರೂ ಉರು ಹೊಡೆದು ನೆನಪಿಟ್ಟುಕೊಳ್ಳುತ್ತಿದ್ದರೆ ಈ ನೂತನ ವಿದ್ಯಾವಿಭೂಷಿತರು ಗೈಡುಗಳೆಂಬ ಆಧುನಿಕ ವೇದಪಾಠ ಮಾಡಿ ದಿಢೀರ್ ವಿದ್ಯೆಯಿಂದ ಪಾಸು ಮಾಡಿ ಯೋಗ್ಯತೆಗೆ ಸಂಬಂಧವಿಲ್ಲದ ಕಾರಣಗಳಿಂದ ದೊಡ್ಡ ದೊಡ್ಡ ಪದವಿಗಳನ್ನು ಅಲಂಕರಿಸಿ ಈ ಬಗೆಯ ಶಿಕ್ಷಣ ಪದ್ಧತಿಯೇ ಮುಂದುವರೆಯಲು ಕಾರಣರಾಗಿದ್ದಾರೆ. ಪ್ರಾಥಮಿಕ ದರ್ಜೆಗಳಿಂದ ಎಂ.ಎ ಕ್ಲಾಸಿನವರೆಗೂ ಎಲ್ಲೂ ವಿದ್ಯಾರ್ಥಿ ತನ್ನ ಸ್ವಂತ ಯೋಚನೆಯಿಂದ ಕೆಲಸ ಮಾಡಿ ತನ್ನ ವಿವೇಕವನ್ನು ಬೆಳೆಸಿಕೊಳ್ಳುವುದಕ್ಕೆ ಅವಕಾಶವೇ ಇಲ್ಲ. ಅತ್ಯಂತ ಬುದ್ಧಿವಂತರಾದವರು ಈ ಕೆಟ್ಟ ಪದ್ಧತಿಯಲ್ಲೂ ಬದುಕಿ ಉಳಿದರೂ ಸರಿಯಾದ ರೀತಿಯಲ್ಲಿ ಯೋಚನೆ ಮಾಡುವುದನ್ನು ಅವರು ಸ್ವತಃ ತಾವೇ ಕಲಿತುಕೊಳ್ಳುತ್ತಾರೆ. ಉಳಿದ ಬಹುಜನ ವಿದ್ಯಾರ್ಥಿಗಳು ಗಿಣಿರಾಮರುಗಳಾಗಿ ಆರಾಮು ಹುಡುಕುತ್ತಾ ಅಡ್ಡಾಡುತ್ತಾರೆ. ಸಾಮಾಜಿಕವಾಗಿ ತಾನು ಕೈಕೊಂಡು ಸಂಬಳ ಪಡೆಯುವ ಕೆಲಸವನ್ನು ನಿಷ್ಠೆಯಿಂದ ನಡಸುವುದು ತನ್ನ ಕರ್ತವ್ಯ ಎಂಬ ಸಮಾಜನೀತಿಯ ಮೂಲ ಪಾಠವೂ ಇವರಿಗೆ ತಿಳಿಯದು. ರಾಜಕೀಯದ ಮೂಲಕ ಹೇಗೆ ಕೆಲವರು ಯೋಗ್ಯತಾಹೀನರೂ, ಕ್ಷಿಪ್ರಕ್ರಾಂತಿಯ ಮೂಲಕ ಭಾರೀ ಧನಿಕರೂ, ಆಢ್ಯರೂ ಆಗುತ್ತಾರೋ ಅದೇ ರೀತಿ ಉಳಿದ ಕ್ಷೇತ್ರದಲ್ಲೂ ಸಾಹಿತ್ಯದಲ್ಲೂ ಆಗಬೇಕೆಂದು ಚಡಪಡಿಸುತ್ತಾರೆ. ಬದುಕಿನಲ್ಲಿ ಎಂದೆಂದೂ ತಾವು ಆಚರಿಸದೇ ಇರುವಂಥ ಭಾರೀ ಭಾರೀ ಭಾಷಣಗಳನ್ನು ಬಿಗಿದು ಕನ್ನಡ ತಾಯ ಸೇವೆ ಸಲ್ಲಿಸಲು ಮುಂದಾಗುತ್ತಾರೆ. ಅವರಲ್ಲಿ ಚಾಣಾಕ್ಷರಾದವರು ಹೊಂಚುಹಾಕುತ್ತಿದ್ದು ಸಮಯ ನೋಡಿ ಗೆಲ್ಲುವ ಪಕ್ಷವನ್ನೇ ಸೇರಿ ರಾಜಕೀಯ ಧುರೀಣರೂ ಆಗಿ ಮಂತ್ರಿ ಮಹಾಶಯರೂ ಆಗಿ ಹಾಗೆ ತಮ್ಮ ಜೀವನ ಸಾಫಲ್ಯವನ್ನು ಕಂಡು ಮಾನವ ಜೀವನದ ಪರಮೋಚ್ಛ ಮೌಲ್ಯವನ್ನು ಅಂದರೆ ಅಧಿಕಾರ ಸ್ಥಾನ ಲಾಭವನ್ನು ಪಡೆದು ಕೃತಾರ್ಥರಾಗುತ್ತಾರೆ. ಅನೇಕ ಜನ ಈ ಬಗೆಯ ಪರಮ ಪುರುಷಾರ್ಥ ಸಾಧಿಸಿಕೊಳ್ಳಲು ಸಾಧ್ಯವಿಲ್ಲವಾಗಿ ಪರಿತಪಿಸುತ್ತಾ ಆದರೆ ಅದೇ ರೀತಿಯ ಮನಸ್ಸನ್ನು ಹೊಂದಿ ಆದಷ್ಟೂ ಕಡಿಮೆ ಕೆಲಸ ಮಾಡಿ ಆದಷ್ಟೂ ಹೆಚ್ಚು ಲಾಭ ಪಡೆಯುವುದೆಂಬುದೇ ಒಟ್ಟಿನಲ್ಲಿ ಈ ಬಗೆಯ ವಿದ್ಯಾಭ್ಯಾಸದಿಂದ ಇಂದು ನಮಗೆ ಲಭಿಸುತ್ತಿರುವ ಜೀವನ ಸೂತ್ರ. ಇದೂ ಕೂಡ ಉಚ್ಛ ಕುಲದವರ ಶ್ರೀಮಂತ ವರ್ಗದವರ ಸಂಪ್ರದಾಯ ಸಿದ್ಧವಾಗಿ ಬಂದ ಕೊಡುಗೆ. ಇಂಥಾ ಕೊಡುಗೆಯನ್ನು ನಮ್ಮ ಅತ್ಯಂತ ಕ್ರಾಂತಿಕಾರಿ ಯುವಜನವೂ ಸಂತೋಷದಿಂದ ಸ್ವೀಕರಿಸುತ್ತಿರುವುದು ಆಶ್ಚರ್ಯದ ಮಾತು. ಕೆಲಸ ಮಾಡುವುದು ಕೀಳು, ಕೆಲಸ ಮಾಡದೆ ಮಝಾ ಉಡಯಿಸುವುದೇ ಸುಖದ ಸುಸಂಸ್ಕೃತಿಯ ಕುರುಹು ಎಂಬ ಆತ್ಮಘಾತಕವಾದ ಭಾವನೆ. ಇಂಗ್ಲೆಂಡಿನಲ್ಲಿ ಕೂಡಾ ಒಂದು ಕಾಲದಲ್ಲಿ ಇಂತಹ ಅಸಡ್ಡಾಳ ಸೋಮಾರಿ ಭೂಮಾಲಿಕರ ಶ್ರೀಮಂತರ ಮಕ್ಕಳನ್ನು ‘ಜೆಂಟಲ್ ಮೆನ್’ ಎಂದು ಕರೆಯುತ್ತಿದ್ದರು – ಅದು ಹಿಂದೆ; ಈಗ ನಮ್ಮಲ್ಲೂ ಅಂಥವರು ಕಾಣಿಸಿಕೊಳ್ಳುವುದಕ್ಕೆ ಕೆಲಸದ ಬಗ್ಗೆ ಇರುವ ಈ ಧೋರಣೆಯೇ ಕಾರಣ. ಎಲ್ಲರಿಗೂ ಎಲ್ಲಾ ಬೇಕು ಆದರೆ ಕೆಲಸ ಮಾತ್ರ ಬೇಡ, ಅದನ್ನು ಬೇರೆಯವರು ಮಾಡಬೇಕು ಎನ್ನುವ ಈ ಭಾವನೆ ನಮ್ಮ ಅಭಿವೃದ್ಧಿಗೆ ಮಾರಕವಾಗಿರುವ ಭಾವನೆ. ಇದರಿಂದ ಎಲ್ಲಾ ಕ್ಷೇತ್ರಗಳಲ್ಲೂ ಶಿಕ್ಷಣ, ಆಡಳಿತ, ಕೈಗಾರಿಕೆ ವರ್ಷ ವರ್ಷಕ್ಕೆ ವಿಸ್ತಾರಗೊಳ್ಳುತ್ತಿರುವ ನಮ್ಮ ಸರ್ಕಾರೀ ಇಲಾಖೆ ಈ ಎಲ್ಲದರಲ್ಲೂ ಕೆಲಸ ಅಸ್ತವ್ಯಸ್ತವಾಗಿ ಒಂದಕ್ಕೆ ಒಂದೂವರೆಯ ಸಂಬಳ ತೆಗೆದುಕೊಂಡು ತಾನು ಮಾಡಲೇಬೇಕಾದ ಕೆಲಸಕ್ಕೂ ಲಂಚ ಕೊಡಬೇಕಾಗಿರುವ ದುಃಸ್ಥಿತಿ ಪ್ರಾಪ್ತವಾಗಿ ಯಾವೊಂದು ಕೆಲಸವೂ ಸರಿಯಾಗಿ ನಡೆಯುವುದಿಲ್ಲ. ನಾವು ಮಾಡುವ ಪ್ರತಿಯೊಂದು ಉದ್ಯೋಗವೂ ಸಮಾಜಕ್ಕೆ ಸಲ್ಲಿಸುವ ಸೇವೆ ಅದನ್ನು ಸಂತೋಷದಿಂದ ಮನಸ್ಸಿಟ್ಟು ಮಾಡುತ್ತೇವೆಂಬ ದೃಢನಿರ್ಧಾರ ಈ ಕರ್ಮಯೋಗ ಕಾಯಕವೇ ಕೈಲಾಸ ಎಂದುಕೊಳ್ಳಬೇಕಾದ ದೃಷ್ಟಿ ಎಲ್ಲಿಯೂ ಕಾಣಸಿಗದು. ಎಲ್ಲ ಅಪೂರ್ವ ಸಂಪತ್ತಿಗೂ ಮೂಲವಾದ, ಎಲ್ಲ ಸಿದ್ಧಿಸಾಧನೆಗೂ ಮೂಲವಾದ ಅತ್ಯುತ್ತಮವೂ ನಿರಂತರವೂ ಆದ ಕೆಲಸದ ಅಭಾವದಿಂದ ದೇಶ ತನ್ನ ಸಂಸ್ಕೃತಿಯ ಸತ್ವವನ್ನು ಕಳೆದುಕೊಳ್ಳುತ್ತಿದೆ – ಈ ಬಗೆಯ ಕೆಲಸಗಳ ಧೋರಣೆ ಸಾಹಿತ್ಯ ಮುಂತಾದ ಮನಸ್ಸಿನ ಕ್ರಿಯೆಗಳಲ್ಲೂ ಕಾಣಿಸಿಕೊಂಡು ನಮ್ಮ ಸೃಜನಾತ್ಮಕ ಚೇಷ್ಟೆಗಳು ನಿಸ್ಸತ್ವವಾಗಿ ಕೇವಲ ಅನುಕರಣೆಗಳಾಗಿ, ಗಿಣಿಪಾಠದ ಅವತಾರಗಳಾಗಿ ಸಮಾಜಕ್ಕೆ ಹೊಸ ಜೀವನ ಹೊಸ ಚೈತನ್ಯವನ್ನು ಕಳೆದುಕೊಂಡು ಕ್ಷಿಪ್ರ ಪ್ರಶಸ್ತಿಗೆ ತಕ್ಕ ಮಂತ್ರವೋ ಕ್ಷಿಪ್ರ ಲಾಭಕ್ಕೆ ತಕ್ಕ ತಂತ್ರವೋ ಆಗಿ ಮಾರ್ಪಟ್ಟಿವೆ.

ಈಗಿನ ಕಾಲಕ್ಕೆ ಸಲ್ಲದ ಈ ಬಗೆಯ ಧೋರಣೆಯಿಂದ ಏನು ತಿಳಿಯಬಹುದೆಂದರೆ, ನಮ್ಮಲ್ಲಿ ಸಂಪ್ರದಾಯನ್ನು ದಿನಬೆಳಗಾದರೆ ಅಲ್ಲಗಳೆದು ಧಿಕ್ಕರಿಸುವಂಥವರೂ ಕೂಡ ಅವರಿಗೇ ಗೊತ್ತಿಲ್ಲದೆ ಅನುಸರಿಸುತ್ತಿರುವುದು ಜಡವಾದ, ಜೀವ ತೆಗೆದುಕೊಳ್ಳುವ, ಸತ್ವವನ್ನು ಹೀರಿ ಮನುಷ್ಯನನ್ನು ಮಾರಕ ಯಂತ್ರವನ್ನಾಗಿ ಮಾಡುವ, ಒಂದು ಕಾಲಕ್ಕೆ ಅಷ್ಟೇನೂ ಅಪಾಯಕಾರಿಯಾಗಿಲ್ಲದೆ ಇದ್ದಿರಬಹುದಾದ ಆದರೆ ಈಗ ಆತ್ಮಘಾತಕವೇ ಆಗಿರುವ ಪಶು ಬಲಕ್ಕೆ ತಲೆಬಾಗುವ ಪ್ರವೃತ್ತಿ, ಗಿಳಿ ಪಾಠದಿಂದ ಪಾಸುಮಾಡುವ ದಾಸ್ಯಬುದ್ಧಿ. ಕೈ ಕೆಸರಾಗದೆ ಬಾಯಿ ಮೊಸರಾಗಲೇ ಬೇಕೆಂಬ ಶಪಥ; ಕೆಲಸ ಮಾಡದೆ ಅದರ ಪ್ರತಿಫಲವೆಲ್ಲವನ್ನೂ ಬಯಸುವ ದೈವಭಕ್ತಿ- ಇವು ನಮ್ಮನ್ನು ವಿನಾಶ ಪಥದಲ್ಲಿ ಬಹಳ ರಭಸದಲ್ಲಿ ಕೊಂಡೊಯ್ಯುತ್ತಿದೆ. ಸಂಪ್ರದಾಯ ದೊಡ್ಡ ಕಂಟಕವಾಗುವುದು ಹೀಗೆ. ಅಧಿಕಾರ ಎಲ್ಲರಲ್ಲೂ ಹಂಚಿ ಹೋಗಬೇಕಾಗಿರುವ ಈ ಕಾಲದಲ್ಲಿ ಅಧಿಕಾರಸ್ಥರಿಗೆ ತಲೆಬಾಗುವ ದಾಸ್ಯ ಪ್ರವೃತ್ತಿ; ಸಂಪತ್ತು ಎಲ್ಲರಿಗೂ ನ್ಯಾಯವಾಗಿ ವಿತರಣೆ ಆಗಬೇಕಾಗಿರುವ ಈ ಕಾಲದಲ್ಲಿ ಅದಕ್ಕೆ ಮೂಲವಾದ ಕೆಲಸದಲ್ಲಿ ಸಾರ್ವತ್ರಿಕವಾದ ಅಶ್ರದ್ಧೆ; ಸ್ವತಂತ್ರ ಮನುಷ್ಯರು ಧೀರರಾಗಿ ಗಂಭೀರವಾಗಿ ಆತ್ಮಗೌರವದಿಂದ ತಲೆ ಎತ್ತಿ ನಡೆಯುವುದನ್ನು ಕಲಿತು ನಮ್ಮ ಸುತ್ತಮುತ್ತಲಿನವರೂ ಹಾಗೇ ಆಗಬೇಕೆಂದು ಬಯಸುವ ವಿನಯವನ್ನು ಬಿಡದೆ ಇರಬೇಕಾದ ಈ ಕಾಲದಲ್ಲಿ ಶಿಕ್ಷಣದಿಂದ ಹಿಡಿದು ಸಾಹಿತ್ಯದವರೆಗೂ ಪರಾವಲಂಬನೆ, ಸ್ವೇಚ್ಚಾಚಾರ, ಬೇಜವಾಬ್ದಾರಿ ನಡವಳಿಕೆ, ಅನ್ಯರನ್ನು ಹಳಿದು ತನ್ನ ಹೆಗ್ಗಳಿಕೆ ಕೊಚ್ಚಿಕೊಳ್ಳುವ ಆತ್ಮರತಿ – ಈ ಗುಣಗಳೆಲ್ಲವೂ ಸಂಪ್ರದಾಯವನ್ನು ಮಾತಿನಲ್ಲಿ ಧಿಕ್ಕರಿಸಿ ಅತ್ಯಂತ ರ‍್ಯಾಡಿಕಲ್ಲುಗಳಂತೆ ತೋರಿಸಿಕೊಳ್ಳುವುದಕ್ಕಾಗಿ ಮಾತಿನಲ್ಲಿ ಕ್ರಾಂತಿಕಾರಿ ಎಂಬ ಸಾರ್ವಜನಿಕ ಪ್ರತಿಮೆಯನ್ನು ಕೆತ್ತಿಕೊಳ್ಳುವವರಲ್ಲೆ ಹೆಚ್ಚು ಹೆಚ್ಚಾಗಿ ಕಂಗೊಳಿಸುತ್ತವೆ. ಸಂಪ್ರದಾಯ ವಿರೋಧಿಗಳೇ ನಮ್ಮ ಸಂಪ್ರದಾಯದ ದೊಡ್ಡ ದೋಷಗಳ ಪೋಷಕರಾಗಿ ಸಂಪ್ರದಾಯ ನಿಷ್ಠರಾಗಿರುವ ಈ ಸೋಜಿಗ ನಮ್ಮ ದೇಶಕ್ಕೆ ವಿಶಿಷ್ಟವಾದ ಶೋಭೆ.

ಯಾವ ಮನುಷ್ಯನೇ ಆಗಲಿ, ಮಾನವ ನಿರ್ಮಿತವಾದ ಯಾವ ವ್ಯವಸ್ಥೆಯಾಗಲಿ ಎಂದೂ ಪರಿಪೂರ್ಣವಾಗಿರುವುದಿಲ್ಲ. ಪರಿಪೂರ್ಣತೆಯಕಡೆಗೆ ಹೋರಾಡುತ್ತಿರುವವನೆ ನಿಜವಾದ ಮನುಷ್ಯ. ಪರಿಪೂರ್ಣತೆಯ ಕಡೆಗೆ ಪರಿವರ್ತನೆಗೊಳ್ಳುತ್ತಿರುವಂಥದೇ ಒಂದು ಸತ್ವಪೂರ್ಣ ಚೈತನ್ಯಭರಿತ ಜನಾಂಗ. ಅಂಥ ಚೈತನ್ಯ ವ್ಯಕ್ತವಾಗುವುದು ಮಾತಿನಲ್ಲಲ್ಲ, ಕೇವಲ ಸಾಹಿತ್ಯದಲ್ಲೂ ಅಲ್ಲ, ಸಾರ್ಥಕವಾದ ವಿವೇಕಪೂರ್ಣವಾದ ಕೃತಿಯ ಮೂಲಕ ಎಂದು ಮರೆಯಲಾಗದು. ಮೊದಲು ಮನಸ್ಸಿನಲ್ಲಿ ಕೇವಲ ಕಲ್ಪನೆಯಾಗಿದ್ದದ್ದು ಮಾತಿನಲ್ಲಿ ಕೃತಿಯಾಗದ ಸಾಹಿತ್ಯವಾಗುತ್ತದೆ; ಸಾಹಿತ್ಯ ರಚಿಸಿದ ಸರ್ವಾಂಗಸುಂದರವಾದ ಶಿಲ್ಪವನ್ನನುಸರಿಸಿ ಕೃತಿಗಿಳಿಯುವಂಥದೇ ಸಾರ್ಥಕವಾದ ಯೋಚನೆ, ಯೋಜನೆ. ಈ ಮಾತನ್ನು ಮರೆಯದೇ ಇದ್ದರೆ ನಮಗೆ ಅರ್ಥವಾಗುತ್ತದೆ: ಮನುಷ್ಯನು ನಿರ್ಮಿಸಿಕೊಳ್ಳುವ ಎಲ್ಲಾ ವ್ಯವಸ್ಥೆಯೂ ಅತ್ಯುತ್ತಮವೂ ಆದರ್ಶವೂ ಆದ ಕೃತಿಗಳ ಸರಾಸರಿಯಿಂದ ಹುಟ್ಟುವ ಅಪರಿಪೂರ್ಣ ಸಂಸ್ಥೆಗಳು, ತಾತ್ಕಾಲಿಕವಾದ ಸಂದರ್ಭಗಳಿಗೆ ಮಾತ್ರ ಸಲ್ಲುವಂಥವು. ಒಂದು ರೀತಿಯಲ್ಲಿ ಅವು ಕೃತಕವಾಗಿದ್ದು ಸಾರ್ವತ್ರಿಕ ಪ್ರಾಮಾಣ್ಯಗಳುಳ್ಳವುಗಳು ಆಗುವುದಿಲ್ಲ. ಈಗ ಈ ಯುಗದಲ್ಲಿ ನಾವು ಮಾಡಿಕೊಳ್ಳಬಹುದಾದ ಸಾಮಾಜಿಕ ರಾಜಕೀಯ ವ್ಯವಸ್ಥೆಗಳು ಕೂಡಾ ಹಿಂದೆ ಇದ್ದ ವ್ಯವಸ್ಥೆಗಳಷ್ಟೇ ತಾತ್ಕಾಲಿಕ, ಕೃತಕ, ಅಸಮರ್ಪಕ, ಅಪರಿಪೂರ್ಣ. ಅವುಗಳನ್ನು ನಮ್ಮ ಮುಂದಿನ ಜನಾಂಗಗಳು ಟೀಕಿಸುತ್ತವೆ ಎಂದು ತಿಳಿಯಬೇಕು. ಅದೇ ರೀತಿ ಸಂಪ್ರದಾಯವನ್ನು ಅಲ್ಲಗಳೆಯುತ್ತಾ ಹೋಗುವುದಾಗಲಿ ಈಗ ಸತ್ತು ನಾಮಾವಶೇಷವಾಗಿರುವ ಹಿಂದಿನ ಸಾಹಿತಿಗಳನ್ನಾಗಲೀ ದಾರ್ಶನಿಕರನ್ನಾಗಲೀ ಶಾಸ್ತ್ರಜ್ಞರನ್ನಾಗಲೀ ಧರ್ಮ ಗುರುಗುರುಗಳನ್ನಾಗಿ ಧಿಃಕ್ಕರಿಸುವ ಬುದ್ದಿ ಬಾಲಿಶವಾದದ್ದು, ಪ್ರೌಢವಾದದ್ದಲ್ಲ ಎಂದು ನಾವು ತಿಳಿಯಬೇಕು. ಸಂಪ್ರದಾಯದ ಮೂಲ ಸೂತ್ರಗಳನ್ನು ಅರಿತು ಅದರಲ್ಲಿರುವ ಸಾರ್ವತ್ರಿಕವಾದ ಗುಣಗಳನ್ನು ಕೃತಜ್ಞತೆಯಿಂದ ಸ್ವೀಕರಿಸಿ, ನಾವೂ ಓದಿ ಸಂತೋಷ ಪಡಲು ಸ್ಫೂರ್ತಿ ಪಡೆಯಲು ಸಾಧ್ಯ. ಆದ ಕಾರಣ ಇದು ಬ್ರಾಹ್ಮಣ ಸಾಹಿತ್ಯ, ಇದು ಜೈನ ಸಾಹಿತ್ಯ, ಇದು ವೀರಶೈವ ಸಾಹಿತ್ಯ, ಇದು ಒಕ್ಕಲಿಗರ ಸಾಹಿತ್ಯ, ಇದು ಕುಂಬಾರರ ಸಾಹಿತ್ಯ, ಇದು ಅಗಸರ ಸಾಹಿತ್ಯ, ಇದು ದಲಿತ ಸಾಹಿತ್ಯ ಎಂದು ಹೇಳುವ ಮಾತು ಅರ್ಥಹೀನ ಮಾತ್ರವಲ್ಲ, ಒಂದಾಗಬೇಕಾದ ಸಮಾಜವನ್ನು ಭಗ್ನಗೊಳಿಸುವ ಪ್ರಯತ್ನ ಎಂದೂ ಹೇಳಬೇಕು. ನಾನು ಸಾಹಿತ್ಯ ರಚನೆ ಮಾಡುವುದು ಕನ್ನಡಭಾಷೆಯಲ್ಲಿ. ಆದರೆ ನಾನು ಸಾಹಿತಿಯಾಗುತ್ತೇನಲ್ಲದೆ ಒಂದು ವಿಶಿಷ್ಟ ಜಾತಿಯ ಸಾಹಿತಿಯಾಗುವುದಿಲ್ಲ. ಈ ಮಾತು ಎಲ್ಲರಿಗೂ ಎಲ್ಲ ಕಾಲಕ್ಕೂ ಅನ್ವಯಿಸುವ ಮಾತು. ಮುಖ್ಯವಾಗಿ ಆಗಬೇಕಾದ್ದು ನಾವು ರಾಜಕೀಯ ಮುಖಂಡರಿಂದ ಕಲಿತುಕೊಂಡಿರಿವಂತೆ ಜನರನ್ನು ಜಾತಿವಾರು ವಿಂಗಡಿಸುವ ಕೆಲಸವಲ್ಲ. ಅನೇಕ ಜನ ಬರೆಯಲು ಮುಂದಾಗುತ್ತಾ ಮುದ್ರಣಾಲಯಗಳ ಸಹಾಯದಿಂದ ನಾನಾ ಗ್ರಂಥಗಳು ಪ್ರಕಟವಾಗುತ್ತಿರುವ ಈ ಕಾಲದಲ್ಲಿ ಯಾವುದು ಸಾಹಿತ್ಯ ಯಾವುದು ಸಾಹಿತ್ಯವಲ್ಲ, ಕೇವಲ ವರದಿ ಕೇವಲ ಕೃತಕ ಎಂಬುದಾಗಿ ವಿಂಗಡಿಸಲು ಮಾಡುವ ಪ್ರಯತ್ನವೇ ನಾವು ನಮ್ಮ ಭಾಷೆಗೂ ಜನಕ್ಕೂ ಸಲ್ಲಿಸಬೇಕಾದ ಸೇವೆ, ಉಳಿದದ್ದೆಲ್ಲಾ ದ್ರೋಹ. ಈ ಕೆಲಸ ಸಾಹಿತ್ಯ ಪರಿಷತ್ತಿನಿಂದ ನಿರಂತರವಾಗಿ ನಡೆಯುತ್ತಲೇ ಇರಬೇಕು. ಆ ರೀತಿಯಲ್ಲಿ ಈ ಸಂಸ್ಥೆ ಮಾರ್ಪಾಟಾಗಲು ತಕ್ಕ ಏರ್ಪಾಡು ಆಗಬೇಕೆಂದು ಸಾರ್ವಜನಿಕರಲ್ಲಿ ನನ್ನ ಕಳಕಳಿಯ ಪ್ರಾರ್ಥನೆ. ಇಲ್ಲಿ ನಾವು ಮರೆಯಬಾರದ ಮುಖ್ಯವಾದ ಮಾತೆಂದರೆ ನಮ್ಮಲ್ಲಿರುವ ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಬ್ರಾಹ್ಮಣನೂ ಹೌದು, ಶೂದ್ರನೂ ಹೌದು, ಚಾಂಡಾಳನೂ ಹೌದು. ಈ ಮೂರೂ ಪ್ರವೃತ್ತಿಗಳು ಸರ್ವಸಾಮಾನ್ಯ. ಇವುಗಳಲ್ಲಿ ಯಾವುದು ಪ್ರಾಧಾನ್ಯ ಪಡೆಯುತ್ತದೆ ಎನ್ನುವುದು ಅವನವನ ಮೂಲ ಗುಣ, ವಿದ್ಯೆ, ಸಂಸ್ಕಾರ, ಕೆಲಸಗಳಿಂದ ನಿರ್ಧಾರವಾಗುತ್ತವೆ. ಮನುಷ್ಯನ ಮನಸ್ಸಿನ ರಚನೆ ಇರುವುದೇ ಹಾಗೆ. ಈ ಗುಣಗಳಲ್ಲಿ ಸಾತ್ವಿಕ, ರಾಜಸಿಕ, ತಾಮಸಿಕ ಎನ್ನಬಹುದಾದ ಈ ಗುಣಗಳಲ್ಲಿ ಯಾವುದು ಸೂತ್ರವನ್ನು ಹಿಡಿದುಕೊಳ್ಳುತ್ತದೆ ಎನ್ನುವುದರ ಮೇಲೆಯೇ ಪ್ರತಿಯೊಬ್ಬ ವ್ಯಕ್ತಿಯ ಯೋಗ್ಯತೆಯೂ ಸಾಮಾಜಿಕವಾಗಿ ನಾವು ಯಾವ ಗುಣಗಳಿಗೆ ಮಹತ್ವ ಕೊಡುತ್ತೇವೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ್ದರಿಂದಲೇ ಒಬ್ಬ ಶ್ರೇಷ್ಠನಾಗುವುದಿಲ್ಲ. ಅದೇ ರೀತಿ ಹರಿಜನನಾಗಿ ಹುಟ್ಟಿದ್ದರಿಂದಲೇ ಒಬ್ಬ ನೀಚನಾಗುವುದಿಲ್ಲ. ಎರಡೂ ಕಡೆ ಶ್ರೇಷ್ಠನೂ ಇರಬಹುಬು ನೀಚನೂ ಇರಬಹುದು. ಈ ಮಾತುಗಳನ್ನು ಮರೆಯದಂಥ ಶುದ್ಧ ಪ್ರಜ್ಞೆಯಿಂದ ನಾವು ವಿಷಯಗಳನ್ನು ವಿವೇಚಿಸಬೇಕು. ಎಲ್ಲ ಮಾತುಗಳೂ ಸಾಹಿತ್ಯಕ್ಕೆ ನೇರವಾಗಿ ಸಂಬಂಧಿಸಿದವುಗಳಲ್ಲವಾದರೂ ಇಂದಿನ ನಮ್ಮ ಗೊಂದಲದಲ್ಲಿ ಇಂದಿನ ಸಾಹಿತ್ಯದ ಸಂದರ್ಭಗಳನ್ನು ತಿಳಿದುಕೊಳ್ಳುವುದು ಅಗತ್ಯ. ಈ ಅರಿವುಗಳು ಮೂಡದೇ ಇದ್ದರೆ ಮನಸ್ಸುಗಳು ಒಡೆದುಹೋಗಿ ವೈಮನಸ್ಯ, ದ್ವೇಷ, ಪ್ರತೀಕಾರ ಭಾವನೆಗಳು ಮಾರ್ಮಾಲೆಯುತ್ತಿರುವ ಈ ಕಾಲದಲ್ಲಿ ಸೃಷ್ಟಿಕ್ರಿಯೆ ಸಾಧ್ಯವಾಗುವುದಿಲ್ಲ. ಉತ್ತಮ ಸಾಹಿತ್ಯದ ರಚನೆ ಕುಂಠಿತವಾಗುತ್ತದೆ.

ಸಾಹಿತ್ಯ ದೃಷ್ಟಿಯಿಂದ ಯೋಚಿಸಿದಾಗ ಪ್ರಜಾತಂತ್ರದ ಈ ಕಾಲದಲ್ಲಿ ಸಮತೆಯ ಮೌಲ್ಯ ರೂಢವಾಗುತ್ತಿರುವ ಕಾಲದಲ್ಲಿ ಯಾವುದು ಸಾಹಿತ್ಯ ಯಾವುದು ಸಾಹಿತ್ಯವಲ್ಲ ಎಂದು ಜನ ತಿಳಿಯುವಂತೆ ಮಾಡುವುದು ಅತ್ಯಗತ್ಯವಾದ ಕೆಲಸ. ಹೇಗೆ ಎಲ್ಲರೂ ಸಂಗೀತಗಾರರೂ ಶಿಲ್ಪಿಗಳೂ ಚಿತ್ರಕಾರರು ಅಲ್ಲವೋ ಹಾಗೆಯೇ ಎಲ್ಲರೂ ಸಾಹಿತ್ಯಗಾರರಲ್ಲ, ಆಗಲಾರರು; ಎಂದರೆ ಒಬ್ಬ ಮನುಷ್ಯ ಇನ್ನೊಬ್ಬನಿಗೆ ತಾತ್ವಿಕವಾಗಿ ಸರಿಸಮಾನನೇ ಆದರೂ ಗುಣದಲ್ಲಿ, ಶಕ್ತಿಗಳಲ್ಲಿ ಸಿರಿಗಳಲ್ಲಿ ಅಸಮಾನತೆ ಇದ್ದೇ ಇರುತ್ತದೆ. ಇದು ಎಲ್ಲ ಕಾಲಕ್ಕೂ ಸಲ್ಲುವ ಮಾತು. ಶಕ್ತಿಗಳಲ್ಲಿ ಅಸಮಾನತೆಯಿದ್ದರೂ ವ್ಯಕ್ತಿಗಳಲ್ಲಿ ಎಲ್ಲರೂ ಸಮಾನ ಗೌರವಕ್ಕೆ ಪಾತ್ರರು ಎಂಬುದೇ ಪ್ರಜಾಪ್ರಭುತ್ವದ ಮೂಲ ಸೂತ್ರ. ಆದರೆ ಸಮಾನತ್ಯೆಯ ರಾಜಕೀಯ, ಸಾಮಾಜಿಕ ವಾತಾವರಣ ಸೃಷ್ಟಿಯಾಗುತ್ತ ಬಂದಹಾಗೆ ಅಸಾಮಾನ್ಯವಾದ ಶಕ್ತಿ ವಿಶೇಷಗಳ ಬಗ್ಗೆ ಅಪೂರ್ವ ಸಿದ್ಧಿಗಳ ಬಗ್ಗೆ ಒಟ್ಟಿನಲ್ಲಿ ಶ್ರೇಷ್ಠತೆಯೆಂಬ ಮೌಲ್ಯದ ಬಗ್ಗೆ ಇರಬೇಕಾದ ಎಚ್ಚರ ಮಾಯವಾಗಿ ಬರೆದಿರುವುದೆಲ್ಲ ಸಾಹಿತ್ಯ ಎಂಬ ಭಾವನೆ, ಸರಾಸರಿಯೇ ದೊಡ್ಡ ಸಂಖ್ಯೆಗಿಂತ ಹೆಚ್ಚಿಗೆ ಎಂಬ ಅಜ್ಞಾನ ಹುಟ್ಟುತ್ತದೆ. ಶ್ರೇಷ್ಠವಾದದ್ದರ ಕಲ್ಪನೆಯನ್ನೇ ಅಳಿಸಿಹಾಕಬಲ್ಲ ಈ ಅಪಾಯವನ್ನೆದುರಿಸುವುದೇ ಸಾಹಿತ್ಯ ಪರಿಷತ್ತು, ವಿಶ್ವವಿದ್ಯಾನಿಲಯ ಮುಂತಾದ ಸಾಂಸ್ಕೃತಿಕ ಸಂಸ್ಥೆಗಳ ಮೂಲಭೂತ ಕೆಲಸ ಎನ್ನುವುದನ್ನು ನಾವು ಮರೆಯಲಾಗದು. ನಿರ್ದಿಷ್ಟವಾದ ತಾರತಮ್ಯ ಜ್ಞಾನವನ್ನು ಕೊಡುವ ವಿಮರ್ಶೆಯ ವಿವೇಕ ಕುದುರಿಸುವ ಕೆಲಸವೊಂದೇ ಈ ಯುಗದಲ್ಲಿ ನಾವು ಸಾಹಿತಿಗಳೂ ವಿದ್ಯಾವಂತರೂ ಅತ್ಯಗತ್ಯವಾಗಿ ಮಾಡಬೇಕಾದ ಕೆಲಸ. ಪಂಪ ದೊಡ್ಡ ಕವಿಯೋ ಪೊನ್ನನೋ? ಪಂಪ ಕುಮಾರವ್ಯಾಸರಲ್ಲಿ ಯಾರ ಸಾಧನೆ ಹೆಚ್ಚಿನದು? ಏಕೆ? ಎಂಬ ಪ್ರಶ್ನೆ ಜಾತಿಯ ಪ್ರಶ್ನೆ ಅಲ್ಲ. ಸಿದ್ಧಿಯ ತಾರತಮ್ಯಗಳನ್ನು ಅಳೆಯುವ ಪ್ರಶ್ನೆ. ಈಗ ಸಾಹಿತ್ಯ ಪರಿಷತ್ತು ಮಾಡಬೇಕಾದ ಕೆಲಸವೂ ಇದೆ. ಆಡಂಬರ, ಜಾತ್ರೆ, ಮೇಳ ಇವುಗಳಿಂದ ನೊಡಿದವರ ಕಣ್ಣು ಸೆಳೆಯುವ ಕೆಲಸವಲ್ಲ. ಮನೋರಂಜನೆ ಒದಗಿಸುವ ವಿವಿಧ ವಿನೋದಾವಳಿಯಲ್ಲ. ಸಾಹಿತ್ಯ ಕೃತಿಯ ಅಧ್ಯಯನಕ್ಕೂ ಅವುಗಳನ್ನು ತೂಗಿ ನೋಡುವ ಕೆಲಸಕ್ಕೂ ತಕ್ಕ ಮಾನಸಿಕ ಸಲಕರಣೆಗಳನ್ನು ನಮ್ಮ ಜನಕ್ಕೆ, ನಮ್ಮ ಜನರಲ್ಲಿ ಸಾಹಿತ್ಯಪ್ರಿಯರಾದವರಿಗೆ ಒದಗಿಕೊಡುವ ಕೆಲಸ. ಸಾಹಿತ್ಯಕ್ಕೆ ಸಂಬಂಧಪಟ್ಟ ಒಂದು ಸಂಸ್ಥೆ ಕನ್ನಡದ ಅಭಿಮಾನವನ್ನು ಭಾಷಣಗಳ ಮೂಲಕ ಮೆರವಣಿಗೆಗಳ ಮೂಲಕ ಪ್ರದರ್ಶಿಸುವುದಲ್ಲ, ಕನ್ನಡ ಕೃತಿಗಳ ಆಳವಾದ ಅಭ್ಯಾಸಕ್ಕೆ ವಿಮರ್ಶೆಗೆ ತಕ್ಕ ವಾತಾವರಣವನ್ನು ಸೃಷ್ಟಿಸುವುದು, ಕನ್ನಡ ಜನತೆಗೆ ಆಧುನಿಕ ಜ್ಞಾನವನ್ನು, ಇತಿಹಾಸ ಸಮಾಜ ಶಾಸ್ತ್ರ, ಮನಃ ಶಾಸ್ತ್ರ ಮುಂತಾದ ಸಾಹಿತ್ಯಕ್ಕೆ ಹತ್ತಿರವಾದ ಆಧುನಿಕ ಶಾಸ್ತ್ರಗಳಲ್ಲಿ ನಡೆದ ಸಂಶೋಧನೆಗಳ ಸಾರವನ್ನು ಬಹುಜನಕ್ಕೆ ಮುಟ್ಟಿಸಿ ಆ ಮೂಲಕವೇ ಈ ಯುಗಧರ್ಮಕ್ಕೆ ತಕ್ಕ ಕೆಲಸವನ್ನು ಮಾಡುವುದು. ಇದು ಮಾತ್ರ ಸಲ್ಲುವ ಕೆಲಸ, ಉಳಿದದ್ದೆಲ್ಲ ವ್ಯರ್ಥ. ಒಂದು ಭಾಷೆಯ ಯೋಗ್ಯತೆಯನ್ನು ಅಳೆಯುವುದು ಅದರಲ್ಲಿ ಎಷ್ಟು ಪುಸ್ತಕಗಳು ಪ್ರಕಟವಾಗಿದೆ ಎಂಬುದರ ಮೇಲಲ್ಲ; ಕನ್ನಡದ ಹೆಸರಿನಲ್ಲಿ ಎಷ್ಟು ಜನ ಏನು ಗಿಟ್ಟಿಸಿಕೊಂಡರು ಎನ್ನುವುದರ ಮೇಲಲ್ಲ; ಅದು ನಮ್ಮ ಮನಸ್ಸಿನ ಸೂಕ್ಷಮವಾದ ಕೆಲಸಗಳಿಗೆ ಎಷ್ಟರಮಟ್ಟಿಗೆ ಸಮರ್ಥವಾಗಿದೆ ಎಂಬುದರ ಮೇಲೆ; ನಮ್ಮ ಅಭಿಪ್ರಾಯಗಳನ್ನೂ ಆಧುನಿಕ ವಿಚಾರಗಳನ್ನೂ ಯಥಾವತ್ತಾಗಿ ಮೂಡಿಸುವುದಕ್ಕೆ ನಾವು ಕಂಡ ಹೊಸ ಸತ್ಯಗಳನ್ನೂ ಮಾಡುವ ಹೊಸ ಸಂಶೋಧನೆಗಳನ್ನೂ ಎಷ್ಟು ಕರಾರುವಕ್ಕಾಗಿ ನಿಸ್ಸಂದಿಗ್ಧವಾಗಿ ಸಂಕ್ಷೇಪವಾಗಿಯಾದರೂ ಸ್ಪಷ್ಟವಾಗಿ ಹೇಳಲು ಸಮರ್ಥವಾಗಿದೆ ಎನ್ನುವುದರ ಮೇಲೆ. ನಮ್ಮ ಮನಸ್ಸುಗಳು ಬೆಳೆಯದೆ ನಮ್ಮ ಭಾಷೆಯೂ ಬೆಳೆಯುವುದಿಲ್ಲ. ಆದಕಾರಣ ಇದು ಮುಖ್ಯವಾಗಿ ಶಿಕ್ಷಣದ ಪ್ರಶ್ನೆ. ಸಾಹಿತ್ಯ ದೃಷ್ಟಿಯಿಂದ ಇದು ಸಾರ್ವಜನಿಕ ಶಿಕ್ಷಣದ ಪ್ರಶ್ನೆ.

ಸಾಹಿತ್ಯದ ಬಗ್ಗೆ ಯಾರೂ ಮರೆಯಬಾರದ ಕೆಲವು ಮಾತುಗಳನ್ನು ಹೇಳಬೇಕು. ಸಾಹಿತ್ಯ ಭಾಷೆಯಲ್ಲಿ ನಡೆಯುವ ಕೆಲಸವಾಗಿದ್ದು ಅದು ಎಲ್ಲರೂ ಉಪಯೋಗಿಸುವಂಥದಾಗಿರುವುದರಿಂದ ಅದು ಉಳಿದ ಕಲೆಗಳಿಗಿಂತ ಸಾಹಿತ್ಯದಲ್ಲಿ ತಾರತಮ್ಯ ಜ್ಞಾನ ಬರುವುದು ಕಷ್ಟ. ಬರೆದದ್ದೆಲ್ಲಾ ಸಾಹಿತ್ಯವೇ ಪದ್ಯರೂಪದಲ್ಲಿರುವುದೆಲ್ಲ ಕಾವ್ಯವೇ ಎಂಬ ಭ್ರಮೆ ಸುತ್ತಲೂ ಹೆಚ್ಚುತ್ತಿದೆ. ಸಾಹಿತ್ಯ ಕೃತಿಗಳ ಬೆಲೆಯನ್ನು ಅದು ಬರೆದವನ ಜಾತಿ ಅವನು ನಂಬಿರುವ ಆರ್ಥಿಕ ರಾಜಕೀಯ ಸಿದ್ಧಾಂತಗಳ ಮೇಲೆ ಕಟ್ಟುವುದಂತೂ ನಡೆದೇ ಇದೆ. ಈ ಎಲ್ಲಾ ಹಾವಳಿಗಳು ನಡೆಯುತ್ತಿದ್ದರೂ ಸಾಹಿತ್ಯದ ಅವಶ್ಯಕತೆಯ ಬಗ್ಗೆ ನಂಬಿಕೆಯುಳ್ಳವರು ಕೆಲವು ಮೂಲ ಮಾತುಗಳನ್ನು ಮರೆಯಬಾರದು.

೧. ಸಾಹಿತ್ಯದ ಬಗ್ಗೆ ಮೊದಲು ಗುರುತು ಕಾಕಿಕೊಳ್ಳಬೇಕಾದ ಮಾತು: ಅದು ಮಾನವೀಯ ಎಂಬುದು. ಇದು ಯಾವುದೆ ಸಿದ್ಧಾಂತಕ್ಕಾಗಲೀ ಮತಕ್ಕಾಗಲೀ ರಾಜಕೀಯ ಧೋರಣೆಗಾಗಲೀ ಅಡಿಯಾಳಲ್ಲ. ಈ ಎಲ್ಲವನ್ನೂ ಅಥವಾ ಒಂದೊಂದನ್ನು ಉಪಯೋಗಿಸಿಕೊಂಡರೂ ಒಬ್ಬ ಮನುಷ್ಯ ಕೇವಲ ಮನುಷ್ಯನಾಗಿಯೇ ಅನುಭವಿಸಲು ಸಾಧ್ಯವಾಗುವ ನಮಸ್ಸಿನ ಒಟ್ಟು ಕೆಲಸ. ಆದ ಕಾರಣ ಯಾವುದೋ ಪುರಾತನ ಕಾಲದಲ್ಲಿ ಉಚಿತವಾದ ಉತ್ತಮ ಸಾಹಿತ್ಯ ಎಂದಿಗೂ ಸಲ್ಲುತ್ತದೆ. ಸಾಹಿತ್ಯ ರಚನೆಯಲ್ಲಿ ಸಾಹಿತಿ ಬದ್ಧನಾಗಬೇಕಾದ್ದು ತನ್ನ ಸ್ವಂತ ಅನುಭವಕ್ಕೆ ಅಂತಃಪ್ರಾಮಾಣ್ಯಕ್ಕೆ, ವಿವೇಕಕ್ಕೆ ಹೊರತು ಇನ್ನು ಯಾವುದಕ್ಕೂ ಅಲ್ಲ.

೨. ಇದು ಒಬ್ಬ ವ್ಯಕ್ತಿಯಾಗಿ ಏಕಾಂತದಲ್ಲಿ ಮಾಡುವ ಕೆಲಸ; ಸಾಮೂಹಿಕವಾಗಿ ಪ್ರದರ್ಶನಕ್ಕಾಗಿ ಅಲ್ಲ; ವೇದಿಕೆಯ ಮೇಲಿನ ಭಾಷಣವಾಗಲೀ ರಂಗಮಂದಿರದಲ್ಲಿ ಆಡುವ ನಾಟಕವಾಗಲೀ ಅಲ್ಲ. ಆದಕಾರಣವೇ ಸಾಹಿತ್ಯ ಕೃತಿಯಲ್ಲಿ ವ್ಯಕ್ತಿಯ ಭಾವನೆಗೆ ಅವನ ಕಾಣ್ಕೆಗೆ ಅದು ಬದ್ಧ. ಜೀವನದ ವೈವಿಧ್ಯವನ್ನೂ ಅನಂತ ಸಂಭಾವ್ಯತೆಗಳನ್ನೂ ಹೀಗೆಯೇ ನಾವು ಗ್ರಹಿಸಬೇಕಾದ್ದು, ಗ್ರಹಿಸುವುದು ಸಾಧ್ಯ. ಪ್ರಕೃತಿಯ ಮೇಲೂ ಗ್ರಂಥ ಕರ್ತನ ವ್ಯಕ್ತಿತ್ವದ ಛಾಪು ಬೀಳದೇ ಅದು ಸಾಹಿತ್ಯವೇ ಆಗುವುದಿಲ್ಲ. ಎಲ್ಲರಿಗೂ ಸಾಮಾನ್ಯವಾದ ಭಾಷೆಯಲ್ಲಿ ಅಸಾಮಾನ್ಯವಾದ ತನ್ನ ಅನುಭವಕ್ಕೆ ಭಾಷೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದರ ಮೂಲಕ ತಕ್ಕ ರೂಪವನ್ನು ಸಿದ್ದಿಸಿಕೊಂಡಾಗಲೇ ಅದು ಎಲ್ಲರಿಗೂ ಗಮ್ಯವೂ ಸಂತೋಷದಾಯಕವೂ ಆಗುತ್ತದೆ. ಆದ ಕಾರಣದಿಂದಲೇ ಸಾಹಿತಿಗಳನ್ನು ಪೂರ್ವನಿಶ್ಚಿತವಾದ ಅಥವಾ ಸರಕಾರದಿಂದ ನಿಶ್ಚಿತವಾದ ಧೋರಣೆಗಳಿಗಾಗಲಿ ಬಹುಜನ ನಂಬಿರುವ ಸಿದ್ಧಾಂತಗಳಿಂದಾಗಲೀ ಕಟ್ಟಿಹಾಕುವುದು ಸಾಹಿತ್ಯಕ್ಕೆ ದ್ರೋಹ.

೩. ಬರೆದದ್ದು ಸಾಹಿತ್ಯವಾಗುವುದು ಒಬ್ಬ ಸಾಹಿತಿ ಭಾಷೆಯನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾನೆ ಎನ್ನುವುದರ ಮೇಲೆ ಅವಲಂಬಿಸಿದೆ. ತನ್ನ ವಿಶಿಷ್ಟವಾದ ಅನುಭವಕ್ಕೆ ತಕ್ಕಹಾಗೆ ಭಾಷೆಯನ್ನು ಹೇಗೆ ಬಗ್ಗಿಸಿ ಒಗ್ಗಿಸಿಕೊಳ್ಳುತ್ತಾನೆ ಎನ್ನುವುದರ ಮೇಲೆ. ನಾದವನ್ನು ಸಮರ್ಥವಾಗಿ ತಾಳಬದ್ಧವಾಗಿ ಬಳಸಿಕೊಳ್ಳುವವನು ಸಂಗೀತಕಾರನಾದ ಹಾಗೆ. ಗದ್ಯವಾಗಲಿ, ಪದ್ಯವಾಗಲಿ ಅಲ್ಲಿ ಭಾಷೆ ಕವಿಯ ಅಂತರಂಗದ ಒಳರೂಪಕ್ಕೆ ತಕ್ಕ ಅತ್ಯಂತ ಸಹಜವಾದ ಅಭಿವ್ಯಕ್ತಿ ಎನ್ನಿಸಬೇಕು. ಅದನ್ನು ಓದುವಾಗ ಅದು ಸಾಹಿತ್ಯಕ್ಕೆ ಸಹಜವಾದ ಮಾತಿನ ನಡೆ ಅಥವಾ ಲಯದ ಮೂಲಕ ನಮ್ಮ ಮನಸ್ಸಿಗೆ ಸಂತೋಷಕೊಡಬೇಕು. ಓದಿದಂತೆ ಅದರ ಅರ್ಥ ಹೆಚ್ಚು ಹೆಚ್ಚು ಬಿಚ್ಚಿಕೊಳ್ಳುತ್ತಾ ಹೋಗಬೇಕು. ಒಂದು ಸಲ ಓದಿದ್ದನ್ನು ಇನ್ನೊಂದು ಸಲ ಓದಬೇಕು ಎನ್ನಿಸಬೇಕು. ಎಂದರೆ ನೇರವಾಗಿ ಕಣ್ಣಿಗೆ ಹೊಡೆಯುವಂತೆ ಅಲ್ಲದಿದ್ದರೂ ಒಟ್ಟಿನಲ್ಲಿ ಬರೆದದ್ದು ಧ್ವನಿಪೂರ್ಣವಾಗಿದ್ದು ಮತ್ತೆ ಮತ್ತೆ ನೆನೆಸಿಕೊಳ್ಳುವಂತೆ ರೂಪುಗೊಳ್ಳಬೇಕು. ಏಕೆಂದರೆ ಉತ್ತಮ ಸ್ಸಾಹಿತ್ಯವೆಲ್ಲವೂ ಈ ರೀತಿಯಲ್ಲಿಯೇ ರೂಪುಗೊಂಡಿವೆ, ರೂಪುಗೊಳ್ಳುತ್ತವೆ.

೪. ಎಂಥ ಬಂಡಾಯಗಾರನೇ ಆಗಲಿ ತನ್ನ ದೇಶವನ್ನೇ ಬಿಟ್ಟು ಹೋಗಿ ಹೇಗೆ ಬಂಡಾಯ ಮಾಡಲಾರನೋ ಹಾಗೆಯೇ ನಮ್ಮ ಸಂಪ್ರದಾಯವನ್ನು ಬಿಟ್ಟು ನಾವು ಸಾಹಿತ್ಯದಲ್ಲಿ ಏನನ್ನೂ ಸಾಧಿಸುವುದು ಸಾಧ್ಯವಿಲ್ಲ. ನಾವೆಲ್ಲರೂ ಸಂಪ್ರದಾಯ ಜನ್ಯರೇ ಎನ್ನುವುದನ್ನು ಮರೆಯುವುದು ಹೇಗೆ? ಆದರೆ ನಮ್ಮಲ್ಲಿ ವಿವೇಚನಾ ಶಕ್ತಿಯೂ ಇರುವುದರಿಂದ ಅದರಲ್ಲಿರುವ ದೋಷಗಳನ್ನು ತಿದ್ದಿಕೊಳ್ಳುವುದೂ ಕಾಲಧರ್ಮಕ್ಕೆ ಸರಿಯಾಗಿ ಅದಕ್ಕೆ ಹೊಸ ತಿರುವು ಕೊಡುವುದೂ ನಮ್ಮ ಜೀವನದಲ್ಲೂ ಸಾಹಿತ್ಯದಲ್ಲೂ ಮಾಡಬೇಕಾದ ಕೆಲಸ. ಭೂತ, ಭವಿಷ್ಯತ್, ವರ್ತಮಾನಗಳು ಒಂದರೊದನೊಂದು ಸೇರಿ ಬೆಸೆದಿರುತ್ತದೆ, ಒಂದು ತಲೆಮಾರು ಸಾಯುತ್ತದೆ ಇನ್ನೊಂದು ತಲೆಮಾರು ಬೆಳೆಯುತ್ತದೆ. ತಿಳಿವು ಹಾಗೆ ವೃದ್ಧಿಯಾಗುತ್ತದೆ, ಕುಗ್ಗುತ್ತದೆ, ವಿಸ್ತರಿಸುತ್ತದೆ.

೫. ಸಾಹಿತ್ಯ ಮನಸ್ಸಿನ ಕೆಲಸ, ಓದುವವರ ಮನಸ್ಸಿನೆ ಮೇಲೆ ಮಾತ್ರ ಪ್ರಭಾವ ಬೀರಿ ಕ್ರಮೇಣ ಒಂದು ಜನಾಂಗದ ಮನಸ್ಸನ್ನು ಹೊಸಬದುಕಿಗೆ ಸಿದ್ಧ ಪಡಿಸುತ್ತದೆ. ಮನುಷ್ಯನ ಅನೇಕ ಕ್ರಿಯೆಗಳಲ್ಲಿ ಸಾಹಿತ್ಯ ಒಂದು. ಉಳಿದೆಲ್ಲ ಕ್ರಿಯೆಗಳ ಕೆಲಸವನ್ನು ಸಾಹಿತ್ಯಮಾಡಬೇಕೆಂದು ಬಯಸುವುದೂ ಸಾಹಿತಿ ಸಾಧುವೋ ಸಂತನೋ ಮಹಾತ್ಯಾಗಿಯೋ ಆಗಬೇಕೆಂದು ಬಯಸುವುದೂ ಸರಿಯಲ್ಲ. ಸಾಹಿತಿ ತನ್ನ ಕೆಲಸವನ್ನು ಸಮರ್ಪಕವಾಗಿ ಮಾಡಬೇಕೆಂದು ಕೇಳುವಷ್ಟು ಹಕ್ಕು ನಮಗೆ ಇದೆ; ಅವನು ರಚಿಸುವ ಕೃತಿಗಳನ್ನು ವಿಮರ್ಶಿಸುವ, ಬಯ್ಯುವ, ಹೊಗಳುವ, ತೆಗಳುವ ಹಕ್ಕು ನಮಗಿದೆ. ಆದರೆ ಅವನು ಸರ್ವ ಸಂಗ ಪರಿತ್ಯಾಗ ಮಾಡಿ ಸನ್ಯಾಸಿಯಾಗಬೇಕೆಂದಾಗಲಿ ನಾವು ಬಯಸಿ ಸಾಧಿಸದೇ ಇದ್ದದ್ದನ್ನೆಲ್ಲಾ ಅವನು ಸಾಧಿಸಬೇಕೆಂದಾಗಲೀ ಬಯಸುವುದು ಅತ್ಯದ್ಭುತವಾದ ಒಂದು ಮನೋ ರೋಗ. ಅವನ ಕೃತಿಗಳನ್ನು ವಿಮರ್ಶಿಸದೆ ಅವನ ವೈಯಕ್ತಿಕ ಜೀವನದ ಮೇಲೆ ಧಾಳಿ ನಡೆಸುವುದು ಅನಾಗರಿಕ ವರ್ತನೆ. ಒಬ್ಬ ಸಾಹಿತಿಯ ವೈಯಕ್ತಿಕವಾದ ಬದುಕನ್ನು ಸಂಶೋಧಿಸುವುದು ಅವನ ಜೀವನ ಚರಿತ್ರೆ ಬರೆಯುವವನು ಮಾಡಬೇಕಾದ ಕೆಲಸ. ಉಳಿದವರು ಅವನ ಕೃತಿಗಳಿಗಷ್ಟೇ ತಮ್ಮ ಗಮನವನ್ನು ಕೊಡುವುದು ವಿವೇಕ. ಸಾಹಿತಿಯಂತೂ ಸತ್ತೇ ತೀರುತ್ತಾನೆ, ಆದರೆ ಅವನ ಕೃತಿಗಳು ಉತ್ತಮವಾಗಿದ್ದರೆ ಒಂದಷ್ಟು ಕಾಲ ಉಳಿದಿರುವ ಸಂಭವವಾದರೂ ಉಂಟು.

ಸಾಹಿತ್ಯ ಪರಿಷತ್ತಿನ ಈಗಿನ ನಿಯಮಗಳಿಗನುಸಾರವಾಗಿ ಅದರ ವಾರ್ಷಿಕ ಸಮ್ಮೇಳನದ ಅಧ್ಯಕ್ಷನಿಗೆ ಯಾವ ಅಧಿಕಾರವೂ ಇಲ್ಲ. ಅವನು ಕೇವಲ ಒಂದು ಉತ್ಸವ ಮೂರ್ತಿ. ಆದ ಕಾರಣ ಸಮ್ಮೇಳನಾಧ್ಯಕ್ಷನಾಗಿ ನಾನು ಸಾಧಿಸಲು ಸಾಧ್ಯವಾಗಬಹುದಾದ ಕೆಲಸಕ್ಕೆ ಅವಕಾಶ ಬಹಳ ಕಡಿಮೆಯೇ. ಅಲ್ಲದೇ ಸಾಹಿತ್ಯ ಪರಿಷತ್ತೂ ಪಜಾತಂತ್ರಾತ್ಮಕವಾದ ಚುನಾವಣೆಯ ಪದ್ಧತಿಯಿಂದ ರೂಪುಗೊಂಡದ್ದು. ಅದನ್ನುಯಾವನೇ ಒಬ್ಬ ವ್ಯಕ್ತಿ ತನ್ನ ಇಷ್ಟದಂತೆ ನಡೆಸಿಕೊಳ್ಳುವುದು ಸಾಧ್ಯವಿಲ್ಲ. ಬಹುಮತದಂತೆಯೇ ಅದು ನಡೆಯಬೇಕು; ಸಾಹಿತ್ಯ ಕಲೆಗಳಂಥ ಮನುಷ್ಯನ ವಿಶೇಷ ಸಾಧನೆಗಳಿಗೆ ಈ ಬಹುಮತ ವ್ಯವಸ್ಥೆ ಸರಿಯೇ ಎಂದು ನಾವೆಲ್ಲರೂ ಯೋಚಿಸಬೇಕು. ಒಂದು ಕಾವ್ಯದ ಯೋಗ್ಯತೆಯನ್ನು ಓಟಿಗೆ ಹಾಕಿ ನಿರ್ಧರಿಸಬಹುದೇ? ಇಲ್ಲವಾದರೆ ಏನು ಮಾಡಬೇಕು? ಅದರ ನಿರ್ಧಾರವನ್ನು ಕಾಲಕ್ಕೆ ಬಿಡುವುದೇನೋ ಕ್ಷೇಮ, ಇಲ್ಲವಾದರೆ ಆ ವಿಷಯದಲ್ಲಿ ದಕ್ಷರಾದ ನಿಸ್ಪೃಹ ವಿಮರ್ಶಕರು ಪ್ರಜಾತಂತ್ರಾತ್ಮಕವಾಗಿ ಈ ಕೆಲಸ ಮಾಡಲು ಬಿಡಬೇಕು. ಒಂದು ಕಾಲದಲ್ಲಿ ಕನ್ನಡ ಬರೆಯುವವರಾಗಲೀ ಓದುವವರಾಗಿರಲೀ ತೀರ ವಿರಳವಾಗಿರುವಾಗ ಸ್ಥಾಪಿತವಾಗಿರುವುದು ಈ ಪರಿಷತ್ತು. ಆ ಕಾಲದಲ್ಲಿ ಈ ಸಂಸ್ಥೆಯನ್ನು ಕನ್ನಡಿಗರೆಲ್ಲರಿಗೂ ವಯಸ್ಕರಾದ ಎಲ್ಲರಿಗೂ ಮುಕ್ತವಾಗಿಟ್ಟಿದ್ದು ಆ ಕಾಲಕ್ಕೆ ಸರಿ. ಆದರೆ ಈಗ ಅದು ಸರಿಹೋಗುವುದಿಲ್ಲ ಎನ್ನಿಸಿದಾಗ ಏನುಮಾಡಬೇಕು? ನಮ್ಮಲ್ಲಿ ಪ್ರತಿಯೊಂದು ಸಂಸ್ಥೆಯೂ ಬಹುಬೇಗ ಜಡವಾಗಿ ಹೋಗುವಂತೆ ಈ ಸಂಸ್ಥೆಯೂ ತೀರ ಜಡವಾಗಿ ಯಾಂತ್ರಿಕವಾಗಿ ಈ ವರೆಗೆ ಮಾಡಿಕೊಂಡು ಬಂದದ್ದನ್ನೇ ಮಾಡುತ್ತಾ ಹೋಗುತ್ತಿದೆ. ಸಾಹಿತ್ಯ ಕೃತಿಗಳಿಗೆ ಸಂಬಂಧ ಪಟ್ಟ ವಿಮರ್ಶೆ, ಮೌಲ್ಯ ನಿರ್ಣಯ ಮುಂತಾದವುಗಳಿಗಾಗಿಯೇ ಫ್ರೆಂಚ್ ಅಕ್ಯಾಡಮಿಯ ರೀತಿಯ ಅತ್ಯುಚ್ಛ ಧೀಮಂತರ ಒಂದು ಸಣ್ಣ ಘಟಕವನ್ನಾಗಿ ನಡೆಸಿಕೊಂಡಿ ಬರುವುದು ಸಾಧ್ಯವಾದೀತೇ ಎಂದು ಪರೀಕ್ಷಿಸಿ ನೋಡಬೇಕು. ಇದು ತೀರ ದೊಡ್ಡ ಸಂಘವಾಗದೆ ಇಡೀ ಕರ್ನಾಟಕದಲ್ಲಿ ಅತ್ಯುತ್ತಮ ಧೀಮಂತರಾದ ಹತ್ತು ಹದಿನೈದು ಮಂದಿ ನಿಷ್ಪಕ್ಷಪಾತ ವಿದ್ವಾಂಸರಿಗೆ ಈ ಕೆಲಸ ಒಪ್ಪಿಸಬಹುದೆಂದು ನನ್ನ ಸೂಚನೆ. ಆ ವಿದ್ವಾಂಸ ಮಂಡಳಿಯಲ್ಲಿ ಸಾಹಿತಿಗಳೇ ಇರಬೇಕಾದ ಅಗತ್ಯವಿಲ್ಲ. ಇತರ ಕಲೆಗಳ, ಶಾಸ್ತ್ರಗಳ, ವಿಜ್ಞಾನಗಳ ಪರಿಣಿತರೂ ಇರಬಹುದು. ಶ್ರೇಷ್ಠತೆಯ ಪ್ರಶ್ನೆ, ತತ್ವದ ಪ್ರಶ್ನೆ, ಮೌಲ್ಯಮಾಪನದ ಪ್ರಶ್ನೆಗಳು ಬಂದಾಗ ಆ ಪ್ರಶ್ನೆಗಳನ್ನು ಈ ಸ್ವತಂತ್ರ ಧೀಮಂತ ಮಂಡಳಿಗೆ ಒಪ್ಪಿಸಿ ಅವರ ತೀರ್ಮಾನವನ್ನು ಎಲ್ಲರೂ ಗೌರವಿಸಬಹುದು.

ಪ್ರಜಾತಂತ್ರದ ಸಂದರ್ಭದಲ್ಲಿ ಇಂತಹ ಒಂದು ಮಂಡಳಿ ಅತ್ಯಗತ್ಯ ಎಂದು ನನಗೆ ತೋರುತ್ತದೆ. ಆಗ ಪರಿಷತ್ತು ತನ್ನ ಈ ಪ್ರಜಾತಂತ್ರದ ಚೌಕಟ್ಟಿನಲ್ಲೇ ಸಾರ್ವಜನಿಕ ಶಿಕ್ಷಣದ ಕೆಲಸವನ್ನು ಇನ್ನೂ ಯಾರೂ ಪ್ರಕಟಿಸಲು ಮುಂದೆ ಬಾರದೆ ಇರಬಹುದಾದ ಹಾಗೆಯೇ ಅತ್ಯಂತ ಶ್ರೇಷ್ಠವಾದ ಕೃತಿಗಳನ್ನು ಪ್ರಕಟಿಸುವುದು, ಸಾಹಿತ್ಯಾಭ್ಯಾಸಕ್ಕೆ ಅಗತ್ಯವಾದ ನಿಘಂಟು, ಮುಂತಾದ ಸಹಾಯಕ ಪ್ರೌಢ ಗ್ರಂಥಗಳನ್ನು ಪ್ರಕಟಿಸುವುದು, ಒಂದು ವರ್ಷದಲ್ಲಿ ಪ್ರಕಟವಾದ ಅತ್ಯುತ್ತಮ ಕವನಗಳನ್ನೋ ಕಥೆಗಳನ್ನೋ ಪ್ರಬಂಧಗಳನ್ನೋ ಪುಸ್ತಕ ರೂಪದಲ್ಲಿ ಪ್ರಕಟಿಸುವುದು ಮುಂತಾದ ಕೆಲಸಗಳನ್ನು ಮಾಡಬಹುದು. ಪ್ರಕಟಿಸುವಾಗ ಅತ್ಯುತ್ತಮವಾದವುಗಳನ್ನೇ ಆರಿಸಿಕೊಳ್ಳಲು ತಕ್ಕ ವ್ಯವಸ್ಥೆ ಮಾಡಿಕೊಳ್ಳಬೇಕು.

ಹಳೆಗನ್ನಡ ಕಾವ್ಯಗಳ ಗದ್ಯಾನುವಾದಗಳನ್ನು ಪ್ರಕಟಿಸುವ ಒಂದು ಯೋಜನೆಯನ್ನು ಪರಿಷತ್ತು ಇನ್ನೂ ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಶೋಚನೀಯ ಸಂಗತಿ. ಯಾವ ಕಾವ್ಯವನ್ನೇ ಆಗಲಿ ಅದರ ಕಾವ್ಯರೂಪದಲ್ಲೇ ಓದಬೇಕಲ್ಲದೆ ಅದರ ಗದ್ಯರೂಪವನ್ನು ಸಿದ್ಧಪಡಿಸಿದರೆ ಕವಿಗೆ ಭಾರೀ ಅಪಚಾರ ಮಾಡಿದಂತೆ. ನಮ್ಮ ವಿಧ್ಯಾರ್ಥಿಗಳನೇಕರು ಕವನಗಳನ್ನೇ ಓದಿ ಕಾವ್ಯದಿಂದ ಸಿಕ್ಕುವ ಸಂಸ್ಕಾರಕ್ಕೆ ಬಾಹೀರರಾಗುತ್ತಾ ಬರುತ್ತಿದ್ದಾರೆ. ಈ ರೋಗವನ್ನು ಇನ್ನಷ್ಟು ಸಾರ್ವಜನಿಕವಾಗಿ ಮಾಡುವ ಈ ಪ್ರಯತ್ನ ಅತ್ಯಂತ ಹಾಸ್ಯಾಸ್ಪದವಾದುದಾದರೂ ನಮ್ಮ ಇಂದಿನ ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ನನಗೆ ಅಳು ಬರುವಂತೆ ಮಾಡುತ್ತಿದೆ. ಕಾವ್ಯದ ಅಭ್ಯಾಸಕ್ಕೆ ಬೇಕಾದ ಕಠಿಣ ಪದಗಳ ಅರ್ಥ, ವಿಶೇಷ ಸಂದರ್ಭಗಳ ವಿವರ, ಟೀಕೆ ಟಿಪ್ಪಣಿ ಇವು ನಮ್ಮ ಕಾವ್ಯಗಳಿಗೆ ಅಗತ್ಯವಾಗಬಹುದು. ಆದರೆ ಗದ್ಯಾನುವಾದ ಖಂಡಿತ ಅಲ್ಲ. ಇಂದೂ ಸಹ ನಮ್ಮ ಜನ ಪಂಪನನ್ನು, ನಾರಣಪ್ಪನನ್ನೂ ಓದಬೇಕು, ಸರಿಯಾಗಿ ಲಯ ಹಿಡಿದು ಓದುವುದಕ್ಕೆ ಕಲಿಯಬೇಕು. ಅದರಿಂದಲೇ ನಮ್ಮ ಜನರಲ್ಲಿ ಕಾವ್ಯಾಭಿರುಚಿ ಹುಟ್ಟುವುದು ಸಾಧ್ಯ. ಈ ಬಗ್ಗೆ ಪರಿಷತ್ತು ತಕ್ಕ ಏರ್ಪಾಟು ಮಾಡಲಿ. ಆದರೆ ನಾನು ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ: ಇಂಥ ಗದ್ಯಾನುವಾದಗಳನು ಸಾಹಿತ್ಯ ಪರಿಷತ್ತು ಖಂಡಿತವಾಗಿಯೂ ಪ್ರಕಟಿಸಬಾರದು. ಕಾವ್ಯದ ಅನುಭವದಲ್ಲಿ ಅರ್ಥದಲ್ಲಿ ಕೊನೆಯ ಪಕ್ಷ ಅರ್ಧದಷ್ಟನ್ನಾದರೂ ಅದರ ಲಯವೇ, ಪದಸಮ್ಮಿಳನದ ನಾದವೇ ಹುಟ್ಟಿಸುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಸಾಹಿತ್ಯ ಪರಿಷತ್ತು ಖಂಡಿತವಾಗಿಯೂ ಮರೆಯಬಾರದು.

ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹಳೆಯ ಹೊಸ ಕವಿಗಳ ಮೇಲೆ ವಿಚಾರ ಗೋಷ್ಠಿಗಳನ್ನು ಸಾಹಿತ್ಯಪರಿಷತ್ತು ನಡೆಸಿಕೊಂಡು ಬರುತ್ತಿದೆ. ಕವಿಯ ಪರಿಚಯವೇ ನಮ್ಮ ಜನಕ್ಕೆ ಇಲ್ಲದೆ ಇರುವಾಗ ಇಂತಹ ಗೋಷ್ಠಿಗಳು ನಿರರ್ಥಕವಾಗುತ್ತವೆ. ಪಂಡಿತರ ವಾದಸರಣಿಯನ್ನು ಸಭಿಕರಿಗೆ ಅನುಸರಿಸುವುದು ಸಾಧ್ಯವಾಗುವುದಿಲ್ಲ. ಸಭಿಕರ ಮುಂದೆ ತೀರಾ ಪ್ರೌಢವಾದ ಪ್ರಬಂಧವನ್ನು ಮಂಡಿಸಲು ತಕ್ಕ ವಿಮರ್ಶಕರೂ ಕಡಿಮೆ, ಕೇಳಿ ಮೆಚ್ಚುವವರಿಲ್ಲದೆ ಅವರ ಶ್ರಮ ನಿರರ್ಥಕವೂ ಆಗಬಹುದು. ಆದ ಕಾರಣ ನಮ್ಮ ನಾಡಿನ ಎಲ್ಲಾ ಕಡೆಗಳಲ್ಲೂ ಹಳ್ಳಿ ಗಳಲ್ಲೂ ಕೂಡ ಸಾಹಿತ್ಯ ಪರಿಷತ್ತು ಒಂದು ಸಾಂಸ್ಕೃತಿಕ ಸಂಸ್ಥೆಯಾಗಿ ಕೆಲಸ ಮಾಡುತ್ತಾ ನಮ್ಮ ಹಳಗನ್ನಡದ ನಡುಗನ್ನಡದ ಹೊಸಗನ್ನಡದ ಕವಿ ಸಾಹಿತಿಗಳ ಕೃತಿಗಳ ಪರಿಚಯ ಮಾಡಿಕೊಡುವ ವ್ಯವಸ್ಥೆಯನ್ನು ಕೈಗೊಳ್ಳಬಹುದು. ಕಾವ್ಯವನ್ನು ಹೇಗೆ ಓದಬೇಕು, ಕಾವ್ಯ ಅರ್ಥವನ್ನು ಹೇಗೆ ಸೃಷ್ಟಿಸುತ್ತದೆ ಎನ್ನುವುದನ್ನು ಉದಾಹರಣೆಗಳ ಮೂಲಕ ನಮ್ಮ ಪ್ರಭುಗಳಾದ ಸಾಮಾನ್ಯ ಜನತೆಗೆ ತೋರಿಸಿಕೊಡಬಹುದು. ಇದರಿಂದ ಸಾಹಿತ್ಯದಿಂದ ಬರಬೇಕಾದ ಸಂಸ್ಕಾರ ಅನೇಕ ಜನರಿಗೆ ದೊರೆತಂತಾಗಿ ಸಾಹಿತ್ಯ ಪರಿಷತ್ತಿನ ಕೆಲಸ ನಿಜವಾಗಿಯೂ ಜನೋಪಯೋಗಿ ಆಗುತ್ತದೆ. ಒಟ್ಟಿನಲ್ಲಿ ಸಾಹಿತ್ಯ ಪರಿಷತ್ತು ನಿಜವಾದ ಸಾಹಿತ್ಯ ಪರಿಷತ್ತೇ ಆಗುವ ಹಾಗೆ ನಾನೂ ನೀವೂ ಸೇರಿ ಪ್ರಯತ್ನಿಸೋಣ.

ಸ್ನೇಹಿತರೇ, ಮಾಡುವ ಸೂಚನೆಗಳು ಅನೇಕವಿವೆ, ಆದರೆ ಸಮಯ ಸಿಕ್ಕಿದೆ ಎಂದು ಆಗಲೇ ದೀರ್ಘವಾಗಿರುವ ಭಾಷಣವನ್ನು ಇನ್ನಷ್ಟು ದೀರ್ಘ ಮಾಡುವ ಇಷ್ಟ ನನಗಿಲ್ಲ. ಸಾಹಿತಿಗಳೂ ಸ್ವಲ್ಪ ವಿವೇಕ ತೋರಿಸುವುದು ಅಗತ್ಯ. ನಿಮ್ಮೆಲ್ಲರ ಮುಂದೆ ನಿಂತು ಇಷ್ಟು ಮಾತಾಡಲು ದೊರೆತ ಅವಕಾಶವೇ ಒಂದು ಭಾಗ್ಯವೆಂದು ನಾನು ಭಾವಿಸುತ್ತೇನೆ. ಸಾಹಿತ್ಯ ಪರಿಷತ್ತನ್ನು ಮತ್ತೆ ಮತ್ತೆ ಟೀಕಿಸುತ್ತಾ ಬಂದಿರುವ, ಈಗಲೂ ಟೀಕಿಸಿರುವ, ಬಹುಶಃ ಇನ್ನು ಮುಂದೆಯೂ ಟೀಕಿಸಬಹುದಾದ ನನ್ನನ್ನೂ ಈ ಸಮ್ಮೇಳನಕ್ಕೆ ಅಧ್ಯಕ್ಷನ್ನನ್ನಾಗಿ ಆಯ್ಕೆ ಮಾಡಿ ಗೌರವಿಸಿದ್ದೀರಿ; ಇದರಿಂದ ಅನೇಕಾನೇಕ ಸಾಹಿತ್ಯ ಪ್ರೇಮಿಗಳಿಗೆ ಸಂತೋಷವಾಗಿರುವುದು ನನಗೆ ತಿಳಿದಿದೆ. ಕೆಲವರಿಗೆ ದುಃಖವೂ ಆಗಿರಬಹುದು. ಅಂಥವರು ಕೇವಲ ಮನುಷ್ಯನೇ ಆಗಿರುವ, ಪರಿಪೂರ್ಣತೆಯನ್ನು ಎಂದೂ ನನ್ನಲ್ಲಿದೆ ಎಂದು ಹೇಳಿಕೊಳ್ಳದ ನನ್ನಂಥ ಒಬ್ಬ ಕವಿಯನ್ನು ಕ್ಷಮಿಸಬೇಕೆಂದು ಮಾತ್ರ ಕೇಳಿಕೊಂಡು ನನ್ನ ದೀರ್ಘ ಭಾಷಣವನ್ನು ಪ್ರೀತಿಯಿಂದ ಗೌರವದಿಂದ ಆಲಿಸಿದ ಈ ವಿಶಾಲ ಸಭೆಗೆ ಇನ್ನೊಮ್ಮೆ ಕೃತಜ್ಞತೆ ವ್ಯಕ್ತಪಡಿಸಿ ವಂದಿಸುತ್ತೇನೆ.

One Comment

Leave a Reply