ಜನತಾದಳದವರು ಕೇಳಬಹುದೇನೋ ಅನ್ನುವ ಆಸೆಯಿತ್ತು. ಅವರು ಕೇಳಲಿಲ್ಲ. ಮೊದಲು ಬಂದು ಕೇಳಿದ ಬಿ.ಜೆ.ಪಿ.ಗೆ ಹೂಂ ಅಂದೆ !

ರಾಮಚಂದ್ರ ಶರ್ಮ

  ಅಂಥದೊಂದು ಕಾಲವೂ ಇತ್ತು. ಅಡಿಗರಂತಹ ಮೇಧಾವಿ ಕವಿ ನನ್ನಂತಹವನಲ್ಲಿ ಪ್ರತಿಸ್ಪರ್ಧಿಯನ್ನು ಕಂಡು ಒಳಗೊಳಗೆ ತೊಳಲಿದ ಕಾಲ.ನಾನು ಅವರನ್ನು ಮೊದಲ ಬಾರಿ ಕಂಡಿದ್ದು ನನ್ನ ಪ್ರಥಮ ಕವನಸಂಕಲನ ‘ಹೃದಯ ಗೀತಕ್ಕೆ’ ಹಿನ್ನುಡಿಯನ್ನು ಬರೆಸುವ ಸಂದರ್ಭದಲ್ಲಿ. ನಮ್ಮ ನಡುವೆ ನಡೆದ ಪತ್ರವ್ಯವಹಾರದಿಂದ ಹಾಗೂ ನನ್ನ ಕವನಗಳಿಂದ ನನ್ನಲ್ಲಿ ಸಮಾನಧರ್ಮಿಯನ್ನು ಕಂಡುಕೊಂಡಿದ್ದ ಅಡಿಗರು ನನ್ನ ಭೇಟಿಯ ಬಗ್ಗೆ ತುಂಬ ಉತ್ಸಾಹವನ್ನು ಇಟ್ಟಕೊಂಡಿದ್ದರು. ‘ಹೃದಯಗೀತೆ’ ಪ್ರಕಟವಾದ ಎರಡು ತಿಂಗಳಿಗೆ ಮೈಸೂರಿನ ಆ ತಿಂಗಳ ಚುಮುಗುಟ್ಟುವ ಚಳಿಯಲ್ಲಿ ನಾವು ಭೇಟಿಯಾದ ಸಂಜೆ ನನ್ನಲ್ಲಿ ಅಳಿಸಲಾಗದ ಒಂದು ನೆನಪು.

  ನಡುರಾತ್ರಿಯವರೆಗೂ ನಡೆಸಿದ ಚರ್ಚೆ, ಕಾವ್ಯವಾಚನ ನನ್ನ ಮನಸ್ಸನ್ನು ಇನ್ನಿಲ್ಲದ ಹಾಗೆ ಕಲಕಿರಬೇಕು. ರಾತ್ರಿ ಕನಸಿನಲ್ಲಿ ಅವರಾಡಿದ ಯಾವುದೋ ಮಾತನೊಪ್ಪದ ನಾನು, ವಾದಿಸುವುದಕ್ಕೆ ಹೊರಳಿದಾಗ ಮಂಚದಿಂದ ಬಿದ್ದು ಹಣೆಗೆ ಗಜ್ಜುಗದ ಗಾತ್ರದ ಬೋರೆ ಬಂದಿತ್ತು. ನಾನು ನಾನಾಗಿಯೇ ಉಳಿದು ಅವರ ಗಟ್ಟಿ ವ್ಯಕ್ತಿತ್ವದ ಪ್ರಭಾವಳಿಯಲ್ಲಿ ಕಾಣದ ಹಾಗಾಗಬಾರದೆನ್ನುವ ಎಚ್ಚರವನ್ನು ಕಲ್ಪಿಸಿತ್ತು.

  ಅದಾದ ಮೇಲಿನ ಎರಡು ವರ್ಷಗಳು ನಮ್ಮಿಬ್ಬರ ನಡುವಿನ ಪೈಪೋಟಿಯ ಕಾಲ ದೂರದ ಕುಮಟಾದಲ್ಲಿ ಕೂತು ಅವರು ಕವನವಾದ ಮೇಲೆ ಕವನ ಬರೆದರೆ, ನಾನಿಲ್ಲಿ ಬೆಂಗಳೂರಿನಲ್ಲಿ ಕೂತು ಕವನವಾದ ಮೇಲೆ ಕವನ ಬರೆದೆ. ಬೆಂಗಳೂರಿಗೆ ಅವರು ಬಂದಾಗ ನನ್ನ ಮನೆಯಲ್ಲೇ ಒಂದೆರಡು ಬಾರಿ ಉಳಿದಿದ್ದರು. ಅಂಥ ದಿನಗಳ ಸಂಜೆ ರಾತ್ರಿಗಳನ್ನು ನಾವು ಕಾವ್ಯ ಕ್ರೀಡೆಗೆ ಮೀಸಲಾಗಿಡುತ್ತಿದ್ದೆವು. ದೀಪಾವಳಿ ಅಥವಾ ವೈಶಾಖ ಶುದ್ಧ ಪೂರ್ಣಿಮೆಯಂತಹ ಅವಕಾಶವನ್ನು ವಸ್ತುವನ್ನಾಗಿ ಮಾಡಿಕೊಂಡು ರಾತ್ರೋರಾತ್ರಿ ಒಂದೇ ಸೂರಿನಡಿ ಕೂತು ಕವನಗಳನ್ನು ಬರೆಯುತ್ತಿದ್ದೆವು. ಅವಕಾಶ ಸಿಕ್ಕಾಗ ಅಥವಾ ಅವಕಾಶವನ್ನು ಕಲ್ಪಿಸಿಕೊಂಡು ನಾವು ನಂಬಿದ್ದ ಕಾವ್ಯ ಮಾರ್ಗದ ಲೇಖನಗಳನ್ನು ಬರೆದೋ, ಬಾಷಣಗಳನ್ನು ಬಿಗಿದೋ, ನಮ್ಮೊಳಗಿನ ಉತ್ಸಾಹದ ಮೋಂಬತ್ತಿ ಸಂಪ್ರದಾಯವಾದಿಗಳ ಧಾಳಿಗಾಳಿಯಲ್ಲಿ ಆರಿಹೋಗದ ಹಾಗೆ ಕಾಪಾಡಿಕೊಂಡಿದ್ದೆವು.

  ಹೀಗೆ ನಾವು ಒಟ್ಟು ಬರೆದ ಕವನಗಳನ್ನು ಹಿನ್ನೋಟದ ವಿವೇಕದಲ್ಲಿ ಪರಿಭಾವಿಸಿದಾಗ, ಅವರ ಕವನಗಳು ನನ್ನವಕ್ಕಿಂತ ಮೇಲ್ಮಟ್ಟದವು ಅನ್ನಿಸಿದರೂ, ಆಗ ನನ್ನ ಕವನಗಳು ಹೆಚ್ಚಿನ ಒಂದು ಆಕರ್ಷಣೆಯನ್ನು ಪಡೆದುಕೊಂಡಿದ್ದು, ಹೆಚ್ಚು ಮೆಚ್ಚುಗೆಯನ್ನು ಗಳಿಸಿದ್ದು ನೆನಪಾಗುತ್ತದೆ.
  ನಾನು ಕವನಗಳನ್ನು ಭಾವಾಭಿನಯ ಪೂರ್ವಕವಾಗಿ ಓದುತ್ತಿದ್ದೆ, ಬದುಕನ್ನು ಅರ್ಥೈಸುವುದಕ್ಕೆ ಕಾಮ ಒಂದು ಪ್ರಧಾನ ಸಾಧನೆಯೆಂದು ನಂಬಿದ್ದ ನನ್ನ ಕವನಗಳಲ್ಲಿ ಕಚಗುಳಿಯಿಡುವಂತಹ ಪ್ರತಿಮೆಗಳು ನಮ್ಮೆದುರಿಗಿರುತ್ತಿದ್ದ ಹದಿಹರೆಯದವರ ಮನಸ್ಸನ್ನು ಸುಲಭವಾಗಿ ಕದಿಯುತ್ತಿದ್ದವು. ನವೋದಯ ಮಾರ್ಗದಲ್ಲಿ ಹತ್ತಾರು ವರ್ಷಗಳವರೆಗೆ ಕಾವ್ಯ ಕೃಷಿ ಮಾಡಿದ್ದ ಅಡಿಗರಿಗೆ ಇಲ್ಲದೆ ನನಗೆ ಸುಲಭವಾಗಿ ದಕ್ಕಿದ್ದ ನಿರ್ಭಿಡೆಯೋ, ಸಂಗ್ರಹವಾಗಿ ಹೇಳಬೇಕೆನ್ನುವ ಅವರ ಹಟವೋ, ಅಥವಾ ತಡವರಿಸುತ್ತಾ ಅವರು ಓದುತ್ತಿದ್ದ ರೀತಿಯೋ, ಕಾರಣವಾಗಿ ನಾನು ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದ ಕಾಲ.

  ಒಂದು ಬೆಳಗ್ಗೆ ಸ್ನೇಹಿತರೊಬ್ಬರ ಜೊತೆಯಲ್ಲಿ ಅವರ ಮೈಸೂರಿನ ಮನೆಗೆ ಹೋದಾಗ ಅವರು ಬಚ್ಚಲು ಮನೆಯಲ್ಲಿದ್ದರು. ಅವರು ಅಭ್ಯಾಸಕ್ಕೆ ಉಪಯೋಗಿಸುತ್ತಿದ್ದ ಕೊಠಡಿಯಲ್ಲಿ ಇದ್ದದ್ದು ಎರಡೇ ಕುರ್ಚಿಗಳು. ನೋಡಬಂದವರಿಗೆಂದಿದ್ದ ಕುರ್ಚಿಯಲ್ಲಿ ನನ್ನ ಸ್ನೇಹಿತ ಆಗಲೇ ಕೂತಿದ್ದರಿಂದ ನಾನು ಅಡಿಗರು ಬಳಸುತಿದ್ದ ಕುರ್ಚಿಯ ಮೇಲೆ ಅವರು ಬರುವುದನ್ನು ಕಾಯುತ್ತ ಕೂತಿದ್ದೆ. ಅಡಿಗರು ಬಂದಾಗ ಏನನ್ನೂ ಹೇಳಿರಲಿಲ್ಲ. ಆಮೇಲೆ ಅಂದರಂತೆ. “ನೋಡಿದಿರಾ ಆ ಶರ್ಮನ ಧಿಮಾಕನ್ನು? ನಾನು ಇನ್ನೂ ಬದುಕಿರುವಾಗಲೇ ನನ್ನ ಕುರ್ಚಿಯ ಮೇಲೆ ಅವನ ಕಣ್ಣು!”

  ಸತ್ತವರನ್ನು ಆಕಾಶಕ್ಕೆ ಎತ್ತಿ ಹಿಡಿದು ನಮಗೆ ನಮ್ಮ ಬದುಕಿಗೆ ಇನ್ನೆಂದೂ ಎಟುಕದ ಹಾಗೆ ಮಾಡುವ ನಮ್ಮ ಸ್ವಭಾವವನ್ನು ನೆನೆದೇ ಈ ಪ್ರಸಂಗವನ್ನು ಹೇಳಿದ್ದೇನೆ. ಅಡಿಗರು ನಮ್ಮೆಲ್ಲರ ಹಾಗೆ ಕೋಪ, ಹೊಟ್ಟೇಕಿಚ್ಚು, ಪ್ರೀತಿ, ಹಗಲುಗನಸುಗಳಂತಹ ಸ್ಪಂದನೆಗಳಿಗೆ ಒಳಗಾಗುವ ಮನುಷ್ಯರಾಗಿ ಕೊನೆಯವರೆಗೂ ಉಳಿದಿದ್ದಕ್ಕೇ ಅವರ ಕಾವ್ಯ ಜೀವಂತವಾದದ್ದು.
  ***

  1-3-1985ರ ‘ದೀಪ್ತಿ’ ಪಾಕ್ಷಿಕದಲ್ಲಿ ಪ್ರಕಟವಾದ ಕಾರ್ಟೂನು

   

  ನನ್ನೆದುರಿಗಿರುವ ಅವರ ಕಾಗದಗಳ ಕಟ್ಟನ್ನು ಬಿಚ್ಚಿದಾಗ ಒಂದು ಗಮನ ಸೆಳೆಯುತ್ತಿದೆ. ೧೯೭೧ರಲ್ಲಿರಬೇಕು. ಜನಸಂಘದ ಪರವಾಗಿ ಅವರು ರಾಜಕೀಯಕ್ಕೆ ಇಳಿದು ಚುನಾವಣೆಯಲ್ಲಿ ಸೋತಿದ್ದರು. ಇಂಗ್ಲೆಂಡಿನಲ್ಲಿದ ನನಗೆ ಚುನಾವಣೆಗಾಗಿ ದುಡ್ಡು ಬೇಕೆನ್ನುವ ಅವರ ಕಾಗದ ಬಂದು ತುಂಬಾ ದುಃಖವೇ ಆಗಿತ್ತು. ದುಡ್ಡು ಕಳಿಸಿ ಅವರಿಗೆ ಸೋಲಾಗಲಿ ಎಂದು ಹರಸಿದ್ದೆ.
  ಅವರು ಸೋತು ಕನ್ನಡ ಕಾವ್ಯ ಗೆದ್ದಿತು. ತಮ್ಮ ರಾಜಕಾರಣಕ್ಕೆ ಅವರು ಕೊಡುವ ಸಮಜಾಯಿಷಿ ಅತೃಪ್ತಿ ಕೊಟ್ಟರೂ ಅತೀ ಸ್ಪಷ್ಟವಾಗಿ ಮನವರಿಕೆಯಾಗುವುದು ಅವರು ತಾವು ನಂಬಿದ್ದರ ಬಗ್ಗೆ ಇಟ್ಟುಕೊಂಡಿದ್ದ ಛಲ – ಜೊತೆಗೆ ಒಂದು ವಿಚಿತ್ರ ಹಾಗೂ ಅನಿರೀಕ್ಷಿತವಾದ ಮುಗ್ಧತೆ.

  ಅದು ಕಂಡಿದ್ದು ಅವರು ಎರಡನೇ ಬಾರಿ ಚುನಾವಣೆಗೆ ನಿಂತಾಗ. ಬಿ.ಜೆ.ಪಿ.ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಅವರನ್ನು ಕೇಳಿದಾಗ ಹೀಗೂ ಹೇಳಿದ್ದು ಅವರ ಸ್ವಭಾವಕ್ಕೆ ಕನ್ನಡಿ ಹಿಡಿಯುವಂತಹುದು. “ಜನತಾದಳದವರು ಕೇಳಬಹುದೇನೋ ಅನ್ನುವ ಆಸೆಯಿತ್ತು. ಅವರು ಕೇಳಲಿಲ್ಲ. ಮೊದಲು ಬಂದು ಕೇಳಿದ ಬಿ.ಜೆ.ಪಿ.ಗೆ ಹೂಂ ಅಂದೆ”.

  ಮನುಷ್ಯರಲ್ಲಿ ಮನುಷ್ಯನಾಗಿ ಎಲ್ಲ ರಾಗದ್ವೇಷಗಳು ತಮ್ಮೊಳಗಿದ್ದ ಸತ್ವವನ್ನು ಎಂದೂ ನಿರಾಕರಿಸದೇ ಅವರ ಒಟ್ಟೊಟ್ಟಿಗೇ ದೈವತ್ವದ ಹಂಬಲವನ್ನು ಕಾಪಾಡಿ ಕೊಂಡುಬಂದಿದ್ದ ಗೋಪಾಲಕೃಷ್ಣ ಅಡಿಗರಿಂದ ನಾವು ಕಲಿಯಬೇಕಾದ್ದು ಸಾಕಷ್ಟಿದೆ. ಬದುಕಿನ ಅರ್ಥವನ್ನು ಬಗೆಯುವುದಕ್ಕೋಸ್ಕರ ಕಾವ್ಯವನ್ನು ಒಂದು ಸಾಧನವನ್ನಾಗಿ ಬಳಸಿಕೊಂಡ ಅವರ ತಪಸ್ಸು ನಮ್ಮನ್ನು ಕಾವ್ಯ ಕ್ರಿಯೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವಂತೆ ಪ್ರೇರಿಸುವುದಾದರೆ ಅವರು ಬದುಕಿದ್ದಕ್ಕೆ ಅರ್ಥ ಬರುತ್ತದೆ. ಕನ್ನಡ ಕಾವ್ಯಕ್ಕೂ. ನಾನಿದ್ದಾಗ ಅವರೂ ಇದ್ದದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ.
  -ನವೆಂಬರ್ ೧೯೯೨

  2 Comments

  Leave a Reply