ಕೌಶಲದ ಉಡುಗೊರೆ

ದ. ರಾ. ಬೇಂದ್ರೆ

'ಭಾವತರಂಗ' ಕವನ ಸಂಕಲನಕ್ಕೆ ಬರೆದ ಮುನ್ನುಡಿ | ೧೯೪೬

    ನನ್ನ ತರುಣ ಮಿತ್ರರಾದ ಗೋಪಾಲಕೃಷ್ಣ ಅಡಿಗರ ‍‌‌‌‌’ಭಾವತರಂಗ’ಕ್ಕೆ ಮುನ್ನುಡಿಯಾಗಿ ಅವರ ಅಪೇಕ್ಷೆಯಂತೆ ಎರಡು ಮಾತುಗಳನ್ನು ಬರೆಯುತ್ತಿದ್ದೇನೆ. ನನ್ನನ್ನು ಅವರು ಒಬ್ಬ ಹಿರಿಯ ಮಿತ್ರ, ಗತ ದಶಕಗಳ ಕವಿ ಎಂದು ಮನ್ನಿಸುತ್ತಾರೆ; ಪ್ರೀತಿಸುತ್ತಾರೆ. ನನ್ನ ಮೆಚ್ಚಿಗೆಯ ಮಾತುಗಳು ತಮ್ಮ ಪ್ರಥಮ ಅಪತ್ಯದ ತಲೆಯ ಮೇಲಿರಲಿ ಎಂದು ಅವರು ಆಶಿಸುವುದು ತಾರುಣ್ಯದ ವಿನಯಕ್ಕೆ ಸಹಜವಾದದ್ದು. ಈ ನನ್ನ ಮೆಚ್ಚಿಗೆಯ ಮಾತಿನ ಜೊತೆಗೆ ಹೆಚ್ಚಿಗೆ ಎರಡು ಮಾತು ಸೇರಿದರೆ ಅವು ವಿಮರ್ಶೆಯ ಎಚ್ಚರದ ಮಾತುಗಳೆಂದು ಕವಿಗಳೂ, ಸಹೃದಯರೂ ಮನ್ನಿಸುವರೆಂದು ನಾನು ನಂಬಿದ್ದೇನೆ.
    ಮೊದಲನೆಯ ಮಾತೆಂದರೆ ನಾನು ಕವಿತೆಗಳನ್ನು ಬರೆಯಲು ಪ್ರಾರಂಭಿಸಿದಾಗ ಇದ್ದ ಶೈಲಿಯ ಪ್ರಾಯೋಗಿಕತೆ ಇಂದಿನ ಕನ್ನಡದಲ್ಲಿ ಅಷ್ಟು ಮಟ್ಟಿಗೆ ಇಲ್ಲ. ಒಂದು ಬಗೆಯ ಸಿದ್ಧ ಶೈಲಿಯಿಂದ ನವಕವಿಗಳು ಹೊರಡುತ್ತಾರೆ. ಗೆಳೆಯ ಗೋಪಾಲಕೃಷ್ಣರಿಗೆ ಅವರ ವಯಸ್ಸಿಗಿದ್ದ ಶೈಲಿಯ ಪಾಕ ನನಗೆ ಆ ವಯಸ್ಸಿಗೆ ಇರಲಿಲ್ಲ. ಆದರೆ ನಮಗೆ ಆ ಕಾಲಕ್ಕೆ ಇದ್ದ ನಾವಿನ್ಯದ ಅನುಕೂಲ ಈಗಿನವರಿಗಿಲ್ಲ. ಹೀಗೆ ಅನುಕೂಲ ಪ್ರತಿಕೂಲಗಳ ಬಂಡೆಗಳೊಳಗಿಂದ ಹಾಯ್ದು ಶ್ರೀ ಅಡಿಗರ ಭಾವತರಂಗಿಣಿ ಕನ್ನಡದ ಹೃದಯಸಮುದ್ರದತ್ತ ಹೊರಟಿದೆ. ಅಲ್ಲಿ ಅದಕ್ಕೆ ಸ್ವಾಗತವಿದೆ. ಅಡಿಗರು ವಿದ್ಯಾರ್ಥಿದೆಸೆಯಲ್ಲಿಯೇ ಶ್ರೀಯವರ ಪದಕವನ್ನು ದೊರಕಿಸಿದವರು. ಮುಖಪರಿಚಯವಿಲ್ಲದಿದ್ದರೂ ತಮ್ಮ ಕವನಗಳಿಂದಲೇ ಕನ್ನಡ ಜನದ ಪ್ರೀತಿಯನ್ನು ಹೊಂದಿದವರು.ಕಥೆ ಕಾದಂಬರಿಗಳಿರುವ ಪ್ರಕಟನಾ ಸೌಲಭ್ಯ ಕವನಸಂಗ್ರಹಗಳಿಗೆ ಇರುವುದಿಲ್ಲ. ‘ಭಾವತರಂಗ’ವು ಇಷ್ಟು ಬೇಗ ಪ್ರಕಟಣೆಗೆ ಅಣಿಯಾಗುವುದು ಜನರಲ್ಲಿ ಸಾಹಿತ್ಯಾಭಿರುಚಿ ಬೆಳೆದಿರುವ ಚಿಹ್ನೆಯೆಂದೇ ನಾನು ಭಾವಿಸುತ್ತೇನೆ.

    ‘ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು ಬಿನ್ನಗಾಗಿದೆ ಮನವು’ ಎಂದು ಅವರು ಕೊರಗುವ ಕಾರಣವಿಲ್ಲ. ವರ್ಧಿಷ್ಣುವಾದ ಸವಿಮರ್ಶಕ ಕಾವ್ಯ ನಿರ್ಮಾಣೋತ್ಸಾಹದಲ್ಲಿ ಹಳೆಯದನ್ನು ಚೆಲ್ಲಿ ಹೊಸದನ್ನು ಚಿಗುರಿಸುವ ಋತುವೈಭವ ಇರುತ್ತದೆ. ಅಡಿಗರ ನುಡಿಯಲ್ಲಿ ಕೆಚ್ಚಿದೆ; ಲಾಲಿತ್ಯವಿದೆ; ವಿಧಿಗೆ ಇದಿರಾಗುವ ಅನಿವಿ೯ಣ್ಣ ಉತ್ಸಾಹವಿದೆ. ಹೊಸ ಬಾಳಿನ ಅನಂತ ಕ್ಷಿತಿಜ ಅವರ ಕಣ್ಣಿನ ಕದಿರಿಗೆ ದುಬೀ೯ನಿನ ಹರಿತವನ್ನು ಕೊಟ್ಟಿದೆ. ಅದರಿಂದ ಅವರ ಏಳು ಬೀಳಿನ ತೇಂಕಾಟ ಇಂದಿನ ಜೀವನದ ಛಂದವಾಗಿ ಅಂದವಾಗಿ ಸಹೃದಯರಿಗೆ ಉತ್ಸುಕತೆಯನ್ನೂ ಉತ್ಸಾಹವನ್ನೂ ಸಮಾನವಾಗಿ ಕೊಡುವುದು. ತನ್ನ ಭಾವಕ್ಕೆ ನಾಡಿನ ನುಡಿಯ ತೊಡಿಗೆಯನ್ನು ಇಡುವಾಗ ಯಾವ ಕವಿಯೂ ತನ್ನ ಭಾವದ ಹಾಸಿಗೆ ಜನಜೀವನದ ಹೊಕ್ಕನ್ನು ಸೇರಿಸದೆ ನಿವಾ೯ಹವಿಲ್ಲದಾಗುವುದು. ಅಂಚು ಸೆರಗು ತನ್ನದಾದರೆ ಮೈ ಎಲ್ಲರದಾಗಿಬಿಡುತ್ತದೆ ಕವಿಹೃದಯದೊಡನೆ ಒಂದಾಗುವುದಕ್ಕೆ ಇಲ್ಲಿಯೇ ಹಾದಿ. ಕವಿ ಗೆಳೆಯನನ್ನೇ ಕುರಿತು ಬರೆಯಲಿ, ಗೆಳತಿಯನ್ನೇ ಕುರಿತು ಬರೆಯಲಿ, ನಾಡಿನ ನುಡಿಯುನ್ನೇ ಮಿಡಿಯುಲಿ, ತನ್ನ ಏಕತಾರಿಯನ್ನೇ ಬಾರಿಸಲಿ, ಜನರನ್ನು ತನ್ನೆದೆಯಲ್ಲಿ ಎಳೆದುಕೊಂಡು ಅವರೆದೆಯನ್ನು ಸೇರುತ್ತಾನೆ. ವಿಶ್ವಯುದ್ಧದ ದಾಹ, ಶಾಂತಿ; ಅಗಸ್ಟ್ ಒಂಭತ್ತರ ವೀರ, ಕರುಣೆ; ಇವುಗಳಂತೆಯೇ ಕವಿಯ ವೈಯಕ್ತಿಕ ಬಿಡುಗಡೆಯಲ್ಲಿಯೂ ಅವರ ದಿಙ್ಮೂಡ ವೃತ್ತಿಯಲ್ಲಿಯೂ ಒಂದು ವಿಮೋಚನೆಯ ಬಂಧದ ಭಾವ ಎದೆಯನ್ನು ತಟ್ಟುತ್ತದೆ. ಅವರ ವಾಣಿ ಅಲ್ಲಲ್ಲಿ ಪ್ರೌಢವಾಗಿದೆ.

    ಶ್ರೀ ಅಡಿಗರು ಈವರೆಗೆ ಬಹಳ ಬರೆದಿರುವರಾದರೂ ಹೊಸನೀರು ಇನ್ನೂ ಅವರನ್ನು ಹೊಗುತ್ತಲೇ ಇದೆ. ಅವರ ಕಾವ್ಯವಾಹಿನಿ ತನ್ನ ರಭಸದಂತೆ ತನ್ನ ಪ್ರಶಾಂತಿಯನ್ನೂ ನಾಡಿಗೆ ನೀಡಿ ಧನ್ಯತೆಯನ್ನು ಪಡೆಯಲಿ. ಇಂದಿನ ಕನ್ನಡನುಡಿಯ ಕಾಂತಿ ಮಾಧುರ್ಯ ಓಜಸ್ಸುಗಳನ್ನು ಬೆಳೆಸುವ ನವಕವಿಗಳಲ್ಲಿ ನಿಸ್ಸಂಶಯವಾಗಿ ಅಡಿಗರ ಕೌಶಲದ ಉಡುಗೊರೆಯಿದೆ. ಅವರ ಗೀತಗಳು ಕೆಲವು ಮೂಕಹೃದಯಗಳಿಗೆ ಕಲಕಂಠಗಳನ್ನೂ ಸುಕುಮಾರ ಹೃದಯಗಳಿಗೆ ಒಂದು ಭರವಸೆಯನ್ನೂ ಕೊಡುವುವೆಂದು ನಾನು ಹೇಳಬಲ್ಲೆ.

    Leave a Reply