ಮಣ್ಣಿನ ವಾಸನೆ

ಬೇಸಗೆಯ ಕೊನೆಕೊನೆಯಲ್ಲಿ ಬಿರುಬಿಸಿಲಿನ ತಾಪಕ್ಕೆ ನೆಲ ಕಾದು ಕೆಂಪಾಗಿ, ಉತ್ತು ಬಿಟ್ಟಿದ್ದ ಗದ್ದೆ ಮಣ್ಣು ಧೂಳು ಧೂಳಾಗಿರುವಾಗ ಆಕಾಶದಲ್ಲಿ ಮೋಡ ಮಂದಯಿಸಿ ಕಪ್ಪು ಕಪ್ಪಾಗಿ, ಆಗ ತಂಗಾಳಿಯ ತೆರೆಯೊಂದು ದೂರದಿಂದ ಬಂದು ಬಡಿದಾಗ, ಹಠಾತ್ತಾಗಿ ಹನಿ ಹನಿ ಮಳೆ ನೆಲಕ್ಕೆ ಸಿಂಪಡಿಸಿದಾಗ ನೆಲದೊಡಲಿನಿಂದ ಕಂಪೊಂದು ಹೊಮ್ಮಿ ಬರುತ್ತದೆ. ಆ ಮಣ್ಣಿನ ವಾಸನೆ ಅಂತರಂಗದ ಅತ್ಯಂತ ಕೆಳ ಪದರುಗಳನ್ನು ತಟ್ಟಿ ಮೈಯೆಲ್ಲ ನವಿರುಗಟ್ಟಿ ಎಲ್ಲೆಲ್ಲೋ ಸುತ್ತಾಡಿ ಕೊನೆಗೆ ಮನೆಗೆ ಮರಳಿದಂತೆ ಮನಸ್ಸು ಸುಕ್ಕು ಬಿಚ್ಚಿ ನುಣುಪಾಗುತ್ತದೆ. ಅಪೂರ್ವವಾದ, ವಿವರಣೆಗೆ ಅಸಾಧ್ಯ ಎನ್ನುವಂಥ ಅನುಭವ ಆಗುತ್ತದೆ. ತೀರ ಸಾಮಾನ್ಯವೂ ಅತ್ಯಂತ ನಿಕೃಷ್ಟವೂ ಎಂದು ಭಾವಿಸಲಾಗುವ ಈ ಮಣ್ಣು, ಅದರ ವಾಸನೆ ನಮ್ಮ ಜೀವನದ ಗುಟ್ಟನ್ನೇ ರಟ್ಟು ಮಾಡುವ ಒಂದು ಒಗಟು ಎನ್ನಿಸುತ್ತದೆ. ಆ ಒಗಟಿನ ಅರ್ಥವೇನು?
ತಿಳಿಯುವುದಿಲ್ಲ, ತಿಳಿದ ಹಾಗೆ ಅನ್ನಿಸಿದರೂ ಹೇಳಬರುವುದಿಲ್ಲ. ಈ ಮಣ್ಣು – ಕೊಳೆ, ಕಸ, ಗೊಬ್ಬರ, ಹುಳು, ಕೊಳೆಯುತ್ತಿರುವ, ನಾರುತ್ತಿರುವ ಸೇಂದ್ರಿಯ ಪದಾರ್ಥಗಳ ಅಸಹ್ಯ ಹೇಗೋ ಹಾಗೆಯೇ ಕೊನರುತ್ತಿರುವ ಚಿಗುರು; ಅರಳಿದ, ಅರಳುತ್ತಿರುವ ಹೂವು, ಕಾಯಿಯ ಹುಳಿ; ಹಣ್ಣಿನ ಸವಿ; ಪುಟ್ಟ ಕೂಸಿನ ಮುಗ್ಧ ಮಂದಹಾಸ; ಹೆಣ್ಣಿನ ಕಣ್ಣಿನ ಹೊಳಪು, ಕೆನ್ನೆಯ ಕೆಂಪು, ಉಸುರಿನ ಕಂಪೂ ಹೌದು. ಮಣ್ಣನ್ನು ಬಿಟ್ಟರೆ ಇವೆಲ್ಲ ಎಲ್ಲಿ? ಗೊಬ್ಬರ ಮಣ್ಣುಗಳ ಸತ್ವವೇ ಹೂವಿನ ಮೃದುತ್ವ, ಹಣ್ಣಿನ ಪರಿಪಾಕ, ಬೀಜದ ಪ್ರವಾದಿತ್ವ ಅಲ್ಲವೇ? ಹೂವು ಬೇಡ, ಹೂವಿನ ಕಂಪು ಬೇಕು ಎಂದು ಹಿರಿಯ ಕವಿ ಅಪ್ಪಣೆ ಕೊಡಿಸಿದ್ದು ಈಗ ನೆನಪಿಗೆ ಬರುತ್ತದೆ. ಕಾವ್ಯವೂ ಹಾಗೆಯೇ ಎಂದು ಅವರು ಸೂಚಿಸಿದ್ದರು; ಗುಲಾಬಿ ಬೇಕು, ಅದರ ಮುಳ್ಳು ಬೇಡ; ಗುಲಾಬಿಯ ಅತ್ತರು ಬೇಕು; ಗುಲಾಬಿ ಬೇಡ; ಮುಗಿಲು ಬೇಕು, ನೆಲ ಬೇಡ; ಅಂತರಂಗದ ಅದೃಶ್ಯ, ಅಮೂರ್ತ ಜೀವನ ಬೇಕು; ಶರೀರದ ಕೋಟಲೆ ಬೇಡ- ಎಂಬ ಈ ವಾಸ್ತವಿಕ ದ್ವಂದ್ವದ ನಿರಾಕರಣೆ ಒಂದು ಬಗೆಯ ಮನೋಧರ್ಮಕ್ಕೆ ತೀರ ಸಾಧಾರಣವಾದುದು. ಇರುವ ಎರಡೂ ಮಣ್ಣಿನ ಕಣ್ಣುಗಳನ್ನು ಮುಚ್ಚಿಕೊಂಡು, ಸಶರೀರ ಸ್ವರ್ಗಾರೋಹಣ ಮಾಡಿ, ಮನಸ್ಸಿನಲ್ಲಿಯೇ ಮಂಡಿಗೆ ತಿಂದು, ಬರಿಗೈಯಲ್ಲಿ ಹತ್ತೊಂಬತ್ತು ಮೊಳ ಹಾಕಿ, ಬಾಳನ್ನೇ ಒಂದು ವಿಸ್ತೃತ, ನಿರಂತರ ಹಗಲುಗನಸನ್ನಾಗಿ ಮಾಡುವ ಪ್ರವೃತ್ತಿ ಇದು. ಇದು ಜೀವನದಲ್ಲಿ ವ್ಯಕ್ತಗೊಂಡಾಗ ಪರೋಪದೇಶ ಪಾಂಡಿತ್ಯ, ಭಾಷಣ ಶೂರತ್ವವಾಗಿ, ಸಾಹಿತ್ಯದಲ್ಲಿ ಆದರ್ಶಪರ ವಾಗ್ವಿಜೃಂಭಣೆಯೋ, ಶಬ್ದಗಳ ಅರ್ಥವನ್ನೂ ವ್ಯಕ್ತಿತ್ವವನ್ನೂ ಮರೆತು ಬರೇ ನಾದವನ್ನು ಹಿಂಡಬಯಸುವ ಬುದ್ಧಿ ಕ್ಷಯವೋ ಆಗಿ ಗೋಚರವಾಗುತ್ತದೆ. ತ್ರಿಕರಣಗಳಲ್ಲಿ ಮನಸ್ಸಿಗೆ ಮಾತ್ರ ಬೆಲೆ ಕೊಡುವ, ವಾಕ್ಕಿನಲ್ಲಿ ಮಾತ್ರ ಪ್ರವೃತ್ತನಾಗುವ, ಕರ್ಮನಿವೃತ್ತಿ ಮಾರ್ಗ ಇದು. ಕೈ ಕೆಸರಾಗದೆ ಬಾಯಿ ಮೊಸರಾಗಬೇಕೆಂದು ಬಯಸುವ ಕರ್ಮ ಸಂನ್ಯಾಸ ಇದು.
 
ಆತ್ಮವೊಂದೇ ಯಾವಾಗಲೂ ಇರುವಂಥದಾದುದರಿಂದ ಅದೊಂದೇ ಸತ್ಯವಾಗಿಯೂ ಆದ ಕಾರಣ ಆಧ್ಯಾತ್ಮಿಕತೆಯೇ ಪರಮ ಪುರುಷಾರ್ಥವಾಗಿಯೂ ಇರಬಹುದು -ಅದು ತತ್ವಜ್ಞಾನಕ್ಕೆ ಸಂಬಂಧಪಟ್ಟ ಮಾತು; ಜೀವನವನ್ನು ದಾಟಿ ಆಚೆ ಹೋಗಿ ತುರೀಯಾವಸ್ಥೆಯನ್ನು ಮುಟ್ಟಿ ಸತ್ಯವನ್ನು ಕಂಡವರು ಆಡಬಹುದಾದ ಮಾತು ಅದು. ಅಂಥವರೂ ಕೂಡಾ ಸಾಯುವ ತನಕ ಇಲ್ಲೆ, ಈ ಮಣ್ಣಿನಲ್ಲೇ, ಈ ದೇಹದೊಡನೆಯೇ ಇರಬೇಕಾಗುತ್ತದೆ. ಈ ನಾಲಗೆ ಈ ಕೈ ಬಾಯಿಗಳ ಮೂಲಕವಾಗಿಯೇ ತಮ್ಮ ದಿವ್ಯ ಜ್ಞಾನವನ್ನು ಪ್ರಕಟಿಸಬೇಕಾಗುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ. ಲೋಕ ಸಂಗ್ರಹದ, ನಿಷ್ಕಾಮ ಕರ್ಮದ ಅಗತ್ಯವನ್ನು ಅವರಲ್ಲಿ ಅನೇಕರು ಒತ್ತಿ ಹೇಳಿದ್ದನ್ನೂ ನಾವು ಮರೆಯುವಂತಿಲ್ಲ. ನಾವು ಜೀವಂತವಾಗಿರುವವರೆಗೂ ಈ ದೇಹ ವ್ಯಾಪಾರವೇನೂ ನಿಲ್ಲತಕ್ಕದ್ದಲ್ಲ. ನಮ್ಮ ಆತ್ಮದಲ್ಲೋ ಅಂತರಂಗದಲ್ಲೋ, ಏನಾದರೂ ನಡೆಯುತ್ತಿದ್ದರೆ ಅದು ವ್ಯಕ್ತವಾಗುವುದು ಈ ಮಣ್ಣಿನ ಶರೀರದ ಮೂಲಕವಾಗಿಯೇ. ಕೇವಲ ಆತ್ಮಗಳ ದರ್ಶನ ಭಾಗ್ಯ ನಮ್ಮ ಈ ಮಣ್ಣಿನ ಕಣ್ಣುಗಳಿಗೆ ಇಲ್ಲ; ಎಲ್ಲಾದರೂ ಕೇವಲ ಆತ್ಮಗಳು ಪ್ರಕಟವಾಗುವುದೂ ಸತ್ತ ಮೇಲೇ ಹೊರತು ಅದಕ್ಕೆ ಮೊದಲು ಅಲ್ಲ. ನಮ್ಮ ನಿಜವಾದ ಬದುಕಿನಲ್ಲಿ- ಹಗಲುಗನಸಿನ ಮಂಪರಿನಲ್ಲಿ ಅಲ್ಲ – ನಮಗೆ ಆತ್ಮದ ಅರಿವು ಏನಾದರೂ ಬರುವುದಿದ್ದರೆ ಅದು ಈ ದೇಹದ ಮೂಲಕವಾಗಿ ಅಲ್ಲದೆ ಅನ್ಯಥಾ ಅಲ್ಲ. ಅದೇ ರೀತಿ ಕಾವ್ಯವೂ ಕೂಡಾ ಈ ಸಜೀವ ಜಗತ್ತಿಗೆ ದ್ವಂದ್ವ ಪ್ರಪಂಚಕ್ಕೆ ಸೇರಿದ್ದು. ಅಲ್ಲಿಯೂ ಕೂಡ ಕವಿಯ ಅಂತರ್ಗತವಾದ ಭಾವನೆಯೋ ಅನುಭವವೋ ಹೊಸ ಕಾಣ್ಕೆಯೋ ಇನ್ನೊಬ್ಬರ ಅರಿವಿಗೆ ಬರುವುದು ಶಬ್ದ ಛಂದಸ್ಸು ಲಯಗಳಲ್ಲಿ ಅವು ಶರೀರದಾರಣೆ ಮಾಡಿದಾಗ ಮಾತ್ರ. ಕಾವ್ಯ ಅಥವಾ ಇನ್ನೂ ಯಾವುದೇ ಕಲೆಯಾಗಲೀ ಕವಿಯ ಅಂತರಂಗ ವ್ಯಾಪಾರಗಳಿಗೆ ಹೊರಗಿರುವ, ಹೊರಗೆ ನಡೆಯುವ ವಿದ್ಯಮಾನ, ಚಟುವಟಿಕೆ, ಘಟನೆ, ವಸ್ತು -ಇವುಗಳಲ್ಲಿ ಮಾತ್ರ ರೂಪ ತಳೆಯಬಲ್ಲದು. ಆತ್ಮವನ್ನು ಶರೀರದ ಮೂಲಕವೇ ಊಹಿಸಿ ಅರಿಯಬೇಕಾಗುವಂತೆ ಕಲೆಗಾರನ ವೈಯಕ್ತಿಕ ಅನುಭವವನ್ನು ಅವನ ಕೃತಿಗಳ ಮೂಲಕ ಮಾತ್ರವೇ ಊಹಿಸಿ ತಿಳಿಯುವುದು ಸಾಧ್ಯ.
 
ಕವಿಯ ಕರ್ಮ ಕಾವ್ಯ; ಅದು ಅವನ ಭಾಷಣವಲ್ಲ. ಒಂದು ಮಾತಿಗೂ ಅದರಂತೆ ನಡೆಯುವುದಕ್ಕೂ ಇರುವ ವ್ಯತ್ಯಾಸ ಎಷ್ಟು ಗಾಢವಾದದ್ದೋ ಅಷ್ಟೇ ಗಾಢವಾದದ್ದು ಅಂತರಂಗದ ಅನುಭವಕ್ಕೂ ಅದನ್ನು ಕವಿ ಶಬ್ದಗಳಲ್ಲಿ ಸೃಷ್ಟಿಸುವುದಕ್ಕೂ ಇರುವ ವ್ಯತ್ಯಾಸ. ಎಲ್ಲ ಕಲೆಯ ಮೂಲ ದ್ರವ್ಯವೂ ಕಲೆಗಾರನ ವೈಯಕ್ತಿಕ ಅನುಭವವೇ ಹೊರತು ಬೇರೆ ಅಲ್ಲ. ಈ ಅನುಭವಗಳನ್ನು ಪಡೆಯುವುದು ಇಂದ್ರಿಯಗಳ, ಮನಸ್ಸಿನ ಮೂಲಕ. ಹಾಗೆ ಪಡೆದ ಬಹಿರಂಗ ಲೋಕದ ಅನುಭವ ಮನಸ್ಸಿನ ಕೆಳ ಪದರುಗಳಿಗಿಳಿದು ಅಲ್ಲಿ ತುಂಬಿಕೊಂಡಿರುವ ವ್ಯಕ್ತಿಯ ಮತ್ತು ಅವನ ಜನಾಂಗದ ಅರ್ಧಸ್ಮೃತ ಅಥವಾ ವಿಸ್ಮೃತ ಭಾವಾನುಭವ ಸಂವೇದನಗಳೊಡನೆ ಸಮರಸಗೊಂಡು ಮಾಗಿ ಸ್ವಪ್ರದರ್ಶನಕ್ಕೆ ತಕ್ಕ ನಿಮಿಷವನ್ನು ಕಾಯುತ್ತಿರುತ್ತದೆ. ಇದು ಕಲೆಗಾರನಲ್ಲಿ ಮಾತ್ರವಲ್ಲ, ಎಲ್ಲರಲ್ಲೂ ಇರುವ, ಕಲೆಯಾಗಿ ಪರಿಣತವಾಗಬಲ್ಲ, ಯೋಜಿಸಬಲ್ಲ ಕಚ್ಚಾ ಮಾಲು. ಕವಿಯ ಮನಸ್ಸಿನೊಳಗೇ ಇರುವಾಗ ಈ ಅನುಭವ ಅಮೂರ್ತ, ಅಸ್ತವ್ಯಸ್ತ, ರೂಪಹೀನ. ಅದಕ್ಕೆ ತಕ್ಕ ಶರೀರವನ್ನು ಸೃಷ್ಟಿಸಿ ಅದನ್ನು ಕಲೆಯಾಗಿ ಮಾರ್ಪಡಿಸುವುದು ಕಲೆಗಾರನ ಕೆಲಸ. ಆದಕಾರಣ ವಾಗ್ರೂಪಧಾರಣೆ ಮಾಡಿದಾಗಲೇ ಅದು ಕೃತಿ. ಹಾಗೆ ತಕ್ಕ ಶರೀರ ಪಡೆದಾಗಲೇ ಸಾರ್ಥಕ. ಅಂಥ ಶರೀರದ ಮೂಲಕವಾಗಿಯೇ ಅದು ಸಹೃದಯನ ಅಂತರಂಗಕ್ಕೆ ಉತ್ತರಿಸಬೇಕು. ಈ ಶರೀರವನ್ನು ಕವಿ ಸಾಹಿತಿ ತನ್ನ ಮನಸ್ಸಿಗಿಂತ ಭಿನ್ನವಾದ ಹೊರ ಜಗತ್ತಿನ ವಸ್ತು ಗುಚ್ಛಗಳಲ್ಲಿ, ಘಟನಾ ಸರಣಿಯಲ್ಲಿ, ಕ್ರಿಯಾಪರಂಪರೆಯಲ್ಲಿ, ವಿಶಿಷ್ಟ ಸನ್ನಿವೇಶಗಳಲ್ಲಿ ಸೃಷ್ಟಿಸುತ್ತಾನೆ. ಹೀಗೆ ಕವಿಯ ಅನುಭವ ಅಥವಾ ಭಾವ ಯಾವ ಯಾವ ವಸ್ತುರೂಪದಲ್ಲಿ ಮೈತಳೆಯುತ್ತದೋ ಅದನ್ನು ಆ ಆ ಭಾವದ, ಅನುಭವದ ವಸ್ತು ಪ್ರತಿರೂಪ ಅಥವಾ ವಸ್ತುವ್ಯತಿಕರ ಎನ್ನಬಹುದು ಎಂಬ ಕವಿ ಎಲಿಯಟ್ಟನ ಅಭಿಪ್ರಾಯವನ್ನು ಇಲ್ಲಿ ನೆನೆಯಬಹುದು. ಈ ವಸ್ತು ಪ್ರತಿರೂಪ ಯಾವ ಅನುಭವವನ್ನು ಕಲೆಗಾರ ಪ್ರಕಟಿಸಬಯಸುತ್ತಾನೋ ಆ ಅನುಭವದ ಸೂತ್ರವಾಗುತ್ತದೆ. ಹೀಗೆ ಇಂದ್ರಿಯಾನುಭವದಲ್ಲಿ ಕೊನೆಗೊಳ್ಳುವ ಹೊರಜಗತ್ತಿನ ವಿದ್ಯಮಾನಗಳನ್ನು ಕೊಟ್ಟರೆ ಉದ್ದಿಷ್ಟವಾದ ಭಾವದ ಅಥವಾ ಅನುಭವದ ಪ್ರಬೋಧನೆ ಓದುವವನಲ್ಲಿ ಉಂಟಾಗುತ್ತದೆ.
 
ಆದ ಕಾರಣ ಕವಿಯ ಅಥವಾ ಕಲೆಗಾರನ ಕೆಲಸ ತನ್ನ ಅನುಭವಕ್ಕೆ ತಕ್ಕ ವಸ್ತು ಪ್ರತಿರೂಪವನ್ನು ಸೃಷ್ಟಿಸುವುದು. ಈ ಅರ್ಥದಲ್ಲೇ ಕವಿ ‘ನೂತನ ಬ್ರಹ್ಮನಲ್ಲದೆ ಅಘಟಿತ ಘಟನೆಗಳನ್ನು ಕಲ್ಪಿಸುವುದರಿಂದ ಅಲ್ಲ. ಬ್ರಹ್ಮ ಹೇಗೆ ಪ್ರತಿಯೊಂದು ಆತ್ಮಕ್ಕೂ ತಕ್ಕ ದೇಹವನ್ನು ಸೃಷ್ಟಿಸಬೇಕಾಗುತ್ತದೋ ಹಾಗೆ ಕವಿಯೂ ತನ್ನ ಭಾವಕ್ಕೆ ತಕ್ಕ ಪ್ರತಿರೂಪಗಳನ್ನು ಶಬ್ದಗಳಲ್ಲಿ ವಸ್ತುಗಳ ಮೂಲಕ ಸೃಷ್ಟಿಸುತ್ತಾನೆ. ಆತ್ಮ ಹೇಗೆ ದೇಹದೊಳಗಡೆ ಎಲ್ಲೋ ಇದ್ದರೂ ನಮಗೆ ಕಾಣುವುದು ದೇಹಮಾತ್ರವೋ, ಕಾಣುವ ದೇಹದ ವಿವಿಧ ವ್ಯಾಪಾರಗಳಿಂದ ಮಾತ್ರ ನಾವು ಅಂತರ್ಗತ ಆತ್ಮವನ್ನು ಊಹಿಸಿ ತಿಳಿಯಬಹುದೋ, ಅದೇ ರೀತಿ ಕಾಗದದ ಮೇಲೆ ಅಚ್ಚಾಗಿರುವ ಅಕ್ಷರಗಳ ಮೂಲಕವೇ ಅಲ್ಲಿ ರೂಪು ತಳೆಯುವ ಭಾವವನ್ನು ಅರಿತು ಅನುಭವಿಸಬೇಕಾಗುತ್ತದೆ. ಆದ್ದರಿಂದ ಕವಿಯ ಮನಸ್ಸಿನಲ್ಲಿ ಏನಿತ್ತು ಏನಿರಲಿಲ್ಲ ಎಂದು ಕೃತಿಯನ್ನು ಬಿಟ್ಟು ಊಹಾಪೋಹ ನಡೆಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಕವಿತೆ ಏನಾಗಿದೆ, ಕೃತಿ ಎಂಥದಾಗಿದೆ, ಏನು ಹೇಳುತ್ತದೆ, ಸೂಚಿಸುತ್ತದೆ ಎಂದು ಓದಿ, ಭಾವಿಸಿ, ಪರ್ಯಾಲೋಚಿಸಿ, ಅರಿಯುವುದೊಂದೇ ರಸಿಕನಿಗೆ ಸಾರ್ಥಕವಾಗುವ ಕೆಲಸ.
 
ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಈ ಮಾತು ಅನ್ವಯಿಸುತ್ತದೆ. ಆದ ಕಾರಣ ಗದ್ಯದಲ್ಲಾಗಲೀ, ಪದ್ಯದಲ್ಲಾಗಲೀ ಅದು ಸಾಹಿತ್ಯ ಎನ್ನಿಸಬೇಕಾದರೆ ಅಲ್ಲಿ ಭಾಷೆ ಕೇವಲ ಮಾಧ್ಯಮ ಅಥವಾ ಮನಸ್ಸಿನಲ್ಲಿರುವುದನ್ನು ಹೊರಕ್ಕೆ ತರುವ ವಾಹನ ಮಾತ್ರವಲ್ಲ; ಕಲೆಗಾರನ ವೈಯಕ್ತಿಕ ಅನುಭವದ ಪ್ರತಿರೂಪ, ದೇಹ. ಸಾಹಿತ್ಯದಲ್ಲಿ ಭಾವ ಮತ್ತು ಅದರ ರೂಪ ಅಭಿನ್ನ. ಅದೇ ಸಾಹಿತ್ಯದ ಮೂಲ ಲಕ್ಷಣ. ಸಾಹಿತ್ಯದ ಸೃಷ್ಟಿಕ್ರಿಯೆಯಲ್ಲಿ ಮೊದಲು ಅನುಭವ ಅಥವಾ ಭಾವ, ಅನಂತರ ಅದಕ್ಕೆ ತಕ್ಕ ಭಾಷೆಯನ್ನೂ ಪ್ರತಿಮೆಗಳನ್ನೂ ಹುಡುಕುವುದು- ಈ ರೀತಿ ಒಂದಾದ ಮೇಲೆ ಇನ್ನೊಂದು ಎಂಬ ರೀತಿಯಲ್ಲಿ ಕೆಲಸ ನಡೆಯುವುದಿಲ್ಲ. ಅವು ಏಕಕಾಲಕ್ಕೇ ನಡೆಯುವಂಥವು. ಎಂದರೆ, ಸಾಹಿತ್ಯ ಭಾಷೆಯಲ್ಲೇ ನಡೆಯುವ ಕೆಲಸ. ಇಲ್ಲವಾದರೆ ದೇಹ, ಜೀವ ಅಥವಾ ಆತ್ಮ ಬೇರ್ಪಟ್ಟ ಹಾಗೆ. ಹಾಗಾದಲ್ಲಿ ಮೃತ್ಯು ಅಥವಾ ಪ್ರೇತ, ಆ ಎರಡೂ ಜೀವನವೂ ಅಲ್ಲ, ಸಾಹಿತ್ಯವೂ ಅಲ್ಲ.
 
ನಮ್ಮ ಮನಸ್ಸಿನಲ್ಲಿ ಹುಟ್ಟುವ ಆಶೆ ಆಕಾಂಕ್ಷೆಗಳು, ದುಃಖ ಪಶ್ಚಾತ್ತಾಪಗಳು, ಸುಖ ಸಮಾಧಾನಗಳು, ರಾಗದ್ವೇಷಗಳು ಮೂರು ಬಗೆಯಾಗಿ ವ್ಯಕ್ತಗೊಳ್ಳಲು ಯತ್ನಿಸುತ್ತವೆ; ಮಾತಿನಲ್ಲಿ, ಕೃತಿಯಲ್ಲಿ, ಸ್ವಪ್ನದಲ್ಲಿ. ನಮ್ಮ ಮನೋಗತ ಮಾತಿನಲ್ಲೂ ಕೃತಿಯಲ್ಲೂ ವ್ಯಕ್ತವಾದಾಗ ಅವು ವಸ್ತುರೂಪವನ್ನು ಪಡೆದು ಇನ್ನೊಬ್ಬರ ಬುದ್ಧಿಗೆ ನಿಲುಕುವಂತೆ ಆಗುತ್ತದೆ; ಅದು ಕೃತಿಯಾಗಿ ಮಾರ್ಪಾಟ್ಟಾಗಲೇ ಅದಕ್ಕೆ ನಿಜವಾದ ವಾಸ್ತವಿಕ ರೂಪ ಸಿದ್ಧಿಸುತ್ತದೆ. ಸ್ವಪ್ನದಲ್ಲಿ ಅವು ಪ್ರತಿಮೆಗಳಾಗಿ ಚಿಮ್ಮಿ  ಧ್ವನಿಪೂರ್ಣವಾಗಿ ಭಾವಾಭಿನಯವನ್ನು ನಡೆಸುತ್ತ ಅವಕ್ಕೆ ಸಾರ್ವಕಾಲಿಕತೆಯ ಆಳ ಬರುತ್ತದೆ. ಆದ ಕಾರಣ ಸಾಹಿತ್ಯ ಭಾಷೆಯಲ್ಲೇ ಸಂಭವಿಸುವುದಾದರೂ ಅದಕ್ಕೆ ಕೃತಿ ಮತ್ತು ಸ್ವಪ್ನಗಳ ಗುಣ ವಿಶೇಷಗಳು ಸೇರಿ ಸಮರಸಗೊಳ್ಳದೆ ಅದು ಸಾರ್ಥಕವಾಗದು. ಕೃತಿಯ ವಿಶೇಷ ಗುಣ ವಾಸ್ತವಿಕತೆಯಾದರೆ ಸ್ವಪ್ನದ ವಿಶೇಷ ಗುಣವೆಂದರೆ ಸುಪ್ತ ಚೇತನಕ್ಕೂ ನಮ್ಮ ಮನೋವ್ಯಾಪಾರಗಳಿಗೂ ಸಾಂಗತ್ಯವನೇರ್ಪಡಿಸುವ ಇಂದ್ರಜಾಲ. ವಾಸ್ತವಿಕ ದೇಹ, ಸ್ವಪ್ನಪ್ರಬೋದಕ ಪ್ರತಿಮೆ, ವಿಮರ್ಶೆಯ ತೂಕ, ಸಂಯೋಜನೆ ಈ ಮೂರು ಏಕತ್ರ ಸಂಧಿಸಿದಾಗಲೇ ಶ್ರೇಷ್ಠ ಸಾಹಿತ್ಯ ಕೃತಿಯ ಅವತಾರ. ಇಲ್ಲಿ ನಾವು ನೆನಪಿಡಬೇಕಾದ್ದು ಸಾಹಿತ್ಯ ನಮ್ಮ ಅಂತರಂಗದ ಸಂಪೂರ್ಣ ಕ್ರಿಯೆಯನ್ನು ಬಹಿರಂಗಗೊಳಿಸುವ ಕೆಲಸ ಎಂಬುದನ್ನು. ಗದ್ಯವಿವರಣೆ ಜಾಗೃತ ಮನಸ್ಸಿನ ಕೆಲಸ; ಕಾವ್ಯ ರಚನೆ ಸುಪ್ತ ಚೇತನ, ಜಾಗೃತ ಮನಸ್ಸುಗಳ ಅಪೂರ್ವ ಸಹಕಾರದ, ಅಥವಾ ಸ್ವಪ್ನ, ಜಾಗೃತಿ, ಪರಿಶ್ರಮಗಳ ಏಕತ್ರ ಸಂಯೋಗದ ಫಲ.
 
ಪ್ರತಿಯೊಂದು ಜೀವಿಗೂ ಒಂದೊಂದು ಮಣ್ಣಿನ ದೇಹ ಹೇಗೆ ಸರ್ವಥಾ ಅಗತ್ಯವೋ ಅದೇ ರೀತಿ ಸಫಲ ಸಾಹಿತ್ಯದ ಪ್ರತಿಯೊಂದು ಕೃತಿಗೂ ಅದರದೇ ಆದ ಮಣ್ಣಿನ, ವಾಸ್ತವಿಕ ದೇಹ ಅತ್ಯವಶ್ಯ. ಅಂಥ ದೇಹದಲ್ಲಿ ಸಾರ್ವಕಾಲಿಕ, ಸಾರ್ವತ್ರಿಕ ಎನ್ನಬಹುದಾದ ಜೀವನಾನುಭವ ಆ ದೇಹಕ್ಕೆ ವಿಶಿಷ್ಟವಾದ ರೀತಿಯಲ್ಲಿ ಧ್ವನಿಸಬೇಕು. ಈ ಕಾರಣದಿಂದಲೇ ಒಂದು ಸಾಹಿತ್ಯ ಕೃತಿಯನ್ನು ಸಾವಯವಿ ಎಂದು ಪರಿಭಾವಿಸಬೇಕಾಗುತ್ತದೆ. ವಿವಿಧ ಅಂಗಗಳಿಂದ ಕೂಡಿದ ದೇಹದಲ್ಲಿ ಹೇಗೆ ಅದರ ಪ್ರತ್ಯಂಗವೂ ತನ್ನದೇ ಆದ ವೈಶಿಷ್ಟ್ಯ ಕ್ರಿಯೆಗಳನ್ನು ಹೊಂದಿದ್ದರೂ ಒಟ್ಟು ದೇಹದ ಅಂಗವಾಗಿ ಮಾತ್ರ ಇದ್ದು, ಉಳಿದ ಅಂಗಗಳೊಡನೆ ಸಹಕರಿಸುತ್ತ ಒಟ್ಟು ದೇಹದ ತಾಳಲಯಗಳಿಗೆ ಬದ್ಧವಾಗಿರುತ್ತದೋ ಅದೇ ರೀತಿ ಒಂದು ಸಾಹಿತ್ಯ ಕೃತಿಯ ಪ್ರತಿಯೊಂದು ಅಂಗವೂ ತನಗೆ ತಾನೇ ಪರಿಪೂರ್ಣವಲ್ಲ; ಇಡೀ ಕೃತಿಯ ಮೇಳಗಾನದಲ್ಲಿ ಬೆರೆತು ಒಂದಾಗುವ ಆದರೂ ತನ್ನ ಸ್ಥಾನ ವೈಶಿಷ್ಟ್ಯಗಳನ್ನು ಕಾಯ್ದಿಟ್ಟುಕೊಳ್ಳುವ ಸ್ವರ. ಆದಕಾರಣ ಒಂದು ಕವನವನ್ನು ತೆಗೆದುಕೊಂಡು ಅದರಲ್ಲಿ ನಾದಮಾಧುರ್ಯವಿದೆ, ಇನ್ನೊಂದರಲ್ಲಿ ಪ್ರತಿಮೆಗಳು ಚೆನ್ನಾಗಿವೆ, ವಸ್ತು ಉತ್ತಮವಾಗಿದೆ ಅಥವಾ ನೀತಿಬೋಧೆ ಗ್ರಾಹ್ಯವಾಗಿದೆ ಎಂದು ಮುಂತಾಗಿ ಹೇಳುವುದರಲ್ಲಿ ಹೆಚ್ಚು ಅರ್ಥವಿಲ್ಲ. ಒಂದು ದೇಹದಲ್ಲಿ ಮೂಗು ಚೆನ್ನಾಗಿದೆ, ಕಣ್ಣು ಮೋಹಕವಾಗಿದೆ, ಸ್ವರ ಇಂಪಾಗಿದೆ ಎಂಬುದಕ್ಕಿಂತ ಒಟ್ಟಿನಲ್ಲಿ ಆ ದೇಹ ಚೆನ್ನಾಗಿದೆ, ಚೆನ್ನಾಗಿರುವ ಈ ಒಂದು ಅಂಗ ಆ ಇಡೀ ದೇಹದ ಶಿಲ್ಪದಲ್ಲಿ ಹೇಗೆ ಹೊಂದಿಕೊಳ್ಳುತ್ತದೆ ಎಂಬುದೇ ಬಹು ಮುಖ್ಯವಾದ ಮಾತು. ಒಂದು ಕವನದಲ್ಲಿನ ಒಂದು ಸಾಲನ್ನೋ, ಶ್ಲೋಕವನ್ನೋ, ಶಬ್ದಚಿತ್ರವನ್ನೋ ಸವಿಯುವ ನಮ್ಮ ವಾಡಿಕೆ ಕಾವ್ಯಾಭ್ಯಾಸಕ್ಕೆ ಹೆಚ್ಚು ಸಹಾಯಕವಾದುದಲ್ಲ. ಇಡೀ ಕವನವನ್ನೇ ಒಂದು ಘಟಕವಾಗಿ, ಒಂದು ಸರ್ವಾಂಗ ಪರಿಪೂರ್ಣ ಶರೀರವನ್ನಾಗಿ ಕವಿ ರಚಿಸುವುದೂ ಅದನ್ನು ಹಾಗೆಯೇ ಪರಿಭಾವಿಸಿ ಬೆಲೆ ಕಟ್ಟಲು ಯತ್ನಿಸುವುದೂ ಕೃತಿ ರಚನೆಗೆ ಹೇಗೋ ಹಾಗೆ ಕಾವ್ಯ ಸಾಹಿತ್ಯಗಳ ಅಭ್ಯಾಸ ವಿಮರ್ಶೆಗೂ ಈಗ ಅತ್ಯಗತ್ಯವಾದ ಕೆಲಸ. ಅಂಗಾಂಗ ಸಾಮರಸ್ಯವುಳ್ಳ ಕೃತಿಶಿಲ್ಪದ ಅಭ್ಯಾಸದಿಂದ ಮಾತ್ರ ನಮ್ಮ ಮನಸ್ಸಿಗೆ ಸಾಹಿತ್ಯದಿಂದ ದೊರೆಯಬೇಕಾದ ಸಾರ್ಥಕ ಶಿಕ್ಷಣ ದೊರೆಯುತ್ತದೆ. ಈ ಪ್ರಯತ್ನಗಳಿಂದ ಮನಸ್ಸಿನ ಸಮಗ್ರೀಕರಣ ಸಾಧ್ಯವಾಗಿ ಬುದ್ಧಿ ಜೀವನದ ಪುನರ್ಘಟನೆ ಸಿದ್ಧಿಸುತ್ತದೆ. ಯಾವ ಕೃತಿಗೆ ಈ ಬಗೆಯ ಸಾಕಲ್ಯ, ಸಮಗ್ರತೆ ಇರುವುದೋ ಅಂಥ ಕೃತಿಯನ್ನು ರಚಿಸಬಲ್ಲ ಪ್ರತಿಭೆಯೇ ಶ್ರೇಷ್ಠ, ಸರ್ವೋತ್ತಮ ಎಂಬ ವಿಶೇಷಣಗಳಿಗೆ ಅರ್ಹವಾಗಬಲ್ಲದು.
 
ಮಣ್ಣಿನ ವಾಸನೆ ಎಲ್ಲಿ ಇಲ್ಲವೋ ಅಲ್ಲಿ ಜೀವವಿಲ್ಲ. ಮಣ್ಣಿಗೂ ಜೀವಕ್ಕೂ ಅವಿಚ್ಛಿನ್ನ ಸಂಬಂಧ. ಜೀವ ಪ್ರಪಂಚಕ್ಕೆ ಸೇರಿದ ಸಾಹಿತ್ಯದಲ್ಲಿ ಎಂಥೆಂಥ ಉದಾತ್ತವಾದ ವಿಚಾರಗಳೂ, ಕಲ್ಪನೆಗಳೂ ಇರಲಿ, ಅಲ್ಲಿ ಈ ಪಾರ್ಥಿವ ಲೋಕದ ವಾಸನೆ ಹೊಡೆಯುತ್ತಿದ್ದರೆ ಮಾತ್ರ ಅದು ನಿಜವಾದದ್ದು ಸಾರ್ಥಕವಾದದ್ದೂ ಆಗಬಲ್ಲದು. ಈ ಮಣ್ಣಿನ ವಾಸನೆ ಇಲ್ಲದ್ದು ಅದು ಮೃತ್ಯುಲೋಕಕ್ಕೆ ಅಥವಾ ಅಮೃತಲೋಕಕ್ಕೆ ಸೇರಿದ್ದಲ್ಲದೆ, ನಮ್ಮ ಈ ಬಡ ಮೃಣ್ಮಯ ಲೋಕಕ್ಕೆ ಸೇರಿದ್ದಂತೂ ಅಲ್ಲ.

Leave a Reply