ಕೆಂದಾವರೆ

ಎಸ್.ಆರ್. ವಿಜಯಶಂಕರ

ವಿಜಯವಾಣಿ | 24 ಜನವರಿ 2016

  ಕವಿ ಗೋಪಾಲಕೃಷ್ಣ ಅಡಿಗರ ‘ನಡೆದು ಬಂದ ದಾರಿ’ ಕವನ ಸಂಕಲನದಲ್ಲಿ ಹಾಡಿನಿಂದ ಸುಪ್ರಸಿದ್ಧವಾದ ‘ಕೆಂದಾವರೆ’ ಎಂಬ ಕವನವಿದೆ. ”ನಡೆದು ಬಂದ ದಾರಿಕಡೆಗೆ/ ತಿರುಗಿಸಬೇಡ- /ಕಣ್ಣ-/ಹೊರಳಿಸಬೇಡ” ಎಂಬ ಬಹುಪರಿಚಿತ ಸಾಲುಗಳಿರುವ ಈ ಸಂಕಲನ ಪ್ರಕಟವಾದ್ದು 1952ರಲ್ಲಿ. ಎರಡು ವರುಷಗಳ ಬಳಿಕ 1954ರಲ್ಲಿ ಅಡಿಗರನ್ನು ನವ್ಯರೆಂದು ಸಾರಿದ ಕನ್ನಡ ಕಾವ್ಯಲೋಕ ಹಿಂದೆ ಕಾಣದ ಕ್ರಮದ ‘ಚಂಡೆ ಮದ್ದಳೆ’ ಸಂಕಲನ ಪ್ರಕಟವಾಯಿತು.

  ಅಡಿಗರ ಪ್ರಸಿದ್ಧ ಕವನಗಳಾದ ‘ಹಿಮಗಿರಿಯ ಕಂದರ’, ‘ಗೊಂದಲಪುರ’, ‘ಏನಾದರೂ ಮಾಡುತಿರು ತಮ್ಮ’ ಮುಂತಾದ ಒಟ್ಟು ಏಳು ಕವನಗಳು ‘ಚಂಡೆ ಮದ್ದಳೆ’ ಸಂಕಲನದಲ್ಲಿವೆ. ಕಳದವಾರ, ಅಡಿಗರ ಬದಲಾಗುತ್ತಿದ್ದ ಮನೋಭಾವವನ್ನು ಸೂಚಿಸಬಲ್ಲ, ರೂಪಕದಿಂದ ಪ್ರತಿಮೆಯ ಕಡೆಗೆ ಚಲಿಸುವ ಆಶಯ ಹೊಂದಿದ ‘ಕೆಂದಾವರೆ’ ಕವನವನ್ನು ಇನ್ನೊಮ್ಮೆ ಆಪ್ತವಾಗಿ ಓದಿಕೊಳ್ಳುವ ಅವಕಾಶ ಸಿಕ್ಕಿತು. ಅಜೀಂ ಪ್ರೇಮ್ ಫೌಂಡೇಶನ್ನಿನವರು ಕನ್ನಡ ಅಧ್ಯಾಪಕರ ಜೊತೆ ಒಡನಾಡುವ ತಮ್ಮ ಮಾನವ ಸಂಪನ್ಮೂಲ ತಂಡವೊಂದಕ್ಕೆ ‘ಕೆಂದಾವರೆ’ ಕವನ್ನವನ್ನು ಓದಿ ವಿಮರ್ಶಾ ವಿವರಣೆ ನೀಡಿ ಚರ್ಚೆಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಂಡರು. ಫೋನು ಬ್ರಿಜ್ನ ಮೂಲಕ ಅವರ ಜೊತೆಗೆ ಟೆಲಿಫೋನು ತಂತ್ರಜ್ಞಾನವನ್ನು ಬಳಸಿಕೊಂಡು ನಡೆಸಿದ ಈ ಚರ್ಚಾಗೋಷ್ಠಿಗಾಗಿ ‘ಕೆಂದಾವರೆ’ ಕವನದ ಬಗ್ಗೆ ಮಾಡಿದ ಚಿಂತನೆಯನ್ನು ಓದುಗರ ಜೊತೆ ಹಂಚಿಕೊಳ್ಳುತ್ತಿದ್ದೇನೆ.

  ಯಾವುದೇ ಒಂದು ಕವನವನ್ನು ಓದುವಾಗಲೂ ನಾವು ಕವನವೊಂದಕ್ಕೆ ಧ್ವನ್ಯಾರ್ಥ ಇರುವಂತೆ ವಾಚ್ಯಾರ್ಥವೂ ಇರುತ್ತದೆ ಎಂಬುದನ್ನೂ ಮರೆಯಬಾರದು. ವಾಚ್ಯವಾಗಿ ಕವನವೊಂದು ಸೂಚಿಸುವ ಅರ್ಥವನ್ನು ಮೊದಲು ನಾವು ವಿನಯದಿಂದ ಕಾವ್ಯ ವಿವರಗಳೊಂದಿಗೆ ಅರಿತು ಅಲ್ಲಿಂದ ಧ್ವನಿ ಇತ್ಯಾದಿಗಳನ್ನೂ ಅವುಗಳ ಇತರ ಅರ್ಥ, ಸಂದರ್ಭಗಳನ್ನೂ ಗ್ರಹಿಸಲು ಮುಂದಾಗಬೇಕು. ಕೆಲವೊಮ್ಮೆ ಅನೇಕ ಅರ್ಥಗಳು ಒಟ್ಟೊಟ್ಟಿಗೆ ಮನಸ್ಸಿಗೆ ಬರಬಹುದು. ಹಾಗೆ ಆದಾಗಲೂ ಮೊದಲಿಗೇ ವಾಚ್ಯಾರ್ಥವನ್ನು ನಿರ್ಲಕ್ಷಿಸಬಾರದು. ವಾಚ್ಯ, ಧ್ವನಿ ಇತ್ಯಾದಿಗಳನ್ನೆಲ್ಲ ಅರಿಯುವುದು ಹಾಗೂ ಅದನ್ನು ವಿಶ್ಲೇಷಿಸಿಕೊಳ್ಳುವ ಮೂಲಕ ಅಲ್ಲಿನ ಭಾವನೆ, ವಿಚಾರ ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಕಾವ್ಯ ಓದುವ ರೀತಿ. ಅದರ ಮುಂದುವರಿದ ಭಾಗವೇ ಕಾವ್ಯ ನಮಗೆ ನೀಡುವ ಅನುಭವವನ್ನು ಧ್ಯಾನಿಸಿ ನಮ್ಮ ಅಂಶವಾಗಿ ಪರಿವರ್ತಿಸಿಕೊಳ್ಳುವುದು. ಈಗ ನಾವು ಮೊದಲಿಗೆ ‘ಕೆಂದಾವರೆ’ ಕವನವನ್ನೊಮ್ಮೆ ಹೊಸದಾಗಿ ಓದೋಣ:

  ಇಂದು ಕೆಂದಾವರೆಯ ದಳದಳಿಸಿ ದಾರಿಯಲಿ

  ಗಂಧದೌತಣ ಹೋಗಿ ಬರುವ ಜನಕೆ;

  ಮಂದ ಮಾರುತನಿರಲಿ ಮರಿದುಂಬಿಯಿರಲಿ, ಆ

  ನಂದವಿರೆ ಅತಿಥಿಗಳ ಕರೆಯಬೇಕೆ?

   

  ನಗುತಲಿದೆ ನೀರು ಹೊಂಬಿಸಿಲು ಕಚಗುಳಿಯಿಡಲು;

  ದುಂಬಿಗಳು ಒಲವನೇ ಗುಂಜಿಸಿರಲು

  ನಾಚಿ ತಲೆ ಬಾಗಿಸಿತು ಕಮಲ;

  ದೂರದ ಬಾನ ದಾರಿಯಲಿ ಸಪ್ತಾಶ್ವವೇರಿ ಬಹನು;

   

  ತನ್ನ ಕೈಕೈಯೊಳೂ ಒಲವು ಬಲೆಗಳನಿಟ್ಟು

  ನೀರಿನಾಳದೊಳವನು ಬಿಂಬಿಸುವನು;

  ಮೈ ಮರೆತುದಾ ಪದ್ಮ; ಪರಮೆಗಳ ಪರಿವಾರ

  ಮಂಜಾಗಿ ಕರಗಿತ್ತು ಸುತ್ತಮುತ್ತ

   

  ಇರುವ ದುಂಬಿಯ ಬಿಟ್ಟು ಬರುವ ನೇಸರ ಕರೆಗೆ

  ಓಗೊಟ್ಟುದೋ ನನ್ನ ಕೆಂದಾವರೆ;

  ಬರುವ ಬಾಳಿನ ಕನಸು ರವಿಯಾಗಿ ಬಹುದೇನು?

  ಕಾಯಬೇಕೋ ಅದಕೆ ಎಲ್ಲಿವರೆಗೆ

   

  ಬೆಳಗಿನ ಹೊತ್ತು ತಾವರೆ ಅರಳಿ, ಕೊಳದ ಮೇಲೆ ಸೂರ್ಯಕಿರಣಗಳು ಬಿದ್ದು, ಮಂಜು ಕರಗಿ, ದುಂಬಿಗಳು ಹೂವಿನ ಸುತ್ತ ಹಾರಾಡುವ ಚಿತ್ರವನ್ನೂ ಕವಿ ಇಲ್ಲಿ ತನ್ನ ಕಾವ್ಯ ಭಿತ್ತಿಯಾಗಿ ಬಳಸಿಕೊಂಡಿದ್ದಾನೆ. ಈ ಮೂಲಕ ಚಿತ್ರದಲ್ಲಿ ಹೊರಗೆ ಕಂಡ ಕೆಂಪು ಕಮಲದ ಹೂವು ಮನದೊಳಗಿನ ”ನನ್ನ ಕೆಂದಾವರೆ” ಆಗುವವರೆಗಿನ ಬೆಳವಣಿಗೆ ಕವನದ ನಾಲ್ಕು ಚರಣಗಳಲ್ಲಿ ನಡೆಯುತ್ತದೆ. ಹಳೆಯ ಕವಿ ಸಮಯವಾದ ತಾವರೆ ಹಾಗೂ ಸೂರ್ಯನ ಆಕರ್ಷಣೆಯ ಸಂಬಂಧವನ್ನು ಇಲ್ಲಿ ಕವಿ ಅಡಿಗರು ನೂತನವಾಗಿ ಕಟ್ಟುತ್ತಾರೆ. ಹೂವು, ಸೂರ್ಯ, ನೀರು, ತುಂಬಿಗಳ ಸಂಬಂಧ ಅರ್ಥದ ಹೊಸಲೋಕವೊಂದನ್ನು ಕಟ್ಟಿ ಹೊರಗಿನ ವಿವರಗಳ ಮೂಲಕ ಮನುಷ್ಯನ ಮನಸ್ಸಿನ ಒಳಗಿನ ಭಾವನೆಗಳನ್ನು ವೈಚಾರಿಕ ಅನುಭವವಾಗಿ ಪರಿವರ್ತಿಸುತ್ತದೆ. ಇವತ್ತಿನ ಒಂದು ಸೊಗಸನ್ನು ವಿವರಿಸುವ ವಾಕ್ಯದೊಂದಿಗೆ ಕವನ ಪ್ರಾರಂಭವಾಗುತ್ತದೆ. ಇಂದು ಕೆಂದಾವರೆಯ ದಳ ಅರಳಿ (ದಳ್ಳಿಸು=ವಿಸ್ತರಿಸು) ಆ ದಾರಿಯಲಿ ಹೋಗಿ ಬರುವ ಜನಕೆ ಗಂಧದ (ಪರಿಮಳದ) ಔತಣ. ಹಿತವಾಗಿ ಮೆಲ್ಲಗೆ ಬೀಸುವ ಗಾಳಿ (ಮಂದ ಮಾರುತ) ಮರಿದುಂಬಿ ಇತ್ಯಾದಿ ಯಾವುದೇ ಇರಲಿ, ಅಲ್ಲಿ ಆನಂದ ಇರುವಾಗ ಅತಿಥಿಗಳ ಕರೆಯಬೇಕೆ? ತನ್ನಿಂದ ತಾನೆ ಅತಿಥಿಗಳು ಬರುತ್ತಾರೆ ಎಂಬ ಸೂಚನೆ ಈ ಔಪಚಾರಿಕ ಪ್ರಶ್ನೆಯಲ್ಲಿ ಅಡಗಿದೆ.

  ಆದರೆ ಇಲ್ಲಿ ‘ಆನಂದ’ ಪದವನ್ನು ಅಡಿಗರು ಅರ್ಥ ಬಾಹುಳ್ಯಕ್ಕಾಗಿ ಎರಡು ವಾಕ್ಯಗಳಲ್ಲಿ ಆ-ನಂದ ಎಂದು ತುಂಡರಿಸಿ ಇರಿಸುವುದನ್ನು ಗಮನಿಸಬೇಕು. ಇದು ಕನಿಷ್ಠ ನಾಲ್ಕು ಅರ್ಥ ಸಂದರ್ಭಗಳನ್ನು ಸೃಷ್ಟಿಸುತ್ತದೆ. ‘ಆ’ ಎಂಬ ಮಂದಮಾರುತ, ಮರಿದುಂಬಿಗಳ ಬಗೆಗಿನ ಭಾವೋದ್ಗಾರ. ಅಂದರೆ ‘ಆಹಾ’ ಎಂಬ ಭಾವ ಸಂದರ್ಭ. ‘ಆನಂದ’ ಎಂಬ ಇನ್ನೊಂದು ಅರ್ಥ. ಸಂತೋಷವಿದ್ದಾಗ ಅತಿಥಿಗಳು ತನ್ನಿಂದ ತಾನೇ ಬರುತ್ತಾರೆ ಎಂಬ ಸೂಚನೆ. ಅದು ಮಾತ್ರವಲ್ಲದೆ ಆ ಹೂವುಗಳ ಜೊತೆಗಿನ ಪ್ರಾಕೃತಿಕ ವಾತಾವರಣ ‘ನಂದ’ದ ಮೂಲಕ ‘ನಂದನವನ’ ಎಂಬ ಸ್ವರ್ಗದ ಹೂದೋಟದ ನೆನಪನ್ನೂ ತರಬಲ್ಲದು. ‘ನಂದ’ ಪದ ಅದಕ್ಕೆ ಪೂರಕವಾಗಿದೆ. ‘ಆನಂದ’ ಶಬ್ದದ ಒಳಗಿನಿಂದ ಆ ಸಂದರ್ಭದಲ್ಲಿ ಕವಿ ಇಷ್ಟು ಅರ್ಥಗಳನ್ನು ಮೊಗೆದುಕೊಡುವುದು ಶ್ರೇಷ್ಠ ಕವಿಯೊಬ್ಬನಿಗೆ ಮಾತ್ರ ಸಾಧ್ಯವಿರುವ ಲೋಕಸ್ಮೃತಿಯನ್ನು ರ್ಸ³ಸಬಲ್ಲ ವಿಶೇಷ ಶಕ್ತಿ. ಆನಂದ ಎಂಬುದು ಇಲ್ಲಿ ಕೇವಲ ಶ್ಲೇಷಾರ್ಥ ಮಾತ್ರವಲ್ಲ ಎಂಬುದನ್ನು ಗುರುತಿಸಬೇಕು.

  ಈಗ ಕೆಂಪು ತಾವರೆ ಇರುವ ನೀರಿನ ಮೇಲೆ ಹೊನ್ನಿನ ಬಣ್ಣದ ಬಿಸಿಲು ಬಿದ್ದು ಕಚಗುಳಿ ಇಡುತ್ತಾ ಇದೆ. ಇದೊಂದು ಬೆಳಕಿನ ಕೈಗಳಿಂದ ಕಚಗುಳಿ ಇಡುವ ಮೂಲಕ ‘ಸೂರ್ಯ’ ಮನುಷ್ಯನಾಗುವ ಹೊಸ ಚಿತ್ರ. ಈ ಮೊದಲ ಚರಣದಲ್ಲಿ ಕಣ್ಣು (ಕೆಂದಾವರೆಯನ್ನು ಕಾಣುವುದು) ಘ್ರಾಣಶಕ್ತಿ (ಗಂಧ) ನಾಲಗೆಯ ರುಚಿ (ಔತಣ) ಹೀಗೆ ಪಂಚೇಂದ್ರಿಯಗಳಲ್ಲಿ ಮೂರರ ಬಳಕೆ ಆಗಿದೆ. ಈಗ ಕಚಗುಳಿ ಮೂಲಕ ಸ್ಪರ್ಶ ಹಾಗೂ ಮುಂದಿನ ವಾಕ್ಯದಲ್ಲಿ ದುಂಬಿಗಳ ಗುಂಜಾರ (ಝೇಂಕಾರ)ದ ಮೂಲಕ ಕಿವಿ – ಹೀಗೆ ಪಂಚೇಂದ್ರಿಯಗಳೂ ಇಲ್ಲಿ ತನ್ಮಯಗೊಂಡಿವೆ. ಆಗ ದುಂಬಿಗಳ ಒಲವ ಗುಂಜಾರದ ನಡುವೆ ಕಮಲ ನಾಚಿ ಹೆಣ್ಣಿನಂತೆ ತಲೆಬಾಗಿಸಿದೆ – ದೂರದ ಬಾನ ದಾರಿಯಲ್ಲಿ ಸಪ್ತಾಶ್ವವೇರಿ ಬರುತ್ತಿರುವವನಿಗೆ. ಭಾನು ಅಂದರೆ ಸೂರ್ಯ ಆಕಾಶ ಇಬ್ಬರೂ.

  ಇಲ್ಲಿ ಮೊದಲ ಚರಣದ ‘ದಾರಿ’ಗೂ ಎರಡನೇ ಚರಣದ ‘ದಾರಿ’ಗೂ ಆಗುವ ಬದಲಾವಣೆಯನ್ನು ಗಮನಿಸಬೇಕು. ಕೆಲವರು ಇರುವ ದಾರಿಯಲ್ಲಿ ಹೋಗಿ ಬರುವರು. ಇನ್ನು ಕೆಲವರು ದಾರಿ ಮಾಡಬಲ್ಲರು. ಆದರೆ ಸೂರ್ಯ ಬಂದದ್ದೇ ದಾರಿ. ಆ ಬಾನದಾರಿ ಗೋಚರಿಸಿದರೆ ಉಂಟು- ಇಲ್ಲವಾದರೆ ಇಲ್ಲ. ನೆಲದ ಈ ದಾರಿ, ಬಾನಿನ ದಾರಿ ಒಂದಾಗಿ ಮಾರ್ಪಡುವುದೇ ಮೊದಲ ಎರಡು ಚರಣಗಳ ಸೊಗಸು ಹಾಗೂ ಪರಿವರ್ತನೆ ಎಂಬುದನ್ನು ನಾವು ಮರೆಯಬಾರದು. ಆದರೆ ಬಾನಿನ ದಾರಿ ಮಣ್ಣಿನ ದಾರಿಗೆ ವಿಮುಖವಲ್ಲ. ಸಪ್ತಾಶ್ವವೇರಿ ಬರುವವನು ತನ್ನ ಕೈಕೈ ಒಳಗೂ ಒಲವಿನ ಬಲೆಯನ್ನು ಇಟ್ಟು ಆ ಕಿರಣದ ಕೈಗಳನ್ನು ನೀರಿನ ಆಳಕ್ಕೆ ಬಿಂಬಿಸಿದ್ದಾನೆ. ಹೀಗೆ ಬೀಸಿದ ಬಲೆಯಲ್ಲಿ ಪದ್ಮ ಮೈಮರೆತಿದೆ. ಪದ್ಮದ ಸುತ್ತ ಪರಮೆಗಳ (ಭ್ರಮರಗಳ) ಪರಿವಾರ ಇದೆ. ಆದರೆ ಅದು ಮಂಜಾಗಿ ಕರಗಿದೆ ಬಿಂಬ ಬೀಸಿದ ಬಲೆಗೆ. ನೆಲದ ಹೂ ಆಕಾಶದ ಆಕರ್ಷಣೆಯ ಮಾಯದ ಬಲೆ ಬಿದ್ದಿದೆ. ಸುತ್ತ ಇರುವ ದುಂಬಿಯ ಬಿಟ್ಟು ದೂರದ ಕಿರಣಗಳ ಸೆಳೆತಕ್ಕೆ ಅಲ್ಲಿನ ನೇಸರದ (ಬಾನಿನ) ಕರೆಗೆ ನನ್ನ ಕೆಂದಾವರೆ ಓಗೊಟ್ಟಿದೆ. ಇಲ್ಲಿ ಒಲವನ್ನು ಸೂಸುವ ದುಂಬಿಗಳನ್ನು ಬಿಟ್ಟು ತನ್ನ ಬೆಳಕಿನ ಮೂಲಕ ಮಾತ್ರ ಗೋಚರಿಸುವ ದೂರದ ಬಾನ ಕರೆಗೆ ಓಗೊಟ್ಟಿದೆ. (‘ಮೋಹನ ಮುರಲಿ’ಯಲ್ಲಿ ಅಡಿಗರು ಹೇಳಿದ ಹಾಗೆ ”ಇರುವುದರ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ”) ಮುಂದೆ ಉಪಯೋಗಿಸಿದ ಪದಗಳು ”ಬರುವ ಬಾಳಿನ ಕನಸು”. ಅದು ಬರಲಿರುವ ಮುಂದಿನ ಬಾಳು. ಈಗ ಅದು ಕನಸು. ನಿಜವಲ್ಲ. ಆದರೆ ಅದು ರವಿಯಾಗಿ ಬಹುದೇನು? ಕಾಯಬೇಕೋ ಅದಕೆ ಎಲ್ಲಿವರೆಗೆ? ಪ್ರಶ್ನೆಗಳಿವೆ ಸ್ಪಷ್ಟ ಉತ್ತರಗಳಿಲ್ಲ.

  ‘ಇದನ್ನು ಬಯಸಿರಲಿಲ್ಲ’ ಎಂಬ 1975ರಲ್ಲಿ ಪ್ರಕಟವಾದ ಅಡಿಗರ ಕವನ ಸಂಕಲನದಲ್ಲಿ ‘ನೀ ಬಳಿಯೊಳಿರುವಾಗ್ಗೆ’ ಎಂಬ ಕವನವೊಂದಿದೆ. ನೀ ಬಳಿಯೊಳಿರುವಾಗ್ಗೆ ಹೃದಯ ಕಮಲದ ಹಾಗೆ ಎಂಬ ಪ್ರಯೋಗ ಅಲ್ಲಿದೆ. ಅಡಿಗರ ಕವನಗಳಲ್ಲಿ ನಿರಂತರವಾದ ಶೋಧನೆ ಹಾಗೂ ಆ ಮೂಲಕ ಕಾವ್ಯ ಚಿತ್ರಗಳ ಪರಿವರ್ತನೆ ಆಗುತ್ತಿರುತ್ತದೆ. ಆದುದರಿಂದ ಅಡಿಗರ ಎಲ್ಲ ಕವನಗಳ ಒಟ್ಟು ಓದು ಸದಾ ಅರ್ಥಪೂರ್ಣ. ‘ಕೆಂದಾವರೆ’ ಕವನದ ಕೊನೆಗೆ ‘ನನ್ನ ಕೆಂದಾವರೆ’ ಆದ ಕಮಲ ಅಲ್ಲಿಗೇ ನಿಂತಿಲ್ಲ. ಅದು ಮುಂದೆ ಬೆಳೆದು ”ಹೃದಯ ಕಮಲ”ವಾಗಿ ಇನ್ನೊಂದು ಕವನದಲ್ಲಿ ಇಲ್ಲಿ ನಿಂತ ತಾತ್ತಿವಕ ಶೋಧವನ್ನು ಮುಂದುವರಿಸಿದೆ. ಯಾವುದೇ ದೊಡ್ಡ ಕವಿಯೊಬ್ಬನನ್ನು ಗಮನಿಸಬೇಕಾಗುವುದು ಹೀಗೆ ಸಮಗ್ರವಾಗಿ. ಯಾವುದೋ ಒಂದು ಕವನದ ಆಂಶಿಕ ಚಿತ್ರವನ್ನು ಹಿಡಿದು ಕವಿಗೆ ಹೊಡೆಯುವುದು ಅಪಕ್ವವಾದ ಓದು. ಒಬ್ಬ ದೊಡ್ಡ ಕವಿ ತನ್ನದೇ ರೀತಿಯಲ್ಲಿ ನಡೆದು ಮುಂದೆ ಹೋಗುತ್ತಾ ಇರುತ್ತಾನೆ. ಅವನ ವಾಕಿಂಗ್ ವೇಗದಲ್ಲಿ ಅವನ ಜೊತೆ ಎಷ್ಟು ದೂರ ಹೋಗಲು ಸಾಧ್ಯವಾಗುತ್ತದೆ ಎಂಬುದು ನಮ್ಮ ಓದಿನ ಅರಿಯುವ ಶಕ್ತಿಯನ್ನು ಅವಲಂಬಿಸಿದೆ.

  ಪ್ರೊ.ಜಿ.ಎಚ್.ನಾಯಕರು ಅಡಿಗರ ಕಾವ್ಯದ ನಾಲ್ಕು ಮುಖ್ಯ ಕಾಳಜಿಗಳಲ್ಲಿ ನೆಲ-ಮುಗಿಲುಗಳ ಕರ್ಷಣ ಕೇಂದ್ರದಲ್ಲಿರುವ ವ್ಯಕ್ತಿಯ ಸ್ಥಿತಿಯನ್ನು ಗುರುತಿಸುತ್ತಾರೆ. (ಉಳಿದ ಮೂರು: ಭೂತಕಾಲಕ್ಕೂ ವ್ಯಕ್ತಿಗೂ ಇರುವ ಸಂಬಂಧ, ಸಮಾಜ ಮತ್ತು ವ್ಯಕ್ತಿಯ ಸಂಬಂಧ. ನೋಡಿ: ಸ್ವಾತಂತ್ರ್ಯೊತ್ತರ ಕನ್ನಡ ಸಾಹಿತ್ಯ ಮಾರ್ಗಗಳ ಸಮೀಕ್ಷೆ ಲೇಖನ). ಅಡಿಗರ ‘ಕೆಂದಾವರೆ’ ಕವನದಲ್ಲಿ ನೆಲಮುಗಿಲುಗಳ ನಡುವಿನ ಆಕರ್ಷಣೆ ಸ್ಪಷ್ಟವಾಗಿದೆ. ಪದ್ಮದ ಸುತ್ತ ಸಹಜವಾಗಿ ಪರಮೆಗಳ ಪರಿವಾರವೇ ಇದೆ. ದಾರಿಯಲ್ಲಿ ಹೋಗಿ ಬರುವ ಜನ ಇದ್ದಾರೆ. ಆದರೆ ಹೊಸದಾಗಿ ಹುಟ್ಟುವ ಬಾನದಾರಿಯಲ್ಲಿ ಬರುವುದರ ಆಕರ್ಷಣೆಗೆ ಕವಿಯೊಳಗಿನ ಕೆಂದಾವರೆ ಓಗೊಡುತ್ತದೆ. ಬಾನಿನ ಮೋಹ ಇಲ್ಲಿ ಲೌಕಿಕವಲ್ಲದ ಅಧ್ಯಾತ್ಮದ ಆಕರ್ಷಣೆಯನ್ನು ಸೂಚಿಸುತ್ತದೆ.

  ಅಡಿಗರ ಕಾವ್ಯ ಸಂದರ್ಭದಲ್ಲಿ ನಾವು ಇನ್ನೊಂದು ಮುಖ್ಯ ವಿಷಯವನ್ನು ಗಮನಿಸಬೇಕು. ಅಡಿಗರು ಹಾಡಿನಿಂದ ಸ್ವಗತಕ್ಕೆ ಕನ್ನಡ ಕಾವ್ಯವನ್ನು ಒಯ್ದವರು. (ಖಟ್ಞಜ ಠಿಟ ಖಟ್ಝಜ್ಝಿಟಟ್ಠಿಢ) ಕೆಂದಾವರೆಯ ಕೊನೆಯ ಚರಣ ಸ್ವಗತದ ಸೂಚನೆಯನ್ನೀಯುತ್ತದೆ. ಮುಂದಿನ ಅವರ ನವ್ಯ ಕವನಗಳಲ್ಲಿ ಅದು ಬಲಿಷ್ಠವಾಗಿ ಬೆಳೆದಿದೆ. ನವೋದಯ ಕಾಲಘಟ್ಟದಲ್ಲಿ ಕಾವ್ಯದ ಮೂಲ ಲಯ ಶಬ್ದಾನುಸಾರಿ ಆಗಿತ್ತು. ಪ್ರಾಸ, ಒಳಪ್ರಾಸ ಇತ್ಯಾದಿಗಳಲ್ಲಿ ಅದು ಅನುರಣಿಸುತ್ತಿತ್ತು. ಭಾವ ಪ್ರಾಧಾನ್ಯತೆಯಿಂದ ಅಡಿಗರು ಕಾವ್ಯವನ್ನು ಅರ್ಥ ಪ್ರಾಧಾನ್ಯತೆ ಕಡೆಗೆ ಒಯ್ದರು. ಆ ಮೂಲಕ ಕಾವ್ಯದಲ್ಲಿ ಭಾವನುಭವದಿಂದ ಅರ್ಥಾನುಭವಕ್ಕೆ ಹೆಚ್ಚಿನ ಪ್ರಾಧಾನ್ಯತೆ ತಂದರು. ಇದಕ್ಕಾಗಿ ಅಡಿಗರು ಅರ್ಥಾನುಸಾರಿ ಲಯ ಎಂಬ ಪರಿಕಲ್ಪನೆಯನ್ನು ಉಂಟುಮಾಡಿದರು. ‘ಕೆಂದಾವರೆ’ ಕವನದಲ್ಲಿ ‘ದ’ಕಾರ ‘ಪ’ಕಾರ ಮುಂತಾದವುಗಳ ಮೂಲಕ ಶಬ್ದಾನುಸಾರಿ ಲಯ ಇದೆ ನಿಜ. ಆದರೆ ಅದರ ಜೊತೆ ‘ಪದ್ಮದ ಸುತ್ತಲಿನ ಪರಮೆಗಳ ಪರಿವಾರ ಮಂಜಾಗಿ ಕರಗುವ’ (ಮಂಜನ್ನು ಕರಗಿಸುವುದು ಸೂರ್ಯ) ಚಿತ್ರ ಮುಂತಾದ ಕಡೆ ಅರ್ಥವನ್ನು ಅನುಸರಿಸುವ ವಿಶಿಷ್ಟ ಲಯವೊಂದು ಕೂಡ ರೂಪು ತಳೆಯುತ್ತಿರುವುದನ್ನು ಗುರುತಿಸಬಹುದು.

  ಅಡಿಗರ ಅನೇಕ ಪುಟ್ಟ ಕವನಗಳು ಅವರ ಕಾವ್ಯದ ಮುಖ್ಯ ಕಾಳಜಿಗಳನ್ನು ಪ್ರತಿಫಲಿಸುತ್ತದೆ. ನೆಲ-ಮುಗಿಲುಗಳ ಕರ್ಷಣ ಕೇಂದ್ರದಲ್ಲಿರುವಾತ ಲೌಕಿಕ ಹಾಗೂ ಅಧ್ಯಾತ್ಮಗಳ ನಡುವಿನ ತುಯ್ದಾಟದಲ್ಲಿ ಇರುತ್ತಾನೆ. ಇದು ನಮ್ಮ ಕಾಲದ ನಿರಂತರ ದ್ವಂದ್ವ. ಗಂಧದ ಔತಣ ನೀಡುವ ಕೆಂದಾವರೆಯೂ ಇದಕ್ಕೆ ಹೊರತಾಗಿಲ್ಲ. ವಾಚ್ಯಾರ್ಥದ ನೆಲೆಯಲ್ಲಿ ಕವನವೊಂದನ್ನು ಮೊದಲು ಕರಗತ ಮಾಡಿಕೊಂಡ ಬಳಿಕ ವ್ಯಾಖ್ಯಾನದ, ವಿಶ್ಲೇಷಣೆಯ ವಿಸ್ತರಣೆಯನ್ನು ಕವನ ಕೊಡಲು ಸಾಧ್ಯವಾಗುವಷ್ಟು ವಿಸ್ತರಿಸುವುದು ಸಾಹಿತ್ಯ ವಿಮರ್ಶೆಯ ಕೆಲಸ.

  One Comment

  1. ಅನನಿ

   ಕಾವ್ಯ ಓದುವುದನ್ನ ಹೇಳಿ ತಿಳಿಸಿದ ಗುರುಗಳು ತಾವು….. ಪದಗಳನ್ನು feel ಮಾಡೋದು ಹೇಗೆ ಎಂಬುದು ಅರ್ಥವಾಗುತ್ತಿದೆ……

  Leave a Reply