ಪ್ರಾರ್ಥನೆ

 

ಪ್ರಾರ್ಥನೆ
ಕವನ ಸಂಕಲನ : ಭೂಮಿಗೀತ
ಓದು : ಟಿ ಜಿ ರಾಘವ


‘ಪ್ರಾರ್ಥನೆ’ ಅಡಿಗರ ಕಾವ್ಯದ ಮ್ಯಾನಿಫೆಸ್ಟೋ ಎಂದೇ ಕರೆಯಲ್ಪಡುತ್ತದೆ . ಈ ಕವನ ಸಂಪ್ರದಾಯವಾದಿಗಳಿಂದ ಖಂಡನೆಗೂ ಒಳಗಾಯಿತು . ಇದರಲ್ಲಿ ಅಡಿಗರು ರತಿ ವಿಷಯಕ್ಕೆ ಸಂಬಂಧಿಸಿದ ಪ್ರತಿಮೆಗಳನ್ನು ಪ್ರಯೋಗಿಸಿದ್ದು ಇವರೆಲ್ಲರ ಕೆಂಗಣ್ಣಿಗೆ ಗುರಿಯಾಯಿತು . ಸಂಪ್ರದಾಯವಾದಿಗಳು ಈ ಕವನವನ್ನು ಬಹಿಷ್ಕರಿಸುವಂತೆ ಆಗ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರ ಮೊರೆಹೋಗಿದ್ದು ಈಗ ಇತಿಹಾಸ .
ಈ ಕವನಕ್ಕೆ ಸಂಬಂಧಿಸಿದ ಇನ್ನೊಂದು ಸ್ವಾರಸ್ಯಕರ ಸಂಗತಿ ಹೀಗಿದೆ . ಅನಂತಮೂರ್ತಿಗಳು ತಾವು ಆಗಷ್ಟೇ ಬರೆದ ‘ರಾಜನ ಹೊಸ ವರ್ಷದ ಬೇಡಿಕೆಗಳು’ ಎನ್ನುವ ಕವನವನ್ನು ಅಡಿಗರ ಕೈಗಿಡುತ್ತಾರೆ . ಕವನವನ್ನು ಓದಿದ ಅಡಿಗರು “ನೀವು ಬರೆದದ್ದರಲ್ಲೆಲ್ಲ ಉತ್ತಮ ಕವನ ” ಎಂದು ಪ್ರತಿಕ್ರಿಯಿಸಿ ಹೊರತು ಹೋಗುತ್ತಾರೆ . ಕೆಲ ದಿನಗಳ ತರುವಾಯ ಮತ್ತೊಮ್ಮೆ ಸಿಕ್ಕಾಗ ತಾವು ಬರೆದ ಹೊಸ ಕವನವನ್ನು ಅನಂತಮೂರ್ತಿಯವರಿಗೆ ಕೊಡುತ್ತಾರೆ . ಅದನ್ನು ಓದಿದ ಅನಂತಮೂರ್ತಿ ಮೂಕವಿಸ್ಮಿತರಾಗುತ್ತಾರೆ . ವಾಚ್ಯಾರ್ಥದಿಂದ ತುಂಬಿದ ಸಾಮಾನ್ಯವೆನಿಸುವಂತಹ ಲೌಕಿಕ ಕೋರಿಕೆಯ ‘ರಾಜನ ಹೊಸವರ್ಷದ ಬೇಡಿಕೆ’ಯ ತಮ್ಮ ಕವನದ ಸಾಲುಗಳು ಅಲೌಕಿಕ ಶಕ್ತಿಗಾಗಿ ಪ್ರಾರ್ಥಿಸುವ ಕಾವ್ಯದ ಉತ್ಕೃಷ್ಟ ರೂಪಕಗಳನ್ನೊಳಗೊಂಡ ಅತ್ಯಂತ ಶಕ್ತಿಶಾಲಿ ಕವನ ‘ಪ್ರಾರ್ಥನೆ’ಯಾಗಿ ಹೊರಹೊಮ್ಮಿತ್ತು . ಆಗಲೇ ತನ್ನ ಮಾಧ್ಯಮ ಪದ್ಯವಲ್ಲವೆನ್ನುವುದನ್ನು ನಾನು ಕಂಡುಕೊಂಡೆ ಎನ್ನುವುದಾಗಿ ಅನಂತಮೂರ್ತಿ ಹಲವು ಸಂಧರ್ಭಗಳಲ್ಲಿ ಹೇಳಿದ್ದಾರೆ .
“ಗಾಳಿ ಕಡೆಯಲು ಸೆಟೆದ ಬೆಳ್ಳಿ ಮಂತು” ಇದು ಈ ಕವನದಲ್ಲಿ ಕಾಣುವ ಒಂದು ವಿಶಿಷ್ಟ ಪ್ರತೀಕ . ಪಕ್ಷಿಯ ಬೆಳ್ಳಗಿನ ಅಧೋಭಾಗ ಕೆಳಗೆನಿಂತು ನೋಡುವ ಕಣ್ಣಿಗೆ ಬೆಳ್ಳಿಯ ಕಡಗೋಲಾಗುತ್ತದೆ. ಆಕಾಶದಲ್ಲಿ ಅನಾಯಾಸ ಗಾಳಿಗೆ ಒಡ್ಡಿಕೊಂಡು ತೇಲುವ ಹೊಟ್ಟೆ ಹಾಗೆ ಮಂಥಿಸುತ್ತಿರುವಂತೆ ಹೊಳೆದೊಡನೆಯೇ ನಮ್ಮ ಮನಸ್ಸಿನ ಉತ್ಕರ್ಷದಿಂದಾಗಿ ಪಕ್ಷಿಗೆ ಪುರಾಣದ ಗರುಡತ್ವ ಆವಾಹಿತವಾಗುತ್ತದೆ. ವಿನತೆ ಅವಸರದಿಂದ ಒಡೆದ ಮೊಟ್ಟೆಯಿಂದ ಹುಟ್ಟಿದ್ದು ಕುಂಟನಾದ ಅರುಣನಾದರೆ, ಇವನು ಪರಿಪೂರ್ಣಾವತಾರಿ. ಅದಮ್ಯ ಶಕ್ತಿಯುಳ್ಳವ; ಆದರೆ ಮತ್ತು ಆದ್ದರಿಂದಲೇ ದೇವರ ಭಾರಕ್ಕೆ ಶರಣಾಗತಿಯಲ್ಲಿ ‘ಮೆತ್ತೆ – ಸಡಿಲು’ ಆಗುವವನೂ ಕೂಡ. ವಿರೋಧವೆಂದು ನಾವು ತಿಳಿದಿದ್ದ ಸೆಟೆಯುವಿಕೆ ಮೆತ್ತಗಾಗುವಿಕೆಗಳು ಇಲ್ಲಿ ಪರಸ್ಪರ ಪೂರಕ.

One Comment

  1. ಅಡಿಗರ “ಪ್ರಾರ್ಥನೆ” ಪದ್ಯ, ಟಿ.ಜಿ.ರಾಘವರ ಓದು ಮತ್ತು ವ್ಯಾಖ್ಯಾನ ಅದ್ಬುತ. ಆಡಿಯೊ ವಿಡಿಯೋ ಗುಣಮಟ್ಟ ಕೂಡ ಚೆನ್ನಾಗಿದೆ. ಬಹಳ ಇಷ್ಟವಾಯಿತು. ಸಂಗ್ರಾಹಕರಿಗೆ ಅಭಿನಂದನೆಗಳು ಹಾಗು ಧನ್ಯವಾದಗಳು.

Leave a Reply