ಶ್ರೇಷ್ಠತೆಯ ಕಲ್ಪನೆ

ಶ್ರೇಷ್ಠ, ಅತ್ಯುತ್ತಮ ಎಂಬ ಶಬ್ದಗಳೂ ಅವು ಸೂಚಿಸುವ ಅರ್ಥವೂ ನಮಗೆಲ್ಲರಿಗೂ ಗೊತ್ತು. ಜೀವನನದ ಪ್ರತಿಯೊಂದು ಅಂಗದಲ್ಲೂ ಕೃತಿಯಲ್ಲೂ ಇದು ಕಳಪೆ, ಇದು ಸಾಧಾರಾಣ, ಇದು ಉತ್ತಮ ಎಂದು ಗುರುತಿಸುವ ಶಕ್ತಿ ಎಲ್ಲರಿಗೂ ಒಂದಲ್ಲ ಒಂದು ಮಟ್ಟದಲ್ಲಿ ಇದ್ದೇ ಇದೆ. ಈ ಶಕ್ತಿ ಸರಿಯಾಗಿ ಕೆಲಸ ಮಾಡಬೇಕಾದರೆ ಸಮಾಜದಲ್ಲಿ ಎಲ್ಲರೂ ಸಾಮಾನ್ಯವಾಗಿ ಒಪ್ಪುವ, ಅಥವಾ ಗುರುತಿಸುವ ಒಂದು ಶ್ರೇಷ್ಠತೆಯ ಕಲ್ಪನೆ ಅಗತ್ಯ. ಮನುಷ್ಯನ ಜೀವನ ವ್ಯವಹಾರಗಳಲ್ಲಿ ವ್ಯಕ್ತವಾಗುವ ಅನೇಕಾನೇಕ, ಪರಸ್ಪರ ವಿರುದ್ಧ ಎನ್ನುವಂತೆ ತೋರುವ ಆಶೆ-ಆಕಾಂಕ್ಷೆಗಳು, ಏರಿಳಿತಗಳು, ಕನಸು ನನಸುಗಳೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅವುಗಳಲ್ಲಿ ಪ್ರತಿಯೊಂದಕ್ಕೂ ಅದರದರ ಹಂತವನ್ನು ನಿರ್ದೇಶಿಸಿ, ಇದು ಅಧಮ ಇದು ಮಧ್ಯಮ ಇದು ಸರ್ವೋತ್ತಮ ಅಥವ ಶ್ರೇಷ್ಠ ಎಂದು ನಿರ್ಧರಿಸುವುದು ಒಂದು ಜನಾಂಗದ ಅಭಿವೃದ್ಧಿಗೆ ಅತ್ಯಗತ್ಯವಾದ ಮೂಲಭೂತವಾದ ಕೆಲಸ. ಇಂಥ ಕೆಲಸ ಮಾಡುವವರನ್ನು ಋಷಿ ಅಥವಾ ದಾರ್ಶನಿಕ ಎಂದು ಕರೆಯುತ್ತಿದ್ದರು – ಹಿಂದೆ. ಈಗಲೂ ಆಧುನಿಕ ಜಗತ್ತಿನ ದೌರ್ಭಾಗ್ಯವೋ ಸೌಭಾಗ್ಯವೋ ಅಂತೂ ಇಂದು ಈ ಕೆಲಸದ ಬಹುಭಾಗವನ್ನು ಕವಿ ಸಾಹಿತಿಗಳೇ ಮಾಡಬೇಕಾಗಿ ಬಂದಿರುವುದು ಇಂದಿನ ವಿಶೇಷ. ನಮ್ಮ ಕವಿ ಸಾಹಿತಿಗಳು ಈ ಎತ್ತರಕ್ಕೆ ಏರಬಲ್ಲರೇ ಎಂಬ ಪ್ರಶ್ನೆಗಿಂತ ಹೆಚ್ಚಾಗಿ ಅಂಥವರು ಇನ್ನು ಮುಂದಾದರೂ ಇಲ್ಲಿ ಮೈದೋರುವರೇ ಎಂಬ ಪ್ರಶ್ನೆ ಈಗ ಹೆಚ್ಚು ಸಂಗತವಾದದ್ದು. ಏಕೆಂದರೆ ಈವರೆಗೆ ನಡೆದಷ್ಟು ಕೆಲಸದಿಂದ ನಮ್ಮ ಸಮಾಜದಲ್ಲಿ ಹುಟ್ಟಿರುವ ಬುದ್ಧಿಯ, ಮೌಲ್ಯದ ಗೊಂದಲ ಕಡಿಮೆಯಾಗಿಲ್ಲ, ಹೆಚ್ಚಾಗಿದೆ. ಆದಕಾರಣ ನಮಗೆ ಭರವಸೆಗೆ ಆಸ್ಪದ ಇರುವುದು ಭವಿಷ್ಯದಲ್ಲಿ ಮಾತ್ರ.

 

ಕವಿ ಸಾಹಿತಿಗಳ ಕೆಲಸ ಮೊದಲಾಗುವುದು ಮಹಾಜನತೆಯ ವ್ಯವಹಾರ ಜಗತ್ತಿನ ದಿನದಿನದ ಗೊಂದಲದಲ್ಲಿಯೇ, ಅದರ ಮೂಲಕವಾಗಿಯೇ. ಈ ಗೊಂದಲದ ನಡುವೆಯೂ ಸ್ಥಿರವೂ ಸ್ಪಷ್ಟವೂ ಆದೊಂದು ಆಶ್ರಯಸ್ಥಾನವನ್ನು ಪ್ರತಿಯೊಬ್ಬನೂ ಹುಡುಕುತ್ತಲೇ ಇರುತ್ತಾನೆ. ಈ ಹುಡುಕಾಟವೇ ಮೌಲ್ಯಶೋಧನೆ. ಈ ಸಂಶೋಧನೆಯಿಂದ ಲಭಿಸುವಂಥಾದ್ದೇ ಶ್ರೇಷ್ಠತೆಯ ಕಲ್ಪನೆ. ಧೃಢವಾದ ಅಂಥ ಒಂದು ಕಲ್ಪನೆಯ ಆಶ್ರಯ ದೊರೆತಾಗ್ಗೆ ಈ ಜಗತ್ತಿನ ಎಲ್ಲ ವಿದ್ಯಮಾನಗಳೂ ಅದರದರ ಸ್ಥಾನವನ್ನು ಗುರುತಿಸುವಿದು ನಮಗೆ ಸಾಧ್ಯವಾಗಿ ಗುರಿಯ ಬಗ್ಗೆ ನಿಚ್ಚಳವಾದ ಅರಿವು ಮೂಡುತ್ತದೆ. ಒಬ್ಬ ವ್ಯಕ್ತಿಯ ಅಭಿವೃದ್ಧಿಗೆ ಹೇಗೋ ಹಾಗೆ ಒಂದು ಜನಾಂಗದ ಅಥವಾ ಸಮಾಜದ ಪ್ರಗತಿ ಸುಸ್ಥಿತಿಗೂ ಅಂಥ ಅರಿವು ಅಗತ್ಯ. ಬಹುಜನದ ಬದುಕಿನಲ್ಲಿ ಶ್ರೇಷ್ಠತೆಯ ಈ ಕಲ್ಪನೆಗೂ ಅವರ ವಾಸ್ತವಿಕ ಜೀವನಕ್ಕೂ ಬಹಳ ಅಂತರವಿರುವುದು ಸಹಜ. ಆದರೆ ಒಟ್ಟಿನಲ್ಲಿ ಇಡೀ ಸಮಾಜ ಆ ಅಂತರವನ್ನು ಕಡಿಮೆ ಮಾಡಲು ಹೆಣಗುತ್ತಿರುವುದೂ ಅಲ್ಲಲ್ಲಿ ಕೆಲವರು ಶ್ರೇಷ್ಠತೆಯ ಕಡೆಗೆ ನಿರಂತರವಾಗಿ ಚಲಿಸಿದಾಗ, ಶ್ರೇಷ್ಠತೆಯ ಅಂಚನ್ನು ಮುಟ್ಟಿದಾಗ ಆ ವಿಶೇಷವನ್ನು ಗುರುತಿಸಿ ಮನ್ನಿಸುವುದೂ ಇಡೀ ಸಮಾಜದ ಸುಸ್ಥಿತಿಗೆ ಮಾತ್ರವಲ್ಲ, ಏಳ್ಗೆಗೂ ಅಗತ್ಯ; ನಮ್ಮ ಯುವಜನರಲ್ಲಿ ಸಹಜವಾಗಿರುವ ಸಾಹಸ ಪ್ರವೃತ್ತಿಗೇ ತಕ್ಕ ಪ್ರೇರಣೆಗೆ; ಅವರಲ್ಲಿ ಜೀವಂತವಿರುವ ಆದರ್ಶಪರತೆಗೆ ತಕ್ಕ ಗುರಿಯನ್ನು ತೋರುವುದಕ್ಕೆ.

 

ಮನುಷ್ಯನ ವಿಶೇಷವೆಂದರೆ ಏನು ಇದೆಯೋ ಅದರಲ್ಲಿ ನಿರಂತರವಾದ ಅತೃಪ್ತಿ. ಈ ಅತೃಪ್ತಿಗೆ ಕಾರಣ ನಮ್ಮಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇರುವ ಒಂದು ಅಪೂರ್ವ ಆದರ್ಶಚಿತ್ರ. ಸದಾ ಮೂರ್ತಗೊಳ್ಳಲು ತವಕಿಸುತ್ತಿರುವ, ಎಂದೂ ಪರಿಪೂರ್ಣವೂ ದೋಷರಹಿತವೂ ಆಗಿ ಮೂರ್ತಗೊಳ್ಳಲು ಸಾಧ್ಯವೇ ಇಲ್ಲದ ಕಲ್ಪನೆ ಅದು. ಒಂದು ಕಡೆ ಶ್ರೇಷ್ಠತೆಯ ಈ ಅಮೂರ್ತ ಕಲ್ಪನೆ ಇದ್ದರೆ ಇನ್ನೊಂದು ತುದಿಯಲ್ಲಿ ಸದಾಕಾಲವೂ ರೂಪುಗೊಳ್ಳುತ್ತಿರುವ ನಾನಾ ವಿಧದ ಮನುಷ್ಯ ಚರಿತ್ರಗಳು, ವಾಗ್ರೂಪಗಳು, ಕೃತಿಗಳು. ಒಂದು ಆದರ್ಶ ಜಗತ್ತಿಗೆ ಸೇರಿದ್ದಾದರೆ ಇನ್ನೊಂದು ವಾಸ್ತವ ಜಗತ್ತಿಗೆ ಸಂಬಂಧಿಸಿದ್ದು. ಈ ಎರಡರ ಮಧ್ಯೆ ಇರುವ ಅಂತರ ಪರೀಕ್ಷೆಯಲ್ಲಿ ಶೇಕಡಾ ಇರುವ ಹಾಗೆ, ಶೇಕಡಾವನ್ನು ಆಗೀಗ ಗಣಿತ ಭೌತಶಾಸ್ತ್ರಗಳಲ್ಲಿ ಒಬ್ಬಿಬ್ಬರು ಮುಟ್ಟುವುದು ಸಾಧ್ಯವಾದರೂ ಉಳಿದೆಲ್ಲ ವಿಷಯಗಳಲ್ಲೂ ಹೆಚ್ಚಿನವರು ಮೂವತ್ತೈದರಿಂದ ಅರವತ್ತು ಎಪ್ಪತ್ತರವರೆಗೂ ತುಯ್ಯುತ್ತಿದರೆ ಕೆಲವರು ಸದಾಕಾಲವೂ ಸೊನ್ನೆಯಿಂದ ಮೂವತ್ತೈದರವರೆಗೆ ಕುಗ್ಗುತ್ತ ಹಿಗ್ಗುತ್ತ ಇರುತ್ತಾರೆ.

 

ಒಟ್ಟಿನಲ್ಲಿ ಐವತ್ತಿರಿಂದಾಚೆ ಹಾಯದವರದೇ ಬಹುಮತ. ಅಂಥವರಿಗೆಲ್ಲ ಶೇಕಡಾದ ಮೇಲೆ ಯಾವಾಗಲೂ ಇರುವ ಕ್ರೋಧ ಇತ್ತೀಚೆಗೆ ಅಸಹನೀಯವಾಗುತ್ತ ಬರುತ್ತಿದೆ. ಶೇಕಡಾದ ಬದಲು ಐವತ್ತೇ ಇದ್ದರೆ ಅನುಕೂಲ ಅದೇ ನ್ಯಾಯ ಅಂತ ಐವತ್ತರ ಬಂಟರಿಗೂ ಅದು ಹತ್ತೋ ಹದಿನೈದೋ ಇದ್ದರೆ ಕೈ ನೋಡಬಹುದಾಗಿತ್ತು ಎಂದು ಶೂನ್ಯಸ್ಥರಿಗೂ ಅನ್ನಿಸಬಹುದು. ಅಂಥವರಲ್ಲಿ ಈಗ ಬಹುಮತ ಇರುವುದರಿಂದ ಬಡಪಾಯಿ ಶೇಕಡಾಕ್ಕೆ ಯಾವಾಗ ಮನ್ನಣೆ ಮನ್ನಾ ಆಗುವುದೋ ಹೇಳುವುದು ಕಷ್ಟ. ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಗೊಂದಲ ಇದೇ ಬಗೆಯದು. ಆದರೆ ಶೇಕಡಾದ ಒಂದು ಕಲ್ಪನೆ ಇಲ್ಲದೆ ಹೋದರೆ ಹೇಗೆ ಉತ್ತರ ಪತ್ರಿಕೆಗಳ ಮೌಲ್ಯನಿರ್ಣಯ ಅಶಕ್ಯವಾಗುವುದೋ ಹಾಗೆಯೆ ಶ್ರೇಷ್ಠತೆಯ ಕಲ್ಪನೆ ಇಲ್ಲವಾದರೆ ಯಾವ ಮನುಷ್ಯ ಉತ್ತಮ, ಯಾವ ಕೃತಿ ಶ್ರೇಷ್ಠ ಎಂಬ ನಿರ್ಣಯವೇ ಅಸಾಧ್ಯವಾಗಿ ನಮ್ಮ ವ್ಯವಹಾರವೆಲ್ಲವೂ ಅರ್ಥಹೀನವಾಗಿ ಹೋಗುತ್ತದೆ. ಉತ್ತರಗಳನ್ನು ಪರಿಶೀಲಿಸಿ ನಂಬರುಕೊಡುವ ಅಧ್ಯಾಪಕರು ನಿಸ್ಪೃಹರೂ ನಿಷ್ಪಕ್ಷಪಾತಿಗಳೂ ವಸ್ತುನಿಷ್ಠ ಮಾನದಂಡಗಳನ್ನು ಉಪಯೋಗಿಸುವವರೂ ಆಗಿರಬೇಕೆಂದು ನಾವು ಬಯಸುತ್ತೇವೆ. ಇದೇ ಮಾತು ಜೀವನದ ಎಲ್ಲ ಕೃತಿಗಳಿಗೂ ಸಾಹಿತ್ಯಕೃತಿ ವಿಮರ್ಶೆಗಳಿಗೂ ಸಲ್ಲುತ್ತದೆ.

 

ಶ್ರೇಷ್ಠತೆಯ ಈ ಕಲ್ಪನೆಯ ಕಾರ್ಯಸಾಧನಮಾರ್ಗವಾಗಿ ಇರುವಂಥದು ಇದು ಅಧಮ, ಇದು ಮಧ್ಯಮ, ಇದು ಉತ್ತಮ ಎಂಬ ತಾರತಮ್ಯ ವಿವೇಕ. ಯಾವ ಸಮಾಜದಲ್ಲಿ ಈ ವಿವೇಕ ನಿಚ್ಚಳವಾಗಿರುತ್ತದೋ ಅಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ; ಇಡೀ ಸಮಾಜದ ನಿರಂತರವಾದ ಗತಿಗೇ ಒಂದು ಗುರಿ ಮೂಡಿ ಎಲ್ಲ ಕೆಲಸಗಳೂ ಬದುಕನ್ನು ಸರ್ವಾಂಗಸುಂದರವನ್ನಾಗಿ ಮಾಡಲು ದುಡಿಯುತ್ತವೆ. ಇಂಥ ಒಂದು ಕರಾರುವಾಕ್ಕಾದ ವಿವೇಕ ನಮ್ಮ ಪೂರ್ವಿಕರಲ್ಲಿ ಇದ್ದದ್ದರಿಂದಲೇ ಇಲ್ಲಿ ಅನೇಕ ಉತ್ತಮ ಕೃತಿಗಳ ಸೃಷ್ಟಿ ಸಾಧ್ಯವಾಯಿತು. ಅಂಥ ಅರಿವು ಇದ್ದದ್ದರಿಂದಲೇ ಪಾಶ್ಚಾತ್ಯ ಲೋಕದಲ್ಲಿ ಹೊಸ ಹೊಸ ಸಂಶೋಧನೆ, ನಿರ್ಮಾಣ, ಕೃತಿರಚನೆ ಸಾಧ್ಯವಾಗಿ ಜಗತ್ತಿಗೇ ಬೆಳಕು ಹಬ್ಬಿತು. ಈ ತಾರತಮ್ಯಜ್ಞಾನವು ಕೂಡಾ ಸಾರ್ವತ್ರಿಕವಾಗಿ ಜೀವನದ ಎಲ್ಲ ವಿಭಾಗಗಳಲ್ಲೂ ವ್ಯಕ್ತವಾಗುವುದೇ ಸಮಾಜದ ಸಮಸ್ಥಿತಿಗೆ ಸೂಚನೆ. ಹಾಗೆ ಅದು ಸರ್ವತ್ರ ವ್ಯಕ್ತವಾದಾಗಲೇ ಸಾಹಿತ್ಯದಲ್ಲೂ ಸಾಹಿತ್ಯವಿಮರ್ಶೆಯಲ್ಲೂ ಅದು ವ್ಯಕ್ತವಾಗಬಲ್ಲುದು. ನಮ್ಮ ಇಂದಿನ ಈ ಮಾನಸಿಕ ಗೊಂದಲದ ಪರಿಸ್ಥಿತಿಯಲ್ಲಿ ತೀರ ಸಾಮಾನ್ಯವಾದದ್ದೇ ತೀರ ಶ್ರೇಷ್ಠವೆಂದು ಪರಿಗಣಿತವಾಗುತ್ತಿದ್ದರೆ ಆಶ್ಚರ್ಯವೇನು? ಅತ್ಯಂತ ಸಾಮಾನ್ಯ ಬುದ್ಧಿಚರಿತ್ರವುಳ್ಳವನು ಬಹುಮತದ ಬಲದಿಂದ ಶ್ರೇಷ್ಠ ಸ್ಥಾನವನ್ನಲಂಕರಿಸಿ ದರ್ಬಾರು ನಡೆಸತೊಡಗುವಾಗ ಅದನ್ನು ಕಂಡ ಜನಸಮುದಾಯದಲ್ಲಿ ಶ್ರೇಷ್ಠತೆಯ ಬಗ್ಗೆ ಸರಿಯಾದ ಕಲ್ಪನೆ ಮೂಡದೆ ಇರುವುದು ಸೋಜಿಗವಲ್ಲ. ಅದೇ ರೀತಿ ಬಹುಮತದ ಬೆಂಬಲದಿಂದಲೂ ಅಧಿಕಾರ ಸ್ಥಾನದ ಮಹಿಮೆಯಿಂದ ಬರುವ ಪ್ರಚಾರದಿಂದಲೂ ತೀರ ಸಾಮಾನ್ಯ ಕೃತಿಗೂ ಮಹಾಕೃತಿಯ ಪಟ್ಟ ದೊರೆಯುವುದೂ ನಮಗೆ ಕಂಡುಬರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಯಾವುದು ಶ್ರೇಷ್ಠವಾದುದು, ಯಾವ ಮನುಷ್ಯ ಉತ್ತಮ ಮನುಷ್ಯ ಎಂದು ನಿರ್ಣಯಿಸಲು ಅಸಾಧ್ಯವಾಗುವಂಥ ಮನಸ್ಥಿತಿ ನಮ್ಮ ಜನಸಾಮಾನ್ಯರಲ್ಲೂ, ಯಾವ ಕೃತಿ ಉತ್ತಮ ಯಾವುದು ಸಾಮಾನ್ಯ ಯಾವುದು ತೀರ ಕಳಪೆ ಎಂದು ವಿವೇಚಿಸಲು ಅಸಮರ್ಥವಾದ ಅಭಿರುಚಿ ನಮ್ಮ ಓದುಗರಲ್ಲೂ ಹೆಚ್ಚಾಗಿ ಈಗ ಕಂಡುಬರುತ್ತಿರುವುದು ಸೂಚಿಸುತ್ತದೆ. ಈ ಪರಿಸ್ಥಿತಿ ಹೀಗೇ ಮುಂದುವರಿದರೆ ಇಡೀ ದೇಶವನ್ನೇ ಅಂಧಕಾರ ಕವಿದು ಮನಸ್ಸಿನ ಕೆಲಸವೇ ಸಂಪೂರ್ಣ ನಷ್ಟವಾಗುವ ಅಥವಾ ತಡೆದು ನಿಲ್ಲುವ ಅಪಾಯ ಅಸಂಭವವಲ್ಲ.

 

ಪ್ರಜಾಪ್ರಭುತ್ವದಲ್ಲಿ ಬಹುಮತದ ಪಾತ್ರ ಮುಖ್ಯವೇ ಆದರೂ ಅದು ಕಾರ್ಯನಿರ್ವಹಣೆಯ ಅನಿವಾರ್ಯ ತಂತ್ರವಲ್ಲದೆ ಪ್ರಜಾಪ್ರಭುತ್ವದ ಮೂಲತತ್ವವಲ್ಲ. ಈ ಮಾತನ್ನು ಮರೆತು ಪ್ರಜಾತಂತ್ರವನ್ನು ಕೇವಲ ಬಹುಮತ ರಾಜ್ಯ ಎಂದು ಸರಳ ಗೊಳಿಸುವುದರಿಂದ ಏನೆಲ್ಲ ದುರಂತ ಸಂಭವಿಸಬಹುದೋ ಅವೆಲ್ಲವೂ ಈಗ ನಮ್ಮ ದೇಶದಲ್ಲಿ ಸಂಭವಿಸುತ್ತಿದೆ. ಪ್ರಜಾಪ್ರಭುತ್ವದ ಮೂಲತತ್ವ ಜೀವನದ ವೈವಿಧ್ಯ ಅರಿವು; ಆ ಅರಿವಿನಿಂದ ಭಿನ್ನಾಭಿಪ್ರಾಯದ ಬಗ್ಗೆ ಹುಟ್ಟುವ ಕಾತರಪೂರ್ಣವಾದ ಗೌರವ. ಈ ಮೂಲತತ್ವವನ್ನು ಮರೆತರೆ ಕೇವಲ ತಂತ್ರವಾದದ್ದು ಮೂಲಮಂತ್ರ ಎಂದು ಜನ ಭ್ರಮಿಸಿ ಸಮಾಜದ ಎಲ್ಲ ಅಂಗಗಳೂ ಅತಂತ್ರವಾಗುತ್ತದೆ. ಏಕೆಂದರೆ ವ್ಯಕ್ತಿಜೀವನದ ಸುಸ್ಥಿತಿ ಹೇಗೋ ಹಾಗೆ ಸಮಾಜದ ಸುಸ್ಥಿತಿಯೂ ಇರುವುದು ಪರಸ್ಪರ ವಿರುದ್ಧ ಎನ್ನಿಸುವಂಥ ಬೇರೆ ಬೇರೆ ವೃತ್ತಿ ಪ್ರವೃತ್ತಿಗಳನ್ನೂ ಮನೋಧರ್ಮಗಳನ್ನೂ ಎಳೆತ ಸೆಳೆತಗಳನ್ನೂ ಸಮತೂಕದಲ್ಲಿಡಬಲ್ಲ ಬುದ್ಧಿಯ ಕೆಲಸದಿಂದ. ತಿನ್ನುವ ಆಶೆ ಹೇಗೆ ನಮ್ಮಲ್ಲಿ ಇದೆಯೋ ಹಾಗೆಯೇ ತಿನ್ನಿಸುವ ಆಶೆಯೂ ಇದೆ. ಅಧಿಕಾರದ ಆಶೆ ಇರುವ ಹಾಗೆ ನಮ್ರನಾಗುವ, ತಲೆಬಾಗುವ ಪ್ರವೃತ್ತಿಯೂ ಇದೆ. ಹಣವನ್ನು ಹೆಚ್ಚು ಹೆಚ್ಚಾಗಿ ಸಂಪಾದಿಸಿ ಕೂಡಿಸುವ ಆಶೆ ಇರುವ ಹಾಗೆ ಅದನ್ನು ತನಗಾಗಿ, ತನ್ನವರಿಗಾಗಿ, ಸತ್ಕಾರ್ಯಗಳಿಗಾಗಿ, ವಿನಿಯೋಗಿಸುವ ಆಶೆಯೂ ಇದೆ. ಈ ದೇಹಕ್ಕೆ ಸಂಬಂಧಪಟ್ಟಂತೆ ಅನೇಕ ಭೋಗಗಳ ಆಶೆ ಇದ್ದರೂ ಈ ಎಲ್ಲವನ್ನೂ ತ್ಯಜಿಸಿ ಸುತ್ತಮುತ್ತಲಿನ ಒಳ್ಳೆಯದಕ್ಕಾಗಿ, ಆತ್ಮದ ಉನ್ನತಿಗಾಗಿ ತ್ಯಾಗ ಮಾಡುವ ಪ್ರವೃತ್ತಿಯೂ ಇದೆ. ಈ ಲೋಕದ ಎಳೆತ ಹೇಗೆ ಇದೆಯೋ ಹಾಗೆಯೇ ಆ ಲೋಕದ ಸೆಳೆತವೂ ಉಂಟು. ಈ ದ್ವಂದ್ವಗಳನ್ನು ಒಂದಕ್ಕೊಂದು ಸಮತೂಕಗೊಳ್ಳುವಂತೆ ಮಾಡುವುದೇ ವಿವೇಕದ ಕೆಲಸ. ಇರುವ ಅನೇಕ ವೃತ್ತಿಪ್ರವೃತ್ತಿಗಳಲ್ಲಿ ಶ್ರೇಷ್ಠವಾದದ್ದು ಯಾವುದು, ಸಾಧಾರಣವಾದದ್ದು ಯಾವುದು, ತೀರ ಕಳಪೆ ಯಾವುದು ಎಂಬ ತಿಳುವಳಿಕೆ ಬೆಳೆದು, ಇವುಗಳಲ್ಲಿ ಯಾವುದನ್ನೂ ಬಹಿಷ್ಕರಿಸದೆ, ಮನ್ನಾ ಮಾಡಲು ಯತ್ನಿಸದೆ, ಪ್ರತಿಯೊಂದನ್ನು ಅದರದರ ಅಂತಸ್ತಿನಲ್ಲಿಡಲು ಶಕ್ತವಾಗುವ ಜೀವನಮೌಲ್ಯಗಳ ನಿಷ್ಕೃಷ್ಟ ವಿವೇಕ ಎಲ್ಲ ಕಾಲದಲ್ಲೂ ಎಲ್ಲ ಸಮಾಜಕ್ಕೂ ಸಲ್ಲುವ ಅಭಿವೃದ್ಧಿ ಸೂತ್ರ.

 

ಆದ್ದರಿಂದಲೇ ಈಗ, ಪುರಾತನ ಮೌಲ್ಯಗಳು ಖಿಲವಾಗಿ ಶಿಥಿಲಗೊಂಡಿರುವ ಈ ಕಾಲದಲ್ಲಿ ಬುದ್ಧಿಯನ್ನುಪಯೋಗಿಸಿ ಕೆಲಸ ಮಾಡುವ ಪ್ರತಿಯೊಬ್ಬನೂ ಕೈಕೊಳ್ಳಬೇಕಾದ ಅತ್ಯಂತ ತುರ್ತಿನ ಕೆಲಸ ಇದು; ನಿರಂತರವೂ ತೀವ್ರವೂ ಆದ ಪುರುಷಾರ್ಥ ಸಂಶೋಧನೆಯ ಮೂಲಕ ರೂಪುಗೊಳ್ಳುವ ಶ್ರೇಷ್ಠತೆಯ ಕಲ್ಪನೆಯ ಅಭಿವ್ಯಕ್ತಿ. ಈ ಕೆಲಸ ಕೇವಲ ಆತ್ಮಕ್ಕೆ ಪರಮಾರ್ಥಕ್ಕೆ ಸಂಬಂಧಪಟ್ಟದ್ದಲ್ಲ ಎಂಬುದು ಬಹು ಮುಖ್ಯವಾದ ಮಾತು. ಇಲ್ಲಿ ಈ ಲೋಕದ ಸಂಪತ್ಸುಖಗಳ ಅಭ್ಯುದಯಕ್ಕೂ ಅಗತ್ಯವಾದದ್ದು. ಇಂಥ ಕೆಲಸವನ್ನು ಕೈಕೊಳ್ಳುವ ಆಧುನಿಕ ಋಷಿ ಮುನಿಗಳ ತಂಡವೊಂದು ಆದಷ್ಟು ಬೇಗ ನಮ್ಮ ದೇಶದಲ್ಲಿ ಸಿದ್ಧವಾಗಿ ಕಾರ್ಯಪ್ರವೃತ್ತವಾಗದಿದ್ದರೆ ನಮ್ಮ ದೇಶ ಮತ್ತೆ ತಲೆಯೆತ್ತಲು ಅನೇಕ ಶತಮಾನಗಳೇ ಬೇಕಾಗಬಹುದು.

 

ಜೀವನಕ್ಕೆ ಅತ್ಯಂತ ನಿಕಟವರ್ತಿಯಾದ ಸಾಹಿತ್ಯದಲ್ಲಿ ಈ ಕೆಲಸ ನಡೆಯುತ್ತಿರುವುದು ನಡೆಯಬೇಕಾದ್ದೂ ಸಹಜ. ಅಸ್ಥಿರ ಸಮಾಜದಲ್ಲಿ ಕಾರ್ಯಶೀಲವಾಗಬೇಕಾದಾಗ ಸಾಹಿತ್ಯಕ್ಕೊಂದು ಅಭೂತಪೂರ್ವವಾದ ಜವಾಬ್ದಾರಿ ಬರುತ್ತದೆ, ಹೆಚ್ಚುತ್ತದೆ. ಎಲ್ಲ ಕಾಲಕ್ಕೂ ಸಲ್ಲುವ ಶ್ರೇಷ್ಠತೆಯ ಕಲ್ಪನೆಯನ್ನು ಈ ಕಾಲಕ್ಕೆ ಸಲ್ಲುವ ಪ್ರತಿಮೆಯಿಂದಾಗಿ ಕೆತ್ತುವ ಕೆಲಸ ಇದು. ಈ ಕೆಲಸ ನಡೆಯುತ್ತಿರುವಾಗಲೇ ಅದರ ಜೊತೆ ಜೊತೆಗೇ ಅದರ ಬೆಲೆ ಕಟ್ಟುವ, ಶ್ರೇಷ್ಠತೆಯ ಕಲ್ಪನೆಗೂ ಅದು ಅಭಿವ್ಯಕ್ತಗೊಳ್ಳುವ ಸಾಹಿತ್ಯ ಕೃತಿಗಳಿಗೂ ಇರುವ ಸಾಮೀಪ್ಯವನ್ನೂ ದೂರವನ್ನೂ ಗುರುತಿಸಿ ವಿವರಿಸಬಲ್ಲ ನಿಷ್ಪಕ್ಷಪಾತ, ನಿರ್ಮತ್ಸರ ವಿಮರ್ಶೆಯ ಕೆಲಸವೂ ನಡೆಯಬೇಕು. ಹೀಗೆ ಈಗ ಕೃತಿ, ವಿಮರ್ಶೆ – ಇವು ಒಂದಕ್ಕೊಂದು ಸಹವರ್ತಿಗಳಾಗಿ ಸಹಕಾರಿಗಳಾಗಿ ಕೆಲಸ ಮಾಡದೆ ಬೇರೆ ದಾರಿ ಇಲ್ಲ. ಶ್ರೇಷ್ಠತೆಯ ಕಲ್ಪನೆ ಜನಸಮುದಾಯವನ್ನು ಮುಟ್ಟಿ ಸಮಾಜದ ಮನಸ್ಸಿನ ಸತ್ವವಾಗಿ ಮಾರ್ಪಾಡಬೇಕಾದರೆ ಇರುವ ಮಾರ್ಗ ಇದೊಂದೇ.

Leave a Reply