ಬಸವರಾಜ ಕಟ್ಟೀಮನಿಯವರಿಗೆ ಅಡಿಗರು ಬರೆದ ಪತ್ರ – 1

ಮೈಸೂರು
14.06.1952

ಗೆಳೆಯ ಕಟ್ಟೀಮನಿ,
ಅಲ್ಲ-ನನ್ನ ನಿಮ್ಮ ಭೆಟ್ಟಿಯಾಗದೆ ಎಷ್ಟು ದಿನವಾಯಿತು? ನಿಮ್ಮನ್ನು ಒಂದು ಸಲ ನೋಡಬೇಕು ಅನ್ನಿಸುತ್ತಿದೆ. ನಾನಂತೂ ಆ ಕಡೆ ಬರುವುದು ಆಗಲೇ ಇಲ್ಲ. ನೀವಾದರೂ ಈ ಕಡೆ ಬರುವ ಸಂಭವ ಉಂಟೋ? ಬರುವ ಹಾಗಿದ್ದರೆ ಚನ್ನಾಗಿತ್ತು. ಕೂಡಿ ಮಾತಾಡಬಹುದಿತ್ತು. ಚರ್ಚಿಸಬಹುದಿತ್ತು. ನಾಲ್ಕು ದಿನಗಳ ಕಾಲ ಕಳೆದರೆ ಮನಸ್ಸಿಗೆ ಎಷ್ಟೋ ತೃಪ್ತಿಯಾಗುತ್ತಿತ್ತು. ಸಾಧ್ಯವಾದರೆ ಈ ಕಡೆ ಒಂದು ಸಲ ಬಂದು ಹೋಗಿ.

‘ಜ್ವಾಲಾಮುಖಿಯ ಮೇಲೆ’
ನಿಮ್ಮ ‘ಜ್ವಾಲಾಮುಖಿಯ ಮೇಲೆ’ ಓದಿದ್ದೇನೆ. ಆದರೆ ಅದು ನನಗೆ ‘ಮಾಡಿ ಮಡಿದವರು’ ಕೊಟ್ಟಷ್ಟು ಆನಂದವನ್ನು ಕೊಡಲಿಲ್ಲ. ‘ಮಾಡಿ ಮಡಿದವರು’ ಪರಿಪಾಕವುಳ್ಳ ಕಾದಂಬರಿ. ಕಲಾದೃಷ್ಟಿಯಿಂದ, ಭಾಷಾದೃಷ್ಟಿಯಿಂದ ಬಹಳ ಮೇಲ್ತರಗತಿಯದ್ದು. ‘ಜ್ವಾಲಾಮುಖಿಯ ಮೇಲೆ’ ಯಲ್ಲಿ ಆ ಹದವಿಲ್ಲ. ಆ ಪಾಕವಿಳಿದಿಲ್ಲ. ಆದರೆ ಇದರಲ್ಲಿ ಹೊಸ ಪ್ರಯತ್ನವಿದೆ. ಇಲ್ಲಿನ ಪ್ರಪಂಚ ಇನ್ನೂ ಆಳವಾಗಿ, ವಿಸ್ತಾರವಾಗಿ, ಬಹುಮುಖವಾಗಿ ಹಬ್ಬಿದೆ. ಇಲ್ಲಿ ನೀವು ಒಂದು ಹೊಸ ದಾರಿ ಹಿಡಿದಿದ್ದೀರಿ. ಆದಕಾರಣ ಅದರಲ್ಲಿ ಇನ್ನೂ ಪರಿಣತಿ ಪಡೆಯದೇ ಇರುವುದು ಆಶ್ಚರ್ಯವೇನಲ್ಲ. ನನ್ನ ದೃಷ್ಟಿಯಲ್ಲಿ ಈ ಕಾದಂಬರಿಯ ಮುಖ್ಯ ದೋಷವೆಂದರೆ ಚಂದ್ರಣ್ಣನ ಪಾತ್ರ. ಬಹುಶಃ ಆ ಪಾತ್ರ ನೀವೇ ಆಗಿರಬೇಕು. ಅದು ಬಹಳ ಪೇಲವವಾಗಿ ರಕ್ತಹೀನವಾಗಿ ಬಿಟ್ಟಿದೆ. ಮನುಷ್ಯ ತನ್ನನ್ನು ತಾನು ತಿಳಿಯುವುದು ಬಹಳ ಕಷ್ಟವಾದುದು. ಅದಕ್ಕೆ ಬಹಳ ಪರಿಶ್ರಮ ಬೇಕು. ನೀವು ಅಷ್ಟು ಪರಿಶ್ರಮವಹಿಸಿಲ್ಲವೆಂದು ತೋರುತ್ತದೆ. ಆದರೆ ಬಡ ಜನಗಳ ಜೀವನ, ಅವರ ಕಾರ್ಯಕ್ಷೇತ್ರಗಳನ್ನು ಅತ್ಯದ್ಭುತವಾಗಿ ಚಿತ್ರಿಸಿದ್ದೀರಿ. ನೀವು ಆ ಕಾದಂಬರಿಗೆ ಬರೆದ ಮುನ್ನುಡಿ ನೋಡಿ ಬಹಳ ಸಂತೋಷವಾಯಿತು. ನಿಮ್ಮ ಮನಸ್ಸು ಪ್ರಶಾಂತವಾಗುತ್ತಿರುವುದೂ, ಏರುಪೇರಾಗಿದ್ದ ಬುದ್ಧಿ ತೂಕಕ್ಕೆ ಬರುತ್ತಿರುವುದೂ ಅಲ್ಲಿ ಕಂಡಿತು. ಆ ಬಗೆಯ ಸಮತೋಲನ, ಆ ಸಮ ದೃಷ್ಟಿ – ಇದು ಬಹಳ ದೊಡ್ಡ ಶುಭ ಸೂಚನೆ. ನೀವು ಭಾವನಿಷ್ಠರು. ಆ ಭಾವ ಕೈಮೀರಿ ದಡವನ್ನು ದುಡುಕಿ ಭೋರ್ಗರೆಯುವಂಥದು – ಮುಖ್ಯವಾಗಿ ನೀವು ಕವಿಯೇ. (ನಾನೂ ಅದೇ ಜಾತಿ.) ನಮ್ಮ ಭಾವವನ್ನು ಬುದ್ಧಿ ಹತೋಟಿಗೆ ತಂದುಕೊಳ್ಳ ಬೇಕು. ಭಾವ ಬುದ್ಧಿಗಳ ಸಹಕಾರದಿಂದಲೇ ಉತ್ತಮ ಕೃತಿ ಬರಬೇಕಾಗುತ್ತದೆ. ಆ ಸಹಕಾರ ನಿಮ್ಮಲ್ಲಿ ನಡೆಯುತ್ತಿದೆ. ನಿಮ್ಮಿಂದ ಉತ್ತಮೋತ್ತಮ ಕೃತಿಗಳು ಬರುವುದರಲ್ಲಿ ಯಾವ ಸಂದೇಹವೂ ಇಲ್ಲ. ನಿಮ್ಮ ‘ಜ್ವಾಲಾಮುಖಿಯ ಮೇಲೆ’ ಬಹಳ ಜನ ಮೆಚ್ಚಿದ್ದಾರೆ. ತ.ರಾ.ಸು, ಅ.ನ.ಕೃ. ಅದನ್ನು ಹೊಗಳಿ ನನಗೆ ಹೇಳಿದ್ದಾರೆ. ಅವರೆಲ್ಲ ಹೆಚ್ಚಾಗಿ ವಿಷಯದಮೇಲೆ ದೃಷ್ಟಿ ಇಟ್ಟವರು. ಆದರೆ ನಾನು ಹಾಗೆ ಮಾಡಲಾರೆ. ಸಾಹಿತ್ಯವೊಂದು ಕಲೆಯಾಗಿರುವಾಗ ಕಲಾ ದೃಷ್ಟಿ ಮೊದಲು, ಆಮೇಲೆ ಉಳಿದದ್ದು… ಗೆಳೆಯ ಬಸವರಾಜ, ನಾನು ಹೊಸತೊಂದು ಸಿದ್ಧಾಂತಕ್ಕೆ ಬಂದಿದ್ದೇನೆ. ಕವಿಯಲ್ಲದವನು ಏನನ್ನೂ ಬರೆಯಲಾರ – ಯಾವ ಬಗೆಯ ಸಾಹಿತ್ಯವನ್ನೂ ರಚಿಸಲಾರ – ಎಂದು. ಅಂಥ ಕವಿ ಗದ್ಯದಲ್ಲಿ ಬರೆಯಬಹುದು, ಪದ್ಯದಲ್ಲಿ ಬರೆಯಬಹುದು – ಅದು ಅಮುಖ್ಯ. ಈ ದೃಷ್ಟಿಯಿಂದ ಈಗ ಕಾದಂಬರಿ ರಚನೆ ಮಾಡುತ್ತಿರುವವರಲ್ಲಿ ನಿಜವಾದ ಪ್ರಥಮ ವರ್ಗದ ಸಾಹಿತಿಗಳೆಂದರೆ ಬಸವರಾಜ ಕಟ್ಟೀಮನಿ ಮತ್ತು ತ.ರಾ.ಸು. ಎಂತ ನನ್ನ ನಿಶ್ಚಿತ ಅಭಿಪ್ರಾಯ. ಈ ಅಭಿಪ್ರಾಯವನ್ನು ಈ ಮುಂದೆ ಬರುವ ತಲೆಮಾರು ಎತ್ತಿ ಹಿಡಿಯುವುದೆಂದು ನನಗೆ ಸಂಪೂರ್ಣ ಭರವಸೆಯುಂಟು. ಆದರೆ ನೀವೂ ನಾನೂ ಮಾಡಬೇಕಾದ ಕೆಲಸ ಇನ್ನೂ ಬಹಳ ಉಂಟು. ಕಲೆಯಲ್ಲಿ ಎಷ್ಟು ಎತ್ತರ ಏರಿದರೂ ಮತ್ತಷ್ಟು ಎತ್ತರ ಕಾಣಬೇಕು, ಕಾಣುತ್ತದೆ. ಹಾಗೇ ಏರುತ್ತಾ ಹೋಗುವುದೇ ನಿಜವಾದ ಕಲೆಗಾರನ ಲಕ್ಷಣ. ಅದಕ್ಕಾಗಿ ಪ್ರತಿನಿತ್ಯವೂ ಸಾಧನೆ ನಡೆಯಬೇಕು. ಓದಬೇಕು – ಆಳವಾಗಿ, ವಿಸ್ತಾರವಾಗಿ. ಗ್ನಾನ್ ಪಿಪಾಸೆ ನಮ್ಮನ್ನು ಹಿಡಿದೆಳೆಯಬೇಕು. ಇಂಗ್ಲೀಷ್ ಸಾಹಿತ್ಯ ಮಾತ್ರವಲ್ಲ, ನಮ್ಮ ಸಾಹಿತ್ಯ – ರಾಮಾಯಣ, ಭಾರತ, ಗೀತೆ, ವಚನ, ರೂಪಾಂತರ ಪದ, ಜಾನಪದ ಗೀತೆ – ಇವುಗಳಲ್ಲಿ ಮನಸ್ಸು ಇಳಿಯಬೇಕು. ಯೋಚಿಸುತ್ತಾ ಹೋದಂತೆ, ನಾವು ಎಷ್ಟು ಪ್ರತಿಗಾಮಿಗಳೇ ಆದರೂ ನಮ್ಮ ಬೇರು ನಮ್ಮ ದೇಶದ ಸಾಹಿತ್ಯದಲ್ಲಿ, ನಮ್ಮ ಜನಜೀವನದ ಶತಮಾನಗಳ ಇತಿಹಾಸದಲ್ಲಿ ನೆಟ್ಟಿದೆ ಎಂಬುದು ತಿಳಿಯುತ್ತದೆ. ಈ ಮಾತನ್ನು ನಾನು ನಿಮಗೊಂದು ಸಲಹೆ ಎಂದು ಹೇಳುತ್ತಿಲ್ಲ. ನೀವು ಕೂಡ ಈ ರೀತಿಯಲ್ಲಿಯೇ ಯೋಚಿಸುತ್ತಿರಬೇಕು – ಅಲ್ಲವೇ?
ಹೌದು, ನಾನೂ ಕಾದಂಬರಿ ಬರೆದೆ. ಅಚ್ಚಾಗುತ್ತಿದೆ. 96 ಪುಟಗಳಷ್ಟು ಆಗಲೇ ಅಚ್ಚಾಗಿದೆ. ಕಾದಂಬರಿ ಸುಮಾರು 160 ಪುಟಗಳಾಗಬಹುದು. ಗೆಳೆಯ ತಾ.ರಾ.ಸು. ವಿನ ಒತ್ತಾಸೆಯಿಂದ ಕಾದಂಬರಿಯೇನೋ ಬರೆದೆ – ಅದರಿಂದ ನನಗೆ ಸಂಪೂರ್ಣ ತೃಪ್ತಿಯಾಗಲಿಲ್ಲ. ನೀವುಗಳೆಲ್ಲಾ ಏನು ಹೇಳುವಿರೋ ಕಾದಿದ್ದೇನೆ.

‘ನಡೆದು ಬಂದ ದಾರಿ’

“ನಡೆದಿಬಂದ ದಾರಿ” ಪದ್ಯ ಅರ್ಥವಾಗಲಿಲ್ಲ ಎಂದು ಬರೆದಿದ್ದೀರಿ. ಹಾಗಾದುದು ಸಹಜವೇ. ಆ ಕವನದಲ್ಲಿ ನಾನು ಗದ್ಯಾಂಶವನ್ನು ಕೊಂಚವೂ ಸೇರಿಸದೆ ಕೇವಲ ರೂಪಕಗಳ, ಶಬ್ದಗಳ ಮೂಲಕ ಭಾವಗಳನ್ನು ವ್ಯಕ್ತಪಡಿಸಲು ಯತ್ನಿಸಿದ್ದೇನೆ. ಅದು ಒಂದು ಹೊಸ ಯತ್ನವಾದದ್ದರಿಂದ ಸಂಪೂರ್ಣ ಪರಿಣತಿ ಅದಕ್ಕೆ ಬಂದಿಲ್ಲ. ಆ ಕವನದ ಮೊದಲನೆಯ ಭಾಗದಲ್ಲಿ ನನ್ನ ಅಥವ ನನ್ನಂಥವರ ಅಥವ ಕನ್ನಡದ ಈ ತನಕದ ಕವಿತೆಯ ಅಥವ ಒಟ್ಟಿನಲ್ಲಿ ಮಾನವ ಲೋಕದ ಈವರೆಗಿನ ಅನುಭಾವಗಳ ದುರಂತವನ್ನು ಚಿತ್ರಿಸಿದ್ದೇನೆ. ‘ಅಮೃತಶಿಲೆಯ ಗೋರಿ- ‘ ಭೂತಕಾಲದಲ್ಲಿ ಮರೆಯಲಾಗದೆ ತಲೆಯೆತ್ತಿ ನಿಂತಿರುವ ನೂರಾರು ನೆನಪುಗಳು; ಬಾಲ್ಯದ, ಬಾಲ ಭಾವದ ಕನಸು ಕಣಸುಗಳು; ಪ್ರೀತಿ ವಿರಹ : ಹೊಸದರ ಅನ್ವೇಷಣೆ – ಇತ್ಯಾದಿ. ಆದರೆ ಹಡಗೊಡೆದು ಮರಳದಿಣ್ಣೆಯ ಮೇಲೆ ಬಿದ್ದುದೇ ಆ ಎಲ್ಲದರ ಪರಿಣಾಮವಾಯಿತು. ಎರಡನೆಯ ಭಾಗದಲ್ಲಿ ಇನ್ನೊಂದು ಯಾತ್ರೆಯ ವಿವರವಿದೆ. ಇದು ಆದದ್ದಲ್ಲ, ಮುಂದೆ ಆಗುವಂಥದ್ದು – ಆದಕಾರಣ ಅಲ್ಲಿ ಬರುವ ಚಿತ್ರಗಳ ಹೊರ ಗೆಗೆ ಮಸಕು ಮಸಕಾಗಿದೆ, ಅಸ್ಪಷ್ಟವಾಗಿದೆ. ಆ ಯಾತ್ರೆ ನಡೆಯುವುದು ಮುಖ್ಯವಾಗಿ ಅಂತರಂಗದಲ್ಲಿ. ಜೀವನದ ಮೂಲವನ್ನು ತಿಳಿಯುವ ಅನ್ವೇಷಣೆ ಅದು. ಶಾಂತಿಯೇ ಅದರ ಗಮ್ಯ, ಕೃಷ್ಣ-ಬುದ್ಧ-ಅಲ್ಲಮರ ಎತ್ತರವೇ ಗುರಿ. ‘ಶುನಶ್ವಪಾಕ’… ಆ ಸಾಲುಗಳು ಭಗವದ್ಗೀತೆಯ ಒಂದು ಶ್ಲೋಕದ ವಿಸ್ತಾರ ವ್ಯಾಖ್ಯೆ. ಗೀತೆಯಲ್ಲಿನ ಶ್ಲೋಕ ಹೀಗಿದೆ:
“ವಿದ್ಯಾವಿನಯ ಸಂಪನ್ನೇ ಬ್ರಾಹ್ಮಣೇ ಗವಿಹಸ್ತಿನಿ
ಶುನಿಚೈವ ಶ್ವಪಾಕೇಷು ಪಂಡಿತಾಃ ಸಮದರ್ಶಿನಿ”
ಎಂದರೆ “ವಿದ್ಯಾವಿನಯ ಸಂಪನ್ನನಾದ ಬ್ರಾಹ್ಮಣ, ಹಸು, ಆನೆ, ನಾಯಿ, ಹೊಲೆಯ ಈ ಎಲ್ಲರಲ್ಲೂ ಪಂಡಿತನು ಸಮದೃಷ್ಟಿಯುಳ್ಳವನು…” ಎಂತ.
ಇಷ್ಟನ್ನು ಮನಸ್ಸಿನಲ್ಲಿಟ್ಟುಕೊಂಡರೆ ನಿಮಗೆ ಪದ್ಯ ಅರ್ಥವಾಗುವುದರಲ್ಲಿ ನನಗೆ ಸಂದೇಹವಿಲ್ಲ. ಅಲ್ಲಿ ಬರುವ ಚಿತ್ರಗಳಿಗೆ ಒಂದೇ ಅರ್ಥವಲ್ಲ ಎಂಬುದನ್ನು, ನಿಮ್ಮ ಅನುಭವಗಳ ನೆಲೆಯಲ್ಲಿ ಅವುಗಳ ಅರ್ಥ ಹಿಗ್ಗುತ್ತಾ ಹೋಗುವುದೆಂಬುದನ್ನು ನಾನು ಸೂಚಿಸುತ್ತೇನೆ. ಈ ಪದ್ಯದ ವಿಚಾರ ನಾವು ಸಂಧಿಸಿದಾಗ ಮತ್ತೆ ಚರ್ಚಿಸೋಣ. ನಿಮ್ಮ ‘ಮೋಹದ ಬಲೆಯಲ್ಲಿ’ ಓದಲುನಾನು ಬಹಳ ಉತ್ಸುಕನಾಗಿದ್ದೇನೆ. ಸಾಧ್ಯವಾದರೆ ಮಾತ್ರ ಕಳಿಸಿ. ಇಲ್ಲವಾದರೆ ಎಲ್ಲಾದರು ಸಂಪಾದಿಸಿ ಓದುತ್ತೇನೆ.

ನಿಮ್ಮ,
ಗೊ.ಕೃ.ಅಡಿಗ

Leave a Reply