ಸಾಕ್ಷಿ ಸಮಯ

ಜಯಂತ ಕಾಯ್ಕಿಣಿ

( ಶಬ್ದ ತೀರ ಪುಸ್ತಕದಿಂದ )

  ಇಂದಿಗೆ ಮೂವತ್ತೈದು ವರುಷಗಳ ಹಿಂದೆ (೧೯೭೧ರಲ್ಲಿ) ಕುಮಟಾದ ಬಾಳಿಗಾ ಕಾಲೇಜಿನಲ್ಲಿ ಕೆಮಿಸ್ಟ್ರಿಲ್ಯಾಬಿನಲ್ಲಿ ಪ್ರಾಕ್ಟಿಕಲ್ ನಡೀತಿದ್ದಾಗ ನನಗೆ ಬಂದ ಅಂತರದೇಶಿ ಪತ್ರವೊಂದನ್ನು ಮೆಲ್ಲಗೆ ಒಡೆದು ಓದಿದ ಕ್ಷಣಗಳು ಈಗಲೂ ಹಸಿಯಾಗಿವೆ. ಅದು ‘ಸಾಕ್ಷಿಯ’ ಸಂಪಾದಕ ಗೋಪಾಲಕೃಷ್ಣ ಅಡಿಗರಿಂದ ಬಂದ ಕಾಗದ. ಆತನಕ ಎಡಬಿಡದೆ ತ್ರಿವಿಕ್ರಮನಂತೆ ‘ಸಾಕ್ಷಿ’ಗೆ ಕವಿತೆ ಕಳಿಸಿ ಕಳಿಸಿ ಹೈರಾಣಾಗಿದ್ದ ಹದಿನಾರು ವರ್ಷದ ಈ ವಿದ್ಯಾರ್ಥಿ ಕವಿಗೆ ಆ ಸಂಪಾದಕ ಪ್ರೀತಿಯಿಂದ ಕೆಲ ಹಿತವಚನ ಬರೆದಿದ್ದರು. ಕಾವ್ಯದ ಪರಮವಸ್ತುಗಳೆಂದು ಗಹನವಾಗಿ ನಾನು ನಂಬಿದ್ದ ಬದುಕು, ಪ್ರೇಮ, ಸಾವು, ವಿಧಿ ಇಂಥ ಐದಾರು ಕವಿತೆಗಳ ಜತೆ ಕೊನೇ ಗಳಿಗೆಯಲ್ಲಿ ‘ಇರಲಿ ಇದೂ ಒಂದು’ ಎಂದು ಅರೆಮನಸ್ಸಿನಿಂದಲೇ ಸೇರಿಸಿದ್ದ ‘ಬಸಳೆ ನಾನು’ ಎಂಬ ಸರಳ ಪದ್ಯವನ್ನೇ ತುಂಬಾ ಮೆಚ್ಚಿಕೊಂಡು ಬರೆದಿದ್ದರು. ” ನಿಮ್ಮ ಅರಿವಿಗೂ ಅನುಭವಕ್ಕೂ ಎಟುಗದ ವಸ್ತುಗಳನ್ನು ಗೋಜಲು ಒಣಶಬ್ದಗಳಲ್ಲಿ ಹಿಡಿಯುವುದರ ಬದಲಿಗೆ ನಿಮ್ಮ ನಿತ್ಯ ಜೀವನದ ಅನುಭವಕ್ಕೆ ಬಂದ ಸಣ್ಣ ಸಂಗತಿಗಳ ಬಗ್ಗೆ ಪೂರ್ತಿ ತನ್ಮಯರಾಗಿ ಬರೆಯುವುದು ಒಳ್ಳೆಯದು. ನಿಮ್ಮ ‘ಬಸಳೆ’ ಅಂಥ ಪದ್ಯ. ‘ಬುಗುರಿ’ ಕೂಡ ಚನ್ನಾಗಿದೆ. ಎರಡರಲ್ಲೂ ಅನುಭವಕ್ಕೆ ಬಂದ ಸಣ್ಣ ಸಂಗತಿಗಳೇ ಮನಸ್ಸಿನಲ್ಲಿ ಆಪ್ತವಾಗಿ ಬೆಳೆಯುತ್ತದೆ” ಎಂದು ಹೇಳಿ ನವ್ಯದ ಕುರಿತ ನನ್ನ ಕೆಲ ಅಪಕಲ್ಪನೆಗಳನ್ನು ಬುಡಮೇಲು ಮಾಡಿದ್ದರು. ‘ಸಾಕ್ಷಿ’ಯ ಮುಂದಿನ ಸಂಚಿಕೆಯಲ್ಲಿ ನನ್ನ ಎರಡು ಕವಿತೆಗಳು ಪ್ರಕಟವಾಗಿದ್ದವು. ಪ್ರಮುಖ, ಪ್ರಾಯ, ಕಾಮಾಕ್ಷಿ ಇಂಥ ಪದ್ಯಗಳು ಪ್ರಕಟವಾಗಿದ್ದರೆ ಅದನ್ನು ಕಾಲೇಜಿನ ತರಳೆಯರಿಗೆ ತೋರಿಸಿ ಖುಷಿ ಪಡಬಹುದು ಎಂದಿದ್ದ ನನಗೆ ತಕ್ಷಣ ನಿರಾಸೆಯೇ ಆಗಿತ್ತು. ‘ ಬಸಳೆ ಸೊಪ್ಪಿನ ಕವಿ’ ಎಂದು ಅವರು ನಗಬಹುದು ಎಂದು. ಆದರೆ ಆ ಸಂಚಿಕೆಯಲ್ಲಿ ಅನಂತಮೂರ್ತಿ, ಪಿ. ಲಂಕೇಶರ, ಅಡಿಗ, ಕೆ.ವಿ. ತಿರುಮಲೇಶ ಇಂಥವರ ಬರಹಗಳ ನಡುವೆ ಪ್ರಕಟಗೊಂಡ ನನ್ನ ಪದ್ಯಗಳು, ಮನೆಯ ಹಿರಿಯರ ಕಿರುಬೆರಳು ಹಿಡಿದು ಜಾತ್ರೆಗೆ ಬಂದ ಮಕ್ಕಳಂತೆ ಸುಭದ್ರವಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಬಂದ ರೀತಿ ಈಗಲೂ ಮೈ ಮರೆಸುವಂತಿದೆ.

  ಅಡಿಗರನ್ನು ನವ್ಯ ಕಾವ್ಯದ ಪ್ರವರ್ತಕರನ್ನಾಗಿ ಗುರುತಿಸುತ್ತಾ ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಲಂಕೇಶ್ ಆಗಲೇ ಕರೆದಿದ್ದರು. ಅವರ ಕಾವ್ಯದಿಂದ ಪ್ರಭಾವಿತರಾದ ಜನಾಂಗಕ್ಕಿಂತ ಬಹುಷಃ ಮುಂದಿನ ಪೀಳಿಗೆ ನನ್ನದು. ಅವರು ನಮ್ಮ ಪೀಳಿಗೆಯನ್ನು, ಅವರ ಕಾವ್ಯಕ್ಕಿಂತ ಹೆಚ್ಚಾಗಿ, ‘ಸಾಕ್ಷಿ’ ಎಂಬ ಮುಕ್ತ , vibrant, ಮತ್ತು ತುಂಬಾ ಸಂವೇದನಾಶೀಲವಾದ ‘ಆವರಣ’ದಿಂದ ಪ್ರಭಾವಿಸಿ, ಬೆಳೆಸಿದರು. ಅರವತ್ತರ ದಶಕದ ಕೊನೆಯಲ್ಲಿ ಆರಂಭವಾಗಿ ಎಂಬತ್ತರ ದಶಕದ ತನಕ ಸುಮಾರು ಎರಡು ದಶಕಗಳ ಕಾಲ ಮೈಸೂರು, ಸಾಗರ, ಸಿಮ್ಲಾ, ಬೆಂಗಳೂರು ಹಾಗೆ ಬೇರೆ ಬೇರೆ ಕಡೆಯಿಂದ ಅಡಿಗರು ಸಂಪಾದಿಸಿದ ‘ಸಾಕ್ಷಿ’ ತ್ರೈಮಾಸಿಕದ ೪೫ ಸಂಚಿಕೆಗಳು ಕನ್ನಡದ ಸಾಮೂಹಿಕ ಒಳ ಮನಸ್ಸೊಂದನ್ನು ಆಳವಾಗಿ, ಅಷ್ಟೇ ವಿಸ್ತಾರವಾಗಿ, ಮುಕ್ತ, ಪ್ರಾಮಾಣಿಕ, ಚಿಂತನ ಶೀಲತೆಯಲ್ಲಿ ಬೆಳೆಸಿದ ರೀತಿ ಅತ್ಯಂತ ಘನವಾದದ್ದು. ನನಗಂತೂ, ‘ಸಾಕ್ಷಿ’ಯ ಸಂಚಿಕೆಗಳ ಮೂಲಕ ಸಿಕ್ಕಂಥ ಸಂವೇದನಾಶೀಲ ವಿಸ್ತಾರ ಯಾವ ಬಿಡಿ ಕೃತಿಯಿಂದಲೂ ಈ ತನಕ ದೊರಕಿಲ್ಲ.

  ಕುತೂಹಲಕ್ಕಾಗಿ ಸಾಕ್ಷಿಯ ಮೊದಲ ಸಂಚಿಕೆಯ ಈ ಪರಿವಿಡಿಯನ್ನು ನೋಡಿ:

  ಮುನ್ನುಡಿ: ಗೋಪಾಲಕೃಷ್ಣ ಅಡಿಗ

  ಸಾಹಿತ್ಯ ವಿಚಾರ ವಿಮರ್ಶೆ:
  ಆಧುನಿಕ ಭಾರತೀಯ ಲೇಖಕರ ಪರಿಸ್ಥಿತಿ: ಶಿಬ ನಾರಯಣ ರೇ
  ಅನುಭಾವ ಕಾವ್ಯದ ಕೆಲ ಸಮಸ್ಯೆಗಳು: ಬಿ. ದಾಮೋದರ ರಾವ್
  ರಾವ್’ಬಹದ್ದುರರ ಗ್ರಾಮಾಯಣ: ಎಂ.ಜಿ. ಕೃಷ್ಣಮೂರ್ತಿ
  ಮೂಕಬಲಿ: ಪಿ. ಶ್ರೀನಿವಾಸ ರಾವ್

  ಸಣ್ಣ ಕಥೆಗಳು:

  ಕೆ. ಸದಾಶಿವ, ಶ್ರೀಕಾಂತ, ಗಿರಿ, ಪಿ.ಲಂಕೇಶ , ಜಿ.ಎಸ್. ಸದಾಶಿವ, ಟಿ.ಜಿ. ರಾಘವ

  ಕವನಗಳು:

  ಎ.ಕೆ. ರಾನಾನುಜನ್, ಚಂದ್ರಶೇಖರ ಕಂಬಾರ, ಕೆ.ಎಸ್. ನರಸಿಂಹಸ್ವಾಮಿ, ಕೀರ್ತಿನಾಥ ಕುರ್ತಕೋಟಿ, ಚೆನ್ನವೀರಕಣವಿ, ರಾಮಚಂದ್ರ ಶರ್ಮ, ಪೂರ್ಣಚಂದ್ರತೇಜಸ್ವಿ, ಎಚ್.ಎಂ. ಚೆನ್ನಯ್ಯ, ಸುಮತೀಂದ್ರ ನಾಡಿಗ, ಚಂದ್ರಶೇಖರ ಪಾಟೀಲ, ಪಿ. ಲಂಕೇಶ.

  ಕನ್ನಡ ಸಾಹಿತ್ಯ ಗಂಗೆಯ ಮುಂದಿನ ಮುಖ್ಯಧಾರೆಗಳ ಗಂಗೋತ್ರಿಯಂತಿದೆ ‘ಸಾಕ್ಷಿ’ಯ ಪ್ರಾರಂಭಿಕ ಸಂಚಿಕೆ. ಈ ಸಂಚಿಕೆಯ ಮುನ್ನುಡಿಯಲ್ಲಿ ಸಂಪಾದಕ ಅಡಿಗರ ಈ ಮಾತುಗಳನ್ನು ನೋಡಿ:

  “ತನ್ನತನದ ಅರಿವು ಮನುಷ್ಯತ್ವದ ವಿಶೇಷ ಲಕ್ಷಣ. ಮನಸ್ಸಿನ ಒಂದು ಭಾಗ ಕನಸಿನಲ್ಲಿ ಅಥವ ಕೆಲಸದಲ್ಲಿ ಮನ್ನವಾಗಿರುವಾಗ ಅದರ ಯಾವುದೋ ಇನ್ನೊಂದು ಭಾಗ ದೂರ ನಿಂತು ಎಲ್ಲವನ್ನೂ ಗಮನಿಸಲು ಸಮರ್ಥವಾಗುತ್ತದೆ, ಮತ್ತು ನಮ್ಮ ಮಾತು ಕೃತಿಗಳನ್ನು ಆಯಾ ಕಾಲದಲ್ಲೇ ತೂಕ ಮಾಡುತ್ತಲೂ ಇರುತ್ತದೆ. ಈ ಆತ್ಮಸಾಕ್ಷಿಯಿಂದ ಮನುಷ್ಯನಿಗೆ ಬಿಡುಗಡೆ ಇಲ್ಲ. ಮನುಷ್ಯತ್ವದ ವಿಶೇಷ ಲಕ್ಷಣವಾದ ಈ ಸಾಕ್ಷಿಪ್ರಜ್ಞೆಯ ಬೆಳವಣಿಗೆಯೇ ಮನುಷ್ಯನ ನಿಜವಾದ ಬೆಳವಣಿಗೆ”.

  “ಈವರೆಗಿನ ನಮ್ಮ ವಿಮರ್ಶೆ ಸ್ನೇಹಿತರ ಬಗ್ಗೆ ದಾಕ್ಷಿಣ್ಯ, ದೊಡ್ಡವರ ಬಗ್ಗೆ ಭಯ, ಮೂರನೆಯವರ ಬಗ್ಗೆ ಔದಾಸೀನ್ಯ ಅಥವಾ ನಿಷ್ಕಾರಣ ವಿರೋಧ ಇವುಗಳಿಂದ ಮಲಿನವಾಗಿದೆ”

  “ಲೌಕಿಕವಾದ ಯಾವ ಲಾಭಕ್ಕಾಗಿಯೂ ಸತ್ಯವನ್ನೂ ಋಜುತ್ವವನ್ನೂ ಬಲಿಕೊಡಬಾರದೆಂಬುದೇ ಸಾಕ್ಷಿಯ ಮೂಲೋದ್ದೇಶ. ಕೊನೆಗೂ ಉಳಿಯುವುದು ಸತ್ಯವೊಂದೇ ಎಂಬ ದೃಢವಿಶ್ವಾಸವೇ ಈ ಸಾಹಸದ ಮೂಲ ಶಕ್ತಿ”

  ಉತ್ತಮ ಲೇಖನಗಳನ್ನು ಎಲ್ಲಿಯವರೆಗೆ ಸಂಪಾದಿಸಲು ಸಾದಧ್ಯವಾಗುವುದೋ ಅಲ್ಲಿಯವರೆಗೆ ಮಾತ್ರ ‘ಸಾಕ್ಷಿ’ ಪ್ರಕಟವಾಗುವುದು. ಇಲ್ಲವಾದರೆ ಇಲ್ಲ”

  ಇಂಥ ಖಚಿತ ತಿಳುವಿನೊಂದಿಗೆ ಆರಂಭವಾದ ಎರಡು ದಶಕಗಳ ಯಾತ್ರೆಯಲ್ಲಿ ‘ಅಕ್ಷರ ಪ್ರಕಾಶ’ನದ ಕೆ.ವಿ. ಸುಬ್ಬಣ್ಣ, ‘ಲಿಪಿ’ಯ ಬಾ.ಕಿ.ನ. ಮುಂತಾದವರು ‘ಸಾಕ್ಷಿ’ಯ ಸ್ಥೈರ್ಯವಾಗಿ ನಿಂತರು. ವೃತ್ತಿ ಜೀವನದ ಎರುಪೇರುಗಳಲ್ಲಿ ಅಭದ್ರತೆಯಲ್ಲಿ ನಲುಗುತ್ತಿದ್ದ ಅಡಿಗರು ಅದರ ಲವವೇಶವೂ ಸುಳಿಯದಂತೆ ಸಾಕ್ಷಿಯ ಚೈತನ್ಯವನ್ನು ಕಾಪಾಡಿಕೊಂಡು ಬಂದ ರೀತಿ ಹೊಸ ಕನ್ನಡದ ನೈತಿಕ ಶಕ್ತಿಯಾಯಿತು. ‘ಸಾಕ್ಷಿ’ ಕನ್ನಡದ ಹೊಸ ವಿಚಾರ ಶಾಲೆಯಾಯಿತು.

  ಸಾಹಿತ್ಯ ವಿಮರ್ಶೆಗೆ ಬಂದರೆ, ಎಂ.ಜಿ. ಕೃಷ್ಣಮೂರ್ತಿ, ಪಾದೇಕಲ್ಲು ನರಸಿಂಹಭಟ್ಟ, ಕೀರ್ತನಾಥ ಕುರ್ತಕೋಟಿಯವರ ಸಹವಾಸದಲ್ಲೆ, ನಂತರದ ಕನ್ನಡದ ಧೀಮಂತ ಪ್ರತಿಭೆಗಳಾದ ಯು.ಆರ್. ಅನಂತಮೂರ್ತಿ, ಪಿ. ಲಂಕೇಶರ, ಕೆ.ವಿ. ತಿರುಮಲೇಶ ಮುಂತಾದವರು ಪಾಕಗೊಂಡ ಮೂಸೆ ಇದಾಯಿತು. ಲಂಕೇಶ್ ಮುಂದೆ ತಮ್ಮದೇ ಪತ್ರಿಕೆಯಲ್ಲಿ ಬರೆದ ಟೀಕೆ ಟಿಪ್ಪಣಿಗಳ ಮೂಲ ಸೆಳಕುಗಳನ್ನು ನಾವು ‘ಸಾಕ್ಷಿ’ಯಲ್ಲಿ ನೋಡಬಹುದು. ಟಿಪ್ಪಣಿಗಳು ಅಂತಲೇ ಅದನ್ನವರು ಬರೆಯುತ್ತಿದ್ದರು. ‘ ಮುಸ್ಸಂಜೆ ಕಥಾ ಪ್ರಸಂಗ’ದ ಕೆಲ ಪುಟಗಳನ್ನು,’ಮಾರಲಾಗದ ನೆಲ’ ಎಂಬ ಅವರ ಅಪ್ರಕಟಿತ ಕಾದಂಬರಿಯ ಕೆಲಪುಟಗಳನ್ನು ಅವರು ಪ್ರಕಟಿಸಿದ್ದೇ ಇಲ್ಲಿ. ‘ ಬೆಂಗಳೂರಿನ ವಿಶ್ವವಿದ್ಯಾಲಯದ ಸಂಕಿರಣದಲ್ಲಿ ಬೇಂದ್ರೆ ಚೀರಾಡುತ್ತಿರುವ ಹಳ್ಳಿಗನ ಹಾಗೆ ತಮಗೆ ಕಂಡದ್ದು’ ಇತ್ಯಾದಿ ಸಂಗತಿಗಳ ಬಗೆಗಿನ ಲಂಕೇಶರ ಟಿಪ್ಪಣಿಗಳ restlessness ಈಗಲೂ ಆವರಿಸುವಂಥದ್ದು . ನವ್ಯ ಕಾವ್ಯದ ತಾತ್ವಿಕತೆಯ ಬಗ್ಗೆ ಅನಂತಮೂರ್ತಿ ಪ್ರಶ್ನೆಗಳನ್ನೆತ್ತಿದ್ದೂ ಇಲ್ಲೇ.

  ‘ಸಾಕ್ಷಿ’ಯಲ್ಲಿ ನಡೆದ ಕೆಲ ಮುಖ್ಯ ಸಂಚಾರಗಳು ಹೀಗಿವೆ. ಎ.ಕೆ. ರಾಮನುಜನ್’ರ ‘ಹೊಕ್ಕುಳಲ್ಲಿ ಹೂವಿಲ್ಲ’ ಸಂಕಲನಕ್ಕೆ ಪ್ರವೇಶವಾಗಿ ಕೀರ್ತನಾಥ ಕುರ್ತಕೋಟಿ ಬರೆದ ಬಲು ಮುಖ್ಯ ಲೇಖನವೊಂದು ಎಬ್ಬಿಸಿದ ಅಲೆಗಳು ಕುತೂಹಲಕಾರಿ ಆಗಿವೆ, ರಾಮಾನುಜನ್ ಅವರನ್ನು ಅಡಿಗರೊಂದಿಗೆ ಹೋಲಿಸಿದ್ದೇ ಪ್ರಮಾದವಾಯಿತೋ ಎಂಬಂತೆ ಪಾ.ಲ. ಸುಬ್ರಮಣ್ಯಂ, ಮಾಧವಕುಲಕರ್ಣಿ ‘ಇದು ಕಾವ್ಯವೇ ಅಲ್ಲ’ ಎಂಬ ವರಸೆಯಲ್ಲಿ ತೀವ್ರವಾಗಿ ಪ್ರತಿಕ್ರಯಿಸಿದರು. ಇದಕ್ಕೆ, ನಂತರ ಮತ್ತೆ ಬಿ.ಟಿ. ಅಡಿಗರನ್ನು “ಬುದ್ಧಗಾಂಧಿ ರಾಮಕೃಷ್ಣರ ಜತೆ ಒದರಾಡುವ ಕವಿ” – ಎಂದು ಕರೆದರು. ಆದರೆ ತಮ್ಮ ಕುರಿತ ಇಂಥ ಉಗ್ರಟೀಕೆಗಳನ್ನು ಪ್ರಕಟಿಸುವ ನೈತಿಕತೆಯನ್ನು ಅಡಿಗರು ತೋರಿಸಿದರು. ಧರ್ಮದ ಅಡಿಗರ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಪೂರ್ಣಚಂದ್ರ ತೇಜಸ್ವಿ ಮತ್ತು ಡಿ.ಎಲ್. ಪಾಟೀಲರು ಬರೆದ ಲೇಖನಗಳು ಹೊಸ ವಿಚಾರಗಳನ್ನು ಎತ್ತಿದವು.

  ಕನ್ನಡದ ಶ್ರೇಷ್ಠ ಕತೆಗಾರರ ಮಹತ್ವದ ಕತೆಗಳೆಲ್ಲ ಮೊದಲ ಬಾರಿಗೆ ‘ಸಾಕ್ಷಿ’ಯಲ್ಲಿ ಪ್ರಕಟವಾಗಿದ್ದವು ಎಂಬುದನ್ನು ನೋಡಿದರೆ, ಕೇವಲ ಜನಪ್ರಿಯ ಪತ್ರಿಕೆಗಳಿಗೆ ನೇತುಹಾಕಿಕೊಂಡಿರುವ ಇಂದಿನ ಕಥನ ಕಲೆಯ ಸಂದರ್ಭದಲ್ಲಿ ಅಚ್ಚರಿಯಾಗುತ್ತದೆ. ಸೀಮಿತ ಖಾಸಗಿ ಪ್ರಸಾರದ ‘ಸಾಕ್ಷಿ’ ಪ್ರಕಟಿಸಿದ ಕತೆಗಳನ್ನು ನೋಡಿ… ಛಲ(ಯಶವಂತ ಚಿತ್ತಾಲ), ಡಾಂಬರು ಬಂದುದು, ದತ್ತ (ದೇವನೂರು ಮಹದೇವ), ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿದೆ (ಕೆ. ಸದಾಶಿವ), ಹೊಳೆಗೆ ಹೋದವರು, ಹರಾಜು (ಎ.ಎನ್. ಪ್ರಸನ್ನ), ಬಾವಿ(ವೈದೇಹಿ), ಹಂಗಿನರಮನೆಯ ಹೊರಗೆ(ರಾಜಶೇಖರ ನೀರಮಾನ್ವ), ಶ್ರಾದ್ಧ(ಟಿ.ಜೆ. ರಾಘವ), ಇವೆಲ್ಲವೂ ಕನ್ನಡದ ಶ್ರೇಷ್ಠ ಕಥೆಗಳ ಸಾಲಿನಲ್ಲಿ ನಿಂತಿದ್ದಕ್ಕೂ, ‘ಸಾಕ್ಷಿ’ ಉದ್ದೀಪಿಸಿದ ವಾತಾವರಣಕ್ಕೂ ಸಂಬಂಧ ಖಂಡಿತ ಇದೆ. ಜಿ.ಎಸ್. ಸದಾಶಿವರ ಪುಟ್ಟಪುಟ್ಟ ಕಥೆಗಳು (ಕೀ, ಮಣ್ಣೊಲೆ, ಕಾಮಸೂತ್ರ, ಕುಡಿ) ಮತ್ತು ಕೆ.ವಿ. ತಿರುಮಲೇಶರ ‘ಅನ್ವೇಷಣೆ’ ಎಂಬ ವಿಶಿಷ್ಠ ಕಥನ ಸರಣಿಯ ಪ್ರಯೋಗಗಳಿಗೆ ‘ಸಾಕ್ಷಿ’ ಸ್ಥಳ ನೀಡಿದೆ. ಅಷ್ಟೇ ಏಕೆ , ಬಿಳಿಗಿಯವರ ‘ದಿಟ್ಟ ಹುಡುಗಿ ಮಾಲಿನಿ’ ಯಂಥ ಮುಕ್ತ ಪೋಲಿ ಪದ್ಯಗಳ ಜತೆ ‘ಸುಳ್ಳುಗಳು’ ಎಂಬ ಚುರುಕಾದ ಲೇಖನ ಪ್ರಕಟಿಸಿದ ‘ಸಾಕ್ಷಿ’ ಬಿಳಿಗಿರಿಯವರಿಂದ ಎಲ್.ಎಸ್.ಡಿ ಪ್ರಯಾಣದ ‘ಪ್ರತ್ಯಕ್ಷಾನುಭವ ಲೇಖ’ವನ್ನೂ ಬರೆದಿದ್ದು ಅತ್ಯಂತ ಅಪರೂಪದ ಸಂಗತಿ. ಎಲ್.ಎಸ್.ಡಿ. ಸೇವನೆಯಲ್ಲಿ ತಮಗಾದ ಅನುಭವವನ್ನು ಬರೆದ ಬಿಳಿಗಿರಿಯವರ ಲೇಖನದ ಜತೆ ಅದಕ್ಕೆ ಪೂರಕವಾಗಿ ಕೆ.ವಿ. ಸುಬ್ಬಣ್ಣ ಅವರು ಬಿಳಿಗಿರಿ ಜತೆ ನಡೆಸಿದ ಕಿರುಸಂದರ್ಶನವೂ ಮಜಾ ಇದೆ. (“ನಿಮ್ಮ ಹೆಂಡತಿ ಇದನ್ನು ಹೇಗೆ ಸಹಿಸಿಕೊಂಡರು”).

  ಇನ್ನು, ‘ಸಾಕ್ಷಿ’ಯಲ್ಲಿ ಅದ್ಭುತ ಕಥೆಗಳನ್ನು ಬರೆದು ನಂತರ ಮತ್ತೆಲ್ಲೂ ಕಣ್ಣಿಗೇ ಬೀಳದ ಕೆಲ ಉತ್ಕೃಷ್ಟ ಕತೆಗಾರರ ಪಡೆಯೇ ಇದೆ. ಟಿ.ಆರ್. ಮೋಹನ್, ಎನ್.ಪ್ರಕಾಶ್, ಆರ್. ಮೋಹನ್, ಎಂ.ಆರ್. ರಾಮಶೇಷ, ಎ.ಬಾಲಕೃಷ್ಣ, ಎಂ.ಎಸ್. ಜಯರಾಮ್… ಇವರೆಲ್ಲ ಎಲ್ಲಿ ಹೋದರು? ಮತ್ತ್ಯಾಕೆ ಬರೆಯಲಿಲ್ಲ? ಎಂದು ಪರಿತಪಿಸುವಂತಾಗಿದೆ. ಕವಿಯಾಗಿ, ವಿಮರ್ಶಕರಾಗಿ ಪ್ರಸಿದ್ದಿಯಾದ ಕೆಲವರು ಅಪರೂಪಕ್ಕೆ ಎಂಬಂತೆ ಬರೆದ ಕೆಲವು ಉತ್ತಮ ಕಥೆಗಳೂ ‘ಸಾಕ್ಷಿ’ಯಲ್ಲಿವೆ. ಉದಾ: ಅಬ್ದುಲ್ ಮಜೀದ್ ಖಾನ್ (ಆಳು), ಸಿದ್ದಲಿಂಗ ಪಟ್ಟಣಶೆಟ್ಟಿ (ಹಕ್ಕಿಗಳು), ಡಿ.ಎಸ್. ನಾಗಭೂಷಣ (ಪಾವನಾ).

  ಕವಿತೆಗಳಿಗೆ ಬಂದರೆ ಕನ್ನಡದ ಮಹತ್ವದ ಕವಿತೆಗಳನ್ನು ನಾವು ‘ಸಾಕ್ಷಿ’ಯ ಪುಟಗಳಲ್ಲಿ ಕಾಣಬಹುದು. ಕುಂಕುಮ ಭೂಮಿ, ತೆರೆದ ಬಾಗಿಲು, ಮೂರನೆ ಸಲಹೆ, ಭೂತಕನ್ನಡಿ (ಕೆ.ಎಸ್.ನ.), ಆಧಾರ,ಗುಲ್’ಮೊಹರ್ (ಗಂಗಾಧರ ಚಿತ್ತಾಲ). ಪಾಂಡುಮಾದ್ರಿ(ರಾಮಚಂದ್ರಶರ್ಮ), ನೀನು-ನಾನು(ಎಚ್.ಎಮ್. ಚನ್ನಯ್ಯ), ದೆಹಲಿಯಲ್ಲಿ, ಡೊಂಕುಬಾಲಕ್ಕೆ ಚಿನ್ನದ ನಳಿಗೆ (ಗೋಪಾಲಕೃಷ್ಣ ಅಡಿಗ), ಇಂಗ್ಲೆಂಡಿನಲ್ಲೊಬ್ಬ ಇಂಡಿಯನ್(ಚಂದ್ರಶೇಖರ ಪಾಟೀಲ), ಹಾಯಿಕುಗಳು (ಚಂದ್ರಕಾಂತ ಕುಸನೂರು) , ಸಿಂದಬಾದನ ಆತ್ಮಕಥೆ(ಎಚ್.ಎಸ್. ವೆಂಕಟೇಶ್ ಮೂರ್ತಿ), ವಿಹಲ್ವ, ಮನವಿ (ಬಿ.ಆರ್. ಲಕ್ಷ್ಮಣರಾವ್), ಪಾರ್ಟಿಯ ನಂತರ, ತೀರ್ಪು (ಕೆ.ವಿ. ತಿರುಮಲೇಶ್), ಪರಿಚಯ, ಉಳಿದೆ (ಸುಬ್ರಾಯ ಚೊಕ್ಕಾಡಿ) , ಹೀಗೇ ಎಚ್.ಎಸ್. ಭೀಮನಗೌಡರ , ಜಿ.ಪಿ. ಬಸವರಾಜು, ಬಿದಿರಹಳ್ಳಿ ನರಸಿಂಹಮೂರ್ತಿ, ಎಂ.ಎನ್. ಜಯಪ್ರಕಾಶರ ಜತೆ, ಮತ್ತೆಲ್ಲೂ ನೋಡಲು ಸಿಗದ ಪೂಚಂತೇ, ದೇವನೂರು ಮಹಾದೇವ, ಎಂ.ಎಂ. ಕಲಬುರ್ಗಿ, ಎಂ.ಪಿ. ಮನೋಹರ ಚಂದ್ರನ್, ಎಸ್. ದಿವಾಕರ್, ಎಂ. ರಾಜಗೋಪಾಲರ ಅಪರೂಪದ ಕವಿತೆಗಳೂ ಸಾಕ್ಷಿಯಲ್ಲಿ ಇವೆ.

  ಅಡಿಗರು ಒಂದು ಸಂಚಿಕೆಯಲ್ಲಿ ಬರೆಯುತ್ತಾರೆ: “ಕೇವಲ ಸಾಹಿತ್ಯೋಪಾಸನೆಯಿಂದ ಯಾವ ಭಾಷೆಯೂ ಬೆಳೆಯುವುದಿಲ್ಲ ಮಾತ್ರವಲ್ಲ, ಸಾಹಿತ್ಯವೂ ಬೆಳೆಯಲಾರದು. ಆಗಬೇಕಾದ್ದು ಒಟ್ಟು ಮನಸ್ಸಿನ ಕೆಲಸ. ಹೊರ ಜಗತ್ತಿನ ಅನುಭವದ ಸೂಕ್ಷ್ಮಾತಿಸೂಕ್ಷ್ಮ ಎಳೆಗಳು ಮೂಡುವಂತೆ, ಮಾನವ ಲೋಕದ ಜ್ಞಾನಸಾರವೆಲ್ಲವನ್ನೂ ಹೀರಿಕೊಳ್ಳುವಂತೆ ಅಂತರಂಗದ ವಿಕಸನ.” ವಿಕಾಸ – ಅಡಿಗರ ಪ್ರೀತಿಯ ಶಬ್ದ. (ಹನುಮದ್ವಿಕಾಸ, ಅಡಿಗರ ಮೊಮ್ಮಗನ ಹೆಸರೂ ವಿಕಾಸ.) ಸಾಹಿತ್ಯದ ಜತೆ, ಇತರ ಜ್ಞಾನಕ್ಷೇತ್ರಗಳಿಗೂ ಸಂಬಂಧಿತವಾಗಿರುತ್ತವೆ. ‘ಸಾಕ್ಷಿ’ ಹೇಗೆ ಕೆಲಸ ಮಾಡಿತು ಎನ್ನುವುದಕ್ಕೆ ಅದರಲ್ಲಿ ಪ್ರಕಟಿತ ಕೆಲವು ಲೇಖನಗಳ ಸ್ಥೂಲ ಯಾದಿಯ ವಿಷಯ ವಿಸ್ತಾರವನ್ನು ನೋಡಿ:

  ಶಿಕ್ಷಣ ನೀತಿ – ಶ್ರೀಪತಿ ತಂತ್ರಿ
  ಮನೋವಿಜ್ಞಾನ, ಮನಸ್ಸು, ಆರೋಗ್ಯ – ಎಂ.ಎಸ್. ತಿಮ್ಮಪ್ಪ
  ಸೃಷ್ಟಿಕ್ರಿಯೆ ಮತ್ತು ಮನೋವಿಜ್ಞಾನ – ಗಿರಿ
  ವೈಜ್ಞಾನಿಕ ಮೂಢನಂಬಿಕೆ – ಗೌರಿಶಂಕರ
  ದಕ್ಷಿಣ ಕನ್ನಡ ಭೂ ಸುಧಾರಣೆ ಪ್ರಶ್ನೆ -ಜೆ. ರಾಜಶೇಖರ್
  ಮೈಸೂರು ವಿಶ್ವವಿದ್ಯಾಲಯದ ಮಸೂದೆಗಳು – ಡಿ.ಎನ್. ರಾಯ್ಕರ್
  ಅಶ್ಲೀಲತೆ ಮತ್ತು ಸುಪ್ರೀಂಕೋರ್ಟಿನ – ಡಿ.ಎನ್. ರಾಯ್ಕರ್
  ಭಾಷಾಶಾಸ್ತ್ರ,ಕಾವ್ಯ ಮೀಮಾಂಸೆ – ಪಾದೇಕಲ್ಲು ನರಸೀಂಹಭಟ್ಟ
  ಸೌಂದರ್ಯ ಮತ್ತು ಮೈಬಣ್ಣ – ರಾಮಮನೋಹರ ಲೋಹಿಯಾ
  ಕನ್ನಡ ಮತ್ತು ವಿಜ್ಞಾನ – ಡಿ.ಎಸ್. ನಾಗಭೂಷಣ
  ಕರ್ನಾಟಕದ ಕಲೆ – ಶಿವರಾಮ ಕಾರಂತ
  Surrealism (ಅತಿವಾಸ್ತವತೆ) – ಡಿ.ವಿ.ಜಿ.
  ಶತಮಾನದ ಹೊಸ ಭಾಷೆ: ಸಿನೆಮಾ – ಕೆ.ವಿ. ಸುಬ್ಬಣ್ಣ
  ಭವಿಷ್ಯಚಿಂತನೆ -ಜಿ.ಟಿ. ನಾರಯಣರಾವ್
  ಸಂಗೀತ – ಟಿ.ವಿ. ಮುತ್ತಾಚಾರ್ಯ
  ಯಹೂದಿಯರು ಆಗ ಈಗ – ಜೋತ್ಸ್ನಾಕಾಮತ್
  ಪ್ರವಾಸ ಲೇಖನ – ಕೃಷ್ಣಾನಂದಕಾಮತ
  ಪುಷ್ಟಪರಿಸತ – ಬಿ.ಜಿ.ಎಲ್. ಸ್ವಾಮಿ
  ಕಾಸ್ಟನೀಡಾ: ಡಾನ್’ವಾನ್ ಉವಾಚ – ಎ. ಬಾಲಕೃಷ್ಣ
  ಸ್ಕಿನ್ನರ್ ಚಿಂತನೆ: ಮಾನವೀಯ ಜಗತ್ತು – ನಾಗೇಶ ಹೆಗಡೆ
  ಎರಿಕ್’ಪ್ರಾಮ್ ಚಿಂತನೆ : ಯಶವಂತ ಚಿತ್ರಾಳ

  ಅನ್ಯ ಕಾವ್ಯಗಳ ಕುರಿತು ವಿಶೇಷಾಂಕಗಳನ್ನೂ ‘ಸಾಕ್ಷಿ’ ಹೊರತಂದಿದೆ. ಅತ್ಯುತ್ತಮ ಕಾವ್ಯಾನುವಾದದ ಜತೆ ಆ ಕಾವ್ಯದ ಕುರಿತ ಪ್ರವೇಶಾತ್ಮಕ, ವಿಮರ್ಶಾತ್ಮಕ ಲೇಖನಗಳನ್ನು ಈ ಸಂಚಿಕೆ ಮೌಲ್ಯವನ್ನು ಹೆಚ್ಚಿಸಿವೆ. ಉದಾ: ಗೆರಿಲ್ಲಾ ಕವಿತೆಗಳು (ಎಂ. ರಾಜಗೋಪಾಲ), ದಿಗಂಬರ ಕಾವ್ಯ(ಬಿ.ಆರ್. ಲಕ್ಷಣರಾವ್), ಮಲೆಯಾಳಿ ಕವಿತೆಗಳು (ಎಸ್. ದಿವಾಕರ್), ಜತೆಗೆ, ಇಡೀ ನಾಟಕಗಳನ್ನು ‘ಸಾಕ್ಷಿ’ ಪ್ರಕಟಿಸಿದೆ. ಕನ್ನಡ ರಂಗಭೂಮಿಯ ಮಹತ್ವದ ಕಿರುನಾಟಕಗಳಾದ ತಪ್ಪಿಸಿಕೊಂಡಿದ್ದಾರೆ(ಎಂ.ಎಸ್.ಕೆ. ಪ್ರಭು), ಕ್ರಾಂತಿ ಬಂತು ಕ್ರಾಂತಿ, ಗಿಳಿಯು ಪಂಜರದೊಳಿಲ್ಲ(ಪಿ. ಲಂಕೇಶರ), ಮೊದಲು ಪ್ರಕಟಗೊಂಡದ್ದು ‘ಸಾಕ್ಷಿ’ಯಲ್ಲಿ. ‘ಹಯವದನ’ ರಂಗ ಪ್ರಯೋಗದಲ್ಲಿ ಕಪಿಲನ ‘ದೈಹಿಕತೆ’ ಸಾಬೀತಾಗುವಷ್ಟು ದೇವದತ್ತನ ‘ಬೌದ್ದಿಕತೆ’ ಸಾಬೀತಾಗುವುದಿಲ್ಲ ಎಂಬ ಅನಂತಮೂರ್ತಿಯವರ ಚರ್ಚೆ ಶುರುವಾಗಿದ್ದು ‘ಸಾಕ್ಷಿ’ಯಲ್ಲಿ. “ವೈಕುಂಠರಾಜು ಅವರ ಕೃತಿ ಕುರಿತು ನನ್ನ ವಿಮರ್ಶೆಯಲ್ಲಿ ಅಸ್ಪಷ್ಟತೆ ಇತ್ತು. ವಿಮರ್ಶೆಯೆಲ್ಲಿ ಅಸ್ಪಷ್ಟತೆ ಇರಬಾರದು. ಅದು ಓದುಗರನ್ನು ದಾರಿ ತಪ್ಪಿಸಬಹುದು. ಈ ಕುರಿತು ಕ್ಷಮೆ ಕೋರುತ್ತೇನೆ” – ಎಂದು ರಾಮಚಂದ್ರದೇವ ಬರೆದಿದ್ದು ಬಹುಷಃ ‘ಸಾಕ್ಷಿ’ ಸೃಷ್ಟಿಸಿದ್ದ ಅದ್ಭುತವಾದ ಪ್ರಾಮಾಣಿಕ ಭೂಮಿಕೆಗೆ ಹಿಡಿದ ಕೈಗನ್ನಡಿಯಾಗಿದೆ.

  ಪುಟ ವಿನ್ಯಾಸ, ಪರಿಚ್ಛೇದಗಳ ಆರಂಭದಲ್ಲಿ ಬಿಡದ ಜಾಗ, ಆಗಾಗ ಬದಲಾಗುತ್ತಿದ್ದ ಸರಳ ಸುಂದರ ಮುಖ ಪುಟವಿನ್ಯಾಸಗಳು, ಒಟ್ಟಾರೆ ಪುಟಗಳಲ್ಲಿದ್ದ ತಿಳಿಯುವ ದಾಹದ, ಒಟ್ಟಿಗೇ ಬೆಳೆಯುವ ತುಂಬ ತಹದ ಚೈತನ್ಯ – ಇವೆಲ್ಲವುಗಳಿಂದಾಗಿ ‘ಸಾಕ್ಷಿ’ ಈಗಲೂ ಪುಟ ತೆರೆದರೆ ಸಾಕು ನಮ್ಮನ್ನು ಆ ಮುಕ್ತ ಸಂವೇದನಾಶೀಲ ಆವರಣಕ್ಕೆ ಕರೆದೊಯ್ಯಬಲ್ಲದು. ತನ್ನ ಪ್ರಾಮಾಣಿಕತೆಯಲ್ಲೇ, ಅತ್ಯುತ್ತಮದನ್ನು ಕೊಡುವ ಯತ್ನದಲ್ಲೇ – ಸಮೂಹವನ್ನೇ ಎತ್ತುವ ನೈತಿಕ ಶಕ್ತಿ ಅದು. ‘ಸಾಕ್ಷಿ’ಯ ಸಂಪಾದಕರಾಗಿ ಅಡಿಗರು ನಡೆಸಿದ ಈ ಸಾಂಸ್ಕೃತಿಕ ಕಾಯಕ, ಕನ್ನಡಕ್ಕೆ ಅವರ ಕಾವ್ಯದಷ್ಟೇ, ಅಥವಾ ಅದಕ್ಕಿಂತಲೂ ವ್ಯಾಪಕವಾದ ‘ಕಾಣ್ಕೆ’ಯನ್ನೂ ‘ಕಾಣಿಕೆ’ಯನ್ನೂ ನೀಡಿದ್ದನ್ನು ನಾಡು ಮರೆಯಬಾರದು.

  ” ಲೌಕಿಕವಾದ ಯಾವ ಲಾಭಕ್ಕಾಗಿಯೂ ಸತ್ಯವನ್ನೂ, ಋಜುತ್ವವನ್ನೂ ಬಲಿಕೊಡಬಾರದೆಂಬುದೇ ‘ಸಾಕ್ಷಿ’ಯ ಮೂಲ ಉದ್ದೇಶ” ಎಂಬ ಮೊದಲ ಸಂಚಿಕೆಯ ಮಾತನ್ನು ತನ್ನ ಕೊನೆಯ ಸಂಚಿಕೆಯ ತನಕವೂ, ಚಾಚೂ ತಪ್ಪದೆ ಪಾಲಿಸಿಕೊಂಡು ಬಂದ ಹೆಮ್ಮೆ ‘ಸಾಕ್ಷಿ’ಯದು. ಲೌಕಿಕ ಲಾಭಕ್ಕಾಗಿಯೋ ಸತ್ಯವನ್ನೂ ಋಜುತ್ವವನ್ನೂ ಬಲಿ ಕೊಡುವ ಅವಸರ ಎಲ್ಲರನ್ನೂ ಆವರಿಸುತ್ತಿರುವ ಈ ಕಾಲದಲ್ಲಿ ‘ಸಾಕ್ಷಿ’ಯ ಸಂಚಿಕೆಗಳ ಮರು ಓದು ನಮ್ಮ ಸಾಕ್ಷಿ ಪ್ರಜ್ಣೆಯನ್ನು ಮತ್ತೆ ಚಿಗುರಿಸಬಲ್ಲದು. ಯಾವ ಮನುಷ್ಯ ಯತ್ನಗಳೂ ‘ ಖಾಸಗೀ ಪರಿಣತಿಯ ಉತ್ಕರ್ಷ’ ದ ಗೀಳುಗಳಾಗದೇ ಸಾಮೂಹಿಕ ನೈತಿಕ ವಿಕಾಸದ ಕೊಂಡಿಗಳಾಗಿರಬೇಕು” ಎಂದು ನುಡಿದು, ನಡೆದ ‘ಸಾಕ್ಷಿ’ಯ ಅಮೂಲ್ಯ ಸಂಚಿಕೆಗಳು , ಸಂಪುಟಗಳ ರೂಪದಲ್ಲಿ ಹೊಸ ಓದುಗರಿಗೆ ಲಭ್ಯವಾದರೆ ಅದಕ್ಕಿಂತ ಒಳ್ಳೆಯ ಸಂಗತಿ ಬೇರಿಲ್ಲ.

  Leave a Reply