ಎ. ಎನ್. ಸುದರ್ಶನ ಶೃದ್ದಾಂಜಲಿ

ಕೆ. ಸತ್ಯನಾರಾಯಣ

  ಅಡಿಗರ ಮೊದಲ ಸಮಗ್ರ ಕಾವ್ಯ 1976 ರಲ್ಲಿ ಪ್ರಕಟಣೆಗೊಂಡಿತು . ಇದನ್ನು ಮೊದಲು ಅಡಿಗರ ತಲೆಗೆ ಹಾಕಿದವರೇ ಶ್ರೀ ಎ. ಎನ್ . ಸುದರ್ಶನ್ ಮತ್ತು ಕೆ. ಸತ್ಯನಾರಾಯಣ . ಇದನ್ನು ಅಡಿಗರೇ ಸಮಗ್ರ ಕಾವ್ಯದ ಮೊದಲ ಮಾತುಗಳಲ್ಲಿ ಹೇಳಿದ್ದಾರೆ . ಸುದರ್ಶನ್ ಈ ತಿಂಗಳ 15ರಂದು ನಮ್ಮನಗಲಿದರು . ಈ ಸಂಧರ್ಭದಲ್ಲಿ ಒಡನಾಡಿ ಸತ್ಯನಾರಾಯಣ ಅವರನ್ನು ನೆನೆಸಿಕೊಂಡಿದ್ದಾರೆ .

  ಈಚೆಗೆ ನಿಧನರಾದ ಎ. ಎನ್ ಸುದರ್ಶನ್ (ಜನನ 27-01-1946) ದಾವಣಗೆರೆಯ ಕಡೆಯಿಂದ ಬಂದು ಬೆಂಗಳೂರು ನಗರದಲ್ಲಿ ನೆಲೆ ಮತ್ತು ಸಾರ್ಥಕತೆ ಕಂಡುಕೊಂಡ ಒಂದು ಗಣ್ಯ ಸಾಂಸ್ಕೃತಿಕ ಕುಟುಂಬಕ್ಕೆ ಸೇರಿದವರು. ಇವರ ಹಿರಿಯ ಸೋದರ ಶ್ರೀ ಎ.ಎನ್.ಪ್ರಸನ್ನ ಕನ್ನಡದ ಮುಖ್ಯ ಕಥೆಗಾರರು, ಅನುವಾದಕರು ಹಾಗೂ ಕಿರುಚಿತ್ರ, ಚಲನಚಿತ್ರ ನಿರ್ದೇಶಕರು. ಒಬ್ಬ ಕಿರಿಯ ಸೋದರ ಶ್ರೀ ಎ.ಎನ್.ಮಧುಸೂದನ್ ಚಲನಚಿತ್ರ ಸಮಾಜ ಸಂಘಟಕರು ಮತ್ತು ವೀಕ್ಷಕ ಚಿತ್ರ ಸಮಾಜದ ಸ್ಥಾಪಕರಲ್ಲೊಬ್ಬರು. ಮತ್ತೊಬ್ಬ ಕಿರಿಯ ಸೋದರ ಎ.ಎನ್.ಮುಕುಂದ್ ಸಂವೇದನಾಶೀಲ ಸಾಂಸ್ಕೃತಿಕ ಛಾಯಾಚಿತ್ರಗ್ರಾಹಕರು. ಇವರೆಲ್ಲರೂ ಉತ್ತಮ ಮತ್ತು ಜವಾಬ್ದಾರಿಯುತ ವೃತ್ತಿಗಳಲ್ಲಿದ್ದು ಸಾಂಸ್ಕೃತಿಕವಾಗಿ ತಮ್ಮ ವ್ಯಕ್ತಿತ್ವವನ್ನು ಬಳಸಿಕೊಂಡು ಸಾರ್ಥಕತೆಗೆ ಪ್ರಯತ್ನಿಸಿದವರು.

  SUDHI

  ಚಿತ್ರ : ಎ. ಎನ್ ಮುಕುಂದ್

  ಇವರೆಲ್ಲರ ಪೈಕಿಯೂ ಶ್ರೀ ಸುದರ್ಶನ್‌ರವರಿಗೆ ಹೆಚ್ಚು ವೈವಿಧ್ಯಮಯ ಆಸಕ್ತಿಗಳಿದ್ದವು. ಕರ್ನಾಟಕ ಸಂಗೀತ, ಹಿಂದಿ ಚಲನಚಿತ್ರಗೀತೆಗಳು, ಕನ್ನಡ ಸಾಹಿತ್ಯ, ಚಲನಚಿತ್ರ ವೀಕ್ಷಣೆ ಮತ್ತು ಎಡೆಬಿಡದ ಕ್ರಿಕೆಟ್ ಆಸಕ್ತಿ , ಕಾರ್ಮಿಕ ಸಂಘದ ಚಟುವಟಿಕೆಗಳು, ದಿನವೂ ಟೇಬಲ್ ಟೆನಿಸ್ ಮತ್ತು ಬ್ಯಾಡ್‌ಮಿಂಟನ್ ಕಡ್ಡಾಯ. ಈ ವೈವಿಧ್ಯಮಯ ಆಸಕ್ತಿಗಳಿಗನುಗುಣವಾಗಿ ವಿಸ್ತಾರವಾದ ಸ್ನೇಹವಲಯ. ಸ್ನೇಹವಲಯದಲ್ಲೂ ಭಿನ್ನ ಭಿನ್ನ ಆಸಕ್ತಿಯುಳ್ಳವರು. ಎಲ್ಲರನ್ನೂ ಒಗ್ಗೂಡಿಸುತಿದ್ದುದು ಸುದರ್ಶನ್‌ರ ಸ್ನೇಹಶೀಲತೆ.

  ಕವಿ ಗೋಪಾಲಕೃಷ್ಣ ಅಡಿಗರಿಗೆ ತುಂಬಾ ಬೇಕಾದವರಾಗಿದ್ದ ಸುದರ್ಶನ್ ನನ್ನನ್ನು ಒಂದು ಸಲ ಅವರಿಗೆ ಗಾಂಧಿ ಬಜಾರಿನ ಫುಟ್‌ಪಾತ್‌ನಲ್ಲಿ ಪರಿಚಯಿಸಿದರು. ಅವರು ಪರಿಚಯಿಸಿದ ರೀತಿ ಮತ್ತು ಸಲಿಗೆ ಹಾಗೂ ಆತ್ಮೀಯತೆಯಿಂದ ಅಡಿಗರು ಅವರಿಗೆ ಸ್ಪಂದಿಸಿದ ರೀತಿ ಎರಡೂ ನನಗೆ ದೊಡ್ಡ ಆಶ್ಚರ್ಯ. ಮನೆಬಾಡಿಗೆ, ಇನ್ಸೂರೆನ್ಸ್, ಇಂತಹ ಗೃಹಕೃತ್ಯದ ವಿಷಯಗಳ ಬಗ್ಗೆ ಕೂಡಾ ಅಡಿಗರು ಇವರ ಸಲಹೆಗಳನ್ನು ವಿಶ್ವಾಸದಿಂದ ಕೇಳುತ್ತಿದ್ದರು. ಹೀಗೆ ಒಂದು ದಿನ ಗಾಂಧಿಬಜಾರಿನಲ್ಲಿ ಮಾತನಾಡುತ್ತಿದ್ದಾಗ ಅಡಿಗರ ಮುಂದಿನ ಪುಸ್ತಕದ ಪ್ರಕಟಣೆಯ ಬಗ್ಗೆ ಪ್ರಸ್ತಾಪ ಬಂತು. ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರದ ಹಿನ್ನೆಲೆಯಿಂದ ಬಂದಿದ್ದ ನಾವಿಬ್ಬರೂ ಅದರಲ್ಲೂ ಮುಖ್ಯವಾಗಿ ಸುದರ್ಶನ್ ಅಡಿಗರು ತಮ್ಮ ಸಮಗ್ರ ಕಾವ್ಯ ಸಂಪುಟವನ್ನು ತಾವೇ ಪ್ರಕಟಿಸಬೇಕೆಂದು, ಓದುಗರಿಂದ ಪ್ರಕಟನಾಪೂರ್ವ ರಿಯಾಯಿತಿ ಮೊಬಲಗನ್ನು ಪಡೆಯಬೇಕೆಂದು ಸೂಚಿಸಿದರು. ವಯಸ್ಸಿನಲ್ಲಿ ತುಂಬಾ ಕಿರಿಯರಾಗಿದ್ದ ಬರವಣಿಗೆಯ ಬಗ್ಗೆ ಯಾವುದೇ ಗಂಧಗಾಳಿಯಿಲ್ಲದ ನಮ್ಮ ಸಲಹೆಯನ್ನು ಅಡಿಗರು ಗಂಭೀರವಾಗಿ ತೆಗೆದುಕೊಂಡರು. ಕರ್ನಾಟಕದ ಮೂಲೆಮೂಲೆಗಳಿಂದ ಒಳ್ಳೆಯ ಪ್ರತಿಕ್ರಿಯೆ ಬಂತು. ವಿಸ್ತಾರವಾದ ಸ್ನೇಹವಲಯ ಹೊಂದಿದ್ದ ಸುದರ್ಶನ್ ಬೆಂಗಳೂರು ನಗರದಲ್ಲೂ ಕೂಡಾ ಗಣನೀಯ ಸಂಖ್ಯೆಯ  ಪ್ರಕಟನಾಪೂರ್ವ ಮಾರಾಟಕ್ಕೆ ನೆರವಾದರು. ಅಡಿಗರು ನಾವು ಪ್ರಾಸಂಗಿಕವಾಗಿ ಆಡಿದ ಮಾತನ್ನು ದೊಡ್ಡದು ಮಾಡಿ ನಮ್ಮಿಬ್ಬರ ಹೆಸರನ್ನು ಸಮಗ್ರ ಕಾವ್ಯದ ಮುನ್ನುಡಿಯಲ್ಲಿ ದಾಖಲಿಸಿಬಿಟ್ಟರು. ಇದು ನಾವಿಬ್ಬರು ಬಯಸದೆ ಬಂದ ಮಹಾಭಾಗ್ಯವಾಗಿತ್ತು. ತುಂಬಾ ಸಂಕೋಚದ ಸ್ವಭಾವದ ಸುದರ್ಶನ್ ಕೃತಜ್ಞತೆ ಮತ್ತು ಸಂತೋಷ ಎರಡೂ ಭಾವಗಳನ್ನು ಅಡಿಗರಿಗೇ ತಲುಪಿಸಿದರು.

  ಸುದರ್ಶನರ ಸ್ನೇಹದ ದೆಸೆಯಿಂದಾಗಿ ಅಡಿಗರ ಆ ಕಾಲದ ಕಡೆಯ ಕವನಗಳನ್ನು ಹಸ್ತಪ್ರತಿಯಲ್ಲೇ ನೋಡುವ ಅವಕಾಶವು ನನಗೆ ಸಿಕ್ಕಿತು. ಜೂನ್ ೧೯೭೫ರಲ್ಲಿ ಅಡಿಗರಗೆ ನಡೆದ ಸನ್ಮಾನ ಮತ್ತು ನಿಧಿ ಸಮರ್ಪಣಾ ಸಮಾರಂಭದಲ್ಲಿ ಎಲ್ಲ ಸುದರ್ಶನ್ ಸಹೋದರರು ಸಕ್ರಿಯವಾಗಿ ಭಾಗವಹಿಸಿದ್ದರು. ತುರ್ತು ಪರಿಸ್ಥಿತಿ ವಿರೋಧದ ದಿನಗಳಲ್ಲಿ ಬೆಂಗಳೂರು ಸಕ್ರಿಯವಾಗಿದ್ದಾಗ ಅದರಲ್ಲೂ ತೊಡಗಿಸಿಕೊಂಡಿದ್ದ ಸುದರ್ಶನ್ ಅದಕ್ಕೆ ಸಂಬಂಧಪಟ್ಟ ಸಾಹಿತ್ಯ ಪತ್ರಿಕೆಗಳನ್ನೆಲ್ಲಾ ತೀವ್ರ ಆಸಕ್ತಿಯಿಂದ ಓದುತ್ತಿದ್ದರು. ಇವುಗಳ ಪ್ರಸ್ತಾಪವಾದೊಡನೆಯೇ ಅಡಿಗರೊಡನೆ ಒಮ್ಮೆ ಮಾತಾಡುತ್ತಿದ್ದಾಗ ತುರ್ತು ಪರಿಸ್ಥಿತಿ ತನ್ನ ತೀವ್ರಾವಸ್ಥೆಯಲ್ಲಿದ್ದಾಗ ಹೇಳಿದ ಒಂದು ಮಾತು, ಸಧ್ಯದಲ್ಲೇ ತುರ್ತು ಪರಿಸ್ಥಿತಿ ರದ್ದಾಗುತ್ತೆ. ಆ ವಿಶ್ವಾಸ ನಮಗಿರಬೇಕು. ROSES ROSES EVERYWHERE ಎಂಬ ಕಾವ್ಯದ ಸಾಲುಗಳನ್ನು ಉಲ್ಲೇಖಿಸುತ್ತಾ – ಅಡಿಗರ ಈ ಉಲ್ಲೇಖವನ್ನು ಸುದರ್ಶನ್ ಯಾವಾಗಲೂ ಪ್ರಸ್ತಾಪಿಸುತ್ತಿದ್ದರು.

  ಅಡಿಗರ ಬಗ್ಗೆ ಆಳವಾದ ನಿಷ್ಠೆ ಮತ್ತು ಪ್ರೀತಿಯನ್ನು ಹೊಂದಿದ್ದ ಸುದರ್ಶನ್ ಮೂಲಕ ಬೆಂಗಳೂರಿನ ಎಷ್ಟೋ ಸಾಹಿತಿಗಳು ನನಗೆ ಪರಿಚಯವಾದರು. ಹದಿನಾರಾಣೆ ಕುಟುಂಬ ವತ್ಸಲರಾಗಿದ್ದ ಹಿರಿಯ ಮಿತ್ರ ಸುದರ್ಶನ್‌ರಿಗೆ ಪ್ರೀತಿಯ ನೆನಪು, ಗೌರವ ಮತ್ತು ಶ್ರದ್ಧಾಂಜಲಿ.

   

  ಎ. ಎನ್ ಸುದರ್ಶನ್ ಎರಡು ಕವನಗಳು  :

  ನಾನು – ನಮ್ಮ ನೆಲ

  ನನಗೆ ಖಂಡಿತ ಗೊತ್ತಿದೆ ಸ್ವಾಮಿ
  ನಾನು ಒಂದು ದಿನ ಸಾಯುತ್ತೇನೆ
  ನಿಮ್ಮ ನೋಟದ ಬೇಟೆಗೆ ‘ಇಲ್ಲ’ವಾಗುತ್ತೇನೆ
  ಅಷ್ಟೇಕೆ , ನಾಡಿದ್ದು , ನಾಳಿನ ಮುಂಜಾವು
  ಇವತ್ತು .. ಈಗ ಅಥವಾ ಈಗಾಗಲೇ ?

  ನಾನು , ನನ್ನ ಕಾವ್ಯ , ಕನಸು , ರಾಷ್ಟೀಯತೆ
  ಈ ಶಬ್ದಗಳ , ಒಳ ತೋಟಿಗಳ ಜಲಪಾತ
  ಎಲ್ಲ ಕರಗಿ ಮಂಜಾಗಿ , ಗಾಳಿಯಾಗಿ ತೇಲುತ್ತಾ …

  ಸಾವು ಎಂದರೆ ಏನು ಸ್ವಾಮಿ ? !
  ನಿಮಗೆ ನಿಮಗೇ ಕೇಳುತ್ತೇನೆ .
  “ಏನಂದಿರಿ, ‘ನನಗೆ ಇಪ್ಪತ್ತು ‘
  ಸಾಯುವ ವಯಸ್ಸು ಎಪ್ಪತ್ತು . ”

  ಕನಸು, ಕಸರತ್ತಿಲ್ಲದ ದಾರಿ
  ದಡದಂಚಿನಲ್ಲಿ ಈಸಿ ಮೇಲೇರುತ್ತೀರಿ
  ನೀವು ಧನ್ಯರು ಸ್ವಾಮಿ
  ನೀವು ಅಮರರು.

  ಈ ನೆಲದ ಆಳದ ಹೊಳೆಯ ನಿರಂತರ ತಾನ.
  ಶತಮಾನಗಳ ಕಾಲದ ಭವ್ಯ ಪರಂಪರೆಯ ಹಿಮಾಲಯ
  ಎಲ್ಲ ಶಕ್ತಿಗಳ , ಪ್ರಭಾವಗಳ ತಂಪು .
  ಈಗೀಗ , ಈ ಹಸಿರಿನ ತೋಟಕ್ಕೆ ಬೀಳುತ್ತಿರುವ ಕೆಂಪು
  ಮಚ್ಚಿನ ,

  ಹೊಡೆತಕ್ಕೆ ನಮ್ಮ ಮರ ಅದರುತ್ತಿದೆಯೆ,
  ಎನ್ನುವ ಸಂದೇಹ – ಒಮ್ಮೆಮ್ಮೆ , ಗಾಢವಾದರೂ
  ಇತಿಹಾಸ ಪುಟ ತಿರುವಿ ತೆಪ್ಪಗಾಗುತ್ತೇನೆ .

  **************************************

  ಚಂಡಮಾರುತ

  ಮೊನ್ನೆ ಮೊನ್ನೆವರೆಗೆ
  ಮಣ್ಣಿನ ಮನೆಯಲ್ಲಿ ಮಲಗಿ
  ಸೂರಿನಿಂದಿಣುಕುವ ದಿಗಂತ ನೋಡಿ
  ಸಮುದ್ರದಿಂದ ಸತ್ತ ಮೀನನ್ನು ತಂದು ಸುಟ್ಟು ತಿಂದು
  ಈ ಜನ ದಿನ ನೂಕಿದ್ದು
  ನಮ್ಮ ಸುಖೀ ರಾಜ್ಯದ ಪ್ರಜೆಗಳಾಗಿ ಬದುಕಿದ್ದು
  ನಮಗೆ ಗೊತ್ತಾಗಿದ್ದು …
  ಮೊನ್ನೆ ಬೀಸಿದ ಚಂಡಮಾರುತಕ್ಕೆ ಬಲಿಯಾಗಿ
  ಹೆಣಗಳಾಗಿ ಉರುಳಿದಾಗ ,

  ಈಗ ಚರ್ಚೆ ನಡೆದಿದೆ ,
  ತಪ್ಪು ಅವರದೆ , ಇವರದೆ
  ಪ್ರಶ್ನೆ ಇತ್ಯರ್ಥವಾಗದೇ ಹೆಣಗಳು ಕೊಳೆಯುತ್ತಿವೆ .
  ದೂರದ ಬೆಂಗಳೂರಿನ ತಂಪು ಗಾಳಿಯಲ್ಲಿ
  ನನಗೆ ಗಾದೆಯೊಂದು ನೆನಪಾಗುತ್ತಿದೆ
  “ಗಾಳಿ ಬಿತ್ತಿದರೆ ಬಿರುಗಾಳಿ ಬೆಳೆಯುವೆ ”
  ಆದರೆ ಈ ಜನ ಬಿಟ್ಟಿದ್ದು ನಿಟ್ಟುಸಿರು

  ನನ್ನ ಮಗ ಪ್ರಶ್ನೆ ಕೇಳುತ್ತಾನೆ
  ಚಂಡಮಾರುತವೆಂದರೇನು ?
  ಅಳಿದವರ ಬದುಕು ಎನ್ನಲೇ ,
  ಉಳಿದವರ ಸಾವು ಎನ್ನಲೇ ?

  One Comment

  1. ಈ ನುಡಿನಮನ ಆತ್ಮೀಯವಾಗಿದೆ. ನಮಗೆ ಆ ಕಾಲದ ಒಂದು ಝಲಕ್ ತೋರಿಸುತ್ತದೆ. ಸುದರ್ಶನರ ಕವಿತೆಗಳು ಓದಲು ಸಿಕ್ಕಿದ್ದು ಇದೇ ಮೊದಲು. Deep and sensitive.

  Leave a Reply