ನಿನ್ನ ಗದ್ದೆಗೆ ನೀರು

ಅಡಿಗರದೇ ಧ್ವನಿಯಲ್ಲಿ ತುರ್ತು ಪರಿಸ್ಥಿತಿಯನ್ನು ವಿಡಂಬಿಸುವ ಕವನ “ನಿನ್ನ ಗದ್ದೆಗೆ ನೀರು.

 

 

ನಿನ್ನ ಗದ್ದೆಗೆ ನೀರು
ಕವನ ಸಂಕಲನ : ಮೂಲಕ ಮಹಾಶಯರು
ಓದು : ಗೋಪಾಲಕೃಷ್ಣ ಅಡಿಗ


1975ರ ಜೂನ್ 26ರಂದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರಷ್ಟೆ. ಮಾರನೆಯ ಬೆಳಿಗ್ಗೆ ನಾವೆಲ್ಲ ಪತ್ರಿಕೆಗಳಲ್ಲಿ ಆ ಬಗ್ಗೆ ಓದಿದರೂ ಕೂಡ ನಮಗೆ ಅಂಥ ಶಾಸನದಿಂದ ಏನೇನು ಅನರ್ಥ ಆಗಬಹುದೆಂಬ ಕಲ್ಪನೆಯೂ ಇರಲಿಲ್ಲ. ಆ ಸಂಜೆ ಅಡಿಗರು ಎಂದಿನಂತೆ ಗಾಂಧಿ ಬಜಾರಿಗೆ ಬಂದರು. ನಾವು ಮೂವರು ನಾಲ್ವರು ಎಂದಿನಂತೆ ಕಾಫಿ ಕುಡಿದ ಮೇಲೂ ಅಡಿಗರು ಹೆಚ್ಚೇನೂ ಮಾತನಾಡದಿದ್ದುದರಿಂದ ಅವರು ಯಾಕೋ ವ್ಯಗ್ರರಾಗಿದ್ದಾರೆಂದು ತಿಳಿದೆವು. ಹೊರಗೆ ಬಂದು ಕೆನರಾ ಬ್ಯಾಂಕಿನ ಕಟ್ಟೆಯ ಮೇಲೆ ಕುಳಿತದ್ದೇ ಅಡಿಗರು, `ಏನ್ರೀ, ಎಂಥಾ ಧೂರ್ತ ಹೆಂಗಸು ಈಕೆ’ ಪ್ರಜಾತಂತ್ರದ ಮೂಲಕ್ಕೇ ಕೊಡಲಿ ಹಾಕಿದಳಲ್ಲ’ ಎಂದು ಮೊದಮೊದಲು ಪೇಚಾಡುತ್ತ ಆಮೇಲೆ ಅತೀವ ಸಿಟ್ಟಿನಿಂದ ಒಂದರ್ಧ ಗಂಟೆ ಪ್ರಜಾತಂತ್ರದ ಪರಮ ಮೌಲ್ಯಗಳ ಬಗ್ಗೆ ಮಾತಾಡಿದರು. ಪರಿಣಾಮವಾಗಿ ನಾವೂ ಸ್ವಲ್ಪ ಹೊತ್ತು ಇಂದಿರಾ ಗಾಂಧಿಯ ಕೃತ್ಯದ ಬಗ್ಗೆ ಯೋಚಿಸುವಂತಾಯಿತು. ರಾತ್ರಿ ಏಳೂವರೆ ಗಂಟೆಯಾದದ್ದೇ ಅವರು ಮನೆಗೆ ಹೊರಡಲೆಂದು ಎದ್ದರು. ನಾನು ಅದೇ ಹೊತ್ತಿಗೆ ಆ ದಾರಿಯಲ್ಲಿ ಬಂದ ಒಂದು ಆಟೋವನ್ನು ನಿಲ್ಲಿಸಿ ಅವರನ್ನು ಕೂಡಿಸಿದೆ. ಅವರು `ಬರುತ್ತೇನೆ, ನಾಳೆ ನೋಡೋಣ’ ಎಂದದ್ದೇ ಆಟೋ ಹೊರಟಿತು. ಆಶ್ಚರ್ಯವೆಂದರೆ ಹತ್ತು ಗಜ ಹೋದದ್ದೇ ಅದು ನಿಂತುಬಿಟ್ಟದ್ದು. ಆಟೋದವನು ಏನಾದರೂ ಬರುವುದಿಲ್ಲ ಎಂದನೇನೋ ಎಂದುಕೊಂಡು ನಾನು ಓಡಿಹೋದೆ. ಅಡಿಗರು ಕೆಳಗಿಳಿದದ್ದೇ ನನ್ನ ಭುಜ ಹಿಡಿದುಕೊಂಡು `ನಾವೀಗ ಬಾಂಬು ಮಾಡಬೇಕು’ ಎಂದು ಹೇಳಿದವರೇ ಮತ್ತೆ ಆಟೋದೊಳಗೆ ತೂರಿಕೊಂಡುಬಿಟ್ಟರು. ಆಮೇಲೆ ಮೂರು ದಿನ ಅವರು ಗಾಂಧಿ ಬಜಾರಿನತ್ತ ಸುಳಿಯಲಿಲ್ಲ. `ಬಹುಶಃ ಬಾಂಬು ಮಾಡುತ್ತಿರಬೇಕು’ ಎಂದು ನಾವು ನಕ್ಕದ್ದುಂಟು. ಆದರೆ ನಾಲ್ಕನೆಯ ದಿನ ಬಂದಿತು ಅವರ ಸವಾರಿ. ಎಲ್ಲರೂ ಕಾಫಿ ಹೀರುತ್ತಿರುವಾಗ ಒಂದು ಸಿಗರೇಟು ಹಚ್ಚಿದ ಅಡಿಗರು, ಮೆಲ್ಲನೆ ತಮ್ಮ ಕೋಟಿನ ಜೇಬಿನಿಂದ ಮಡಿಸಿದ ಒಂದು ಕಾಗದ ತೆಗೆದು ನಾಡಿಗರ ಕೈಗಿತ್ತರು. ಅದನ್ನು ತೆರೆದು ನೋಡಿದರೆ ತುರ್ತು ಪರಿಸ್ಥಿತಿಯನ್ನು ವಿಡಂಬಿಸುವ ಈ ಕವನ.

– ಎಸ್. ದಿವಾಕರ್

One Comment

Leave a Reply