ಒಂದು ಜಗಳ ಮತ್ತು …

ಪಿ . ಲಂಕೇಶ್

  ಇಲ್ಲಿ ನಾನು ಅಡಿಗರ ಮತ್ತು ನನ್ನ ನಡುವಿನ ಅನೇಕ ಘಟನೆಗಳನ್ನು ಕೊಡಲಾಗುತ್ತಿಲ್ಲವಾದ್ದರಿಂದ ಅಡಿಗರ ಮೊದ್ದುತನ ಮತ್ತು ಮುಗ್ಧತೆ ತೋರುವ ಒಂದು ಘಟನೆ ಕೊಡುತ್ತೇನೆ. ನನ್ನ ಬಗ್ಗೆ ಈ ಅಡಿಗರಿಗೆ ಅಪಾರ ಪ್ರೀತಿ ಮತ್ತು ವಿಶ್ವಾಸ; ಅದೆಂತೋ ನಾನು ಬರೆದದ್ದರಲ್ಲೆಲ್ಲ ಒಳ್ಳೆಯ ಅಂಶ ಅವರಿಗೆ ಕಾಣುತ್ತಿತ್ತು. ಅಡಿಗರು ಲೋಕಸಭಾ ಚುಣಾವಣೆಗೆ ನಿಂದು ಸೋತಾಗ ಅವರು ಜನಸಂಘದ ಮರ್ಜಿಗೊಳಗಾದರು. ಅವರಿಗೆ ಜನಸಂಘ (ಅಥವಾ ಅರೆಸ್ಸೆಸ್ಸ್) ತಿಂಗಳಿಗಿಷ್ಟು ಎಂದು ಹಣ ಕೊಡುತ್ತಿತ್ತು. ಸ್ವಾಭಿಮಾನಿಯಾದ ಅಡಿಗರಿಗೆ ಅದರಿಂದ ಬೇಸರವಾಗಿತ್ತು. ಆ ವೇಳೆಯಲ್ಲಿ ದಿಲ್ಲಿಯ ನ್ಯಾಷನಲ್ ಬುಕ್ ಟ್ರಸ್ಟ್‌ನಲ್ಲಿ ಡೆಪ್ಯುಟಿ ಡೈರೆಕ್ಟರ್ ಹುದ್ದೆ ಖಾಲಿ ಇತ್ತು. ನಾವೆಲ್ಲ ಪ್ರಯತ್ನಿಸಿದರೆ ಆ ಹುದ್ದೆ ಅಡಿಗರಿಗೆ ದೊರೆಯುವುದು ಕಷ್ಟವಾಗುತ್ತಿರಲಿಲ್ಲ. ಯಥಾಪ್ರಕಾರ ಅಡಿಗರ ಶಿಷ್ಯರೆಲ್ಲ ಈ ಬಗ್ಗೆ ಮಾತಾಡುತ್ತಲೇ ಏನೂ ಮಾಡದೆ ಕಾಲ ತಳ್ಳುತ್ತಿದ್ದರು. ಆಗ ನನಗೆ ಯಾರೋ ‘ಈಗ ಕರ್ನಾಟಕದ ರಾಜ್ಯಪಾಲರಾಗಿರುವ ಧರ್ಮವೀರ ಅವರು ಈ ಹುದ್ದೆಯನ್ನು ಅಡಿಗರಿಗೆ ಕೊಡಿಸಲು ಸಾಧ್ಯ. ಅವರಿಗೆ ಯಾರಿಂದಲಾದರೂ ಹೇಳಿಸಿ, ಧರ್ಮವೀರ ಅವರಿಗೆ ಗೋಪಾಲಗೌಡರನ್ನು ಕಂಡರೆ ಇಷ್ಟ. ಅವರು ಹೇಳುತ್ತಾರೇನೋ ನೋಡಿ’ ಅಂದರು.  ಆಗ ಗೋಪಾಲಗೌಡರು ರಕ್ತದೊತ್ತಡದಿಂದ ಕುಗ್ಗಿ ಹೋಗಿದ್ದರು. ಸರಿಯಾಗಿ ನಡೆಯುವುದಕ್ಕೂ ಆಗುತ್ತಿರಲಿಲ್ಲ. ಗೌಡರನ್ನು ಸಂಪರ್ಕಿಸಿ ಅವರನ್ನು ಕರೆದುಕೊಂಡು ಧರ್ಮವೀರರನ್ನು ಭೇಟಿ ಮಾಡಿಸಲು ಹೊರಟೆ. ಗೋಪಾಲ್ ಎಷ್ಟು ಸೂಕ್ಷ್ಮ ಮತ್ತು ಸಿಟ್ಟಿನವರು ಅಂದರೆ ಅರ್ಧದಾರಿಯಲ್ಲಿ ಕಾರು ನಿಲ್ಲಿಸಿ, “ಥೂ, ಇದೇನು ಕೆಲಸ, ನನಗೆ ತುಂಬ ಬೇಸರವಾಗ್ತಿದೆ” ಅಂದರು. ಅದು ಬೇಸರವಲ್ಲ, ಸಿಟ್ಟು. ನನಗೂ ಸಿಟ್ಟು ಬಂತು. “ಗೌಡರೆ, ನೀವು ಮನೆಗೆ ಹೋಗಿ, ನಾನೂ ಹೊರಟುಹೋಗುತ್ತೇನೆ” ಅಂದೆ. ನನಗೆ ಅವರಿಗಿಂತ ಹೆಚ್ಚು ಸಿಟ್ಟು ಬಂದಿತ್ತು. ನನ್ನ ಸಿಟ್ಟಿನಿಂದ ಬೆಚ್ಚಿದ ಗೌಡರು, “ಪರವಾಗಿಲ್ಲ ಮೇಷ್ಟ್ರೇ, ಅವರ್‍ನ ನೋಡೇ ಬಿಡ್ತೀನಿ ಬನ್ನಿ” ಎಂದು ಹೋಗಿ ರಾಜ್ಯಪಾಲರನ್ನು ನೋಡಿ ವಿಷಯ ತಿಳಿಸಿದರು. ಧರ್ಮವೀರ ಕಾಂಗ್ರೆಸ್ಸಿಗ, ಅಧಿಕಾರಿ; ಅಡಿಗರು ಜನಸಂಘ; ನಾವೆಲ್ಲ ಬೇರೆಬೇರೆ ಸಿದ್ಧಾಂತದವರು. ಹೇಗಿದೆ ನೋಡಿ – ಅಡಿಗರಿಗೆ ನ್ಯಾಷನಲ್ ಬುಕ್ ಟ್ರಸ್ಟ್‌ನಲ್ಲಿ ಕೆಲಸ ಸಿಕ್ಕಿತು.
   
  ಇದು 1972 ಎಂದು ಕಾಣುತ್ತದೆ. ನನ್ನ ‘ದೊರೆ ಈಡಿಪಸ್’ ನಾಟಕದ ಅನುವಾದ ಪ್ರಕಟವಾಗಿತ್ತು. ಬಹಳ ಜನ ಮೆಚ್ಚಿದ್ದರೆಂದು ಕಾಣುತ್ತೆ. ಅಲ್ಲಿಯವರೆಗೆ ನನ್ನ ಯಾವ ಪುಸ್ತಕವೂ ಪಠ್ಯಪುಸ್ತಕವಾಗಿರಲಿಲ್ಲ. ನನಗೆ ಇದ್ದಕ್ಕಿದ್ದಂತೆ ಮೈಸೂರಿನ ಕನ್ನಡ ಪ್ರೊಫೆಸರೊಬ್ಬರಿಂದ ಕಾಗದ ಬಂತು, ‘ನಿಮ್ಮ ಈಡಿಪಸ್ ನಾಟಕ ಪಠ್ಯವಾಗಿದೆ, ಅಭಿನಂದನೆಗಳು.’ ಪಠ್ಯವೆಂದರೆ ಸ್ವಲ್ಪ ಹಣ ಬರುವುದರಿಂದ ಆಗ ಬಡ ಅಧ್ಯಾಪಕನಾಗಿದ್ದ ನನಗೆ ಸಂತೋಷವಾಯಿತು.
   
  ಆದರೆ ಇಷ್ಟರಲ್ಲಿ ಸಿಮ್ಲಾದಲ್ಲಿ ಸಂಶೋಧನೆ ನಡೆಸುತ್ತಿದ್ದ ಅಡಿಗರಿಂದ ಬರಸಿಡಿಲಂತೆ ನನಗೊಂದು ಕಾಗದ ಬಂತು, “ನೀವು ಕಾಣಬಾರದವರನ್ನು ಕಂಡು ನಮಸ್ಕಾರ ಮಾಡಿ ಪಠ್ಯ ಮಾಡಿಸಿಕೊಂಡಿದ್ದೀರೆಂದು ತಿಳಿಯಿತು. ಇದರಿಂದ ನನಗೆ ಬೇಸರವಾಗಿದೆ.”
   
  ನಾನು ಯೋಚಿಸಿ ಕಾಗದ ಬರೆದೆ. “ನಾನು ಅಕಸ್ಮಾತ್ ಪ್ರಭಾವಬೀರಿ ಪಠ್ಯ ಮಾಡಿಸಿಕೊಂಡಿದ್ದರೂ ಅಪರಾಧವೇನೂ ಆಗುತ್ತಿರಲಿಲ್ಲ. ಯಾಕೆಂದರೆ ನನ್ನ ‘ಈಡಿಪಸ್’ ಅನುವಾದ ಅಷ್ಟು ಕೆಟ್ಟದಾಗಿಲ್ಲ. ಆದರೆ ಇದಕ್ಕಾಗಿ ನಾನು ಯಾರನ್ನೂ ಕಂಡಿಲ್ಲ, ಯಾರಿಂದಲೂ ಹೇಳಿಸಿಲ್ಲ. ನಿಮ್ಮ ಕಾಗದದಿಂದ ನನಗೆ ಸಿಟ್ಟುಬಂದಿದೆ.”
   
  ಆಗ ನಮ್ಮಿಬ್ಬರ ಮಧ್ಯೆ ಸ್ವಲ್ಪ ಮನಸ್ತಾಪ ಉಂಟಾಯಿತು. ನನ್ನ ಸಿಟ್ಟು ಇಳಿದುಹೋಗಲು ಅಷ್ಟು ಸಮಯ ಬೇಕಾಗಲಿಲ್ಲ. ಯಾಕೆಂದರೆ ಅಡಿಗರು ವಿಚಿತ್ರ ಸಾಹಸಗಳಲ್ಲಿ ಮುಳುಗಿ ದಿಗ್ಭ್ರಮೆಗೊಂಡಿದ್ದರು. ನಾನು ಅಡಿಗರನ್ನು ನಿಜವಾಗಿಯೂ ಅರಿತಿದ್ದರೆ ಅವರ ಪ್ರತಿಕ್ರಿಯೆ ಮತ್ತು ಆಮೇಲಿನ ಮೌನ ಸಹಜವಾಗಿತ್ತು. ಸಾಮಾನ್ಯರ ಸಂಶಯ, ಅಸೂಯೆ, ಪ್ರೀತಿ, ಶಂಕೆ – ಎಲ್ಲವನ್ನೂ ಅಡಿಗರು ಅನುಭವಿಸಬಲ್ಲವರಾಗಿದ್ದರು. ಈ ಸಾಮನ್ಯತೆ ಕೂಡ ಅಡಿಗರನ್ನು ಅರಿಯುವುದರಲ್ಲಿ ಮುಖ್ಯ.
   
  ಈ ಟಿಪ್ಪಣಿ ಯನ್ನು ಮುಗಿಸುವ ಮುನ್ನ ಇನ್ನೊಂದು ವಿಷಯ ಹೇಳಬೇಕು. ೧೯೮೦ರ ನವೆಂಬರ್‌ನಲ್ಲಿ ಕೆಲವರು ಕನ್ನಡ ಚಳವಳಿಯ ಗೂಂಡಾಗಳು ನನ್ನ ಮೇಲೆ ಹಲ್ಲೆ ಮಾಡಿದರು. ಆಗ ಅಡಿಗರು ಹೇಳಿದರಂತೆ, “ಇವರು ಮಾತುಗಳಿಂದ ಹಲ್ಲೆ ಮಾಡಿದ್ದಕ್ಕೆ ದೈಹಿಕ ಹಲ್ಲೆಯಾಗಿದೆ.” ಇದನ್ನು ಕೇಳಿ ನಾನು ನಕ್ಕುಬಿಟ್ಟೆ. ಯಾಕೆಂದರೆ ಗಾಂಧೀಜಿಯೇ ಹೇಳಿದ್ದರು: “ಪತ್ರಕರ್ತನಾದವನು ನೇರವಾಗಿ, ಸತ್ಯವಾಗಿ, ಪರಿಣಾಮಕಾರಿಯಾಗಿ ಬರೆಯಬೇಕು,” ಇದನ್ನು ಅಡಿಗರಿಗೆ ಹೇಳಿ ಕಳುಹಿಸಿದೆ.
   
  ಆಮೇಲೆ ಬಹಳ ಕಾಲ ಅಡಿಗರ ಭೇಟಿಯಾಗಲಿಲ್ಲ. ಎರಡು ವರ್ಷದ ಹಿಂದೆ ‘ಜಾಗೃತ ಸಾಹಿತ್ಯ ಸಮಾವೇಶ’ವಾದಾಗ ಸಿಕ್ಕರು. ಅವರ ದೈಹಿಕ ಸ್ಥಿತಿ ನೋಡಿ ಆಘಾತಗೊಂಡೆ. ಅಪ್ಪಿಕೊಂಡಾಗ ಇಬ್ಬರ ಕಣ್ಣಲ್ಲೂ ನೀರು. ಅದಕ್ಕಿಂತ ಮುಖ್ಯ ಅಡಿಗರು ತಮ್ಮ ಆ ಸ್ಥಿತಿಯಲ್ಲೂ ಸಾಹಿತ್ಯದಲ್ಲಿ ಶ್ರೇಷ್ಠತೆ ಕುರಿತು ಮಾತಾಡಲು ಬಂದಿದ್ದು. “ನನಗೆ ಸಾಹಿತ್ಯದಲ್ಲಿ ಶ್ರೇಷ್ಠತೆ ಅನ್ನುವುದು ಜೀವನ್ಮರಣದ ಪ್ರಶ್ನೆ” ಅಂದರು ಅಡಿಗರು.
   
  ಕಾಲ ನಮ್ಮಲ್ಲಿ ಅನುಭವಗಳನ್ನು ಪಕ್ವಗೊಳಿಸುವಂತೆಯೇ ನಮ್ಮೆಲ್ಲ ಸ್ವಪ್ರತಿಷ್ಠೆಯನ್ನು ಕರಗಿಸುತ್ತದೆ. ಚಿಕ್ಕಂದಿನ ನಮ್ಮೆಲ್ಲರ ಸಾಹಿತ್ಯಕ ಮತ್ತು ರಾಜಕೀಯ ಸಾಹಸ ಈಗ ಕನಸಿನ ಗಂಧರ್ವ ಲೋಕದಂತೆ, ಭವಿಷ್ಯದ ಬುತ್ತಿಯಂತೆ ಕಾಣುತ್ತದೆ.
   

  – ನವೆಂಬರ್ 18, 1992

  Leave a Reply