ನನಗಂತೂ ಜೀವನ್ಮರಣದ ಪ್ರಶ್ನೆ

೧೯೯೦ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರ್.ಸಿ.ಹಿರೇಮಠ ಅವರ ಆಯ್ಕೆಯನ್ನು ವಿರೋಧಿಸಿ ಕನ್ನಡದ ಅನೇಕ ಪ್ರಮುಖ ಲೇಖಕರು ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ (೧೬, ೧೭, ೧೮ ಫೆಬ್ರವರಿ ೧೯೯೦) ಬೆಂಗಳೂರು ಜಾಗೃತ ಸಾಹಿತ್ಯ ಸಮಾವೇಶ (ಸಾಹಿತ್ಯದಲ್ಲಿ ಶ್ರೇಷ್ಠತೆಯ ಆದರ್ಶ – ಮುಕ್ತ ಅಧಿವೇಶನ) ವನ್ನು ನಡೆಸಿದರು . ಲಂಕೇಶ್ ಇದರ ಉದ್ಗಾಟಕರಾಗಿದ್ದರು ಮತ್ತು ಅಡಿಗರು ಉದ್ಗಾಟನಾ ಸಮಾರಂಭದಲ್ಲಿ ಅಧ್ಯಕ್ಷರಾಗಿದ್ದರು . ಅಡಿಗರು ಅಧ್ಯಕ್ಷೀಯ ಭಾಷಣದಲ್ಲಿ  ಸಾಹಿತ್ಯದಲ್ಲಿ ಶ್ರೇಷ್ಟತೆ ‘ನನಗೆ ಜೀವನ್ಮರಣದ ಪ್ರಶ್ನೆ’ ಎಂದು ಹೇಳಿದರು . ಸಮ್ಮೇಳನದ ಎರಡನೇ ದಿನ ಕೆ. ವಿ . ಸುಬ್ಬಣ್ಣ “ಶ್ರೇಷ್ಟತೆಯ ವ್ಯಸನ” ಎಂದು ಭಾಷಣ ಮಾಡಿದರು . ಮುಂದೆ ಆ ಎರಡೂ ಭಾಷಣಗಳು ಕನ್ನಡ ಸಾಹಿತ್ಯ ವಲಯದಲ್ಲಿ ಚರ್ಚೆಗೊಳಗಾದವು .  ಮಾರ್ಚ್ 4 ರ ಲಂಕೇಶ್ ಪತ್ರಿಕೆಯ ಸಂಪಾದಕೀಯದಲ್ಲಿ ‘ನನಗಂತೂ ಜೀವನ್ಮರಣದ ಪ್ರಶ್ನೆ’ ಎಂದು ಲಂಕೇಶ್ ಸಮ್ಮೇಳನದಲ್ಲಿ ಚರ್ಚಿತವಾದ ವಿಷಯಗಳ ಕುರಿತಾಗಿ ಬರೆದರು . ಲಂಕೇಶ್ ಸಂಪಾದಕೀಯವನ್ನು ಇಲ್ಲಿ ಕೊಡಲಾಗಿದೆ.  

 
ಹಲವು ಬಗೆಯ ದಿಗಿಲಿನ, ವಿಹ್ವಲತೆಯ ದಿನ ಅದು – 16ನೇ ತಾರೀಖು. ಬೆಳಗ್ಗೆ ತುಂಬ ಕೆಲಸವೆಂದುಕೊಂಡು ಬೇಗ ಕಚೇರಿಗೆ ಬಂದೆ; ಆದರೆ ವಾರದ ಕೆಲಸವನ್ನೆಲ್ಲ ಹಿಂದಿನ ದಿನವೇ ಮುಗಿಸಿದ್ದೆ. ಸಂಜೆ ಮಾಡಬೇಕಾಗಿದ್ದ ಭಾಷಣವನ್ನು ಕೂಡ ನಮ್ಮ ಹುಡುಗರು ಅಚ್ಚು ಮಾಡಿದ್ದರು; ಅದನ್ನು ಓದಬೇಕೆ, ಹಾಗೇ ಮಾತಾಡಬೇಕೆ ಎಂಬ ಪ್ರಶ್ನೆ. ಸಂಜೆಯ ಸಭೆಗೆ ಕಾರಣರಾದವರನ್ನು ಕೇಳಿದರೆ ಒಬ್ಬರು ‘ಓದಿಬಿಡಿ’ ಅಂದರು; ಇನ್ನೊಬ್ಬರು ‘ಮಾತಾಡಿ, ಅದೇಕೆ ಓದ್ತೀರಿ’ ಅಂದರು. ಓದುವ ಅನುಭವ ಕೂಡ ಅಷ್ಟು ಸಿಹಿಯಾಗಿರಲಿಲ್ಲ; ಆಕಾಶವಾಣಿಯಲ್ಲಿ ಒಮ್ಮೆ ನನ್ನ ಭಾಷಣ ಓದಲು ಹೋಗಿ ಅದು ತುಂಬ ಕೃತವೆನ್ನಿಸಿ ಹಾಗೇ ಮಾತಾಡಿದ್ದೆ; ಮಾತಾಡಿದ್ದು ಸರಿಯಾಗಿತ್ತು. ಈಗ ಓದಬೇಕೆ, ಮಾತಾಡಬೇಕೆ ಎಂಬ ಸಮಸ್ಯೆಯ ಜೊತೆಗೆ ಸಂಜೆ ಮೆರವಣಿಗೆ, ಆಮೇಲೆ ಅಡಿಗರೊಂದಿಗೆ ಭೇಟಿ. ನನ್ನ ಭಾಷಣಕ್ಕೆ ಅಡಿಗರ ಅಧ್ಯಕ್ಷತೆ. ಇದೆಲ್ಲ 16ನೇ ತಾರೀಖಿನ ‘ಜಾಗೃತ ಸಾಹಿತ್ಯ ಸಮಾವೇಶ’ಕ್ಕೆ ಸಂಬಂಧಿಸಿದ್ದೆಂದು ನೀವು ಈಗಾಗಲೇ ಊಹಿಸಿರಬಹುದು.

 

ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನಗಳಲ್ಲಿ ಮೊದಲ ದಿನ ಆ ವರ್ಷದ ಅಧ್ಯಕ್ಷರ ಮೆರವಣಿಗೆ ಇರುತ್ತದೆ ಎಂಬುದೂ ನನಗೆ ನೆನಪಿರಲಿಲ್ಲ; ಅದು ಹೇಗೋ ‘ಈ ನಮ್ಮ ಸಮಾವೇಶಕ್ಕೆ, ಮೊದಲು ಮತಾಂಧತೆಯ ವಿರುದ್ಧ ಮೆರವಣಿಗೆ ಇಟ್ಟುಕೊಳ್ಳಬೇಕು’ ಎಂದು ಸೂಚಿಸಿದ್ದೆ. ನಮ್ಮ ಸಮಾವೇಶದಲ್ಲಿ ವ್ಯಕ್ತಿಯೊಬ್ಬನ ನಾಚಿಕೆಗೆಟ್ಟ ಮೆರವಣಿಗೆ ಆಗಬಾರದು; ನಮ್ಮ ಕಾಳಜಿ ತೋರುವಂಥ ಮೆರವಣಿಗೆಯಾಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ನನಗೆ ಆಶ್ಚರ್ಯವೆಂದರೆ, ಕಳೆದ ಮುಕ್ಕಾಲು ಶತಮಾನದಲ್ಲಿ ಅಧ್ಯಕ್ಷತೆ ವಹಿಸಿದ್ದ ಯಾವ ಅಧ್ಯಕ್ಷನೂ ಸಂಕೋಚದಿಂದಾಗಲಿ, ಸ್ವವಿಮರ್ಶೆಯಿಂದಾಗಲಿ ತನ್ನ ಮೆರವಣಿಗೆ ಬೇಡ ಎಂದು ಹೇಳಿರಲಿಲ್ಲ. ಒಮ್ಮೆ ಆದದ್ದು ನೆನಪಿದೆ. ದೇ.ಜವರೇಗೌಡರು ಸಮ್ಮೇಳನಾಧ್ಯಕ್ಷರಾಗಿದ್ದಾಗ ಬೆಂಗಳೂರಲ್ಲಿ ಅವರ ಮೆರವಣಿಗೆ ಆಯಿತು; ಆಗ ಅವರಿಗೆ ನಲವತ್ತಾರೋ ನಲವತ್ತೇಳೋ ವಯಸ್ಸಿರಬೇಕು. ಬೆಂಗಳೂರಿನ ಜನಸಂದಣಿಯ ರಸ್ತೆಯೊಂದರಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಅಲಂಕೃತರಾಗಿದ್ದ ಜವರೇಗೌಡರನ್ನು ನೋಡಿ ಹೆಂಗಸೊಬ್ಬಳು ಹೇಳಿದಳು, ‘ಮದುಮಗನಿಗೆ ಸ್ವಲ್ಪ ವಯಸ್ಸಾಗಿರೋ ಹಂಗಿದೆ, ಪಾಪ’. ಇದು ಇಡೀ ಸಮ್ಮೇಳನದ ಮೇಲಿನ ಭಾಷ್ಯದಂತಿತ್ತು.

 

ಆತಂಕವೆಂದರೆ, ಅವತ್ತು ಅಡಿಗರು ಬರುವುದಿತ್ತು. ಅವರನ್ನು ನೋಡಿ ದಶಕಗಳೇ ಆಗಿತ್ತು. ಅವರೊಂದಿಗಿನ ನನ್ನ ಮನಸ್ತಾಪಕ್ಕೆ ಕಾರಣಗಳನ್ನು ಇಲ್ಲಿ ಹೇಳಬೇಕಾಗಿಲ್ಲ; ಅವರ, ನನ್ನ ನಡುವಿನ ಕಾಗದಗಳು ಕೂಡ ಮನೆ, ಕಚೇರಿ ಬದಲಾಯಿಸುವಾಗ ಕಳೆದುಹೋಗಿವೆ. ಅಡಿಗರು ಎಪ್ಪತ್ತು ದಾಟಿ (ಶುಕ್ರವಾರ ಈ ಸಮಾವೇಶ; ಭಾನುವಾರ ಅವರ 72ನೇ ಹುಟ್ಟುಹಬ್ಬ) ರಕ್ತದೊತ್ತಡ, ಉಸಿರಾಡುವ ತೊಂದರೆ ಲಘು ಲಕ್ವಾ ಮುಂತಾದಕ್ಕೆ ತುತ್ತಾಗಿ ಸಾಹಿತ್ಯ ಮತ್ತು ಸಾಹಿತ್ಯದ ನೆನಪುಗಳನ್ನು ಅವಲಂಬಿಸಿ ಬದುಕಿರುವ ಜೀವ. ಶರ್ಮರೊಂದಿಗೆ ನಾಲ್ಕೈದು ಸಲ ನೋಡಲು ಹೊರಟು ಕೊನೆಗಳಿಗೆಯಲ್ಲಿ ಸುಮ್ಮನಾಗಿದ್ದೆ. ಇವತ್ತು ಶುಕ್ರವಾರ; ಜಾಗೃತ ಸಾಹಿತ್ಯ ಸಮಾವೇಶದ ಉದ್ಘಾಟನೆ ನನ್ನಿಂದ; ಅಡಿಗರ ಅಧ್ಯಕ್ಷತೆ. ಅಲ್ಲೊಂದು ಕಿರಿಕಿರಿಯಾಗಿತ್ತು; ಇಡೀ ಒಂದು ವಾರ “ನಾನು ಉದ್ಘಾಟನೆ ಮಾಡುವುದಿಲ್ಲ, ಯಾವುದಾದರೊಂದು ಕಡೆ ಮಾತಾಡುತ್ತೇನೆ, ಈ ಸಮಾವೇಶದ ಏರ್ಪಾಟಿನಲ್ಲಿ ನನ್ನ ಪಾಲೂ ಇರುವುದರಿಂದ ನಾನು ಉದ್ಘಾಟನೆ ಮಾಡಬಾರದು, ಇದು ನನ್ನ ವ್ಯಕ್ತಿತ್ವಕ್ಕೇ ಒಳ್ಳೆಯದಲ್ಲ” ಎಂದು ಪ್ರತಿಭಟಿಸಿದ್ದೆ. ಆದರೂ ಅವರು ಬಿಡಲಿಲ್ಲ. ಆರಂಭದಲ್ಲಿ ಉತ್ಸಾಹಿ ತರುಣರನ್ನು ಹುರಿದುಂಬಿಸಿದ್ದ ಚಿದಾನಂದಮೂರ್ತಿ ತಮ್ಮ ಮಗಳ ಮದುವೆಯ ನೆಪವೊಡ್ಡಿ ಕೈಕೊಟ್ಟಿದ್ದರು; ಅಲ್ಲದೆ ತಮ್ಮ ಸಾವಿರಾರು ವರ್ಷ ವಯಸ್ಸಿನ ಶಕ್ತಿ ಕೇಂದ್ರದ ಸ್ತಂಭವೊಂದು ಉದ್ಘಾಟಿಸಬೇಕೆಂದು ತಂತ್ರ ಹೂಡಿ ಛೀಮಾರಿ ಹಾಕಿಸಿಕೊಂಡಿದ್ದರು. ಇದು ಚಿದಾನಂದಮೂರ್ತಿಗಳ ಕಾರ್ಯವೈಖರಿಗೆ ತಕ್ಕಂತೆಯೆ ಇತ್ತು. ಸ್ವಂತದ ಯಾವ ಕೆಲಸವಾದರೂ ಇಡೀ ಮೂರು ದಿನ ಇರುವುದಿಲ್ಲ; ಒಂದೆರಡು ಗಂಟೆ ಸಮಾವೇಶಕ್ಕೆ ಬಂದಿದ್ದರೆ ತಲೆ ಬಿದ್ದು ಹೋಗುತ್ತಿರಲಿಲ್ಲ. ಹಾಗೆಯೇ ನಮ್ಮ ಗೆಳೆಯರೊಬ್ಬರು ಇಡೀ ಜಗತ್ತಿನ ಒತ್ತಾಯಕ್ಕೆಂಬಂತೆ ಒಂದು ದಿನ ಬಂದು ಕಲಾಕ್ಷೇತ್ರದ ಜಗುಲಿಯ ಮೇಲೆ ಬಾಯಿಗೆ ಬಂದದ್ದು ಒದರಿ ಹೋಗಿದ್ದರು. ಸಾಹಿತ್ಯದ ರಾಜಕೀಯ ಮತ್ತು ವಂಚನೆ ವಿಚಿತ್ರ ತರಹದ್ದು. ಮುಂದಿನ ಮಾತು ಹೇಳುವುದಕ್ಕೆ ಇವೆಲ್ಲ ಹಿನ್ನಲೆ ಬೇಕೆಂದು ಮಾತ್ರ ಹೇಳುತ್ತಿದ್ದೇನೆ. ಜನರ ವೈರ ಕಟ್ಟಿಕೊಳ್ಳುವುದು ಅನಗತ್ಯ.

 

ಎಪ್ಪತ್ತೆರಡು ವಯಸ್ಸಿನ ಗೋಪಾಲಕೃಷ್ಣ ಅಡಿಗರು ಇಷ್ಟು ಸುಸ್ತಾಗಿದ್ದರೆಂದು ನನಗೆ ಗೊತ್ತಿರಲಿಲ್ಲ. ಸಹಾಯ ಪಡೆದು ನಡೆಯಲು ಸ್ವಾಭಿಮಾನದ ಅಡ್ಡಿ; ಸಹಾಯವಿಲ್ಲದೆ ನಡೆಯುವುದು ಕಷ್ಟ. ಉದ್ಘಾಟನೆಯ ಕಾರ್ಯಕ್ರಮ ಇನ್ನೇನು ಒಂದೆರಡು ನಿಮಿಷದಲ್ಲಿ ಶುರುವಾಗಬೇಕು; ಕಲಾಕ್ಷೇತ್ರದ ರಂಗದಲ್ಲಿ ಕುಳಿತಿದ್ದ ಅಡಿಗರನ್ನು ಕರೆದುಕೊಂಡು ಬಂದರು. ಅವರ ಕೈ ಹಿಡಿದು ಸ್ವಾಗತಿಸಿದೆ; ಮುಗುಳ್ನಕ್ಕು ‘ಏನ್ರಿ’? ಅಂದರು. ಪ್ರೀತಿ ಉಕ್ಕಿದಾಗ ‘ಏನಯ್ಯ?’ ಅನ್ನುವುದುಂಟು; ಈಗಲೂ ರಟ್ಟೆಗೆ ಹೊಡೆದು ಅವರದೇ ಶೈಲಿಯಲ್ಲಿ ಅವಡುಗಚ್ಚಿದರು. ಅಡಿಗರಲ್ಲಿ ಯಕ್ಷಗಾನದ ಗತ್ತು, ಕುಳ್ಳನೊಬ್ಬ ಎತ್ತರಕ್ಕೆ ಚಿಮ್ಮುವ ಹುಮ್ಮಸ್ಸು ಇರುತ್ತಿತ್ತು. ನಮ್ಮೊಂದಿಗೆ ಕೂತು ಅನ್ನಿಸಿದ್ದನ್ನು ಹಿಂದೆಮುಂದೆ ನೋಡದೆ, ಸರಿತಪ್ಪು ಎಂಬುದನ್ನು ತಣ್ಣಗೆ ಕೂತು ಪರಿಭಾವಿಸದೆ ಹೇಳಿಬಿಡುತ್ತಿದ್ದರು; ಚಿಕ್ಕಪುಟ್ಟ ವಿಷಯಕ್ಕೆ ನಾವೆಲ್ಲ ಒಳಗೊಳಗೇ ರೇಗಿ ಮರುದಿನ ಅದೆಲ್ಲ ಮನುಷ್ಯರಾದ ನಮ್ಮಂಥವರಲ್ಲಿ ಸಾಮಾನ್ಯ ಎಂಬಂತೆ ಸಾಹಿತ್ಯ, ರಾಜಕೀಯ, ಪತ್ರಿಕೆಗಳ ಸುದ್ದಿ ಎಲ್ಲವನ್ನೂ ಹರಟುತ್ತಿದ್ದೆವು. ಬರೆದೊಡನೆ ಒಬ್ಬರಿಗೊಬ್ಬರು ತೋರಿಸುತ್ತೆದ್ದೆವು. ತೀರಾ ಯೋಗ್ಯತೆಯೇ ಇಲ್ಲದವರಲ್ಲದ ನಾವು ಒಬ್ಬರಿಗೊಬ್ಬರು ಹೊಂದಿಕೊಳ್ಳುವುದು ಕಷ್ಟವಾಗುತ್ತಿರಲಿಲ್ಲ. ಆಮೇಲಾದದ್ದು ಎಲ್ಲರಿಗೂ ಗೊತ್ತಿದೆ; ಸಾಹಿತ್ಯದ ವಿಮರ್ಶೆಗಳೊಂದಿಗೆ ಸಾಮಾಜಿಕ ಬದಲಾವಣೆ ಆರಂಭವಾಗಿತ್ತು. ದಲಿತರು, ಹಿಂದುಳಿದವರು ಕಲಿಯತೊಡಗಿದ್ದರು; ಪುರೋಹಿತಶಾಹಿಯ ವಿರುದ್ಧ ಒಕ್ಕೂಟ ರಚಿತವಾಗಿತ್ತು. ಒಕ್ಕೂಟದ ಪ್ರಜ್ಞೆ ಮುಂದುವರಿದಂತೆ, ಬಂಡಾಯದ ಪ್ರಜ್ಞೆ ಒಂದು ಕಡೆ ಉಳಿದರೆ, ಬಂಡಾಯದ ಸಂಘಟನೆಯನ್ನೇ ಕೆಲವರು ಕದ್ದಿದ್ದರು. ಉತ್ತಮ ಸಾಹಿತಿ ಯಾವುದೇ ಗುಂಪನ್ನು ಸೇರಲಾಗದೆ ಸಾಹಿತ್ಯ ಪುಢಾರಿಗಳದೇ ಒಂದು ಗುಂಪು, ಸಾಹಿತಿಯದೇ ಆದ ಏಕಾಂತ ರಚಿತವಾಗಿದ್ದವು. ನಾವೆಲ್ಲ ಮತ್ತೆ ಮಾತಾಡುವುದು, ಎಲ್ಲ ಬಗೆಯ ಪುಢಾರಿಗಳಿಂದ ಹೊರತಾದ ಸಂಘಟನೆ ರೂಪಿಸುವುದು ಈಗ ಅಗತ್ಯವಾಗಿತ್ತು. ಈ ತರಹದ ಒಳಜೀವವುಳ್ಳವರ, ತಮ್ಮಲ್ಲೇ ನೊಂದುಕೊಂಡು ತಮ್ಮೊಂದಿಗೆ ತರ್ಕಿರ್ಸುವ, ಹೊರ ಅವಶ್ಯಕತೆಗಳಿಗೇ ತಮ್ಮ ವ್ಯಕ್ತಿತ್ವ ಮಿತಗೊಳಿಸಿಕೊಂಡಿರದ ಜನರು ಮತ್ತೊಮ್ಮೆ ಹಿಂಜರಿಕೆ ಇಲ್ಲದೆ ತಾವು ಬರೆದದ್ದನ್ನು ಗೆಳೆಯರಿಗೆ ತೋರಿಸುವ, ಅಗತ್ಯಬಿದ್ದರೆ ಒಟ್ಟಾಗಿ ಜನವಿರೋಧಿ ಘಟನೆಗಳ ವಿರುದ್ಧ ಪ್ರತಿಭಟಿಸುವ ವಾತಾವರಣ ಮೂಡಿಸುವುದು ಅನಿವಾರ್ಯವಾಗಿತ್ತು.

 

ಅದೆಲ್ಲ ಇರಲಿ; ನಾನವತ್ತು ಸ್ವಲ್ಪ ಜಾಸ್ತಿ ಮಾತಾಡಿದೆ. ಅರ್ಧಗಂಟೆ ಮಾತಾಡಿ ಇನ್ನೊಂದು ಕಾಲುಗಂಟೆ ಅಚ್ಚಾಗಿದ್ದನ್ನು ಓದಿದೆ. ವಿವರ ಬೇಡ; ಈ ಸಲ ಅದನ್ನು ಅಚ್ಚಿಸಿದ್ದೇವೆ. ಅಡಿಗರು ಕೂತು ಕೇಳುತ್ತಿದ್ದರು. ಮುಗಿದಾಗ ಸಂತೋಷಗೊಂಡಂತೆ ಕಂಡರು. “ಚೆನ್ನಾಗಿ ಮಾತಾಡಿದ್ರಿ… ಆದರೆ ನೀವು ಇಷ್ಟು ಹೊತ್ತು ಮಾತಾಡ್ತಿರಲಿಲ್ಲವಲ್ಲ?” ಅಂದರು. ನಾನು ನಗುತ್ತ “ಕನಿಷ್ಠ ಮುಕ್ಕಾಲು ಗಂಟೆ ಮಾತಾಡಬೇಕೆಂದು ಹೇಳಿದ್ದರು” ಅಂದೆ. ಆದರೆ ಅಲ್ಲೊಂದು ಸೂಕ್ಷ್ಮ ಇತ್ತು. ಅಡಿಗರು ತಮ್ಮ ಈ ಸ್ಥಿತಿಯಲ್ಲಿ ಶೌಚ ಗೃಹಕ್ಕೆ ಹೋಗದೆ ಬಹಳ ಹೊತ್ತು ಕೂರಲಾಗುವುದಿಲ್ಲ. ಇದನ್ನು ತಕ್ಷಣ ಅರಿತು ಖಿನ್ನನಾದೆ; ಯಾರಾದರೂ ಈ ವಿಷಯ ತಿಳಿಸಿದ್ದರೆ ಇಡೀ ಭಾಷಣವನ್ನು ಸಂಕ್ಷಿಪ್ತಗೊಳಿಸುತ್ತಿದ್ದೆ.

 

“ಯಾವುದು ಉತ್ತಮ ಸಾಹಿತ್ಯ, ಯಾವುದು ಅಷ್ಟು ಉತ್ತಮವಲ್ಲ ಎಂಬುದು ನನಗಂತೂ ಜೀವನ್ಮರಣದ ಪ್ರಶ್ನೆ” ಅಂದರು ಅಡಿಗರು. ನಾನು ಬೆಚ್ಚಿ ಕೂತೆ. ಯಾವನೇ ಒಬ್ಬ ವಿಚಾರವಂತನಾದ ಕವಿ, ವಿಮರ್ಶಕ ಹಾಗೆ ಹೇಳಿದ್ದರೆ ನನಗೆ ಅಚ್ಚರಿಯಾಗುತ್ತಿರಲಿಲ್ಲ. ಸಾವಿನ ಅಂಚಿನಲ್ಲಿರುವ ಅಡಿಗರು ಹೇಳಿದ್ದು, ಇಡೀ ಜೀವನ ಉತ್ತಮ ಸಾಹಿತ್ಯವನ್ನೇ ಧ್ಯಾನಿಸಿದ ಅಡಿಗರು ಹೇಳಿದ್ದು, ಮರ್ಮ ತಟ್ಟುವಂತಿತ್ತು. ಅವರು ಈ ದೈಹಿಕ ಸ್ಥಿತಿಯಲ್ಲಿ ತೋರಿದ ಕೆಚ್ಚು ನಮ್ಮಲ್ಲಿ ಧೈರ್ಯ ತುಂಬಿತ್ತು. ವ್ಯವಸ್ಥಾಪಕರು ಹಿಂಜರಿಯಿತ್ತಲೇ “ಅಧ್ಯಕ್ಷತೆ ವಹಿಸಲು ಸಾಧ್ಯವೇ?” ಅಂದಾಗ “ಅದೇನು ಹಾಗೆ ಕೇಳ್ತೀರಿ? ನಮ್ಮ ಸಾಹಿತ್ಯ, ರಾಜಕೀಯ ಎಷ್ಟು ಕೆಟ್ಟು ಹೋಗಿದೆ ಅಂದರೆ ಹಿಂದೆ ನಾನು ತೆಗೆದುಕೊಂಡ ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಬಗ್ಗೆಯೇ ನಾಚಿಕೆಯಾಗುತ್ತದೆ. ಅದನ್ನು ಹಿಂದಿರುಗಿಸ್ತೇನೆ” ಅಂದರು. “ಅದೆಲ್ಲ ಬೇಡಿ ಸಾರ್, ನಿಮ್ಮಲ್ಲಿ ಹಿಂದಿರುಗಿಸಲು ದುಡ್ಡಿಲ್ಲ,” ಎಂದು ವ್ಯವಸ್ಥಾಪಕರು ಸಮಾಧಾನಪಡಿಸಬೇಕಾಯಿತು. ಈಗ ತಮ್ಮ ಐದು ನಿಮಿಷದ ಭಾಷಣದಲ್ಲಿ ಜನ ಈಗಲಾದರೂ ಎಚ್ಚರಗೊಂಡು ಕುಸಿಯುತ್ತಿರುವ ಮೌಲ್ಯಗಳ ಬಗ್ಗೆ ಮಾತಾಡುತ್ತಿರುವುದನ್ನು ಮೆಚ್ಚಿದರು; ಹಣದಿಂದ ಹಿಡಿದು ನೀತಿಯವರೆಗೆ, ಸಾಹಿತ್ಯ ಕಲೆಯವರೆಗೆ ಹಬ್ಬುತ್ತಿರುವ ಪುಢಾರಿಗಿರಿಯನ್ನು ಛೇಡಿಸಿದರು.

ಇದೀಗ ಪ್ರಶ್ನೆ. ನನ್ನಲ್ಲಿ ಚೈತನ್ಯ ಮೂಡಿಸಿದ ಪ್ರಶ್ನೆ. ಅಡಿಗರನ್ನು ರೊಚ್ಚಿಗೆಬ್ಬಿಸಿದ್ದು ನಮ್ಮಲ್ಲಿ ಅನೇಕ ಸಾಹಿತಿಗಳನ್ನು ಏಕೆ ತಟ್ಟುವುದಿಲ್ಲ? ಒಬ್ಬ ಸಾಹಿತಿ “ನಾನೀಗ ಮಹಾಭರತದ ಭೀಷ್ಮನ ಥರ; ನನ್ನ ಮನಸ್ಸು ಸಮಾವೇಶದಲ್ಲಿದೆ; ನನ್ನ ದೇಹ ಹುಬ್ಬಳ್ಳಿಯ ಸಮ್ಮೇಳನದಲ್ಲಿರುತ್ತದೆ” ಅಂದರು. ಇನ್ನೊಂದೆರಡು ಜನ ಹಾಮಾ ನಾಯಕರಿಗೆ ಹೆದರಿಕೊಂಡು ರಾತ್ರಿ ವೇಳೆ ಸಮಾವೇಶದಲ್ಲಿ ಮುಖ ತೋರಿಸಿದರು. ಪಾಪದ ಚದುರಂಗರು ಕಲಾಕ್ಷೇತ್ರದ ಒಳಗೆ ಗೋಷ್ಠಿಗಳು ನಡೆಯುತ್ತಿರುವಾಗ ಹೊರಗೆ ಹುಡುಕಿ ನಿರಾಶರಾಗಿ ಹಿಂದಿರುಗಿದರು. ಇಷ್ಟೆಲ್ಲ ಶಂಕೆ, ಆತಂಕಗಳ ನಡುವೆಯೂ ಸೇರಿದ್ದ ಜನ, ಅವರ ಸನ್ನಡತೆ ನೋಡಿ ನಾನಂತೂ ಬೆರಗಾಗಿದ್ದೆ. ನನ್ನ ಕೆಲಸಗಳ ನಡುವೆ ಸಾಧ್ಯವಾದಷ್ಟು ಗೋಷ್ಠಿಗಳಲ್ಲಿ ಭಾಗವಹಿಸಿದೆ. ಒಂದು ಗೋಷ್ಠಿ ಧರ್ಮವನ್ನು ಕುರಿತದ್ದು; ಓ.ಎಲ್.ನಾಗಭೂಷಣ ಸ್ವಾಮಿ ಚೆನ್ನಾಗಿ ಮಾತಾಡಿದರು. ಪರಿಸರವನ್ನು ಕುರಿತ ಸಭೆಯಲ್ಲಿ ರಾಜೇಂದ್ರ ಚೆನ್ನಿಯೂ ಅಷ್ಟೆ. ಪರಿಸರ ಮತ್ತು ಧರ್ಮವನ್ನು ಕುರಿತ ಜಿಜ್ಞಾಸೆ ಇಪ್ಪತ್ತೊಂದನೆ ಶತಮಾನದ ಮುಖ್ಯ ಕಾಳಜಿಗಳಾಗಲಿವೆ. ತನ್ನ ದಬ್ಬಾಳಿಕೆ ಮತ್ತು ಹಳಸುವಿಕೆಯಿಂದಾಗಿಯೇ ಅಸಂಖ್ಯಾತ ಜನರನ್ನು ಭೂಗತ ಮಾಡಿರುವ ಧರ್ಮ ಅನಿರೀಕ್ಷಿತ ರೀತಿಯಲ್ಲಿ ಅನೇಕ ದೇಶಗಳ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೆರವಾಗಿದೆ. ಧಾರ್ಮಿಕ ಸ್ವಾತಂತ್ರ್ಯ ಎಂಬುದು ಎಲ್ಲ ಸ್ವಾತಂತ್ರ್ಯಗಳಲ್ಲಿ ಮುಖ್ಯವೆಂಬಂತೆ ವರ್ತಿಸಿರುವ ಧರ್ಮ ಇವತ್ತಿಗೂ ಜನತೆಯ ತಲೆನೋವು ಮತ್ತು ಸ್ಫೂರ್ತಿ ಎರಡು ಆಗಿದೆ. ಪರಿಸರವೂ ಅಷ್ಟೆ ಹುಟ್ಟಿದ ಮನುಷ್ಯ ಮಾತು ಕಲಿತು, ಶಿಕ್ಷಣ ಪಡೆದು ಪರಿಸರಕ್ಕೆ ಕೈ ಹಾಕುತ್ತಾನೆ. ಈ ಜಗತ್ತಿನ ನೈಸರ್ಗಿಕ ಸಂಪತ್ತೆಲ್ಲ ತನ್ನ ಅನುಭೋಗಕ್ಕಾಗಿಯೇ ಇದೆ ಎಂದು ನಂಬುತ್ತಾನೆ. ಇದು ಇವತ್ತಿನ ಕಷ್ಟ. ಅಪಾರ ಶಕ್ತಿಯನ್ನು ಪಡೆದಿರುವ ಮನುಷ್ಯನೊಂದಿಗೆ ಯಾವ ವಿಶೇಷ ಶಕ್ತಿಯನ್ನು ಪಡೆಯದಿರುವ ವೃಕ್ಷ, ಪಕ್ಷಿ, ಪ್ರಾಣಿಗಳು ಜೀವ ಉಳಿಸಿಕೊಳ್ಳಲು ಸೆಣಸಬೇಕಾಗಿದೆ; ಆದರೆ ಸತ್ಯಾಂಶವೆಂದರೆ, ಒಂದು ಜೀವದ ಮೇಲೆ ಇನ್ನೊಂದು ನಿಂತಿರುವ ಈ ಜಗತ್ತಿನಲ್ಲಿ ಮನುಷ್ಯನ ಸ್ವಾರ್ಥದಿಂದಾಗಿಯೇ ಮನುಷ್ಯ ಬದುಕಿ ಉಳಿಯುವಂಥ ಸ್ಥಿತಿ ತಲುಪತೊಡಗಿದ್ದಾನೆ. ಪರಸ್ಪರ ಸಂಬಂಧವುಳ್ಳ ಜೀವಕೋಟಿಯಲ್ಲಿ ಮನುಷ್ಯ ಕೊಂಡಿ ಕಳಚಿಕೊಂಡೊಡನೆ ನಾಶವಾಗುತ್ತಾನೆ. ಆದ್ದರಿಂದಲೇ ಮನುಷ್ಯ ತನ್ನ ಸ್ವಪ್ರತಿಷ್ಠೆಗೆ ಬದಲಾಗಿ ವಿನಯ ಮತ್ತು ಸಹಬಾಳ್ವೆಯ ಪಾಠ ಕಲಿಯಬೇಕಾಗಿದೆ. ಒಂದು ಮರ ಅಥವಾ ಅರಣ್ಯವನ್ನು ಸೃಷ್ಟಿಸಲಾಗದ ಮಾನವ ಈ ಭೂಮಿಯನ್ನು ತನ್ನ ತೋಟವೆಂದು ತಿಳಿಯದೆ ಎಲ್ಲವನ್ನೂ, ಎಲ್ಲರನ್ನೂ ಬದುಕಲು ಬಿಟ್ಟು ಬದುಕುವ ಕಲೆ ಕಲಿಯಬೇಕಾಗಿದೆ.

 

‘ಸಾಹಿತ್ಯದಲ್ಲಿ ಶ್ರೇಷ್ಠತೆ’ ಎಂಬುದನ್ನು ಮುಖ್ಯ ವಿಷಯವಾಗಿ ಇಟ್ಟುಕೊಂಡಿದ್ದ ಸಮಾವೇಶದಲ್ಲಿ ಅನೇಕ ಸಲ ಗೊಂದಲಗಳೆದ್ದದ್ದು ನಿಜ. ಕೆ.ವಿ.ಸುಬ್ಬಣ್ಣ ಅತ್ಯಂತ ತಿಕ್ಕಲು ನಿಲುವು ತೆಗೆದುಕೊಂಡು ಉತ್ತಮ, ಅಧಮ ಎಂಬ ಕಲ್ಪನೆಯೇ ಬೇಡ ಅಂದರಂತೆ; ರಾಜಕೀಯದಲ್ಲಿ ಹೆಗಡೆ, ಬೊಮ್ಮಾಯಿ ಮಟ್ಟಕ್ಕೆ ನಮ್ಮ ಸಾಹಿತ್ಯದಲ್ಲಿ ಸಾಹಿತಿಗಳು ಬರಲಿ, ಅಂದರಂತೆ. ನಾನು ಆಗ ಇರಲಿಲ್ಲ. ಬರುಬರುತ್ತಾ ಕೆಲವರ ತಲೆ ಮೆದುವಾಗಿ ಹೋಗುತ್ತೆ ಎಂಬುದಕ್ಕೆ ಸುಬ್ಬಣ್ಣನವರಂಥವರು ನಿದರ್ಶನ. ನಾವ್ಯಾರೂ ಅಡಿಗರಂತೆಯೋ ಇನ್ನೊಬ್ಬರಂತೆಯೋ ಬರೆಯಿರಿ ಎಂದು ಹೇಳುತ್ತಿಲ್ಲ, ಬೇರೆ ಬೇರೆ ರೀತಿಯಲ್ಲಿ ಬರೆದರೂ ಉತ್ತಮ, ಸಾಮಾನ್ಯ, ಸಾಹಿತ್ಯವೇ ಅಲ್ಲದ್ದು-ಎಂಬುದರ ಬಗ್ಗೆ ಎಚ್ಚರಿಕೆ ಇರುವುದು ಸಾಧ್ಯವಿದೆ. ಇದನ್ನು ಮಧ್ಯೆ ಪ್ರವೇಶಿಸಿ ಮಾತಾಡಿದ ಯು.ಆರ್.ಅನಂತಮೂರ್ತಿ ಚೆನ್ನಾಗಿ ಹೇಳಿದರು. ಆದರೆ ಇವರಿಗಿಂತ ಪರಿಣಾಮಕಾರಿಯಾಗಿ ಹೇಳಿದವರು ಇಬ್ಬರು – ಲಕ್ಷ್ಮೀಶ ತೋಳ್ಪಾಡಿ ಮತ್ತು ಕಿ.ರಂ.ನಾಗರಾಜ. ಲಕ್ಷ್ಮೀಶ ತನ್ನ ಭಾಷಣದಲ್ಲಿ ತಾನು ಬಲ್ಲ ಅತ್ಯುತ್ತಮ ಸಾಹಿತ್ಯದ ಒಳ ತೇಜಸ್ಸು ಕುರಿತು ಮಾತಾಡಿದ; ಕೃಷ್ಣನ ಬಣ್ಣ ಮೀರಿದ ಕೃಷ್ಣತನ – ಅಂದರೆ ಕಪ್ಪು ವರ್ತನೆ – ನಮ್ಮಲ್ಲಿ ಮೇಲುಜಾತಿಯವರಲ್ಲೇ ಇರುವುದರಿಂದ ಬಿಳಿಯನೊಬ್ಬ ಕೃಷ್ಣನ ಪಾತ್ರ ಮಾಡಿದರೆ ತಪ್ಪಿಲ್ಲ; ಹಾಗೆಯೇ ಬಣ್ಣವನ್ನು ಮೀರಿದ ಅರ್ಥವಂತಿಕೆ ಕೃತಿಯ ಒಳಗಡೆ ಇರುತ್ತದೆ ಎಂದು ಹೇಳಿದ. ಕಿ.ರಂ.ನಾಗರಾಜ ನಮ್ಮ ಕಾವ್ಯಪ್ರಿಯ; ಹತ್ತು ಶತಮಾನಗಳ ಕಾಲ ಜನ ಪಂಪನನ್ನು ಸವಿದು ಇಲ್ಲಿಯವರೆಗೆ ಕಳಿಸಿಕೊಟ್ಟಿದ್ದಾರೆ; ಎಂಟು ಶತಮಾನಗಳಿಂದ ವಚನಕಾರರನ್ನು ಮೆಚ್ಚಿ, ಸ್ವಾರಸ್ಯವನ್ನು ಕೊಂಡಾಡಿ ಇಲ್ಲಿಯವರೆಗೆ ಕಳಿಸಿದ್ದಾರೆ; ಈ ಕವಿಗಳು ಹೇಗೆ ಇಲ್ಲಿಯವರೆಗೆ ಬರುವುದು ಸಾಧ್ಯವಾಯಿತು ಎಂದು ನೋಡಿದರೇ ಸಾಹಿತ್ಯದಲ್ಲಿನ ಶ್ರೇಷ್ಠತೆಯ ಕಲ್ಪನೆ ದೊರೆಯುತ್ತೆ ಎಂದು ಹೇಳಿದ.

 

ಇಲ್ಲಿ ತುಂಬ ಸ್ವಾರಸ್ಯವಾಗಿ ಮಾತಾಡಿದ ಪುಂಡಲೀಕ ಶೇಟ್, ಕಾಳೇಗೌಡ ನಾಗವಾರ, ಬೆಸಗರಳ್ಳಿ ಶಾಮಣ್ಣ, ಅರವಿಂದ ಮಾಲಗತ್ತಿ, ಟಿ.ಜಿ. ರಾಘವ ಮುಂತಾದ ಎಲ್ಲರ ಮಾತುಗಳನ್ನು ಚರ್ಚಿಸಲಾಗುತ್ತಿಲ್ಲ. ಕೊನೆಯ ದಿನ ಮಾತಾಡಿದ ಅನಂತಮೂರ್ತಿ, ರಾಮಚಂದ್ರ ಶರ್ಮ, ಡಿ.ಆರ್. ನಾಗರಾಜ ಮುಂತಾದವರ ಬಗ್ಗೆ ಎರಡು ಮಾತು ಹೇಳಬೇಕು. ಅನಂತಮೂರ್ತಿ ನಮ್ಮ ಅದ್ಭುತ ಭಾಷಣಕಾರರು ಎಂಬುದರಲ್ಲಿ ಅನುಮಾನವಿಲ್ಲ. ಸಮಾಜವಾದ ಇವರನ್ನು ಸಾಹಿತ್ಯ, ರಾಜಕಾರಣ, ಧರ್ಮ ಎಲ್ಲರನ್ನೂ ಒಳಗೊಂಡು ಮಾತಾಡುವುದನ್ನು ಕಲಿಸಿದೆ; ಹಾಗೆಯೇ ಸಾಹಿತಿಯಾಗಿ ನಡೆಸುವ ಪ್ರಯೋಗ ಅನೇಕರಲ್ಲಿ ಗೊಂದಲ ಕೂಡ ಹುಟ್ಟಿಸಿದೆ. ಅಡಿಗರಲ್ಲಿ ಇದು ಅಷ್ಟಾಗಿ ಆಗುವುದಿಲ್ಲ. ಬ್ರಾಹ್ಮಣ್ಯದ ಮೂಲಕವೇ ಶೋಧಿಸುವ ಅಡಿಗರು ಕಂದಾಚಾರಿ ಅನ್ನಿಸಲಾರದಷ್ಟು ನಿಷ್ಠುರ ಕವಿ; ಬ್ರಾಹ್ಮಣ್ಯ ಮತ್ತು ಧರ್ಮದ ವಿಚಾರದಲ್ಲಿ ಮಾತಾಡುವಾಗ ಅನಂತಮೂರ್ತಿಯವರದು ಕಂದಾಚಾರವನ್ನು ಸಹಿಸುವಷ್ಟು ಸ್ಫೂರ್ತಿ. ಹಾಗಾಗಿ ತಪ್ಪು ಗ್ರಹಿಕೆಗೆ ಈಡಾಗಬಹುದಾದ ಅನಂತಮೂರ್ತಿ ಹೇಳಿದ ಎರಡು ವಿಷಯಗಳು ಗಮನಾರ್ಹ; ಒಂದು, ಒಂದು ಸಾಹಿತ್ಯ ಬಳಗದ ಗಾಳಿಮಾತು, ಚರ್ಚೆ, grapevine ಸಾಹಿತ್ಯದ ಗುಂಪೊಂದು ಸಂಸ್ಥೆಯಾಗಿ ಬೆಳೆಯುವಾಗಲೇ ಮನುಷ್ಯ ಸಹಜ ಸ್ನೇಹ, ಪ್ರೀತಿಯಿಂದ ಪುಸ್ತಕಗಳ ಬಗ್ಗೆ ಮಾತಾಡಿದರೆ ಆಗುವ ಉತ್ತಮ ಪರಿಣಾಮ. ಅವರ ಇನ್ನೊಂದು ಮಾತು, ಭಾಷೆ ಮತ್ತು ಅನುಭವ ಕುರಿತದ್ದು. ಬ್ಲೇಕ್ ಕವಿ ಹೊಸತಾಗಿ ಗ್ರಹಿಸುವುದಕ್ಕಾಗಿ ತಾನು ಕಲಿತ ಅನಿಷ್ಟಗಳನ್ನೆಲ್ಲ ಮರೆಯಬೇಕಾಯಿತು; ಹಾಗೆಯೇ ಲಾಭಕ್ಕಾಗಿ ಅನ್ಯ ಭಾಷೆಗೆ ಮನಗೊಡುವ ಸ್ಥಿತಿ ಹೋಗಿ ಇಲ್ಲಿ ವಿಕೇಂದ್ರೀಕರಣವಾಗಿ, ಇಲ್ಲಿಯ ವ್ಯವಹಾರಗಳು ಇಲ್ಲೇ ನಡೆಯುವಂತಾದರೆ ಕನ್ನಡ ಭಾಷೆ ಬೆಳೆಯುವ ಬಗ್ಗೆ, ನಮ್ಮ ಮಕ್ಕಳು ಕನ್ನಡ ಕಲಿಯುವುದು ಕಡ್ಡಾಯವಾಗಬೇಕೆಂಬ ಬಗ್ಗೆ.

 

ಇದೊಂದು ಅತ್ಯಾಶ್ಚರ್ಯಕರ, ನಮ್ಮನ್ನೇ ವಿಸ್ಮಯಗೊಳಿಸುವಷ್ಟು ಯಶಸ್ವಿಯಾದ ಸಮಾವೇಶ. ನಿತ್ಯ ಅಲ್ಲಿ ಸೇರುತ್ತಿದ್ದ ಮಹಿಳೆಯರು, ಗಂಡಸರು, ಅವರು ತೋರಿದ ಆಳವಾದ ಆಸಕ್ತಿ, ಎಲ್ಲರನ್ನೂ ಕಟ್ಟಿಹಾಕಿದ್ದ ಪ್ರೀತಿ ಮತ್ತು ಹೊಣೆಗಾರಿಕೆ ಕಂಡು ನಾನೇ ಹೆದರಿದೆ, ತಲ್ಲಣಗೊಂಡೆ. ಇವರ ವಿಶ್ವಾಸ ನಮ್ಮನ್ನು ದೃಢಗೊಳಿಸುತ್ತದೆಯೆ, ದಿಗಿಲು ಹುಟ್ಟಿಸಿ ಸುಮ್ಮನಿರುವಂತೆ ಮಾಡುತ್ತದೆಯೆ? ಒಂದು ವೈಯಕ್ತಿಕ ಅನುಭವನನ್ನು ಕೊನೆಯ ದಿನ ಹೇಳಿದೆ; ನನ್ನ ಮೊದಲ ದಿನದ ಭಾಷಣವನ್ನ ನೇರಗೊಳಿಸುವುದು ಕೂಡ ಉದ್ದೇಶವಾಗಿತ್ತು. ಒಳಜೀವವೇ ಇಲ್ಲದವನು ಸಾಹಿತಿಯಾಗುವುದಿಲ್ಲ. ಒಳಜೀವ ಅಂದರೆ ಏನೆಂದರೆ, ನಾವು ಜನರ ಸಂಪರ್ಕಕ್ಕೆ ಮೀರಿ, ಬಾಹ್ಯ ಜಗತ್ತಿನ ಆಗುಹೋಗುಗಳನ್ನೆಲ್ಲ ಹೊಟ್ಟೆಯಲ್ಲಿ ತುಂಬಿಕೊಂದು ನೋಯುವ, ನವೆಯುವ ಅನುಭವ; ಸೃಷ್ಟಿ ಕಾರ್ಯದ ಮೂಲದ್ರವ್ಯ ಇದು. ಇದನ್ನುಳ್ಳ ಸೂಕ್ಷ್ಮಜ್ಞನಾದ ಪ್ರತಿಯೊಬ್ಬ ಸಾಹಿತಿಯೂ ಸಾವಿರಾರು ಜನರೆದುರು ಮಾತಾಡುವಾಗ, ಸಾರ್ವಜನಿಕ ಕ್ರಿಯೆಯಲ್ಲಿ ತೊಡಗಿದಾಗ ದಿಗ್ಭ್ರಮೆಗೊಳಿಸುತ್ತಾನೆ. ಹತ್ತು ನಿರರ್ಥಕ ಸಭೆಗಳು ಆತನ ಹತ್ತು ಹನಿ ಜೀವರಸವನ್ನು ನಾಶಮಾಡುತ್ತವೆ, ಇಂಗಿಸುತ್ತದೆ. ಆದರೆ ಅರ್ಥಪೂರ್ಣ ಕ್ರಿಯೆಯಲ್ಲಿ, ಅರ್ಥಪೂರ್ಣ ಸಭೆಯಲ್ಲಿ ಆತನ ಆಂತರ್ಯಕ್ಕೆ ಹೊಸಜೀವ ಹನಿಯುತ್ತದೆ. ಚಿಲಿಯ ಕವಿ ನೆರೂಡ ಸ್ಯಾಂಟಿಯಾಗೋ ನಗರದ ಫುಟ್‍ಬಾಲ್ ಸ್ಟೇಡಿಯಂನಲ್ಲಿ ಹತ್ತು ಸಾವಿರ, ಇಪ್ಪತ್ತು ಸಾವಿರ ಜನರೆದುರು ತನ್ನ ಕಾವ್ಯ ಓದಿದ್ದಾಗ-ಜನರ ಮನಸ್ಸು ರೂಪಿಸುತ್ತ ದೇಶ ಕಟ್ಟುವ, ಪ್ರೀತಿ ಮಾಡುವ ಕವನ ಓದಿದಾಗ ಅವನ ಚೇತನ ನಿಜಕ್ಕೂ ಹಿಗ್ಗಿತು.

 

ಈ ಸಮಾವೇಶ ಹಾಗೆಯೇ ಅನೇಕರನ್ನು ಹಿಗ್ಗಿನಿಂದ ತುಂಬಿದ್ದರೆ, ಅದು ಸಹಜ.

  • ಮಾರ್ಚ್ 4, 1990

 

Leave a Reply